ಶನಿವಾರ, ಮೇ 21, 2022
25 °C

ಬಾಲ ಕಾರ್ಮಿಕ ಪದ್ಧತಿ ವಿರೋಧಿ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಸ್ತೆಯಲ್ಲಿ ತುಂಬಿದ್ದ ಸಾವಿರಾರು ಚಿಣ್ಣರು.. ಬಿಳಿ ಟಿ ಷರ್ಟ್‌ಗಳನ್ನು ಧರಿಸಿ ಬೈಕ್ ಸವಾರಿ ಹೊರಟಿದ್ದ ಯುವಕರು.. `ಬಾಲ ಕಾರ್ಮಿಕತೆ ಅಳಿಸಿ, ಮಕ್ಕಳನ್ನು ಶಾಲೆಗೆ ಕಳಿಸಿ~ ಎಂಬ ಬ್ಯಾನರ್‌ಗಳನ್ನು ಹಿಡಿದಿದ್ದ ಸ್ವಯಂ ಸೇವಕರು..ನಗರದ ಶೇಷಾದ್ರಿ ರಸ್ತೆಯಲ್ಲಿ ಮಂಗಳವಾರ ಕಂಡುಬಂದ ದೃಶ್ಯವಿದು. ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಕಾರ್ಮಿಕ ಇಲಾಖೆ ನಗರದ ಸ್ವಾತಂತ್ರ್ಯ ಉದ್ಯಾನದಿಂದ ಕಂಠೀರವ ಕ್ರೀಡಾಂಗಣದವರೆಗೆ ಜಾಥಾ ಆಯೋಜಿಸಿತ್ತು.ಸ್ವಾತಂತ್ರ್ಯ ಉದ್ಯಾನದ ಬಳಿ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಹಾಗೂ ಹಿರಿಯ ಚಲನಚಿತ್ರ ನಟ ಶ್ರೀನಾಥ್ ಬಾವುಟ ಬೀಸಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾ ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ ಮಾರ್ಗವಾಗಿ ಕಂಠೀರವ ಕ್ರೀಡಾಂಗಣ ತಲುಪಿತು. ನಗರದ ವಿವಿಧ ಶಾಲೆಗಳ ಮಕ್ಕಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು.ಹೆಚ್ಚಿದ ವಾಹನ ದಟ್ಟಣೆ:
ಬೆಳಿಗ್ಗೆ ಹತ್ತು ಗಂಟೆಗೆ ಜಾಥಾ ಆಯೋಜಿಸಿದ್ದರಿಂದ ಶೇಷಾದ್ರಿ ರಸ್ತೆ ಹಾಗೂ ನೃಪತುಂಗ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಮೆಜೆಸ್ಟಿಕ್‌ನಿಂದ ಕೆ.ಆರ್. ವೃತ್ತದ ವರೆಗೂ ಬಸ್‌ಗಳು ಹಾಗೂ ಇತರ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.`ಜಾಥಾ ನಡೆಸುವುದು ಸರಿ. ಆದರೆ ಕಚೇರಿ ವೇಳೆಯಲ್ಲಿ ಜಾಥಾ ನಡೆಸಿದರೆ ಸಾರ್ವಜನಿಕರಿಗೆ ಆಗುವ ಅನನುಕೂಲದ ಬಗ್ಗೆಯೂ ಮಂತ್ರಿಗಳು ಯೋಚನೆ ಮಾಡಬೇಕು. ಮೆರವಣಿಗೆ, ಜಾಥಾ ಎಂಬ ಕಾರಣಕ್ಕೆ ಆಗಾಗ ಶೇಷಾದ್ರಿ ರಸ್ತೆ ಮತ್ತು ನೃಪತುಂಗ ರಸ್ತೆಗಳಲ್ಲಿ ವಾಹನ ದಟ್ಟಣೆಯ ತೊಂದರೆ ಅನುಭವಿಸುವುದು ಅನಿವಾರ್ಯವಾಗಿದೆ~ ಎಂದು ದೂರಿದವರು ವಾಹನ ಚಾಲಕ ರಮೇಶ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.