ಭಾನುವಾರ, ಮೇ 22, 2022
22 °C

ಬಿಜೆಪಿ ರಾಜ್ಯ ಅಧ್ಯಕ್ಷ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಹಣ ಮತ್ತು ಜಾತಿ ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬಂದದ್ದು ನಿಜ ಎಂಬ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನೀಡಿರುವ ದೂರು ಆಧರಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಿ.ಎಸ್. ಸುರಂಜನ್ ಶುಕ್ರವಾರ ಇಲ್ಲಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಕೇಂದ್ರ ಚುನಾವಣಾ ಆಯೋಗವೇ ತೀರ್ಮಾನ ಕೈಗೊಳ್ಳಲಿದೆ. ದೂರನ್ನು ಆಧರಿಸಿ ವರದಿ ಸಲ್ಲಿಸುವುದು ನಮ್ಮ ಕರ್ತವ್ಯ~ ಎಂದು ಸ್ಪಷ್ಟಪಡಿಸಿದರು.`ಆಗ್ನೇಯ ಶಿಕ್ಷಕರ ಕ್ಷೇತ್ರದ ಜೆಡಿ(ಎಸ್) ಅಭ್ಯರ್ಥಿ ಚೌಡಾರೆಡ್ಡಿ ತುಮಕೂರಿನ ಎಚ್‌ಎಂಟಿ ಅತಿಥಿ ಗೃಹದಲ್ಲಿ ಮತದಾರರಿಗೆ ಬಾಡೂಟ ಹಾಗೂ ಮದ್ಯ ನೀಡಿ ಆಮಿಷವೊಡ್ಡಿರುವ ಪ್ರಕರಣದ ಬಗ್ಗೆ ಸ್ಥಳೀಯ ಚುನಾವಣಾಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲಿಸಿದ ನಂತರ ಮುಂದಿನ ಕ್ರಮಕ್ಕಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಸೂಕ್ತ ಶಿಫಾರಸು ಮಾಡಲಾಗುವುದು~ ಎಂದು ಅವರು ಹೇಳಿದರು.ನೀತಿಸಂಹಿತೆ ಉಲ್ಲಂಘನೆ: 4 ದೂರು: ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀತಿಸಂಹಿತೆ ಉಲ್ಲಂಘಿಸಿದ ನಾಲ್ಕು ಪ್ರಕರಣಗಳ ಬಗ್ಗೆ ದೂರುಗಳು ಬಂದಿವೆ. ಅವೆಲ್ಲವನ್ನೂ ಕ್ರಮಕ್ಕಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಈಶಾನ್ಯ ಪದವೀಧರ ಕ್ಷೇತ್ರದ ಶಹಾಪುರದಲ್ಲಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕಟ್ಟಡವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಆರೋಪದ ಜತೆಗೆ, ಎಂಟು ಸಾವಿರ ಹೊಸ ಶಿಕ್ಷಕರ ನೇಮಕ ಘೋಷಣೆ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ ಎರಡು ಪ್ರಕರಣಗಳ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ದೂರುಗಳು ಬಂದಿವೆ ಎಂದರು.ಸರ್ಕಾರಿ ಕಟ್ಟಡವನ್ನು ದುರ್ಬಳಕೆ ಮಾಡಿಕೊಂಡು ಚುನಾವಣಾ ಪ್ರಚಾರ ಕೈಗೊಂಡ ಆರೋಪದ ಮೇರೆಗೆ ಪಶು ಸಂಗೋಪನಾ ಸಚಿವ ರೇವೂ ನಾಯಕ್ ಬೆಳಮಗಿ ವಿರುದ್ಧ ದೂರು ದಾಖಲಾಗಿದೆ. ಜತೆಗೆ, ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರವು ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ಖಾಸಗಿ ಶಿಕ್ಷಣ ಸಂಸ್ಥೆಯೊಂದಕ್ಕೆ ಸಿ.ಎ. ನಿವೇಶನ ಮಂಜೂರು ಮಾಡಿರುವ ಪ್ರಕರಣದ ಬಗ್ಗೆಯೂ ದೂರು ಬಂದಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.ಬಿಜೆಪಿ ಆಗ್ರಹ: ಈ ನಡುವೆ, ತುಮಕೂರಿನಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಕಾರ್ಖಾನೆಯ ಅತಿಥಿಗೃಹವನ್ನು ದುರ್ಬಳಕೆ ಮಾಡಿಕೊಂಡು ಮೋಜಿನ ಭೋಜನಕೂಟ ಏರ್ಪಡಿಸಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ಅವರನ್ನು ಚುನಾವಣಾ ಕಣದಿಂದಲೇ ವಜಾ ಮಾಡುವಂತೆ ಒತ್ತಾಯಿಸಿ ಬಿಜೆಪಿ ಶುಕ್ರವಾರ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತು.

 

ಮದ್ಯ ಹಾಗೂ ಮಾಂಸದೂಟ ನೀಡಿ ಮತದಾರರಿಗೆ ಆಮಿಷವೊಡ್ಡಿದ ಆರೋಪದ ಮೇರೆಗೆ ಚೌಡರೆಡ್ಡಿ ಅವರನ್ನು ತಕ್ಷಣ ಬಂಧಿಸಿ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಶಾಸಕರಾದ ಬಿ.ಎನ್. ವಿಜಯಕುಮಾರ್, ಅಶ್ವತ್ಥನಾರಾಯಣ್ ಹಾಗೂ ರಾಜ್ಯ ಮಾಧ್ಯಮ ವಿಭಾಗದ ಸಂಚಾಲಕ ಎಸ್. ಪ್ರಕಾಶ್ ಅವರು ಸುರಂಜನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.