ಶುಕ್ರವಾರ, ಜನವರಿ 24, 2020
22 °C

ಬಿಜೆಪಿಗೆ ಬಹುಮತ: ಕಾರ್ಯಕರ್ತರ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಬರಲಿರುವ ಲೋಕಸಭಾ ಚುನಾವಣೆ ದಿಕ್ಸೂಚಿ ಎಂದೇ ಪರಿಗಣಿಸಲಾದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಭಾನುವಾರ ಸಿಹಿ ಹಂಚಿ ಸಂಭ್ರಮಿಸಿದರು.ಛತ್ತೀಸ್‌ಗಡ, ರಾಜಸ್ತಾನ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ನಿಲ್ದಾಣ ವೃತ್ತದಲ್ಲಿ ನೆರೆದ ಕಾರ್ಯಕರ್ತರು ಪಕ್ಷಕ್ಕೆ, ಗುಜರಾತ್ ಮುಖ್ಯಮಂತ್ರಿ ನರೇದ ಮೋದಿಗೆ ಜೈಕಾರ ಕೂಗಿದರು. ವೃತ್ತದ ಮೂಲಕ ಹಾದುಹೋಗುತ್ತಿದ್ದ ಜನರಿಗೆ ಲಡ್ಡುಗಳನ್ನು ಹಂಚಿದರು.ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರಕಿದೆ. ಛತ್ತೀಸ್‌ಗಡದಲ್ಲಿ ತೀವ್ರ ಪೈಪೋಟಿ ನೀಡಿದ ಕಾಂಗ್ರೆಸ್‌ ಅನ್ನು ಮಣಿಸಿ ಹೆಚ್ಚಿನ ಸ್ಥಾನ ಗಳಿಸಿದೆ. ದೆಹಲಿಯಲ್ಲೂ ಗಮನಾರ್ಹ ಸ್ಥಾನಗಳನ್ನು ಪಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಪ್ರಧಾನಿ ಅಭ್ಯರ್ಥಿಯನ್ನಾಗಿ ನರೇಂದ್ರ ಮೋದಿಯವರನ್ನು ಬಿಂಬಿಸಿದ ಬಳಿಕ ನಡೆದ ಚುನಾವಣೆಯ ಫಲಿತಾಂಶ ಆಶಾದಾಯಕವಾಗಿದೆ ಎಂದು ಹೇಳಿದರು.ಪಕ್ಷದ ಪ್ರಮುಖರಾದ ಪ್ರಮೋದ್, ವಿಜಯಕುಮಾರ್, ಕನಕ ಮಂಜು, ರವಿ, ಕೆಂಬೋಡಿ ನಾರಾಯಣಸ್ವಾಮಿ, ಚಿನ್ನಾಪುರ ನಾರಾಯಣಸ್ವಾಮಿ, ಓಹಿಲೇಶ್ವರ ಪಾಲ್ಗೊಂಡಿದ್ದರು.ಮೋದಿ ಪ್ರಭಾವ ಹೆಚ್ಚಳ

ಶ್ರೀನಿವಾಸಪುರ: ದೇಶದಲ್ಲಿ ಮೋದಿ ಪ್ರಭಾವ ಹೆಚ್ಚುತ್ತಿದೆ. ಉತ್ತರದ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಅದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ  ಎಂ.ಲಕ್ಷ್ಮಣಗೌಡ ಅಭಿಪ್ರಾಯಪಟ್ಟರು.ಉತ್ತರದ ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕಾಗಿ ಪಟ್ಟಣದ ಬಸ್‌ ನಿಲ್ದಾಣದ ಸಮೀಪ ತಾಲ್ಲೂಕು ಬಿಜೆಪಿ ಕಾರ್ಯಕರ್ತರು ಭಾನುವಾರ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಬರಲಿರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಸಂಘಟನೆ ಬಲಪಡಿಸಬೇಕು ಎಂದು ಹೇಳಿದರು.ಬಿಜೆಪಿ ಹಿರಿಯ ಮುಖಂಡ ಜಯರಾಮರೆಡ್ಡಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಕ್ಷದ ಬಾವುಟ ಹಿಡಿದು ಕುಣಿದಾಡಿದರು. ಬಿಜೆಪಿ ಹಾಗೂ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರ ಘೋಷಣೆ ಕೂಗಿದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶಂಕರ ಗೌಡ, ಉಪಾಧ್ಯಕ್ಷೆ ಪದ್ಮಾವತಮ್ಮ, ಪ್ರಧಾನ ಕಾರ್ಯದರ್ಶಿ ನಾಗರಾಜ್‌,  ಬಿಜೆಪಿ ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಶೀಗಹಳ್ಳಿ ಮಂಜು, ಕಾರ್ಯದರ್ಶಿ ರವಿತೇಜ, ಮುಖಂಡರಾದ ಜಿ.ಎಸ್‌.ಚಂದ್ರಶೇಖರ್‌, ಆಪರೇಟರ್‌ ನಾರಾಯಣಸ್ವಾಮಿ, ಲಕ್ಷ್ಮೀಸಾಗರ ಪ್ರಭಾಕರ್‌, ಅರವಿಂದ್‌, ವೆಂಕಟರಾಮರೆಡ್ಡಿ ಉಪಸ್ಥಿತರಿದ್ದರು.ಬಿಜೆಪಿ ಜಯಭೇರಿಗೆ ಮೋದಿಯೇ ಕಾರಣ

ಮಾಲೂರು: ನರೇಂದ್ರ ಮೋದಿಯನ್ನು ಬಿಜೆಪಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಕಾರಣ ನಾಲ್ಕು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸೊಣ್ಣೂರು ವೆಂಕಟೇಶ್ ಹೇಳಿದರು.ಪಟ್ಟಣದ ಮಾರಿಕಾಂಬ ವೃತ್ತದಲ್ಲಿ ಭಾನುವಾರ ಬಿಜೆಪಿ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕೆಟ್ಟ ಆಡಳಿತದಿಂದ ಜನತೆ ರೋಸಿ ಹೋಗಿದ್ದಾರೆ. ಬದಲಾವಣೆ ಬಯಸಿ ನರೇಂದ್ರ ಮೋದಿಯವರ ನಾಯಕತ್ವವನ್ನು ಬೆಂಬಲಿಸಿದ್ದಾರೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಇ.ರಾಮೇಗೌಡ, ಪುರಸಭಾ ಸದಸ್ಯರಾದ ಸಿ.ಪಿ.ನಾಗರಾಜ್, ರಾಮಮೂರ್ತಿ, ರಮೇಶ್, ದಿನೇಶ್ ಗೌಡ, ಶೇಷಾದ್ರಿ, ಶಂಕರ್, ನಂಜುಂಡಪ್ಪ ಭಾಗವಹಿಸಿದ್ದರು.ಲೋಕಸಭೆಯ ದಿಕ್ಸೂಚಿ

ಕೆಜಿಎಫ್‌: ಉತ್ತರ ಭಾರತದ ನಾಲ್ಕು ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜನಾದೇಶ ಪಡೆದಿದ್ದು, ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವುದು ಬಿಜೆಪಿ ಕಾರ್ಯಕರ್ತರ ಗುರಿಯಾಗಬೇಕು ಎಂದು ಮಾಜಿ ಶಾಸಕ ವೈ.ಸಂಪಂಗಿ ಹೇಳಿದರು.ರಾಬರ್ಟಸನ್‌ಪೇಟೆಯಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರು ನಡೆಸಿದ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಮೋದಿ ಅಲೆ ಎದ್ದಿದೆ. ಉತ್ತರ ಭಾರತದ ಮತದಾರರ ಭಾವನೆ ದೇಶದ ಎಲ್ಲಾ ಮತದಾರರ ಭಾವನೆಯಾಗಿದೆ. ಬೆಲೆ ಏರಿಕೆ, ಭ್ರಷ್ಟಾಚಾರ ಮುಂತಾದ ಯುಪಿಎ ಸರ್ಕಾರದ ಅಕ್ರಮಗಳಿಂದ ಜನ ಬೇಸತ್ತಿರುವುದು ಈ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.ಸೂರಜ್‌ಮಲ್‌ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಶಾಸಕಿ ವೈ.ರಾಮಕ್ಕ ಸಿಹಿ ವಿತರಣೆ ಮಾಡಿದರು. ಮುಖಂಡರಾದ ಬಾಟಾ ಗೋಪಾಲ್‌, ನಗರ ಘಟಕದ ಅಧ್ಯಕ್ಷ ಸುರೇಶ್‌ನಾರಾಯಣ ಕುಟ್ಟಿ, ನಗರಸಭೆ ಮಾಜಿ ಉಪಾಧ್ಯಕ್ಷೆ ಸುಮಾನಾಗರಾಜ್‌, ನಯನರವಿ, ಮುನಿಸ್ವಾಮಿರೆಡ್ಡಿ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.ಪಟಾಕಿ ಸಿಡಿಸಿ ಸಂಭ್ರಮ

ಮುಳಬಾಗಲು: ದೆಹಲಿ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದ ವಿಷಯ ತಿಳಿದ ಬಿಜೆಪಿ ಕಾರ್ಯಕರ್ತು ಭಾನುವಾರ ಪಟ್ಟಣದ ಟಿಎಪಿಸಿಎಂಎಸ್ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಬಿಜೆಪಿ ಮುಖಂಡ ವೈ.ಸುರೇಂದ್ರಗೌಡ ಮಾತನಾಡಿ, ವಿವಿಧ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸಾಧಿಸಿರುವ ಗೆಲುವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಾಧಿಸಲಿರುವ ನಿಚ್ಚಳ ಬಹುಮತದ ಮುನ್ಸೂಚನೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅತ್ತಿಹಳ್ಳಿ ವೆಂಕಟರಮಣ, ಉಪಾಧ್ಯಕ್ಷ ಸೊನ್ನವಾಡಿ ಮುನಿರಾಜು, ಪ್ರಧಾನ ಕಾರ್ಯದರ್ಶಿ ಎಚ್.ಎಸ್‌.ಹರೀಶ್, ತಾಲ್ಲೂಕು ಬಿಜೆಪಿ ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಮೂಡಿಯನೂರು ಡಾ.ಎನ್‌.ಸುಬ್ಬಯ್ಯ, ಮುಖಂಡರಾದ ಸಿ.ಕೆ.ರಾಧಾ ವಲ್ಲಭಗೌಡ, ವಕೀಲ ಶ್ರೀರಾಮಯ್ಯ, ಎಂ.ಶಂಕರಪ್ಪ, ಚಿನ್ನಪ್ಪಯ್ಯ, ಕೋಳಿ ನಾಗರಾಜ್, ಅಗರಂ ಸುರೇಶ್, ಎಂ.ವಿ.ವೇಣುಗೋಪಾಲ್,ನಾಗರಾಜು,ತಂಗರಾಜು, ಚಲಪತಿ, ಪಿ.ಎಸ್‌.ರಮೇಶ್, ಕೆ.ಎಸ್‌.ನಾಗೇಶ್‌ ಬಾಬು, ಜೆ.ಡಿ.ರವಿಕುಮಾರ್‌,ಗೋಪಾಲ್, ಕಾವೇರಿ ಸುರೇಶ್‌ ಇತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)