ಶನಿವಾರ, ಸೆಪ್ಟೆಂಬರ್ 26, 2020
26 °C

ಬಾಲಕಿಯ ಯಾತನೆ ನಿವಾರಿಸಿದ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಕಿಯ ಯಾತನೆ ನಿವಾರಿಸಿದ ಶಸ್ತ್ರಚಿಕಿತ್ಸೆ

ತಿಪಟೂರು: ಹುಟ್ಟಿನಿಂದಲೇ ಸರಾಗ ಗುದದ್ವಾರವಿಲ್ಲದೆ ಮಲ ವಿಸರ್ಜನೆಗೆ ನಿತ್ಯ ಬಾಧೆ ಪಡುತ್ತಿದ್ದ ಬಡ ಕುಟುಂಬದ ಐದು ವರ್ಷದ ಬಾಲಕಿಗೆ ಪಟ್ಟಣದ ಕುಮಾರ ಆಸ್ಪತ್ರೆಯ ವೈದ್ಯರು ಉಚಿತ ಶಸ್ತ್ರ ಚಿಕಿತ್ಸೆ ನಡೆಸಿ ಮಾನವೀಯತೆ ಮೆರೆದಿದ್ದಾರೆ.ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದ ಕೂಲಿ ಕಾರ್ಮಿಕ ಸೋಮಶೇಖರ್ ಮತ್ತು ಗೌರಮ್ಮ ದಂಪತಿಯ ಮಗಳು ಕವಿತಾ (5) ಈಗ ಯಾತನೆಯಿಂದ ಬಿಡುಗಡೆ ಹೊಂದಿ ಸಂತಸದ ಕಣ್ಣರಳಿಸಿದ್ದಾಳೆ.ಕವಿತಾ ಹುಟ್ಟಿದಾಗಲೇ ಮಲವಿಸರ್ಜಿಸುವ ದ್ವಾರ ಮುಚ್ಚಿತ್ತು. ಮೂತ್ರ ವಿಸರ್ಜಿಸುವ ಕೊಳವೆಯ ಸಮೀಪವೇ ಮಲ ವಿಸರ್ಜನೆಯಾಗುತ್ತಿತ್ತು. ವಿಸರ್ಜನೆ ಸಮಯದಲ್ಲಿ ಆಕೆ ವೇದನೆ ಪಡುತ್ತಿದ್ದಳು. ಗಟ್ಟಿ ಆಹಾರ ತಿಂದರೆ ವಿಸರ್ಜನೆ ಮತ್ತಷ್ಟು ಕಷ್ಟವಾಗಿ ಕಣ್ಣೀರಿಡುತ್ತಿದ್ದಳು.

 

ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದೆ ಪೋಷಕರು ಅಸಹಾಯಕರಾಗಿದ್ದರು. ಈ ಕುಟುಂಬಕ್ಕೆ ಯಶಸ್ವಿನಿ ಕಾರ್ಡ್ ಕೂಡ ಇಲ್ಲ. ನಿತ್ಯ ಕೂಲಿ ಮಾಡಿದರೆ ಮಾತ್ರ ಬದುಕು. ಇದರ ಜೊತೆಗೆ ಮಗಳು ಕವಿತಾಳ ಅನಾರೋಗ್ಯ ಸ್ಥಿತಿ ಚಿಂತೆಗೀಡು ಮಾಡಿತ್ತು.ಕುಮಾರ ಆಸ್ಪತ್ರೆಯ ವೈದ್ಯ ಜಿ.ಎಸ್.ಶ್ರೀಧರ್ ಅವರ ಬಳಿ ಸೋಮಶೇಖರ್ ತಮ್ಮ ಸಮಸ್ಯೆ ಹೇಳಿಕೊಂಡರು. ತಜ್ಞ ವಿದ್ಯಾಸಾಗರ್ ಮತ್ತು ಅರವಳಿಕೆ ವೈದ್ಯ ಶಶಿಕುಮಾರ್ ಸಹಕಾರದಲ್ಲಿ ಸತತ ಮೂರು ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ಶ್ರೀಧರ್ ಮಲ ವಿಸರ್ಜನೆ ದ್ವಾರವನ್ನು ಮುಕ್ತಗೊಳಿಸಿದರು. ಮೂತ್ರ ವಿಸರ್ಜನೆ ಜಾಗದಲ್ಲಿ ಆಗಿದ್ದ ಹೆಚ್ಚುವರಿ ರಂಧ್ರ ಮುಚ್ಚಿದರು.ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಇಂಥ ಸಮಸ್ಯೆ ಇರುತ್ತದೆ ಎನ್ನುವ ಡಾ.ಶ್ರೀಧರ್, ಚಿಕಿತ್ಸೆಗೆ ಹಣ ಹೊಂದಿಸಲು ಹೆದರಿ ನೋವುಣ್ಣುವವರೇ ಹೆಚ್ಚು. ಕವಿತಾ ಕುಟುಂಬದ ವಿಷಯ ತಿಳಿದು ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ವೈದ್ಯ ಮಿತ್ರರು ಇದಕ್ಕೆ ಸಹಕರಿಸಿದ್ದಾರೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.