ಬುಧವಾರ, ಜನವರಿ 22, 2020
21 °C
ಐ ಲೀಗ್‌ ಫುಟ್‌ಬಾಲ್: ಈಸ್ಟ್‌ ಬೆಂಗಾಲ್‌ಗೆ ಜಯ

ಬಿಎಫ್‌ಸಿಗೆ ತವರಿನಲ್ಲಿ ಮೊದಲ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಫ್‌ಸಿಗೆ ತವರಿನಲ್ಲಿ ಮೊದಲ ಸೋಲು

ಬೆಂಗಳೂರು: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡದ ಗೆಲುವಿನ ನಾಗಾಲೋಟಕ್ಕೆ ತೆರೆ ಬಿದ್ದಿದೆ. ಐ ಲೀಗ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಸುನಿಲ್‌ ಚೆಟ್ರಿ ಸಾರಥ್ಯದ ತಂಡ  ಭಾನುವಾರ ಈಸ್ಟ್‌ ಬೆಂಗಾಲ್‌ ಎದುರು ಮತ್ತೊಮ್ಮೆ ನಿರಾಸೆ ಕಂಡಿತು.ರಾಜ್ಯ ಫುಟ್‌ಬಾಲ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ನಡುವೆ ಆತ್ಮವಿಶ್ವಾಸದಿಂದ ಕಣಕ್ಕಿಳಿದ ಬಿಎಫ್‌ಸಿ ಚುರುಕಿನ ಪ್ರದರ್ಶನ ತೋರಿ ಚಪ್ಪಾಳೆ ಗಿಟ್ಟಿಸಿತಾದರೂ, ಗೆಲುವಿನ ಓಟ ಮುಂದುವರಿಸಲು ವಿಫಲವಾಯಿತು. ತವರಿನಲ್ಲಿ ಈ ತಂಡ ಅನುಭವಿಸಿದ ಮೊದಲ ಸೋಲು ಇದು.ಎರಡು ತಿಂಗಳ ಹಿಂದೆ ಕೋಲ್ಕತ್ತದಲ್ಲಿ ಈಸ್ಟ್‌ ಬೆಂಗಾಲ್‌ ಎದುರು ಅನುಭವಿಸಿದ್ದ ನಿರಾಸೆಗೆ ತಿರುಗೇಟು ನೀಡಬೇಕೆನ್ನುವ ಬಿಎಫ್‌ಸಿ ಆಸೆ  ಈಡೇರಲಿಲ್ಲ. ಈಸ್ಟ್‌ ಬೆಂಗಾಲ್‌ 2–0 ಗೋಲುಗಳಿಂದ ಆತಿಥೇಯರನ್ನು ಮಣಿಸಿ ಮೂರು ಪಾಯಿಂಟ್‌ಗಳನ್ನು ತನ್ನದಾಗಿಸಿಕೊಂಡಿತು.ಹಿಂದಿನ ಪಂದ್ಯದಲ್ಲಿ ‘ಹಳದಿ ಕಾರ್ಡ್‌’ ಪಡೆದಿದ್ದ ಕಾರಣ ಈ ಪಂದ್ಯಕ್ಕೆ ಅಲಭ್ಯರಾಗಿದ್ದ ಡಿಫೆಂಡರ್‌ ಜಾನ್‌ ಜಾನ್ಸನ್‌ ಅನುಪಸ್ಥಿತಿ ತಂಡವನ್ನು ಸಾಕಷ್ಟು ಕಾಡಿತು. ಬಿಎಫ್‌ಸಿ ತಂಡದ ಗೋಲ್‌ಕೀಪರ್‌ ಪವನ್‌ ಗಟ್ಟಿಯಾಗಿ ನಿಂತು ಗೋಲುಗಳನ್ನು ಕಲೆ ಹಾಕುವ ಎದುರಾಳಿ ತಂಡದ ಕೆಲ ಪ್ರಯತ್ನಗಳನ್ನು ವಿಫಲಗೊಳಿಸಿದರು. ಆದರೂ, ಈಸ್ಟ್‌ ಬೆಂಗಾಲ್‌ ಚುರುಕಿನ ಆಟದ ಮುಂದೆ ಆತಿಥೇಯ ತಂಡ ಮಂಕಾಯಿತು.ಜೇಮ್ಸ್‌ ಸಯೀದ್‌ ಮೊಗಾ 17ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ,  ಎಡೆ ಚಿಡಿ 80ನೇ ನಿಮಿಷದಲ್ಲಿ ಗೋಲು ಗಳಿಸಿ ಈಸ್ಟ್‌ ಬೆಂಗಾಲ್‌ ತಂಡದ ಗೆಲುವಿನ ರೂವಾರಿ ಎನಿಸಿದರು.ಮೊದಲಾರ್ಧದಲ್ಲಿ ಗೋಲು ಗಳಿಸಲು ಆತಿಥೇಯ ತಂಡದವರು ಮೂರು ಸಲ ಯತ್ನಿಸಿದರೂ, ಎದುರಾಳಿ ತಂಡ ಇದಕ್ಕೆ ಅವಕಾಶ ನೀಡಲಿಲ್ಲ. ಈಸ್ಟ್‌ ಬೆಂಗಾಲ್‌ ತಂಡದ ರಕ್ಷಣಾಕೋಟೆ ಸಾಕಷ್ಟು ಭದ್ರವಾಗಿತ್ತು.ನಾಲ್ಕು ಪಂದ್ಯದ ಬಳಿಕ ಸೋಲು

ಸತತ ನಾಲ್ಕು ಪಂದ್ಯಗಳ ಗೆಲುವಿನ ಬಳಿಕ ಬಿಎಫ್‌ಸಿ ಸೋಲು ಕಂಡಿತು. ಈ ತಂಡ ಹಿಂದಿನ ಪಂದ್ಯಗಳಲ್ಲಿ ಕ್ರಮವಾಗಿ ಮಹಮ್ಮಡನ್‌, ಚರ್ಚಿಲ್‌ ಬ್ರದರ್ಸ್‌, ಶಿಲ್ಲಾಂಗ್‌ ಲಾಜಿಂಗ್‌ ಮತ್ತು ಸಲಗಾಂವ್ಕರ್‌ ಎದುರು ಜಯ ಸಾಧಿಸಿತ್ತು.ಸೋತರೂ ಅಗ್ರಸ್ಥಾನ

ಬಿಎಫ್‌ಸಿ ಸೋಲು ಕಂಡರೂ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗಟ್ಟಿಯಾಗಿ ಉಳಿಯಿತು.14 ಪಂದ್ಯಗಳನ್ನು ಆಡಿರುವ ಚೆಟ್ರಿ ಬಳಗ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಒಟ್ಟು 27 ಪಾಯಿಂಟ್‌ಗಳನ್ನು ಕಲೆ ಹಾಕಿದೆ. ಗೋವಾದ ಸ್ಫೋರ್ಟಿಂಗ್‌ 24 ಪಾಯಿಂಟ್ಸ್‌ನಿಂದ ಎರಡನೇ ಸ್ಥಾನದಲ್ಲಿದೆ.ಈ ಪಂದ್ಯವನ್ನಾಡುವ ಮುನ್ನ ಏಳನೇ ಸ್ಥಾನದಲ್ಲಿದ್ದ ಈಸ್ಟ್‌ ಬೆಂಗಾಲ್‌ ಈಗ 18 ಪಾಯಿಂಟ್‌ಗಳೊಂದಿಗೆ ಒಂದು ಸ್ಥಾನ ಮೇಲಕ್ಕೇರಿತು. ಆದರೆ, ಬಿಎಫ್‌ಸಿ ಸೋಲು ಕಂಡ ಕಾರಣ 8000ಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಫುಟ್‌ಬಾಲ್‌ ಪ್ರಿಯರು ನಿರಾಸೆಗೆ ಒಳಗಾದರು.

ಪ್ರತಿಕ್ರಿಯಿಸಿ (+)