ಬುಧವಾರ, ಮೇ 18, 2022
25 °C
ವಾರದ ವೈದ್ಯ ಡಾ. ಎಚ್.ಜೆ.ಶಾಂತಕುಮಾರ್

ಬಾಯಿ ಆರೋಗ್ಯಕ್ಕೆ ಮೌತ್ ವಾಷ್

ಡಾ. ಎಚ್.ಜೆ.ಶಾಂತಕುಮಾರ್,ದಂತವೈದ್ಯ Updated:

ಅಕ್ಷರ ಗಾತ್ರ : | |

ಮೌತ್ ವಾಷ್ ಬಗ್ಗೆ ತಿಳಿಸಿ

ರಾಸಾಯನಿಕ ದ್ರಾವಣದಲ್ಲಿ ತನ್ನದೇ ಆದ ಪರಿಣಾಮಕಾರಿ ಅಂಶದಿಂದ (ಅ್ಚಠಿಜಿಛಿ ಐ್ಞಜ್ಟಛಿಜಿಛ್ಞಿಠಿ) ಹಲ್ಲುಗಳನ್ನು ಸ್ವಚ್ಛಗೊಳಿಸಲು, ವಸಡಿನ ಆರೋಗ್ಯ ಕಾಪಾಡಲು ಮತ್ತು ಕೆಲವು ಪ್ರಕಾರದ ದಂತ ಸಮಸ್ಯೆಗಳಿಗೆ ಮೌತ್ ವಾಷ್ ಬಳಸಲಾಗುತ್ತದೆ. ಇದು ಬಾಯಿ ಮುಕ್ಕಳಿಸಿ ಉಗಿಯುವ ಒಂದು ವಿಧದ ದ್ರಾವಣ. ಬಾಯಿ, ವಸಡು ಅಥವಾ ಹಲ್ಲಿನ ಸಮಸ್ಯೆ ಇರುವವರು ಮಾತ್ರ ಇದನ್ನು ಬಳಸಬೇಕು.

ಹಲ್ಲುಗಳನ್ನು ಸ್ವಚ್ಛಗೊಳಿಸಲು ಬರೀ ಮೌತ್ ವಾಷ್ ಸಾಕೇ?

ಇಲ್ಲ, ಟೂತ್‌ಪೇಸ್ಟ್ ಮತ್ತು ಟೂತ್ ಬ್ರಷ್‌ನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಅಗತ್ಯ. ಇದಾದ ಸ್ವಲ್ಪ ಅವಧಿಯ (30 ನಿಮಿಷ) ನಂತರ ಮೌತ್ ವಾಷ್ ಬಳಸುವುದರಿಂದ ಹಲ್ಲುಗಳ ಸ್ವಚ್ಛತೆಗೆ ಮತ್ತು ವಸಡಿನ ಆರೋಗ್ಯಕ್ಕೆ ಇನ್ನೂ ಹೆಚ್ಚಿನ ಪ್ರಯೋಜನ ಸಿಗುತ್ತದೆ.

ಮೌತ್ ವಾಷ್ ವಿಧಗಳನ್ನು ತಿಳಿಸಿ

1. ಫ್ಲೋರೈಡ್‌ಯುಕ್ತ ಮೌತ್ ವಾಷ್

2. ಆ್ಯಂಟಿಪ್ಲೇಕ್ ಮೌತ್ ವಾಷ್

3. ಡೀ-ಸೆನ್ಸಿಡೈಸಿಂಗ್ ಮೌತ್ ವಾಷ್

4. ಮಕ್ಕಳ ಮೌತ್ ವಾಷ್

5. ಬಾಯಿಯ ದುರ್ವಾಸನೆ ಹೋಗಲಾಡಿಸುವ ಮೌತ್ ವಾಷ್

6. ಹಲ್ಲು ಬೆಳ್ಳಗೆ ಮಾಡುವ ಮೌತ್ ವಾಷ್

ಮೌತ್ ವಾಷ್ ಉಪಯೋಗ ತಿಳಿಸಿ

ಮೌತ್ ವಾಷ್ ದ್ರಾವಣವು ಹಲ್ಲುಗಳು ಮತ್ತು ವಸಡಿನ ಎಲ್ಲ ಮೂಲೆ ಮೂಲೆಗೂ ಹೋಗಿ ದಂತಕುಳಿ, ಪ್ಲೇಕ್ (ದಂತ ಮಲ) ಮತ್ತು ವಸಡಿನ ರೋಗವನ್ನು ತಡೆಗಟ್ಟುವುದಲ್ಲದೆ, ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.ದಂತ ವೈದ್ಯರು ನಿಮ್ಮ ಹಲ್ಲಿನ ಪ್ರಕಾರ ಮತ್ತು ಸಮಸ್ಯೆಯನ್ನು ಗುರುತಿಸಿ ಯಾವ ಮೌತ್ ವಾಷ್‌ನ್ನು, ಎಷ್ಟು ಎಂ.ಎಲ್., ಎಷ್ಟು ಅವಧಿ,  ಎಷ್ಟು ಕಾಲ ಮತ್ತು ಹೇಗೆ ಉಪಯೋಗಿಸಬೇಕು ಎಂಬುದನ್ನು ಸೂಚಿಸುತ್ತಾರೆ.

ಮೌತ್ ವಾಷ್ ಯಾವ ಯಾವ ಸಂದರ್ಭಗಳಲ್ಲಿ ಉಪಯುಕ್ತ?

ಕೆಲವರಿಗೆ ಬಾಯಿಯ ಶಸ್ತ್ರಚಿಕಿತ್ಸೆ ಆಗಿ ಹಲ್ಲುಗಳಿಗೆ ಬ್ರಶ್ ಉಪಯೋಗಿಸಲು ಆಗದಿದ್ದಾಗ ಮತ್ತು ಹಲ್ಲುಗಳಿಗೆ ವಕ್ರದಂತ ಚಿಕಿತ್ಸೆ ತೆಗೆದುಕೊಂಡಾಗ ಮೌತ್ ವಾಷ್ ಹೆಚ್ಚು ಸಹಕಾರಿ.

ಮೌತ್ ವಾಷ್ ಮಾಡಿದ ಮೇಲೆ ತಿನ್ನಲು ಮತ್ತು ಕುಡಿಯಲು ಎಷ್ಟು ಅವಧಿಯ ಅಂತರ ಇರಬೇಕು?

ಕನಿಷ್ಠ 20 ನಿಮಿಷ ತಿನ್ನುವುದು ಮತ್ತು ಕುಡಿಯುವುದನ್ನು ಮಾಡಬಾರದು. ಏಕೆಂದರೆ ಮೌತ್ ವಾಷ್‌ನಲ್ಲಿ ಇರುವ ಅಂಶಗಳು ಹಲ್ಲುಗಳು ಮತ್ತು ವಸಡಿನ ಮೇಲೆ ಪರಿಣಾಮ ಬೀರಲು ಕನಿಷ್ಠ ಇಷ್ಟು ಸಮಯವಾದರೂ ಬೇಕಾಗುತ್ತದೆ.

ಬಾಯಿಯ ದುರ್ವಾಸನೆ ತಡೆಯಲು ಮೌತ್ ವಾಷ್ ನೆರವಾಗುವುದೇ?

ಹೌದು, ಅದಕ್ಕಾಗಿ ವಿಶೇಷ ಪ್ರಕಾರದ ಮೌತ್ ವಾಷ್ ಇದೆ.

ನಿರಂತರವಾಗಿ ಮೌತ್ ವಾಷ್ ಬಳಸುವುದರಿಂದ ಅಡ್ಡ ಪರಿಣಾಮ ಉಂಟಾಗಬಹುದೇ?

ಅಂತಹ ಗಂಭೀರ ಅಡ್ಡ ಪರಿಣಾಮಗಳೇನೂ ಇಲ್ಲ. ಆದರೆ ಹಲ್ಲಿನ ಮೇಲೆ ಕಲೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಗತ್ಯ ಅವಧಿಗೆ ಮಾತ್ರ ಅದನ್ನು ಉಪಯೋಗಿಸಲು ತಿಳಿಸಲಾಗುತ್ತದೆ.ಆದಾಗ್ಯೂ ಕೆಲವರಿಗೆ ಬಾಯಿ ಒಣಗುವುದು, ಉರಿ ಅನುಭವ ಕಂಡುಬರಬಹುದು. ಅಂತಹವರಿಗೆ ಮೌತ್ ವಾಷ್‌ನ್ನು ನೀರಿನಲ್ಲಿ ಬೆರೆಸಿ ಮುಕ್ಕಳಿಸುವಂತೆ ಸೂಚಿಸಲಾಗುತ್ತದೆ.

ಮಕ್ಕಳು ಮೌತ್ ವಾಷ್ ಬಳಸಬಹುದೇ?

ಇತ್ತೀಚೆಗೆ ಮಕ್ಕಳಿಗೆಂದೇ ವಿಶೇಷ ಮೌತ್ ವಾಷ್‌ಗಳು ಬಿಡುಗಡೆ ಆಗಿವೆ. ಅವುಗಳನ್ನು ವೈದ್ಯರ ಸಲಹೆಯ ಮೇರೆಗೆ, ಪಾಲಕರ ಮೇಲ್ವಿಚಾರಣೆಯಲ್ಲಿ ಮಾತ್ರ ಬಳಸಬೇಕು.

ಗರ್ಭಿಣಿಯರು ಮೌತ್ ವಾಷ್ ಬಳಸಬಹುದೇ?

ಖಂಡಿತಾ ಬಳಸಬಹುದು. ಗರ್ಭಾವಸ್ಥೆಯಲ್ಲಿ ಹಲ್ಲಿನ ಸ್ವಚ್ಛತೆ ಕೂಡ ಮುಖ್ಯ. ಹೀಗಾಗಿ, ಅಗತ್ಯ ಬಿದ್ದರೆ ಅವರೂ ಮೌತ್ ವಾಷ್ ಬಳಸಬಹುದು.

ವಯೋವೃದ್ಧರ ನಕಲಿ ಹಲ್ಲುಗಳಿಗೆ ಮೌತ್ ವಾಷ್ ಉಪಯುಕ್ತವೇ?

ಇಲ್ಲ, ಅಂತಹ ಹಲ್ಲುಗಳಿಗೆ ಇದು ಹೆಚ್ಚಿನ ಪ್ರಯೋಜನ ನೀಡದು.

ಡೀ-ಸೆನ್ಸಿಡೈಸಿಂಗ್ ಮೌತ್ ವಾಷ್ ಉಪಯೋಗವೇನು?

ಸವೆತದಿಂದ ಹಲ್ಲುಗಳು ಜುಂ ಎನ್ನಲು ಶುರುವಾಗುತ್ತವೆ. ಆಗ ದಂತ ವೈದ್ಯರು ಹಲ್ಲುಗಳ ಸವೆತವನ್ನು ಪರಿಗಣಿಸಿ ಮೌತ್‌ವಾಷ್ ಉಪಯೋಗಿಸಲು ಹೇಳುತ್ತಾರೆ. ಇದರಲ್ಲಿ ಇರುವ ಪರಿಣಾಮಕಾರಿ ಅಂಶಗಳು ಹಲ್ಲುಗಳ ಪದರದ ಕೊಳವೆಗಳನ್ನು ಮುಚ್ಚಿ, ಜುಂ  ಎನ್ನುವುದನ್ನು ಉಪಶಮನಗೊಳಿಸುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.