ಮಂಗಳವಾರ, ಜೂನ್ 22, 2021
29 °C

ಬಿಜೆಪಿ ಬಿಕ್ಕಟ್ಟು: ಬೂದಿ ಮುಚ್ಚಿದ ಕೆಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: `ಸುನಾಮಿ~ಯಂತೆ ರಾಜಧಾನಿಗೆ ಅಪ್ಪಳಿಸಿದ ರಾಜ್ಯ ಬಿಜೆಪಿ ಬಿಕ್ಕಟ್ಟು ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿದ್ದರೂ ಬೂದಿ ಮುಚ್ಚಿದ ಕೆಂಡದಂತೆ ಮತ್ತೆ ಯಾವಾಗಲಾದರೂ ಭುಗಿಲೇಳಬಹುದಾದ ಸಾಧ್ಯತೆಯನ್ನು ತಳ್ಳಿಹಾಕಲಾಗದು.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿರುವ `ಜಿದ್ದಾಜಿದ್ದಿ~ ಹೈಕಮಾಂಡ್ ಅಂಗಳಕ್ಕೆ ಕಾಲಿಟ್ಟಿದೆ. ಉಭಯ ಬಣಗಳು ಎರಡು ದಿನಗಳ ಹಿಂದೆ ವರಿಷ್ಠರನ್ನು ಪ್ರತ್ಯೇಕವಾಗಿ ಕಂಡು ಪರಸ್ಪರರ ಮೇಲೆ ದೂರುಗಳನ್ನು ಕೊಟ್ಟು ಹಿಂತಿರುಗಿದ್ದಾರೆ. ಎರಡೂ ಬಣಗಳ ಮಾತಿಗೂ ತಲೆಯಾಡಿಸಿರುವ ವರಿಷ್ಠರು ಏನನ್ನೂ ಖಚಿತವಾಗಿ ಹೇಳದೆ, ಕೇವಲ ತೇಪೆ ಹಾಕಿದ್ದಾರೆ.ಹೇಗಾದರೂ ಮಾಡಿ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಹಟ ಹಿಡಿದು ಕುಳಿತ ಯಡಿಯೂರಪ್ಪ ಒಂದು ಕಡೆ. ಏನಾದರೂ ಸರಿ ಅಧಿಕಾರ ಬಿಡಬಾರದೆಂದು ಶಪಥ ಮಾಡಿದಂತಿರುವ ಮುಖ್ಯಮಂತ್ರಿ ಸದಾನಂದಗೌಡ ಮತ್ತೊಂದು ಕಡೆ. ಇವರಿಬ್ಬರ ನಡುವೆ ಅಸಹಾಯಕವಾದ ಬಿಜೆಪಿ ಹೈಕಮಾಂಡ್. ನಾಯಕತ್ವ ಬದಲಾವಣೆ ವಿಷಯದಲ್ಲಿ ವರಿಷ್ಠರಲ್ಲೂ ಗೊಂದಲ ಇರುವುದರಿಂದ ಸಮಸ್ಯೆ ಸುಲಭವಾಗಿ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.ರಾಜ್ಯದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಬಿಜೆಪಿ ಸಂಸದೀಯ ಮಂಡಳಿ ಒಮ್ಮೆಯೂ ಸೇರಿಲ್ಲ. ಸಂಸದೀಯ ಮಂಡಳಿ ಸಭೆ ಕರೆದರೆ ಏನಾದರೂ ನಿರ್ಧಾರ ಕೈಗೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಕಾರಣಕ್ಕೆ ಸಭೆಯನ್ನೇ ಕರೆದಿಲ್ಲ. ಬಿಜೆಪಿ ಹೈಕಮಾಂಡ್ ಕೂಡಾ ಗುಂಪುಗಾರಿಕೆಗೆ ಹೊರತಲ್ಲ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಹಿರಿಯ ನಾಯಕ ಅರುಣ್ ಜೇಟ್ಲಿ ಯಡಿಯೂರಪ್ಪನವರ ಪರ ವಕಾಲತ್ತು ವಹಿಸುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ.ಸದಾನಂದಗೌಡರ ಪರ ದೊಡ್ಡಣ್ಣ ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್, ಮುರಳಿ ಮನೋಹರ ಜೋಷಿ ಮತ್ತು ಅನಂತಕುಮಾರ್ ಮುಂತಾದವರು ನಿಂತಿರುವುದು ಸರ್ವರಿಗೂ ಗೊತ್ತಿರುವ ಸತ್ಯ.`ನಾವು ಯಡಿಯೂರಪ್ಪ ಅವರ ರಾಜೀನಾಮೆ ಪಡೆಯುವ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ ಇತ್ಯರ್ಥವಾಗುವವರೆಗೂ ಕುರ್ಚಿ ಬಿಡಿ.ನ್ಯಾಯಾಲಯ ನಿಮ್ಮನ್ನು ನಿರ್ದೋಷಿ ಎಂದು ತೀರ್ಮಾನಿಸಿದ ಕ್ಷಣ ನಿಮಗೆ ಮತ್ತೆ ಮುಖ್ಯಮಂತ್ರಿ ಪಟ್ಟ ಕಟ್ಟಲಾಗುವುದು ಎಂದು ಮಾತು ಕೊಟ್ಟಿದ್ದೆವು. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ಹೈಕೋರ್ಟ್ ಈಗ ರದ್ದುಗೊಳಿಸಿದೆ.ಕೂಡಲೇ ಅವರಿಗೆ ಅಧಿಕಾರ ಬಿಟ್ಟುಕೊಟ್ಟು ಮಾತು ಉಳಿಸಿಕೊಳ್ಳಬೇಕಾದದ್ದು ಧರ್ಮ~ ಎಂದು ಅರುಣ್ ಜೇಟ್ಲಿ ಆಪ್ತ ವಲಯದಲ್ಲಿ ಹೇಳುತ್ತಿದ್ದಾರೆ.`ಯಡಿಯೂರಪ್ಪ ಜನರ ನಾಯಕ. ಅವರಿಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಸಾಧ್ಯವಿಲ್ಲ. ಅಲ್ಲದೆ, ಬಹುಸಂಖ್ಯಾತ ಲಿಂಗಾಯತ ಸಮುದಾಯ ಅವರ ಜತೆಗಿದೆ.ಸದಾನಂದಗೌಡ ಅವರಿಗೆ ಪಕ್ಷ ಮತ್ತು ಸರ್ಕಾರ ನಿಭಾಯಿಸುವುದು ಆಗದ ಕೆಲಸ. ಉಡುಪಿ- ಚಿಕ್ಕಮಗಳೂರು ಉಪ ಚುನಾವಣೆ ಫಲಿತಾಂಶವೇ ಇದನ್ನು ಸಾಬೀತುಪಡಿಸಿದೆ. ವಿಧಾನಸಭೆ ಚುನಾವಣೆಗೆ ಒಂದು ವರ್ಷ ಉಳಿದಿದೆ. ಗೌಡರೇ ಮುಂದುವರಿದರೆ ಪುನಃ ಬಿಜೆಪಿ ಸರ್ಕಾರ ಬರುವುದು ಕನಸಿನ ಮಾತು~ ಎಂದು ಪ್ರತಿಪಾದಿಸಿದ್ದಾರೆ. ಸದಾನಂದಗೌಡರು ಮುಖ್ಯಮಂತ್ರಿ ಕುರ್ಚಿ ಬಿಡಬೇಕೆಂಬುದೇ ಈ ಮಾತಿನ ಹಿಂದಿನ ಅರ್ಥ.ಬಹುಶಃ  ಗಡ್ಕರಿ ಅವರದೂ ಇದೇ ನಿಲುವಿದ್ದಂತಿದೆ. ಆದರೆ, ಬಹಿರಂಗವಾಗಿ ಯಾರ ಪರವೂ ಮಾತನಾಡುವ ಧೈರ್ಯ ಮಾಡುತ್ತಿಲ್ಲ. ಎಲ್ಲರ ಮಾತನ್ನು ಕೇಳಿಸಿಕೊಂಡು ಮೌನ ಮುರಿಯದೆ ಕುಳಿತಿದ್ದಾರೆ. ಕೆಲವು ಅಚ್ಚರಿ ಹುಟ್ಟಿಸುವ ಮಾತುಗಳು ಪಕ್ಷದೊಳಗೇ ಕೇಳಿಬರುತ್ತಿವೆ. ಮಾಜಿ ಮುಖ್ಯಮಂತ್ರಿಗೆ ಪಕ್ಷದ ವಿರುದ್ಧವಾಗಿ ಹೋಗುವ ಧೈರ್ಯ ಹೇಗೆ ಬರಬೇಕು.

 

ಶಾಸಕರ `ರೆಸಾರ್ಟ್~ ರಾಜಕಾರಣ; ರಾಜ್ಯಸಭೆ ಚುನಾವಣೆಗೆ ಬಿ.ಜೆ. ಪುಟ್ಟಸ್ವಾಮಿ ಅವರನ್ನು ಕಣಕ್ಕಿಳಿಸಿದ್ದು ಮತ್ತು ಉಡುಪಿ- ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದು ಇವೆಲ್ಲದರ ಹಿಂದೆ ಮೇಲಿನವರ ಆಶೀರ್ವಾದ ಇದೆ ಎಂಬ ಮಾತುಗಳು ಕೇಳಿಬಂದಿವೆ.`ಹೀಗೆ ಮಾಡುವುದರಿಂದ ಪರಿಸ್ಥಿತಿ ಗಂಭೀರವಾಗಲಿದೆ. ಆಗ ಬಿಜೆಪಿ ಹೈಕಮಾಂಡ್ ಪಕ್ಷ ಮತ್ತು ಸರ್ಕಾರದ ಹಿತಾಸಕ್ತಿ ಪ್ರಶ್ನೆ ಯನ್ನು ಮುಂದುಮಾಡಿ ಏನಾದರೊಂದು ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ~ ಎಂಬ ಸಲಹೆಯನ್ನು ಕೆಲವು ನಾಯಕರು ಯಡಿಯೂರಪ್ಪ ಅವರಿಗೆ ಕೊಟ್ಟಿದ್ದಾರೆ ಎಂಬ  ಗುಸುಗುಸು ಬಿಜೆಪಿಯೊಳಗಿದೆ. ಇದನ್ನು ಅರಿತಿರುವ ಮತ್ತೊಂದು ಗುಂಪು ಹೇಗಾದರೂ ಯಡಿಯೂರಪ್ಪ ಅವರು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವ ತಂತ್ರಗಳನ್ನು ರೂಪಿಸುತ್ತಿದೆ.ಯಡಿಯೂರಪ್ಪ ಅವರನ್ನು ಮೊದಲಿಂದಲೂ ವಿರೋಧಿಸುತ್ತಿರುವ ಅಡ್ವಾಣಿ ಅವರಿಗೆ ಸಿಟ್ಟು ಇನ್ನೂ ಇಳಿದಂತಿಲ್ಲ. ಗುರುವಾರ ಭೇಟಿಗೆ ಹೋಗಿದ್ದ ಮಾಜಿ ಮುಖ್ಯಮಂತ್ರಿ  ಅವರನ್ನು ಸರಿಯಾಗಿ ನಡೆಸಿಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದಾರೆ. ಇಬ್ಬರೂ ನಾಯಕರ ನಡುವಿನ ಭೇಟಿ `ಸೌಹಾರ್ದ~ವಾಗಿರಲಿಲ್ಲ ಎಂದು ಅರಿಯಲು ಹೊರಗಿದ್ದವರಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ಅಡ್ವಾಣಿ ಮನೆಯಿಂದ ಹೊರಬಂದ ಮಾಜಿ ಮುಖ್ಯಮಂತ್ರಿಗಳ ಹಾವಭಾವಗಳೇ ಇದನ್ನು ಹೇಳುತ್ತಿದ್ದವು.ಯಡಿಯೂರಪ್ಪ ಪರ ವಕಾಲತ್ತು ವಹಿಸುತ್ತಿರುವ ನಾಯಕರಿಗೂ ಅಡ್ವಾಣಿ ನೇರವಾಗಿ `ಕರ್ನಾಟಕ ಉಳಿಸಿಕೊಂಡು ದೇಶವನ್ನು ಕಳೆದುಕೊಳ್ಳುವಿರಾ?~ ಎಂದು ಕೇಳಿ ಇಕ್ಕಟ್ಟಿಗೆ ಸಿಕ್ಕಿಸಿದ್ದಾರೆ. ಆದರೆ, ಅದೇ ದಿನ ಅಡ್ವಾಣಿ, ಸದಾನಂದಗೌಡರ ಬೆನ್ನು ತಟ್ಟಿ ಕಳುಹಿಸಿದ್ದಾರೆ. `ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ಒಳ್ಳೆಯ ಬಜೆಟ್ ಕೊಟ್ಟಿದ್ದೀರಿ. ನಿಮ್ಮ ಕೆಲಸ ನಮಗೆಲ್ಲ ಸಮಾಧಾನ ತಂದಿದೆ. ನಿಮ್ಮಂದಿಗೆ ನಾವಿದ್ದೀವಿ. ನಿರಾತಂಕವಾಗಿ ಮುನ್ನಡೆಯಿರಿ~ ಎಂಬ ಮೆಚ್ಚುಗೆ ಮಾತು ಹೇಳಿದ್ದಾರೆ.ಮುಖ್ಯಮಂತ್ರಿ ಪರ `ಲಾಬಿ~ಗೆ ಬಂದಿದ್ದ ಸಚಿವ ಬಾಲಚಂದ್ರ ಜಾರಕಿಹೊಳಿ ಬಣದ ಮಾತುಗಳನ್ನು ಅಡ್ವಾಣಿ ಸಮಾಧಾನದಿಂದ ಕೇಳಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ಸಚಿವರಾದ ಬಚ್ಚೇಗೌಡ, ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದ ಮತ್ತೊಂದು ಗುಂಪು ರಾಜಧಾನಿಗೆ ಬಂದಿಳಿದಿದೆ. ಈ ಗುಂಪು ಬಿಜೆಪಿ ನಾಯಕರನ್ನು ಕಂಡು ಸಮಸ್ಯೆಗಳನ್ನು ವಿವರಿಸಲಿದೆ.ಬಿಜೆಪಿ ಹೈಕಮಾಂಡ್ ಅಡ್ಡಕತ್ತರಿಯಲ್ಲಿ ಸಿಕ್ಕಿದೆ. ಖಚಿತ ನಿಲುವು ಕೈಗೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿದೆ. ಸಂಸತ್ ಹಾಗೂ ರಾಜ್ಯ ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಸಮಸ್ಯೆಗೆ ಪರಿಹಾರ ಹುಡುಕುವ ವಿಶ್ವಾಸದ ಮಾತುಗಳು ಬಿಜೆಪಿ ಹೈಕಮಾಂಡ್ ವಲಯದಲ್ಲಿ ಕೇಳಿಬರುತ್ತಿದೆ. ಆದರೆ, ಬಿಕ್ಕಟ್ಟು ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ.ಅಧಿವೇಶನ ಅಂತ್ಯದವರೆಗೆ ಬಿಎಸ್‌ವೈ ಮೌನ?ಬೆಂಗಳೂರು:
ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಗೆ ಪಟ್ಟುಹಿಡಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ಬಜೆಟ್ ಅಧಿವೇಶನ ಅಂತ್ಯಗೊಳ್ಳುವವರೆಗೂ ಮೌನ ವಹಿಸುವ ಸಾಧ್ಯತೆ ಇದೆ. ಇದರಿಂದಾಗಿ ಬಿಜೆಪಿ ಅಂತಃಕಲಹ ಕೆಲ ದಿನಗಳ ಮಟ್ಟಿಗೆ ತಣ್ಣಗಾಗುವ ಸಂಭವ ಕಾಣುತ್ತಿದೆ.ಅಧಿಕಾರ ಪಡೆಯುವ ಕಸರತ್ತಿನಲ್ಲಿ ದೆಹಲಿಗೆ ತೆರಳಿದ್ದ ಉಭಯ ಬಣಗಳ ನಾಯಕರೂ ಶುಕ್ರವಾರವೇ ನಗರಕ್ಕೆ ಹಿಂದಿರುಗಿದ್ದಾರೆ. ವರಿಷ್ಠರ ಭೇಟಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಹೈಕಮಾಂಡ್ ನಾಯಕರ ತೀರ್ಮಾನವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.ರಾಜ್ಯ ಬಿಜೆಪಿಯ ವಿವಿಧ ಬಣಗಳ ನಡುವೆ ಸಮಾಲೋಚನೆ ನಡೆಸಲು ಏಪ್ರಿಲ್ ಮೊದಲ ವಾರ ಹಿರಿಯ ನಾಯಕರೊಬ್ಬರನ್ನು ಬೆಂಗಳೂರಿಗೆ ಕಳುಹಿಸಲು ಪಕ್ಷದ ಕೇಂದ್ರ ನಾಯಕರು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ. ಕೆಲ ದಿನಗಳ ಕಾಲ ತಾಳ್ಮೆ ವಹಿಸುವಂತೆಯೂ ಯಡಿಯೂರಪ್ಪ ಅವರಿಗೆ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.`ನನ್ನ ಸೇವೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ವರಿಷ್ಠರು ಕೈಗೊಳ್ಳುವ ಯಾವುದೇ ತೀರ್ಮಾನವನ್ನು ನಾನು ಗೌರವಿಸುತ್ತೇನೆ~ ಎಂದು ಯಡಿಯೂರಪ್ಪ ಹೇಳಿದ್ದಾರೆ.ಆದರೆ, ಹೈಕಮಾಂಡ್ ತಮ್ಮ ಪರವಾಗಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, `ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ವಿಷಯವೇ ಚರ್ಚೆಗೆ ಬಂದಿಲ್ಲ. ನಾನು ಮಂಡಿಸಿದ ಬಜೆಟ್ ಮತ್ತು ಸರ್ಕಾರದ ಆಡಳಿತ ನಿರ್ವಹಣೆ ಬಗ್ಗೆ ವರಿಷ್ಠರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ~ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.