ಬಿಜೆಪಿ ಗೆಲುವು ವಿರೋಧಿಗಳಿಗೆ ಉತ್ತರ: ರವಿ

7

ಬಿಜೆಪಿ ಗೆಲುವು ವಿರೋಧಿಗಳಿಗೆ ಉತ್ತರ: ರವಿ

Published:
Updated:

ಚಿಕ್ಕಮಗಳೂರು: ಇತ್ತೀಚಿಗೆ ನಡೆದ ತಾಪಂ-ಜಿಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು  ಜಿಲ್ಲೆಯಲ್ಲಿ ಶೇ.72 ರಷ್ಟು ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದು, ಇದು ಕಾರ್ಯಕರ್ತರ ಶ್ರಮದ ಫಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು.ಇಲ್ಲಿನ ಕೆಂಪನಹಳ್ಳಿ ಬಡಾವಣೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಪಕ್ಷದ ವತಿಯಿಂದ  ತಾಪಂ-ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಿಜ ಬಣ್ಣವನ್ನು ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಅನಾವರಣಗೊಳಿಸಿದ್ದು, ಈ ಸಾಧನೆಯ ಶ್ರೇಯಸ್ಸು ಜಿಲ್ಲೆಯ ಶಾಸಕರಿಗೆ ಮಾತ್ರ ಸಲ್ಲುವುದಿಲ್ಲ. ಗ್ರಾಮ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿದ ಸಾಮಾನ್ಯ ಕಾರ್ಯಕರ್ತರೂ ಈ ಯಶಸ್ಸಿನ ಭಾಗಿಗಳು ಎಂದರು.ರಾಜ್ಯದಲ್ಲಿರುವ 1,013 ಜಿಪಂ ಕ್ಷೇತ್ರಗಳಲ್ಲಿ ಬಿಜೆಪಿ 2005ರಲ್ಲಿ ಕೇವಲ 152 ಸ್ಥಾನಗಳನ್ನು ಗೆಲ್ಲಲು ಶಕ್ತವಾಗಿತ್ತು. ಜಿಲ್ಲೆಯಲ್ಲಿ 3 ಶಾಸಕರು ಮಾತ್ರ ಗೆದ್ದಿದ್ದರು. ಬಳ್ಳಾರಿಯಲ್ಲಿ 12 ಜಿಪಂ ಕ್ಷೇತ್ರ ಬಿಜೆಪಿ ಪಾಲಿಗೆ ಒಲಿದಿತ್ತು. ಆದರೆ ಸದ್ಯ ಬಿಜೆಪಿ ನೇತೃತ್ವದ ಸರ್ಕಾರದ ಜನಪರ ಯೋಜನೆ, ಅಭಿವೃದ್ಧಿಯನ್ನು ರಾಜ್ಯದ ಮತದಾರರು ಸ್ವಾಗತಿಸುತ್ತಿದ್ದು, ಇದಕ್ಕೆ ಇಂದು ರಾಜ್ಯದಾದ್ಯಂತ ಬಿಜೆಪಿ 441 ಜಿಪಂ ಸ್ಥಾನ ಪಡೆಯುವ ಮೂಲಕ ಜನಮೆಚ್ಚಿದ ಪಕ್ಷವಾಗಿ ಹೊರಹೊಮ್ಮಿದೆ ಎಂದರು.12 ಜಿಲ್ಲೆಗಳಲ್ಲಿ ನಿಚ್ಚಳ ಬಹುಮತದೊಂದಿಗೆ ಜಿಪಂ ಅಧಿಕಾರದ ಗದ್ದುಗೆ ಏರಿದೆ. ಇನ್ನೂ 6 ಜಿಲ್ಲೆಗಳಲ್ಲಿ ಅಧಿಕಾರ ಪಕ್ಷದ ಅಭ್ಯರ್ಥಿಗಳ ಪಾಲಾಗಲಿದೆ. ಇದು ರಾಜ್ಯದಲ್ಲಿ ಬಿಜೆಪಿ ಪಕ್ಷದ ಉತ್ತಮ ಆಡಳಿತಕ್ಕೆ ಸಿಕ್ಕಿರುವ ಜನಾದೇಶ ಎಂದರು. ರಾಜ್ಯದಲ್ಲಿ 2005ರಲ್ಲಿ 443 ಜಿಪಂ ಸ್ಥಾನಗಳನ್ನು ಪಡೆದ ಕಾಂಗ್ರೆಸ್ 352ಕ್ಕಿಳಿದಿದ್ದರೆ, ಜೆಡಿಎಸ್ 269ರಿಂದ 41ಕ್ಕಿಳಿದು ಜನಮಾನಸದಿಂದ ದೂರವಾಗಿದೆ. ಆದರೂ ಈ ಪಕ್ಷಗಳು ಜಟ್ಟಿಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುತ್ತಿವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಡೂರು ಶಾಸಕ ಡಾ.ವಿಶ್ವನಾಥ್, ಬಿಜೆಪಿಯ ಈ ಗೆಲುವು ಆಕಸ್ಮಿಕವಲ್ಲ, ಬದಲಾಗಿ  ರಾಜ್ಯದಲ್ಲಿ ಈ ಹಿಂದೆ ಅಧಿಕಾರದ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ದುರಾಡಳಿತದಿಂದ ರಾಜ್ಯವನ್ನು ಕಾಪಾಡಲು ಜನತೆಗೆ ಅಭಿವೃದ್ಧಿ ಪರವಾದ ಪಕ್ಷವೊಂದರ ಅಗತ್ಯವಿತ್ತು. ಜನರಿಟ್ಟ ನಂಬಿಕೆ ಉಳಿಸಿಕೊಳ್ಳುವ ಜವಾಬ್ದಾರಿ ಕ್ಷೇತ್ರದ ಶಾಸಕರು, ಜಿಪ.ತಾಪಂ ಸದಸ್ಯರ ಮೇಲಿದ್ದು, ಕಾರ್ಯಕರ್ತರು ಈ ನಿಟ್ಟಿನಲ್ಲಿ ಶ್ರಮಿಸಬೇಕೆಂದರು.ಶಾಸಕರಾದ ಕುಮಾರಸ್ವಾಮಿ, ಸುರೇಶ್, ಡಿ.ಎನ್. ಜೀವರಾಜ್ ಮಾತನಾಡಿದರು, ಬಿಜೆಪಿ ಜಿಲ್ಲಾದ್ಯಕ್ಷ ಪ್ರಾಣೇಶ್, ರೇಖಾ ಹುಲಿಯಪ್ಪಗೌಡ, ಶ್ರೀಕಾಂತ್‌ಪೈ, ನಗರ ಸಭೆ ಅಧ್ಯಕ್ಷ ಶ್ರೀನಿವಾಸ್, ನಿರಂಜನ್, ಕನಕ್‌ರಾಜ್, ವಕ್ತಾರ ರಾಜಪ್ಪ, ಕೇಶವ್, ಬೋಜೇಗೌಡ, ಬೆಳ್ಳಿಪ್ರಕಾಶ್, ಪ್ರೆಂಕುಮಾರ್, ರಾಮಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry