ಮಂಗಳವಾರ, ಏಪ್ರಿಲ್ 20, 2021
29 °C

ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿವಿ ಅಸ್ತಿತ್ವಕ್ಕೆ ಧಕ್ಕೆ

ಪ್ರಜಾವಾಣಿ ವಾರ್ತೆ ಬಸವರಾಜ್ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: `ದೇಶದ ಮೂರನೇ ತೋಟಗಾರಿಕಾ ವಿಶ್ವವಿದ್ಯಾಲಯ~ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಅಸ್ತಿತ್ವಕ್ಕೆ ಮಾರಕವಾದ `ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಮಯ-2009~ ವಿಧೇಯಕ ತಿದ್ದುಪಡಿಯನ್ನು ಕೈಬಿಡಬೇಕೆಂಬ ಕೂಗು ಕೇಳಿಬರುತ್ತಿದೆ.ಪ್ರಾದೇಶಿಕ ಅಸಮಾನತೆ ನಿವಾರಣೆ ಉದ್ದೇಶದಿಂದ 2009ರಲ್ಲಿ ರಾಜ್ಯದ ವಿವಿಧ ಕೃಷಿ ವಿಶ್ವವಿದ್ಯಾಲಯಗಳ ವ್ಯಾಪ್ತಿಯಿಂದ ತೋಟಗಾರಿಕೆಯನ್ನು ಪ್ರತ್ಯೇಕಿಸಿ, ಬಾಗಲಕೋಟೆ ಕೇಂದ್ರಿತವಾಗಿ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗಿತ್ತು.ಆದರೆ, ಕೃಷಿ ಮತ್ತು ತೋಟಗಾರಿಕೆಯನ್ನು ಒಳಗೊಂಡ ಮಿಶ್ರ ವಿಶ್ವವಿದ್ಯಾಲಯವನ್ನು ಶಿವಮೊಗ್ಗದಲ್ಲಿ ಆರಂಭಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2009ರ ವಿಧೇಯಕಕ್ಕೆ ತಿದ್ದುಪಡಿ ಮಾಡುತ್ತಿರುವುದು ಬಾಲ್ಯಾವಸ್ಥೆಯಲ್ಲಿರುವ ತೋಟಗಾರಿಕಾ ವಿ.ವಿ.ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ.ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ `ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಮಯ-2009~ ವಿಧೇಯಕ ತಿದ್ದುಪಡಿ ತೀವ್ರ ವಿರೋಧದ ನಡುವೆ ಅನುಮೋದನೆಗೊಂಡಿದ್ದು, ಇದೀಗ ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಲಾಗಿದೆ.ಸರ್ಕಾರದ ಈ ನಿರ್ಧಾರಕ್ಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು ಸರ್ವಾನುಮತದಿಂದ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ, ಈ ಭಾಗದ ತೋಟಗಾರಿಕಾ ಬೆಳೆಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ತೋಟಗಾರಿಕಾ ವಿಜ್ಞಾನ ವಿ.ವಿ. ವ್ಯಾಪ್ತಿಯಿಂದ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿತ್ರದುರ್ಗ ಮತ್ತು ದಾವಣಗೆರೆ ಬೇರ್ಪಡಿಸಿ ಶಿವಮೊಗ್ಗ ಮಿಶ್ರ ವಿವಿ ವ್ಯಾಪ್ತಿಗೆ ನೀಡಲು ಸರ್ಕಾರ ಮುಂದಾಗಿದೆ.ಮಲೆನಾಡು ಮತ್ತು ಕರಾವಳಿಯ ಪ್ರಮುಖ ಬೆಳೆಗಳಾದ ಏಲಕ್ಕಿ, ಕಾಳು ಮೆಣಸು, ತೆಂಗು, ಅಡಿಕೆ, ಕಾಫಿ , ಗೋಡಂಬಿ ಮತ್ತಿತರ ತೋಟಗಾರಿಕಾ ಬೆಳೆಗಳ ಅಧ್ಯಯನಕ್ಕೆ ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿ ವಿದ್ಯಾರ್ಥಿಗಳಿಗೆ ಅವಕಾಶ ಸಿಗದಂತಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಆತಂಕ ವ್ಯಕ್ತಪಡಿಸಿದ್ದಾರೆ.ಇದುವರೆಗೆ ತೋಟಗಾರಿಕೆ ವಿಜ್ಞಾನಗಳ ವಿವಿಯಲ್ಲಿ ಅಧ್ಯಯನ ಮಾಡಿದವರಿಗೆ ತೋಟಗಾರಿಕಾ ಪದವಿ ಹಾಗೂ ಕೃಷಿ ವಿವಿಗಳಲ್ಲಿ ಅಧ್ಯಯನ ಮಾಡಿದವರಿಗೆ ಕೃಷಿ ಪದವಿ ನೀಡಲಾಗುತ್ತಿತ್ತು. ಆದರೆ, ಶಿವಮೊಗ್ಗದಲ್ಲಿ ಆರಂಭವಾಗಲಿರುವ ಕೃಷಿ ಮತ್ತು ತೋಟಗಾರಿಕಾ ಮಿಶ್ರ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಯಾವ ಪದವಿ ನೀಡಲಿದೆ? ಎಂಬುದು ಶಿಕ್ಷಣ ತಜ್ಞರ ಪ್ರಶ್ನೆಯಾಗಿದೆ.ಮಿಶ್ರ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರಿಗೆ ಭವಿಷ್ಯದಲ್ಲಿ ಉದೋಗ್ಯದ ಸಮಸ್ಯೆ ತಲೆದೋರಲಿದೆ. ಅಲ್ಲದೇ, ವಿಧೇಯಕ ತಿದ್ದುಪಡಿ ಮಾಡುವುದರಿಂದ ರಾಜ್ಯದ ಇತರೆ ಕೃಷಿ ವಿಶ್ವವಿದ್ಯಾಲಯಗಳು ತೋಟಗಾರಿಕೆ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ, ಪಿ.ಎಚ್‌ಡಿ ನೀಡಲು ಅವಕಾಶ ಸಿಗುವುದರಿಂದ ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿ.ವಿ. ಭವಿಷ್ಯದಲ್ಲಿ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.