ಭಾನುವಾರ, ಜೂನ್ 20, 2021
25 °C
ಏ.30ರೊಳಗೆ ವಿವರ ನೀಡುವಂತೆ ಆಯುಕ್ತರಿಗೆ ನೋಟಿಸ್‌

ಬಿಡಿಎಯಿಂದ ದೇಣಿಗೆ: ಲೋಕಾಯುಕ್ತ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಸುದ್ದಿ­ವಾಹಿನಿ­ಯೂ ಸೇರಿದಂತೆ ವಿವಿಧ ಸಂಘ ಸಂಸ್ಥೆ­ಗಳಿಗೆ ನೀಡಿದ ದೇಣಿಗೆ ಬಗ್ಗೆ ವಿವರ ಒದಗಿಸುವಂತೆ ಲೋಕಾಯುಕ್ತರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಮಹಾಲೇಖಪಾಲರ (ಸಿಎಜಿ) ವರದಿಯನ್ನು ವಿಧಾನಮಂಡಲದ ಕಳೆದ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ನಗರದ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನದ ಜವಾಬ್ದಾರಿ­ಯನ್ನು ಹೊಂದಿರುವ ಪ್ರಾಧಿಕಾರವು, ವಿವಿಧ ಸಂಘ ಸಂಸ್ಥೆಗಳಿಗೆ ಮನಸೋಇಚ್ಛೆ ದೇಣಿಗೆ ನೀಡಿರುವ ಕುರಿತು ಸಿಎಜಿ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್‌ ರಾವ್‌, ಏಪ್ರಿಲ್‌ 30ರೊಳಗೆ ವಿವರಣೆ ನೀಡುವಂತೆ ಬಿಡಿಎಗೆ ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.ಸಿಎಜಿ ವರದಿ ಪ್ರಕಾರ, 2009–2012ರ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆಗೆ ವಿರುದ್ಧವಾಗಿ ಬಿಡಿಎ ₨ 10.19 ಕೋಟಿ ಮೊತ್ತವನ್ನು ವಿವಿಧ ಸಂಘ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಿದೆ. ಪ್ರಾಧಿಕಾರದ ‘ಬೆಂಗಳೂರು ಅಭಿವೃದ್ಧಿ ನಿಧಿ’ಯಿಂದ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಇದು ನಗರದ ಬೀದಿಗಳನ್ನು ಸ್ವಚ್ಛ­ವಾಗಿಡುವುದು, ಬೀದಿದೀಪ ಅಳವಡಿಕೆ ಮತ್ತು ನಿರ್ವಹಣೆಗೆ ಮೀಸಲಾದ ನಿಧಿ. ದೇಣಿಗೆ ಪಡೆದಿರುವ ಸಂಘ ಸಂಸ್ಥೆಗಳು ಈ ಸಂಬಂಧ ರಸೀದಿ ಅಥವಾ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಆಕ್ಷೇಪವೂ ವರದಿಯಲ್ಲಿ ವ್ಯಕ್ತವಾಗಿತ್ತು.ಲೋಕಾಯುಕ್ತರು ನೋಟಿಸ್‌ ನೀಡಿರುವ ಕುರಿತು ಬಿಡಿಎ ಆಯುಕ್ತ ಟಿ. ಶ್ಯಾಂ ಭಟ್‌ ಅವರನ್ನು ಸಂಪರ್ಕಿಸಿದಾಗ, ‘ಲೋಕಾಯುಕ್ತದಿಂದ ನೋಟಿಸ್‌ ಬಂದಿರುವುದು ನಿಜ’ ಎಂದು ತಿಳಿಸಿದರು. ‘ಎಲ್ಲ ಸಂಸ್ಥೆಗಳು ದೇಣಿಗೆ ನೀಡುತ್ತವೆ. ಅದಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನೂ ನಿರ್ವಹಣೆ ಮಾಡಲಾಗುತ್ತದೆ. ಈ ದಾಖಲೆಗಳು ಸರ್ಕಾರ ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದಿಡ­ಬೇಕಾಗುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಲೋಕಾಯುಕ್ತಕ್ಕೆ ಉತ್ತರ ನೀಡಲಾಗುವುದು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.