ಗುರುವಾರ , ಮೇ 26, 2022
32 °C

ಬಿಜೆಪಿಯಲ್ಲಿ ಮತ್ತೆ ಬಂಡಾಯದ ಅಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿ ಮತ್ತೆ ಬಂಡಾಯ ತಲೆ ಎತ್ತಿದೆ. ಈ ಬಾರಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೇ ಬಂಡಾಯದ ನೇತೃತ್ವ ವಹಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಶಾಸಕರ ಬೆಂಬಲ ಕಲೆ ಹಾಕುವ ಕೆಲಸಕ್ಕೆ ಕೈ ಹಾಕಿದ್ದಾರೆ.ಬುಧವಾರವೂ ಅತೃಪ್ತ ಶಾಸಕರು ಈಶ್ವರಪ್ಪ ಅವರನ್ನು ಪಕ್ಷದ ಕಚೇರಿಯಲ್ಲಿ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ನಂತರ ಬುಧವಾರ ರಾತ್ರಿ ಕೂಡ ಈಶ್ವರಪ್ಪ ಸಭೆ ನಡೆಸಿದ್ದು, ಅದರಲ್ಲಿ ಸಂಸದ ಅನಂತಕುಮಾರ್, ಸಚಿವರಾದ ಜಗದೀಶ ಶೆಟ್ಟರ್, ಜನಾರ್ದನ ರೆಡ್ಡಿ, ಗೋವಿಂದ ಕಾರಜೋಳ, ಎಸ್.ಎ.ರಾಮದಾಸ್, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ 50ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.ಶಾಸಕರು ಸಭೆ ಸೇರಿರುವ ವಿಚಾರ ಗೊತ್ತಾದ ನಂತರ ಯಡಿಯೂರಪ್ಪ ಅವರು ದಿಢೀರ್ ಅಲ್ಲಿಗೆ ತೆರಳಿದ್ದು, ಆ ಸಂದರ್ಭದಲ್ಲಿ ಯಾರೂ ಏನನ್ನೂ ಮಾತನಾಡಿಲ್ಲ ಎನ್ನಲಾಗಿದೆ. ತಮ್ಮ ವಿಚಾರಗಳನ್ನು ಪಕ್ಷದ ಹೈಕಮಾಂಡ್‌ಗೆ ತಿಳಿಸುವುದಾಗಿ ಹೇಳಿದ್ದಾರೆ. ಆ ನಂತರ ಅವರು ಅಲ್ಲಿಂದ ಸಿಟ್ಟಿನಿಂದಲೇ ಹೊರ ನಡೆದರು ಎನ್ನಲಾಗಿದೆ.ಹಿಂದೆ ಹಲವು ಬಾರಿ ಮುಖ್ಯಮಂತ್ರಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಬಳ್ಳಾರಿಯ ರೆಡ್ಡಿ ಸಹೋದರರು ಈ ಬಾರಿ ಈಶ್ವರಪ್ಪ ಅವರೊಂದಿಗೆ ಕೈಜೋಡಿಸಿದ್ದಾರೆ. ಯಡಿಯೂರಪ್ಪ ವಿರುದ್ಧವಾಗಿ ಇರುವ ಎಲ್ಲ ನಾಯಕರು ಒಂದು ಗುಂಪಾಗಿದ್ದಾರೆ. ಪಕ್ಷದ ರಾಜ್ಯ ಘಟಕದ ಮುಂದಾಳತ್ವದಲ್ಲಿಯೇ ಮುಖ್ಯಮಂತ್ರಿ ವಿರುದ್ಧ ಹೋರಾಟ ನಡೆಯುವಂತೆ ಕಾಣಿಸುತ್ತಿದೆ.ಭ್ರಷ್ಟಾಚಾರ ಮತ್ತು ಭೂ ಹಗರಣಗಳ ಆರೋಪದ ಬೆನ್ನಲ್ಲೇ ತಮ್ಮ ಪುತ್ರರು ಟ್ರಸ್ಟಿಗಳಾಗಿರುವ ಶಿಕ್ಷಣ ಟ್ರಸ್ಟ್‌ಗೆ ಖಾಸಗಿ ಕಂಪೆನಿಗಳಿಂದ ದೊಡ್ಡ ಮೊತ್ತದ ದೇಣಿಗೆ ಪಡೆದ ಆರೋಪ ಈಗ ಯಡಿಯೂರಪ್ಪ ಅವರನ್ನು ಸುತ್ತಿಕೊಂಡಿದೆ. ಈಗ ಭ್ರಷ್ಟಾಚಾರ, ಹಗರಣಗಳನ್ನು ಮುಂದಿಟ್ಟುಕೊಂಡೇ ಮುಖ್ಯಮಂತ್ರಿ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ಈ ಗುಂಪು ತೀರ್ಮಾನಿಸಿದೆ.ಸಹಿ ಸಂಗ್ರಹ: ಯಡಿಯೂರಪ್ಪ ಗದ್ದುಗೆಯಿಂದ ಇಳಿಸಲು ಹೈಕಮಾಂಡ್ ಮೇಲೆ ಒತ್ತಡ ಹೇರಲು ಶಾಸಕರ ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ. ಈಶ್ವರಪ್ಪ ಅವರೇ ಖುದ್ದು ಶಾಸಕರಿಂದ ಸಹಿ ಪಡೆಯುತ್ತಿದ್ದಾರೆ.

 

ಮಂಗಳವಾರದ ಸಭೆಯಲ್ಲಿ ಭಾಗವಹಿಸಿದ್ದ ಸಚಿವರೂ ಸೇರಿದಂತೆ 50ಕ್ಕೂ ಹೆಚ್ಚು ಶಾಸಕರು ಈಗಾಗಲೇ ಸಹಿಹಾಕಿದ್ದು, ಮುಖ್ಯಮಂತ್ರಿ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಸರ್ಕಾರದಲ್ಲಿ ತಮಗಿರುವ ಸಮಸ್ಯೆಗಳ ಕುರಿತು ನೇರವಾಗಿ ಅಹವಾಲು ಹೇಳಿಕೊಳ್ಳುವಂತೆ ಈಶ್ವರಪ್ಪ ಬಿಜೆಪಿ ಶಾಸಕರನ್ನು ಆಹ್ವಾನಿಸಿದ್ದಾರೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ವಿರುದ್ಧ ದೂರು ಮತ್ತು ಸಹಿ ಸಂಗ್ರಹಿಸುವ ಕೆಲಸವನ್ನು ಒಟ್ಟಾಗಿ ಮಾಡಲು ಮುಂದಾಗಿದ್ದಾರೆ. ಕನಿಷ್ಠ 70 ಶಾಸಕರ ಸಹಿ ಸಂಗ್ರಹವಾದ ಬಳಿಕ ಕೆಲ ಪ್ರಮುಖರೊಂದಿಗೆ ದೆಹಲಿಗೆ ತೆರಳಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ಯೋಚನೆ ಅವರಲ್ಲಿದೆ ಎಂದು ತಿಳಿದುಬಂದಿದೆ.ಯಡಿಯೂರಪ್ಪ ಪದಚ್ಯುತಿಗೆ ಪಕ್ಷದಲ್ಲಿ ಒತ್ತಡ ಹೆಚ್ಚಿದಲ್ಲಿ ಹೈಕಮಾಂಡ್‌ನ ನಾಯಕರೊಬ್ಬರು ಬೆಂಗಳೂರಿಗೆ ಬರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ನಿರಂತರವಾಗಿ ಶಾಸಕರ ಸಭೆ ನಡೆಸಿ ತಮ್ಮ ಬಣದ ಬಲ ಹೆಚ್ಚಿಸಿಕೊಳ್ಳುವ ಕಾರ್ಯತಂತ್ರವನ್ನು ಈಶ್ವರಪ್ಪ ರೂಪಿಸಿದ್ದಾರೆ. ಈ ತಂತ್ರದ ಭಾಗವಾಗಿ ಪಕ್ಷದ ಕಚೇರಿಯಲ್ಲೇ ನಿರಂತರವಾಗಿ ಶಾಸಕರ ಸಭೆ ನಡೆಸುವ ಮೂಲಕ ಬಂಡಾಯಕ್ಕೆ ಮತ್ತಷ್ಟು ಶಕ್ತಿ ತುಂಬಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.ರೆಡ್ಡಿ ಜೊತೆ ಮಾತುಕತೆ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಬುಧವಾರ ಮಧ್ಯಾಹ್ನ ಈಶ್ವರಪ್ಪ ಅವರು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ವಿಧಾನಮಂಡಲ ಕಲಾಪ ಮುಗಿಸಿ ಹೊರಹೋಗುತ್ತಿದ್ದ ವೇಳೆ ರೆಡ್ಡಿ ಅವರನ್ನು ಕರೆದುಕೊಂಡು ಹೋದರು. ಕೆಲಕಾಲ ಇಬ್ಬರೇ ಮಾತುಕತೆ ನಡೆಸಿ ಹೊರಟುಹೋದರು. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.