ಮಂಗಳವಾರ, ಮೇ 18, 2021
24 °C

ಬಾಲಿವುಡ್ ಗೆ ಮರಿ ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಚಿರುತಾ~ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ರಾಮ್‌ಚರಣ್ ತೇಜಾ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದವರು. ಈ ಚಿತ್ರದಲ್ಲಿನ ಈತನ ನಟನೆ, ಆ್ಯಕ್ಷನ್ ಹಾಗೂ ಡ್ಯಾನ್ಸ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾದವು. ಸೂಪರ್ ಸ್ಟಾರ್ ಚಿರಂಜೀವಿ ಪುತ್ರ ಎಂಬ ಹಮ್ಮು ಬೆನ್ನಿಗಿದ್ದರೂ ಈತ ಅದಕ್ಕೆ ಅಂಟಿಕೊಳ್ಳಲಿಲ್ಲ. ಅಪ್ಪನ ಛಾಯೆಯಿಂದ ಹೊರಬಂದು, ಮೊದಲ ಚಿತ್ರದಲ್ಲೇ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡ ನಟ ತೇಜಾ. ಅವರ ವಿಶಿಷ್ಟ ಮ್ಯಾನರಿಸಂ, ಸಿನಿಮಾ ಬಗೆಗೆ ಇದ್ದ ಪ್ರೀತಿ ಕೂಡ ಇದಕ್ಕೆ ಕಾರಣ. ಎರಡನೇ ಚಿತ್ರ `ಮಗಧೀರ~ ಈತನನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ಯಿತು. ತೇಜಾ ಈಗ ಬಿ-ಟೌನ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

ತೇಜಾ ಬಾಲಿವುಡ್‌ನಲ್ಲಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ `ಜಂಜೀರ್~ ಬಗ್ಗೆ ಹೆಚ್ಚಿಗೆ ಏನನ್ನೂ ಮಾತನಾಡುತ್ತಿಲ್ಲ. ಅವರಿಗೆ ಸರಿಯಾಗಿ ಹಿಂದಿ ಬರುವುದಿಲ್ಲ ಎಂಬುದೇ ಇದಕ್ಕೆ ಕಾರಣವಂತೆ. ಹಾಗಂತ ತೇಜಾ ಸುಮ್ಮನೆ ಕುಳಿತಿಲ್ಲ. ಬಾಲಿವುಡ್‌ನ ಚೊಚ್ಚಲ ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಬೇಕು, ಪಾತ್ರಕ್ಕೆ ಜೀವ ತುಂಬಬೇಕು ಎಂಬ ಆಸೆಯಿಂದ ಅವರು ಈಗ ಹಿಂದಿ ಕಲಿಯಲು ಟ್ಯುಟೋರಿಯಲ್ ಸೇರಿದ್ದಾರೆ. ಅಂದಹಾಗೆ, `ಜಂಜೀರ್~ ಚಿತ್ರದಲ್ಲಿ ತೇಜಾ ಸೂಪರ್‌ಕಾಪ್ ವಿಜಯ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

`ಜಂಜೀರ್ ಚಿತ್ರದಲ್ಲಿನ ನನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತೇನೆ ಎಂಬ ನಂಬಿಕೆ ನನಗಿದೆ. ಅದಕ್ಕೆಂದೇ ಹಿಂದಿ ಭಾಷೆಯಲ್ಲಿನ ಸೂಕ್ಷ್ಮ ವ್ಯತ್ಯಾಸ, ಅರ್ಥ, ಭಾವಗಳನ್ನು ತಿಳಿದುಕೊಳ್ಳಲು ನೆರವಾಗುವ ರೀತಿಯಲ್ಲಿ ಪಾಠ ಹೇಳಿಸಿಕೊಳ್ಳುತ್ತಿದ್ದೇನೆ. `ವೈಸೆ ಮೇರಿ ಹಿಂದಿ ಉತ್ನಿ ಬುರಿ ನಹೀ ಹೈ~ (ನನ್ನ ಹಿಂದಿ ಈಗ ಅಷ್ಟೊಂದು ಕೆಟ್ಟದಾಗಿಲ್ಲ ಕಣ್ರೀ). ಈ ಚಿತ್ರದಲ್ಲಿ ನನ್ನ ಪಾತ್ರ ಹೆಚ್ಚು ಮಾತು ಬೇಡುವುದಿಲ್ಲ. ನಾನು ಮಾತಿಗಿಂತ ಹೆಚ್ಚಾಗಿ ಅಭಿನಯದ ಮೂಲಕವೇ ಜನರನ್ನು ತಲುಪುತ್ತೇನೆ~ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ತೇಜಾ.

ಈ ಹಿಂದೆ ಅಮಿತಾಬ್ ಬಚ್ಚನ್ ನಟಿಸಿದ್ದ `ಜಂಜೀರ್~ ಚಿತ್ರದ ರಿಮೇಕ್ ಇದು. `ಅಮಿತಾಬ್ ನಿರ್ವಹಿಸಿದ ಪಾತ್ರವನ್ನು ಈಗ ನಾನು ಅಭಿನಯಿಸುತ್ತಿದ್ದೇನೆ. ಈ ಬಗ್ಗೆ ಉದ್ವೇಗ ಮತ್ತು ಉತ್ಸುಕತೆ ಎರಡೂ ಇದೆ. ಹಾಗಾಗಿ ಈ ಚಿತ್ರದ ಪಾತ್ರವನ್ನು ನಾನು  ಚಾಲೇಂಜಿಗ್ ಆಗಿ ತೆಗೆದುಕೊಂಡಿದ್ದೇನೆ~ ಎಂದಿದ್ದಾರೆ ತೇಜಾ.

`ನಾನು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟದ್ದು 2007ರಲ್ಲಿ. ಸೂಪರ್‌ಸ್ಟಾರ್ ಚಿರಂಜೀವಿ ಪುತ್ರ ಎಂಬ ಗರ್ವ ಬೆಳೆಸಿಕೊಂಡಿದ್ದರೆ ಅಥವಾ ಇಂಡಸ್ಟ್ರಿಯ ಮುಂದಿನ ಉತ್ತರಾಧಿಕಾರಿ ನಾನೇ ಎಂಬ ಅಹಂ ಬೆಳೆಸಿಕೊಂಡಿದ್ದರೆ ಆ ಭಾವನೆ ನನ್ನ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿತ್ತು. ನಾನು ಇವೆಲ್ಲಾ ಭ್ರಮೆಗಳಿಂದ ಹೊರಬಂದು ನಟಿಸಲು ಇಷ್ಟಪಡುತ್ತೇನೆ. ಯಾವತ್ತೂ ಅಂತಹ ಹಮ್ಮು-ಬಿಮ್ಮಿನ ಭಾವದೊಳಗೆ ಮುದುಡಿಕೊಂಡು ಕೂರಲಾರೆ~ ಎಂದು ಮುಕ್ತವಾಗಿ ಹೇಳಿಕೊಳ್ಳುತ್ತಾರೆ.

ಅಂದಹಾಗೆ, ಸೂಪರ್‌ಸ್ಟಾರ್ ಚಿರಂಜೀವಿ ಕೂಡ ಈ ಹಿಂದೆ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. `ಪ್ರತಿಬಂಧ್~, `ಮೇರಾ ಮಕ್ಸದ್~ ಸಿನಿಮಾದಲ್ಲಿ ನಟಿಸಿದ್ದರು.

 ಜಂಜೀರ್ ಬಿಟ್ಟು ನೋಡಿದರೆ ತೇಜಾ ತೆಲುಗು ಚಿತ್ರರಂಗದ ಮರಿ ಚಿರತೆ. ಈತ ನಟಿಸಿದ `ಮಗಧೀರ~ ಹಿಂದಿಯಲ್ಲೂ ರಿಮೇಕ್ ಆಗುವ ಸಾಧ್ಯತೆ ಇದೆ. ಆ ಚಿತ್ರದಲ್ಲಿ ಅವರಿಗೆ ಮತ್ತೆ ನಟಿಸುವ ಇಷ್ಟವಿಲ್ಲವಂತೆ. ಚಿರಂಜೀವಿ ಈಗಾಗಲೇ 149 ಚಿತ್ರಗಳಲ್ಲಿ ನಟಿಸಿದ್ದಾರೆ. 150ನೇ ಸಿನಿಮಾ ಚಿತ್ರದ ನಿರ್ಮಾಣದಲ್ಲಿ ನಾನು ಭಾಗಿಯಾಗಬೇಕು ಮತ್ತು ನಾನು ಆ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ವ್ಯಕ್ತಪಡಿಸುತ್ತಾರೆ. ತಂದೆಯಂತೆ ರಾಜಕೀಯ ಪ್ರವೇಶಿಸಲು ಇಷ್ಟವಿಲ್ಲ. ಒಬ್ಬ ನಟನಾಗಿರುವುದೇ ಖುಷಿಯ ವಿಚಾರ. ರಾಜಕಾರಣಿ ವೇಷದಲ್ಲಿ ನನ್ನನ್ನು ನೋಡಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುವುದು ತೇಜಾ ಮಾತು.

`ನಾನು ಆವತ್ತು ಜಾಹೀರಾತು ಚಿತ್ರೀಕರಣದಲ್ಲಿದ್ದೆ. ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ನನಗೆ ಗೊತ್ತಾಯಿತು. ನಾನು ನಟಿಸಿದ ಜಂಜೀರ್ ಸಿನಿಮಾದ ರಿಮೇಕ್‌ನಲ್ಲಿ ಚರಣ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ ಎಂದು. ಚರಣ್ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಯಶಸ್ಸು ಕಂಡಿರುವ ನಟ. ಈತ ನನ್ನ ನೆಚ್ಚಿನ ಸ್ನೇಹಿತ ಚಿರಂಜೀವಿ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಾನು ಖುದ್ದಾಗಿ ಅವರನ್ನು ಭೇಟಿಯಾಗಿ ಶುಭಾಶಯ ತಿಳಿಸುತ್ತೇನೆ~ ಎಂದು ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.