ಬುಧವಾರ, ಮೇ 25, 2022
24 °C

ಬಿಎಸ್‌ವೈಗೆ ರಂಭಾಪುರಿ ಶ್ರೀ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಧರ್ಮ, ಸಂಸ್ಕೃತಿ, ಆದರ್ಶ ಪರಂಪರೆಯ ಬಗ್ಗೆ ವಿಶೇಷ ಗಮನ ಹರಿಸಿ, ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಭೂ ಹಗರಣದ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಮುಖಂಡರು ಪೂರ್ವಾಪರ ಯೋಚಿಸದೇ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ನೋವಿನ ಸಂಗತಿ~ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.ಮಠವು ನಗರದಲ್ಲಿ ಹಮ್ಮಿಕೊಂಡಿರುವ ಶರನ್ನವರಾತ್ರಿ ದಸರಾ ಮಹೋತ್ಸವ ಮತ್ತು ಧರ್ಮ ಜನಜಾಗೃತಿ ಸಭೆಯಲ್ಲಿ ಮಂಗಳವಾರ ಆಶೀರ್ವಚನ ನೀಡಿ ಅವರು ಮಾತನಾಡಿದರು.`ರಾಜ್ಯದಲ್ಲಿ 3 ವರ್ಷ 2 ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಯಡಿಯೂರಪ್ಪ ಅವರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳನ್ನು ಯಾರೂ ಮರೆಯುವಂತಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಈ ಹಿಂದೆ ಯಾವುದೇ ಮುಖ್ಯಮಂತ್ರಿ ನೀಡದಷ್ಟು ವಿಶೇಷ ಅನುದಾನವನ್ನು ಅವರು ಬಿಡುಗಡೆ ಮಾಡಿದರು. ಜಾತಿ, ಮತ ಭೇದವಿಲ್ಲದೇ ಎಲ್ಲ ಸಮುದಾಯದ ಜನರಿರುವ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿರುವುದನ್ನು ಶ್ಲಾಘನೀಯ~ ಎಂದರು.

`ಯಡಿಯೂರಪ್ಪ ಅವರು ವೀರಶೈವ ಮುಖಂಡರೆಂಬ ಕಾರಣಕ್ಕೆ ಹೀಗೆ ಹೇಳುತ್ತಿಲ್ಲ. ಅವರು ಪಕ್ಷಕ್ಕಾಗಿ ನಾಲ್ಕು ದಶಕಗಳ ಕಾಲ ಶ್ರಮಿಸಿದ್ದಾರೆ. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅಲ್ಲದೇ ಇತ್ತೀಚಿನವರೆಗೆ ನಡೆದ ಉಪಚುನಾವಣೆಯಲ್ಲೂ ಪಕ್ಷ ಜಯಭೇರಿ ಬಾರಿಸಿದ್ದು, ಎಲ್ಲರಿಗೂ ತಿಳಿದ ಸಂಗತಿ~ ಎಂದರು.`ಯಾರೋ ಆರೋಪ ಮಾಡಿದ ಮಾತ್ರಕ್ಕೆ ಯಾರೂ ಅಪರಾಧಿ ಆಗಲಾರರು. ಅವರನ್ನು ಪದಚ್ಯುತಿಗೊಳಿಸಲು ಷಡ್ಯಂತ್ರ ನಡೆಸಿರುವುದು ಸತ್ಯ. ಈ ಬಗ್ಗೆ ರಾಷ್ಟ್ರೀಯ ನಾಯಕರು ಗಂಭೀರವಾಗಿ ಚಿಂತಿಸಬೇಕು. ಮುಂದಿನ ಚುನಾವಣೆಯಲ್ಲಿ ಮತ್ತೆ ಅವರ ನಾಯಕತ್ವದಲ್ಲಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಾರೆ. ಅವರನ್ನು ನಿರ್ಲಕ್ಷಿಸಿದರೆ ಪಕ್ಷಕ್ಕೆ ಆಘಾತ ತಪ್ಪಿದ್ದಲ್ಲ.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಎರಡೂ ಬಣದವರ ಸಾಮರಸ್ಯಕ್ಕೆ ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ~ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.