ಸೋಮವಾರ, ಮೇ 17, 2021
21 °C

ಬಿಎಸ್‌ವೈ ತೋಟದಲ್ಲಿ ಪುತ್ರನ ಸಾವು:ಪರಿಹಾರಕ್ಕೆ ವೃದ್ಧೆಯ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತೋಟದಲ್ಲಿ ದುಡಿಯುತ್ತಿದ್ದ ಮಗ ಮೃತಪಟ್ಟು 10 ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ. ಈಗಲಾದರೂ ಪರಿಹಾರ ನೀಡಿ ಎಂದು ವೃದ್ಧೆಯೊಬ್ಬಳು ಅವಲತ್ತುಕೊಂಡ ಘಟನೆ ತಾಲ್ಲೂಕಿನ ವದಗನಾಳ ಗ್ರಾಮದಲ್ಲಿ ಬುಧವಾರ ನಡೆಯಿತು.ಬರ ಪರಿಸ್ಥಿತಿ ಅಧ್ಯಯನ ಹಿನ್ನೆಲೆಯಲ್ಲಿ ಗ್ರಾಮದ ಗೋಶಾಲೆಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ವಿಷಯ ಹೇಳಿಕೊಳ್ಳಬೇಕೆಂಬ ವೃದ್ಧೆಯ ಆಸೆ ಕೈಗೂಡಲಿಲ್ಲ. ಯಡಿಯೂರಪ್ಪ ಆಪ್ತ ಸಹಾಯಕರು ವೃದ್ಧೆಗೆ ಅವಕಾಶ ನೀಡಲಿಲ್ಲ. ಆದರೂ ಕಾರ್ ಬಳಿ ತೆರಳಿ ಅಳುತ್ತಾ ತನ್ನ ದುಃಖ ಹೇಳುತ್ತಿದ್ದ ವೃದ್ಧೆಯ ಕೈಗಳಲ್ಲಿ ಸಾವಿರ ರೂಪಾಯಿ ತುರುಕಿದ ಯಡಿಯೂರಪ್ಪ ಸಿಡಿಮಿಡಿಗೊಂಡು ಪ್ರಯಾಣ ಬೆಳೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೃದ್ಧೆ ಬಸವ್ವ ಕರಕನಗೌಡ್ರ, ಶಿಕಾರಿಪುರದಲ್ಲಿರುವ ಯಡಿಯೂರಪ್ಪ ಅವರ ತೋಟದಲ್ಲಿ ಪುತ್ರ ತಿಪ್ಪಣ್ಣ ದುಡಿಯುತ್ತಿದ್ದ ಎಂಬುದಾಗಿ ತಿಳಿಸಿದಳು.

ಮತ್ತೊಬ್ಬ ಪುತ್ರ ನಿಂಗಪ್ಪ ಅಲ್ಲಿನ ಪೆಟ್ರೋಲ್ ಬಂಕ್‌ವೊಂದರಲ್ಲಿ ದುಡಿಯುತ್ತಿದ್ದ.ಆತನ ಸಲಹೆ ಮೇರೆಗೆ ಶಿಕಾರಿಪುರಕ್ಕೆ ತೆರಳಿದ ತಿಪ್ಪಣ್ಣ ಹಲವು ವರ್ಷಗಳ ಕಾಲ ದುಡಿದ. ಆದರೆ, 2001ರಲ್ಲಿ ತಿಪ್ಪಣ್ಣ ಸಾವನ್ನಪ್ಪಿದ ಎಂಬ ವಿಷಯ ತಿಳಿದುಬಂತು. ನಂತರ ಆತನ ಮೃತ ದೇಹವೂ ಗ್ರಾಮಕ್ಕೆ ಬಂತು ಎಂದು ಬಸವ್ವ ದುಃಖಿಸಿದಳು. ಇದೇ ವಿವರಗಳನ್ನು ಕೆಲ ಗ್ರಾಮಸ್ಥರೂ ನೀಡಿದರು.ಆದರೆ, ತನ್ನ ಪುತ್ರ ಹೇಗೆ ಸತ್ತ ಎಂಬುದು ಇದುವರೆಗೂ ಗೊತ್ತಿಲ್ಲ. ಅಲ್ಲದೇ, ಸೂಕ್ತ ಪರಿಹಾರ ಕೊಡುವುದಾಗಿ ಹೇಳಿದ್ದರೂ ಇದುವರೆಗೂ ನೀಡಿಲ್ಲ. ಈಗ ನಮ್ಮ ಊರಿಗೆ ಬಂದಿರುವ ಯಡಿಯೂರಪ್ಪ ಅವರಿಗೆ ಈ ವಿಷಯ ಹೇಳಿ ಪರಿಹಾರ ಕೇಳಬೇಕು ಎಂದರೆ ಅದಕ್ಕೂ ಅವಕಾಶ ಸಿಗಲಿಲ್ಲ ಎಂದು ಅವಲತ್ತುಕೊಂಡಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.