ಭಾನುವಾರ, ಮಾರ್ಚ್ 7, 2021
31 °C

ಬಾಟ್ಲಾ ಹೌಸ್ ಕಾರ್ಯಾಚರಣೆಯ ಸುತ್ತಮುತ್ತ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಟ್ಲಾ ಹೌಸ್ ಕಾರ್ಯಾಚರಣೆಯ ಸುತ್ತಮುತ್ತ..

ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಆಶ್ರಯ ಪಡೆದಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆ ಅಸಲಿ ಎಂದು ದೆಹಲಿ ಸೆಷನ್ಸ್ ಕೋರ್ಟ್ ತೀರ್ಪು ನೀಡಿ, ಹಲವಾರು  ಗೊಂದಲಗಳಿಗೆ ಕೊನೆಗೂ ತೆರೆ ಎಳೆದಿದೆ.ಪೊಲೀಸ್ ಎನ್‌ಕೌಂಟರ್ ಅಥವಾ ಉಗ್ರರ ವಿರುದ್ಧದ ಪೊಲೀಸ್ ಕಾರ್ಯಾಚರಣೆಯ ಸಾಚಾತನದ ಬಗ್ಗೆ ಕಾಂಗ್ರೆಸ್, ಬಿಎಸ್‌ಪಿ ಮತ್ತು ಎಸ್‌ಪಿಯ ಕೆಲ ಮುಖಂಡರು ಆರಂಭದಿಂದಲೂ ಅನುಮಾನ ವ್ಯಕ್ತಪಡಿಸಿದ್ದರು.

ಜಾಮೀಯಾ ಶಿಕ್ಷಕರ ಸಂಘವು ಕೂಡ ಪೊಲೀಸರ ವಾದದ ಬಗ್ಗೆ ಶಂಕೆ ವ್ಯಕ್ತಪಡಿಸಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿತ್ತು.ಗುಂಡಿನ ಚಕಮಕಿಯಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಉಗ್ರ ಶಹಜಾದ್ ಅಹ್ಮದ್, ಇನ್‌ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರನ್ನು ಕೊಂದ ಆರೋಪವನ್ನು ಕೋರ್ಟ್ ಖಚಿತಪಡಿಸಿದೆ.

ಆರೋಪಿಗಳ ಪರ ವಕೀಲರು ಕೂಡ  ಇದೊಂದು ಪೂರ್ವಯೋಜಿತ ಎನ್‌ಕೌಂಟರ್ ಎಂದು ಯಾವತ್ತೂ ವಾದ ಮಂಡಿಸದಿರುವುದರ ಬಗ್ಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಜೇಂದರ್ ಕುಮಾರ್ ಶಾಸ್ತ್ರಿ ಅವರು  ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. 2008ರ ದೆಹಲಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಐ.ಎಂ ಸದಸ್ಯನನ್ನು ಅಪರಾಧಿ ಎಂದು ಘೋಷಿಸಿರುವುದೂ ಇದೇ ಮೊದಲ  ಪ್ರಕರಣವಾಗಿದೆ.ಎನ್‌ಕೌಂಟರ್ ದಿನ...

2008ರ ಸೆಪ್ಟೆಂಬರ್ 19ರಂದು ಐ.ಎಂ ಸದಸ್ಯ ಅತೀಫ್ ಅಮೀನ್‌ನ ಮೊಬೈಲ್ ನಂಬರ್ ನೀಡಿದ ಸುಳಿವಿನ ಮೇರೆಗೆ ಬಾಟ್ಲಾಹೌಸ್‌ನ ಫ್ಲ್ಯಾಟ್ ಸಂಖ್ಯೆ ಎಲ್-18 ಮೇಲೆ ದೆಹಲಿ ಪೊಲೀಸರ ವಿಶೇಷ ತಂಡ ದಾಳಿ ನಡೆಸಿತ್ತು.  ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಇರುವ ಜಾಮಿಯಾ ನಗರದಲ್ಲಿ ಈ ಪೊಲೀಸ್ ಕಾರ್ಯಾಚರಣೆ ನಡೆದಿತ್ತು.ಇನ್‌ಸ್ಪೆಕ್ಟರ್ ಶರ್ಮಾ ಮತ್ತು ಸಬ್ ಇನ್‌ಸ್ಪೆಕ್ಟರ್ ಧಮೇಂದ್ರ ಅವರು ಕೋಣೆ ತಪಾಸಣೆ ನೆಪದಲ್ಲಿ ಬಾಗಿಲು ಬಡಿದಾಗ ಒಳಗೆ ಅಡಗಿಕೊಂಡಿದ್ದ ಐವರು ಉಗ್ರರು ಹಠಾತ್ತಾಗಿ ಗುಂಡಿನ ದಾಳಿ ನಡೆಸಿದ್ದರು. ಗುಂಡೇಟಿನಿಂದ ಗಾಯಗೊಂಡ ಶರ್ಮಾ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.  ಕಾರ್ಯಾಚರಣೆಯಲ್ಲಿ   ಇಬ್ಬರು ಪೊಲೀಸ್ ಅಧಿಕಾರಿಗಳೂ ಗಾಯಗೊಂಡಿದ್ದರು.

ಪೊಲೀಸರ ಗುಂಡೇಟಿಗೆ ಅತೀಫ್ ಅಮೀನ್ ಮತ್ತು ಛೋಟಾ ಸಾಜೀದ್ ಮೃತಪಟ್ಟರೆ ಮೊಹಮ್ಮದ್ ಸೈಫ್ ಸೆರೆ ಸಿಕ್ಕಿದ್ದ. ಶಹಜಾದ್ ಮತ್ತು ಅರೀಜ್ ಪರಾರಿಯಾಗಿದ್ದರು.   ಆನಂತರ ಶಹಜಾದ್‌ನನ್ನು ಅಜಮಗಡ್‌ನಲ್ಲಿ ಬಂಧಿಸಲಾಗಿತ್ತು.ಶರ್ಮಾ ಅವರ ದೇಹಕ್ಕೆ ಎದುರಿನಿಂದಲೇ ಗುಂಡು ಹಾರಿಸಲಾಗಿತ್ತು ಎಂದೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಉಗ್ರರ ವಿರುದ್ಧ ಕಾರ್ಯಾಚರಣೆಗೆ ಹೊರಟಿದ್ದ ಪೊಲೀಸ್ ಸಿಬ್ಬಂದಿ ಗುಂಡು ನಿರೋಧಕ ಜಾಕೆಟ್ ಧರಿಸದಿರುವುದರ ಬಗ್ಗೆ ಮಾತ್ರ ನ್ಯಾಯಾಧೀಶರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಎನ್‌ಕೌಂಟರ್ ರಾಜಕೀಯ

ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರೇ ಈ ಎನ್‌ಕೌಂಟರ್ ನಕಲಿ ಎಂದು ಹುಯಿಲೆಬ್ಬಿಸಿದ್ದರು. ಇದಕ್ಕೆ ಅವರದ್ದೇ ಪಕ್ಷದ ಸಲ್ಮಾನ್ ಖುರ್ಷಿದ್ ಮತ್ತು ಶಕೀಲ್ ಅಹ್ಮದ್ ದನಿಗೂಡಿಸಿದ್ದರು. ಎನ್‌ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದೂ ಒತ್ತಾಯಿಸಿದ್ದರು. ಕಾಂಗ್ರೆಸ್ ಪಕ್ಷ ಮಾತ್ರ ಈ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿತ್ತು.ಆರಂಭದಿಂದಲೂ ಈ ಕಾರ್ಯಾಚರಣೆ ಅಸಲಿ ಎಂದೇ ಪ್ರತಿಪಾದಿಸುತ್ತ ಬಂದಿದ್ದ  ಬಿಜೆಪಿ, ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೂ ಕಾಂಗ್ರೆಸ್ ಕೋಮುವಾದದ ಬಣ್ಣ ಬಳಿಯುತ್ತಿದೆ ಎಂದು ಟೀಕಿಸಿತ್ತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೂಡ ಈ ಕಾರ್ಯಾಚರಣೆ ಅಸಲಿ ಎಂದೇ ತೀರ್ಮಾನಕ್ಕೆ ಬಂದಿತ್ತು.ಸರಣಿ ಸ್ಫೋಟ

2008ರ ಸೆಪ್ಟೆಂಬರ್ 13ರಂದು ದೆಹಲಿಯ ಕರೋಲ್‌ಬಾಗ್, ಕನ್ಹಾಟ್ ಪ್ಲೇಸ್, ಗ್ರೇಟರ್ ಕೈಲಾಸ್, ಇಂಡಿಯಾ ಗೇಟ್  ಕಡೆ  ನಡೆದಿದ್ದ ಸರಣಿ ಬಾಂಬ್ ಸ್ಫೋಟಗಳಲ್ಲಿ  26 ಜನ ಮೃತಪಟ್ಟು, 133 ಜನ ಗಾಯಗೊಂಡಿದ್ದರು. ಇಂಡಿಯನ್ ಮುಜಾಹಿದೀನ್ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.ಮಾಯಾ ಶರ್ಮಾ ಪ್ರತಿಕ್ರಿಯೆ

ದಾಳಿಯಲ್ಲಿ ಪ್ರಾಣತೆತ್ತ ಮೋಹನ್ ಚಂದ್ ಶರ್ಮಾ ಅವರ ಪತ್ನಿ  ಮಾಯಾ ಶರ್ಮಾ ಅವರು ತೀರ್ಪಿಗೆ ಪ್ರತಿಕ್ರಿಯಿಸಿ,  `ಕೆಲ ರಾಜಕಾರಣಿಗಳು ವಾದಿಸಿದಂತೆ ಇದೊಂದು ನಕಲಿ ಎನ್‌ಕೌಂಟರ್ ಅಲ್ಲ ಎನ್ನುವುದು ಮತ್ತು ನನ್ನ ಗಂಡನ ಪ್ರಾಣ ತ್ಯಾಗ ಅಸಲಿ ಎನ್ನುವುದೂ ಸಾಬೀತಾಗಿದೆ.

ಚುನಾವಣೆ ವರ್ಷದಲ್ಲಿ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಕಾರ್ಯಾಚರಣೆಯ ಅಸಲಿತನವನ್ನೇ ಪ್ರಶ್ನಿಸಿದ್ದರು. ಈ ತೀರ್ಪು ಅವರ ನಿಲುವು ತಪ್ಪೆಂದು ಸಾಬೀತುಪಡಿಸಿದೆ' ಎಂದು ಹೇಳಿದ್ದಾರೆ. ಮೋಹನ್ ಚಂದ್ ಶರ್ಮಾ ಅವರಿಗೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ `ಅಶೋಕ ಚಕ್ರ' ಮರಣೋತ್ತರವಾಗಿ ನೀಡಿ ಗೌರವಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.