ಮಂಗಳವಾರ, ಜುಲೈ 14, 2020
26 °C

ಬಿಜೆಪಿ ಅಹೋರಾತ್ರಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಅಹೋರಾತ್ರಿ ಪ್ರತಿಭಟನೆ

ಮಂಗಳೂರು/ಉಡುಪಿ: ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಯೋಗಗುರು ಬಾಬಾ ರಾಮ್‌ದೇವ್ ಅವರ ಬಂಧನ  ಖಂಡಿಸಿ ಭಾನುವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆದಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಸಂಜೆ ಅಹೋರಾತ್ರಿ ಪ್ರತಿಭಟನೆ ಆರಂಭವಾಯಿತು.ರಾಷ್ಟ್ರದ್ರೋಹಿ ಸರ್ಕಾರ: ಸಂಸದ ನಳಿನ್

ಮಂಗಳೂರು: ಬಾಬಾ ರಾಮದೇವ್ ಅವರ ಶಾಂತಿಯುತ ಸತ್ಯಾಗ್ರಹವನ್ನು ಹತ್ತಿಕ್ಕುತ್ತಿರುವ ಯುಪಿಎ ರಾಷ್ಟ್ರದ್ರೋಹಿ ಸರ್ಕಾರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಸಂಸದ ನಳಿನ್‌ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.ಬಾಬಾ ರಾಮ್‌ದೇವ್ ಬಂಧನ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ 24 ಗಂಟೆಗಳ ಧರಣಿ ಸತ್ಯಾಗ್ರಹ ಉದ್ದೇಶಿಸಿ ಅವರು ಮಾತನಾಡಿದರು.ಸ್ವಿಸ್ ಬ್ಯಾಂಕ್ ಹಣವನ್ನು ದೇಶಕ್ಕೆ ಮರಳಿತಂದರೆ ಕಾಂಗ್ರೆಸ್ ನಾಶವಾಗುತ್ತದೆ. ಸ್ವಿಸ್ ಬ್ಯಾಂಕ್‌ನಲ್ಲಿ ಇರುವುದು ಕಾಂಗ್ರೆಸ್‌ನ ರಾಹುಲ್‌ಗಾಂಧಿ ಹಣವಾದ ಕಾರಣ ಕೇಂದ್ರ ಸರ್ಕಾರಕ್ಕೆ ಹಣ ತರಲು ನಡುಕ ಹುಟ್ಟಿದೆ ಎಂದು ಅವರು ಆರೋಪಿಸಿದರು.ದೇಶದಲ್ಲಿ ಜನಪರ ಆಂದೋಲನಗಳು ನಡೆದಾಗಲೆಲ್ಲ ಕಾಂಗ್ರೆಸ್ ಅದನ್ನು ಹತ್ತಿಕ್ಕಿದೆ. ಕಳೆದ 64 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ದೇಶದ ಸ್ವಾತಂತ್ರ್ಯಹರಣ ಮಾಡಿದೆ. ವಿದೇಶಿ ಮೂಲದ ಮಹಿಳೆ ಸೋನಿಯಾಗಾಂಧಿ ಆದೇಶದಂತೆ ಯುಪಿಎ ನಡೆಯುತ್ತಿದೆ. ಭಾರತೀಯರನ್ನುಗುಲಾಮರನ್ನಾಗಿಸಲಾಗುತ್ತಿದೆ ಎಂದು ಆಪಾದಿಸಿದರು.ತುರ್ತುಪರಿಸ್ಥಿತಿ ಹೇರಿದ ಸಂದರ್ಭ, ರಾಮಜನ್ಮಭೂಮಿ ಹೋರಾಟ ಸಂದರ್ಭ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಿದೆ. ಇದೀಗ ಭ್ರಷ್ಟಾಚಾರ ವಿರುದ್ಧ ಹೋರಾಟವನ್ನು ಹತ್ತಿಕ್ಕುವ ಮೂಲಕ ಮನಮೋಹನ್ ಸಿಂಗ್ ಸರ್ಕಾರ ಬೀಳಲಿದೆ ಎಂದು ಅವರು ಭವಿಷ್ಯ ನುಡಿದರು.ವಿಧಾನಸಭೆ ಉಪಸಭಾಧ್ಯಕ್ಷ ಯೋಗೀಶ್ ಭಟ್ ಮಾತನಾಡಿ, ದೇಶದ ಇತಿಹಾಸದಲ್ಲಿ ತುರ್ತುಪರಿಸ್ಥಿತಿ ನಂತರ ಬಾಬಾ ಬಂಧಿಸಿರುವ ದಿನ ಅತ್ಯಂತ ಕರಾಳ ದಿನವಾಗಿದೆ. ತುರ್ತು ಪರಿಸ್ಥಿತಿ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ ದೇಶದಲ್ಲಿ ನಡೆಯಿತು. ಇದೀಗ ಭ್ರಷ್ಟಾಚಾರದ ವಿರುದ್ಧ ಮೂರನೇ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದೆ ಎಂದರು.ಭ್ರಷ್ಟಾಚಾರ ಮುಕ್ತ ಆಡಳಿತ ದೇಶಕ್ಕೆ ಬರಲಿ ಎಂಬ ಉದ್ದೇಶದಿಂದ ಬಾಬಾ ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಪೂರ್ಣ ಬೆಂಬಲ ನೀಡಲಿದೆ ಎಂದ ಅವರು, ಕಪ್ಪುಹಣದ ವಿಷಯದಲ್ಲಿ ಇತ್ತೀಚೆಗೆ ಒಬ್ಬ ಹಸನ್ ಆಲಿಯನ್ನು ಬಂಧಿಸಲಾಗಿದೆ.ಇಂತಹ ಹಸನ್ ಆಲಿಗಳ ಸಮೂಹ ದೇಶದ ಸಂಪತ್ತನ್ನು ಕೊಳ್ಳೆಹೊಡೆದು, ಜನರನ್ನು ಮೋಸಗೊಳಿಸಿ 6.5 ಲಕ್ಷ ಕೋಟಿ ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದಾರೆ. ಈ ಹಣ ದೇಶಕ್ಕೆ ಮರಳಬೇಕು ಎಂದರು.ಬಾಬಾ ಒಂದು ವರ್ಷದಿಂದ ದೇಶಾದ್ಯಂತ ಸಂಚರಿಸಿ ಕಪ್ಪು ಹಣದ ವಿರುದ್ಧ ಜನಜಾಗೃತಿ ಮೂಡಿಸಿ ಇದೀಗ ಹೋರಾಟ ಆರಂಭಿಸಿದ್ದಾರೆ. ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ಬಾಬಾ ಮತ್ತು ಅವರ ಅನುಯಾಯಿಗಳನ್ನು ಬಂಧಿಸಿರುವ ಕೇಂದ್ರ ಸರ್ಕಾರದ ಅಮಾನವೀಯ ವರ್ತನೆ ಖಂಡನೀಯ. ಯುಪಿಎ ಇದಕ್ಕೆ ಜವಾಬ್ದಾರ ಎಂದರು.ಶಂಖ ಊದುವ ಮೂಲಕ ಧರಣಿ ಸತ್ಯಾಗ್ರಹ ಉದ್ಘಾಟಿಸಲಾಯಿತು. ಸೋಮವಾರ ಸಂಜೆ 6ಗಂಟೆಯವರೆಗೆ ಧರಣಿ ಮುಂದುವರಿಯಲಿದೆ.  ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಮೇಯರ್ ಪ್ರವೀಣ್ ಅಂಚನ್, ಉಪ ಮೇಯರ್ ಗೀತಾ ನಾಯಕ್, ಕೆ.ಪಿ. ಜಗದಿಶ್ ಅಧಿಕಾರಿ, ಸತೀಶ್ ಪ್ರಭು, ಅನ್ವರ್ ಮಾಣಿಪ್ಪಾಡಿ, ಸುಮನ ಶರಣ್, ಮೋನಪ್ಪ ಭಂಡಾರಿ, ನಿತಿನ್ ಕುಮಾರ್, ಪ್ರಸಾದ್ ಕುಮಾ, ಶ್ರೀಕರಪ್ರಭು ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಸತ್ಯಾಗ್ರಹಕ್ಕೆ ಅಡ್ಡಿ: ಖಂಡನೆ

ಉಡುಪಿ: ಭ್ರಷ್ಟಾಚಾರದ ವಿರುದ್ಧ ಹೋರಾಟ ಕೈಗೊಂಡಿರುವ ಬಾಬಾ ರಾಮ್‌ದೇವ್ ಅವರನ್ನು ಬಂಧಿಸಿರುವ ಕೇಂದ್ರದ ಯುಪಿಎ ಕ್ರಮವನ್ನು ಖಂಡಿಸಿ  ಉಡುಪಿ ಜಿಲ್ಲಾ ಬಿಜೆಪಿ ಘಟಕ ಭಾನುವಾರ ರಾತ್ರಿ 7 ಗಂಟೆಗೆ ನಿರಶನ ಪ್ರಾರಂಭಿಸಿತು. ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್ ಸಮೀಪ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. 

 

ಇದಕ್ಕೂ ಕ್ಲಾಕ್ ಟವರ್ ಸನಿಹದಲ್ಲಿ ಪ್ರತಿಭಟನೆಯನ್ನು ನಡೆಸಿ ಸತ್ಯಾಗ್ರಹ ಹತ್ತಿಕ್ಕುವ ಕೇಂದ್ರದ ಯುಪಿಎ ಸರ್ಕಾರದ ದಬ್ಬಾಳಿಕೆ ನೀತಿಯನ್ನು ಬಿಜೆಪಿ ಖಂಡಿಸುತ್ತದೆ~ ಎಂದು ಘಟಕ ತಿಳಿಸಿತು.ಆಗಾಗ ಸುರಿಯುವ ಮಳೆಯನ್ನು ಲೆಕ್ಕಿಸದೇ ಬಿಜೆಪಿ ಮುಖಂಡರು ಅಹೋರಾತ್ರಿ ಧರಣಿಗೆ ಕುಳಿತರು.ಪ್ರಾರಂಭದಲ್ಲಿ `ವಂದೆ ಮಾತರಂ~ನೊಂದಿಗೆ ಪ್ರಾರಂಭಿಸಿ ಭಾರತಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಿರಶನಕ್ಕೆ ಕುಳಿತರು. ಶಾಸಕ ರಘುಪತಿ ಭಟ್, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಸುನಿಲ್ ಕುಮಾರ್, ಹಿರಿಯ ಮುಖಂಡ ಸೋಮಶೇಖರ್ ಭಟ್, ಜಿಲ್ಲಾ ಘಟಕದ ಅಧ್ಯಕ್ಷ ಉದಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಸದಸ್ಯೆ ಗೀತಾ ಶೇಟ್, ವಿಲಾಸ್ ನಾಯಕ್, ಶಂಕರ ಪೂಜಾರಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.ಶ್ರೀರಾಮಸೇನೆಯಿಂದ ಉರುಳುಸೇವೆ: ಬಾಬಾ ರಾಮದೇವ್ ಅವರ ವಿರುದ್ಧ ಕೇಂದ್ರದ ಯುಪಿಎ ಸರ್ಕಾರ ಪೊಲೀಸ್ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಭಾನುವಾರ ಉರುಳು ಸೇವೆ ನಡೆಸಿದರು. ಈ ಸಂದರ್ಭದಲ್ಲಿ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಭಾಗವಹಿಸಿದ್ದರು.ಭಾರತ್ ಸ್ವಾಭಿಮಾನ್ ಟ್ರಸ್ಟ್‌ನಿಂದ ಪ್ರತಿಭಟನೆ:ರಾಮ್‌ದೇವ್ ಅವರ ಸತ್ಯಾಗ್ರಹವನ್ನು ಬೆಂಬಲಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ದಿನವಿಡೀ ಪ್ರತಿಭಟನೆ ನಡೆಸಿದ್ದ ಭಾರತ್ ಸ್ವಾಭಿಮಾನ್ ಟ್ರಸ್ಟ್. ಪತಂಜಲಿ ಯೋಗ ಟ್ರಸ್ಟ್ ಭಾನುವಾರ ಸತ್ಯಾಗ್ರಹದ ಬದಲಿಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.ಹಿಂದೂ ಜನಜಾಗೃತಿ ವೇದಿಕೆ ಖಂಡನೆ: ಬಾಬಾ  ಅವರ ಅಂದೋಲನವನ್ನು ಕಾಂಗ್ರೆಸ್ ಚಿವುಟಿ ಹಾಕಿದೆ ಎಂದು ಆರೋಪಿಸಿರುವ ಹಿಂದೂ ಜನಜಾಗೃತಿ ಸಮಿತಿ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದೆ. ಇದೊಂದು ಅಮಾನವೀಯ ಕೃತ್ಯವಾಗಿದ್ದು ಬ್ರಿಟಿಷ್ ಸರ್ಕಾರದ ಚಿತ್ರಹಿಂಸೆಯನ್ನು ನೆನಪಿಸುತ್ತಿದೆ ಎಂದು ಟೀಕಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.