ಬಾಷ್ ಕಂಪೆನಿಯಿಂದ ಹೊರಗುತ್ತಿಗೆ: ಮೈಕೊ ಕಾರ್ಮಿಕರ ಪ್ರತಿಭಟನೆ

7

ಬಾಷ್ ಕಂಪೆನಿಯಿಂದ ಹೊರಗುತ್ತಿಗೆ: ಮೈಕೊ ಕಾರ್ಮಿಕರ ಪ್ರತಿಭಟನೆ

Published:
Updated:

ಬೆಂಗಳೂರು: ನಗರದ ಹೊಸೂರು ರಸ್ತೆಯಲ್ಲಿನ ಬಾಷ್ ಕಂಪೆನಿಯ ಆಡಳಿತ ಮಂಡಳಿಯು ಒಪ್ಪಂದ ಉಲ್ಲಂಘಿಸಿ ಹೊರಗುತ್ತಿಗೆ ನೀಡಲು ಮುಂದಾಗಿದೆ ಎಂದು ಆರೋಪಿಸಿ ಮುಷ್ಕರ ಆರಂಭಿಸಿರುವ ಮೈಕೊ ಕಾರ್ಮಿಕರ ಸಂಘವು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಪ್ರಕಟಿಸಿದೆ.



`ಬಾಷ್ ಕಂಪೆನಿಯಲ್ಲಿ ಮೊದಲಿನಿಂದಲೂ ಆಡಳಿತ ಮಂಡಳಿ ಹಾಗೂ ಸಂಘದ ನಡುವಿನ ಒಪ್ಪಂದದಂತೆ ಎಲ್ಲ ಪ್ರಕ್ರಿಯೆ ನಡೆಯುತ್ತಿತ್ತು. ಅದರಂತೆ 2001-04ರ ಒಪ್ಪಂದದನ್ವಯ ಕ್ಯಾಂಟಿನ್ ಹಾಗೂ ಭದ್ರತಾ ಸಿಬ್ಬಂದಿಯನ್ನು ಹೊರಗುತ್ತಿಗೆ ಮೇಲೆ ನೇಮಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಹಾಗೆಯೇ 2005-08ರ ಅವಧಿಯಲ್ಲಿ ಕೆಲವೊಂದು ವಿಭಾಗಗಳನ್ನು ಹೊರಗುತ್ತಿಗೆ ನೀಡಲು ಒಪ್ಪಿಗೆ ನೀಡಲಾಯಿತು~ ಎಂದು ಸಂಘದ ಅಧ್ಯಕ್ಷ ಎನ್.ಎಂ. ಅಧ್ಯಂತಾಯ ಅವರು ಮಂಗಳವಾರ  ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



`2009-12ರ ಸಾಲಿನ ಒಪ್ಪಂದದಲ್ಲಿ ಹಲವು ಪ್ರಮುಖ ವಿಭಾಗಗಳನ್ನು ಹೊರಗುತ್ತಿಗೆ ನೀಡಲು ಆಡಳಿತ ಮಂಡಳಿ ಮುಂದಾಯಿತು. ಆದರೆ ಇದಕ್ಕೆ ಸಂಘ ಒಪ್ಪಿಗೆ ನೀಡಲಿಲ್ಲ. ಇಷ್ಟಾದರೂ ಇದೇ ಸೆಪ್ಟೆಂಬರ್ 25ರಂದು ಭಾನುವಾರ ಆಡಳಿತ ಮಂಡಳಿಯು ಹಲವು ಯಂತ್ರೋಪಕರಣಗಳನ್ನು ಹೊರಗೆ ಸಾಗಿಸಿ ಹೊರಗುತ್ತಿಗೆ ನೀಡಿಕೆ ಪ್ರಕ್ರಿಯೆಗೆ ಚಾಲನೆ ನೀಡಿತು~ ಎಂದು ಆರೋಪಿಸಿದರು.



`ಇದನ್ನು ತೀವ್ರವಾಗಿ ಖಂಡಿಸಿದ ಸಂಘವು 27ರಂದು ಕಾರ್ಯಕಾರಿ ಸಮಿತಿ ಸಭೆ ನಡೆಸಿದ ಬಳಿಕ 28ರಿಂದ ಮುಷ್ಕರ ಆರಂಭಿಸಲು ನಿರ್ಧರಿಸಿತು. 29ರಂದು ಆಡಳಿತ ಮಂಡಳಿಯು ಕಾರ್ಖಾನೆಯನ್ನು ಸ್ಥಗಿತಗೊಳಿಸಿರುವುದಾಗಿ ಸೂಚನಾ ಪತ್ರ ನೀಡಿದೆ. ಇದರಿಂದ ಸಾವಿರಾರು ನೌಕರರಿಗೆ ತೊಂದರೆಯಾಗಿದೆ~ ಎಂದು ಹೇಳಿದರು.



ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಎನ್. ಮುನಿರಾಜ್, `2012ರವರೆಗೆ ಹಿಂದಿನ ಒಪ್ಪಂದದಂತೆ ವ್ಯವಹಾರ ನಡೆಸಿ ನಂತರ ಮುಂದಿನ ಒಪ್ಪಂದದಲ್ಲಿ ಬದಲಾವಣೆ ತರಬಹುದು. ಇದಕ್ಕೆ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ. ಹಾಗಾಗಿ ಮುಷ್ಕರವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ~ ಎಂದರು.



ಕಂಪೆನಿ ಸ್ಪಷ್ಟನೆ

ಮೈಕೊ ಕಾರ್ಮಿಕರ ಸಂಘದ ಸದಸ್ಯರು ಸೆ. 28ರಿಂದ ನಿಯಮಬಾಹಿರವಾಗಿ ಮುಷ್ಕರ ಆರಂಭಿಸಿದ್ದಾರೆ. ಯಾವುದೇ ಉದ್ಯೋಗಿಗೆ ತೊಂದರೆಯಾಗುವುದಿಲ್ಲ ಹಾಗೂ ಅವರಿಗೆ ನೀಡಲಾಗುತ್ತಿರುವ ಸೌಲಭ್ಯದಲ್ಲಿಯೂ ಯಾವುದೇ ಕಡಿತ ಮಾಡುವುದಿಲ್ಲ ಎಂಬುದಾಗಿ ಭರವಸೆ ನೀಡಿದ್ದರೂ ಮುಷ್ಕರ ಮುಂದುವರಿಸಿದ್ದಾರೆ.



ಬಾಷ್ ಕಂಪೆನಿಯ ಬಗ್ಗೆ ಅಪಪ್ರಚಾರ ಮಾಡುವ ಸಲುವಾಗಿ ಕೆಲ ಬಾಹ್ಯ ಶಕ್ತಿಗಳು ಇದಕ್ಕೆ ಕುಮ್ಮಕ್ಕು ನೀಡಿವೆ ಎಂದು ಬಾಷ್ ಕಂಪೆನಿಯ ಪ್ರಕಟಣೆಯಲ್ಲಿ ತಿಳಿಸಿದೆ.



ಹೆಚ್ಚುವರಿ ಕಾರ್ಮಿಕ ಆಯುಕ್ತರು, ಬಾಷ್ ಆಡಳಿತ ಮಂಡಳಿ ಹಾಗೂ ಮೈಕೊ ಕಾರ್ಮಿಕರ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಕೊನೆಯ ಎರಡು ಸುತ್ತಿನ ಮಾತುಕತೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.



ಹಾಗಾಗಿ ಈ ಕುರಿತು ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ಪರಿಸ್ಥಿತಿ ಹೀಗಿರುವಾಗ ಮಂಗಳವಾರ (ಅ. 11) ಬೆಳಿಗ್ಗೆ ಸಂಘದ ಸದಸ್ಯರು ಪ್ರವೇಶದ್ವಾರದ ಬಳಿ ಕಂಪೆನಿಯ ಅಧಿಕಾರಿಗಳನ್ನು ತಡೆದು ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಿರುವುದು ಖಂಡನೀಯ ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry