ಶುಕ್ರವಾರ, ಮೇ 20, 2022
21 °C

ಬಿಡಿಎ ಅಧಿಕಾರಿಗಳ ಅತಿರೇಕದ ಕ್ರಮ: ಹಕ್ಕುಪತ್ರವಿದ್ದರೂ ಮನೆಗಳು ನೆಲಸಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: ಯಶವಂತಪುರ ಕ್ಷೇತ್ರದ ಗಿಡದ ಕೊನೇನಹಳ್ಳಿಯ ಸರ್ವೇ ನಂ 38.39ರಲ್ಲಿ ಸುಮಾರು 43.14 ಎಕರೆ ಸ್ಥಳದಲ್ಲಿ ನಿರ್ಮಿಸಲಾಗಿದ್ದ 10 ನಿವೇಶನಗಳು ಹಾಗೂ 410 ಮನೆಗಳನ್ನು ಬಿಡಿಎ ಅಧಿಕಾರಿಗಳು ಇತ್ತೀಚೆಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ ಸ್ಥಳಕ್ಕೆ ವಿಧಾನಸಭೆ ವಿರೊಧ ಪಕ್ಷದ ನಾಯಕ ಸಿದ್ಧರಾಮಯ್ಯ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.ನಂತರ ಮಾತನಾಡಿದ ಅವರು, ‘30 ವರ್ಷಗಳ ಹಿಂದೆಯೇ ಸ್ಥಳೀಯ ಪಂಚಾಯಿತಿ ವತಿಯಿಂದ ಬಡವರಿಗೆಂದು ನಿವೇಶನಗಳನ್ನು ಮಂಜೂರು ಮಾಡಿ ಹಕ್ಕುಪತ್ರ ವಿತರಿಸಲಾಗಿದೆ. ಈ ವಿಷಯ ತಿಳಿದಿದ್ದರೂ ಬಿಡಿಎ ಅಧಿಕಾರಿಗಳು ಮಾನವೀಯತೆ ಮರೆತು ಮನೆಗಳನ್ನು ನೆಲಸಮಗೊಳಿಸಿರುವುದು ಖಂಡನೀಯ’ ಎಂದು ಕಿಡಿಕಾರಿದರು.‘ನ್ಯಾಯಾಲಯದ ತೀರ್ಪು ಬಡ ನಿವೇಶನದಾರರ ಪರವಾಗಿದ್ದರೂ ಪ್ರಭಾವಿ ಸಚಿವರ ಸೂಚನೆ ಮೇರೆಗೆ ಅಧಿಕಾರಿಗಳು ಈ ಕೃತ್ಯ ನಡೆಸಿದ್ದಾರೆ. ಮನೆ ಕಳೆದುಕೊಂಡವರ ಬಳಿ ಎಲ್ಲಾ  ದಾಖಲಾತಿಗಳಿದ್ದರೂ ಪ್ರಭಾವಿ ವ್ಯಕ್ತಿಗಳ ದೌರ್ಜನ್ಯದ ಮುಂದೆ ಬಡವರು ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದ್ದಾರೆ’ ಎಂದರು.‘ಬಡವರನ್ನು ಒಕ್ಕಲೆಬ್ಬಿಸಿ ಆ ಜಾಗವನ್ನು ಸೇವಾ ಸಂಸ್ಥೆ, ಟ್ರಸ್ಟ್‌ಗಳ ಹೆಸರಿಗೆ ನೀಡಿ ಬಳಿಕ ಡೆವಲಪರ್‌ಗಳಿಗೆ  ಮಾರಿ ಹಣ ಗಳಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಇಲ್ಲೂ ಕೂಡ ಅದೇ ರೀತಿ ನಡೆದಿರುವ ಗುಮಾನಿ ಮೂಡುತ್ತಿದೆ’ ಎಂದು ಹೇಳಿದರು.‘ಬಡವರ ಮೇಲೆ ದೌರ್ಜನ್ಯ ಎಸಗಿ ಕಾನೂನನ್ನು ಉಲ್ಲಂಘಿಸಿರುವುದು ದಾಖಲಾತಿಗಳ ಮೂಲಕ ತಿಳಿದು ಬರುವುದರಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಅಲ್ಲಿಯೇ ಪುನರ್‌ವಸತಿ ಕಲ್ಪಿಸಿಕೊಡಬೇಕು. ದೌರ್ಜನ್ಯ ಎಸಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮಾತನಾಡಿ, ‘1975ರಲ್ಲಿ ಅಂದಿನ ಸರ್ಕಾರ ಬಡವರಿಗಾಗಿ ಮಂಜೂರು ಮಾಡಿದ್ದ ನಿವೇಶನಗಳ ಹಕ್ಕುಪತ್ರವನ್ನು ತೋರಿಸಿದ್ದರೂ ಬಿಡಿಎ ಅಧಿಕಾರಿಗಳು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಜನರ ಹಕ್ಕನ್ನು ಕಸಿದುಕೊಂಡಿದ್ದಾರೆ. ಬಡವರಿಗಾಗಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳುವ ಬಿಜೆಪಿ, ಬಡ ಜನರನ್ನು ಒಕ್ಕಲೆಬ್ಬಿಸಿ ದೌರ್ಜನ್ಯ ನಡೆಸುತ್ತಿದೆ’ ಎಂದು ದೂರಿದರು.ಕರ್ನಾಟಕ ರಾಜ್ಯ ವಸತಿ ಮಹಾಮಂಡಲದ ಅಧ್ಕಕ್ಷ ಎಸ್.ಟಿ.ಸೋಮಶೇಖರ್, ಪಾಲಿಕೆ ಸದಸ್ಯ ರಾಜಣ್ಣ, ಮುಖಂಡರಾದ ಅನಿಲ್ ಕುಮಾರ್, ಜನಾರ್ದನ, ಕೋಡಿಪಾಳ್ಯ ನಂಜುಂಡಪ್ಪ, ಬಾಲರಾಜ್, ಪ್ರಭು, ರವಿ, ಶೈಲೇಶ್ ಇತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.