ಗುರುವಾರ , ಜನವರಿ 23, 2020
19 °C

ಬಿಜೆಪಿ ಸಮಾವೇಶದಲ್ಲಿ ಡಿ.ವಿ.ಸದಾನಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಿಜೆಪಿ ಮುಖಂಡರು, ಕಾರ್ಯಕರ್ತರಷ್ಟೇ ಅಲ್ಲ, ವಿರೋಧಪಕ್ಷದವರು ಸಹ ಶ್ಲಾಘಿಸುತ್ತಿದ್ದಾರೆ. ಆರು ದಶಕಗಳಿಂದ ಆಗದ ಅಭಿವೃದ್ಧಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ ಎಂದು ವಿರೋಧಪಕ್ಷದವರೇ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.ನಗರದ ನಂದಿ ರಂಗಮಂದಿರದ ಆವರಣದಲ್ಲಿ ಶುಕ್ರವಾರ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ವಿರೋಧಪಕ್ಷದವರು ಹೀಗೆ ಶ್ಲಾಘಿಸುತ್ತಿರುವುದು ಕಂಡು ಎಲ್ಲರೂ ಬೆರಗಾಗುತ್ತಿದ್ದಾರೆ ಎಂದರು.ದೇವನಹಳ್ಳಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ ಅವರು, ದೇವನಹಳ್ಳಿಯ ಕಾಂಗ್ರೆಸ್ ಶಾಸಕ ವೆಂಕಟಸ್ವಾಮಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಸಮ್ಮುಖದಲ್ಲೇ ಯಡಿಯೂರಪ್ಪ ಅವರನ್ನು ಹೊಗಳಿದರು. ದೇವನಹಳ್ಳಿ ಅಭಿವೃದ್ಧಿಗಾಗಿ ಇಷ್ಟು ದಿನ ಯಾವುದೇ ಸರ್ಕಾರ ಹಣ ನೀಡಲಿಲ್ಲ. ಆದರೆ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾಮಗಾರಿಗೆಂದೇ 350 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬಿಜೆಪಿಯ ಅತ್ಯುತ್ತಮ ಆಡಳಿತಕ್ಕೆ ಇದಕ್ಕಿಂತ ಉದಾಹರಣೆ ಬೇಕೆ ಎಂದರು. ಬಿಜೆಪಿ ಯಾವ ಕ್ಷೇತ್ರದಲ್ಲಿ ದುರ್ಬಲವಿದೆಯೋ ಮತ್ತು ಯಾವ ಜಿಲ್ಲೆಯಲ್ಲಿ ಶಾಸಕರಿಲ್ವೊ ಅದೇ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಸಮಾವೇಶ ನಡೆಸುತ್ತಿದ್ದೇವೆ. ಬಲವಿರದ ಜಿಲ್ಲೆಯಲ್ಲೇ ಪಕ್ಷದ ಕಾರ್ಯಕರ್ತರನ್ನು ಚುರುಕುಗೊಳಿಸಿ ಪಕ್ಷವನ್ನು ಬಲಪಡಿಸುವುದು ನಮ್ಮ ಉದ್ದೇಶ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಖಾತೆಯೊಂದನ್ನು ತೆರೆದರೆ, ಬಿಜೆಪಿ ಮುಖಂಡರ ಮತ್ತು ಕಾರ್ಯಕರ್ತರ ಶ್ರಮ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಇಲ್ಲಿ ಸಮಾವೇಶ ನಡೆಸುತ್ತಿದ್ದೇವೆ ಎಂದು ಹೇಳಿದ ಅವರು, ಪ್ರಸ್ತುತ ಸರ್ಕಾರ ನಿರಾತಂಕವಾಗಿ ಐದು ವರ್ಷ ಪೂರೈಸಲಿದೆ. ಸರ್ಕಾರದ ಯೋಜನೆಗಳು ಮತ್ತು ಕಾರ್ಯಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಿದಲ್ಲಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಕಾರ್ಯಕರ್ತರು ಪ್ರತಿಯೊಬ್ಬರ ಮನೆಗೂ ತೆರಳಿ ಬಿಜೆಪಿ ಸರ್ಕಾರ ಮಾಡಿರುವ ಕಾರ್ಯಗಳ ಬಗ್ಗೆ ಪ್ರಚಾರ ಮಾಡಬೇಕು. ನಮ್ಮ ಸರ್ಕಾರ ಆಡಳಿತದಲ್ಲಿದೆ. ನಿಮ್ಮೆಲ್ಲರ ಸಮಸ್ಯೆ ಪರಿಹರಿಸುತ್ತದೆ ಎಂಬುದನ್ನು ಮನಗಾಣಿಬೇಕು ಎಂದರು.ಸಚಿವರಾದ ಬಿ.ಎನ್.ಬಚ್ಚೇಗೌಡ, ಎ.ನಾರಾಯಣಸ್ವಾಮಿ, ವರ್ತೂರು ಪ್ರಕಾಶ್, ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಶಾಸಕ ಬಿ.ಎನ್.ವಿಜಯಕುಮಾರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ರವಿನಾರಾಯಣರೆಡ್ಡಿ, ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)