ಬುಧವಾರ, ಮೇ 12, 2021
18 °C
ಅನಾಮಧೇಯ ದೂರು ತಳ್ಳಿ ಹಾಕಲಾಗದು: ಡಿಪಿಎಆರ್

ಬಿಡಿಎ ಹಿಂದಿನ ಸಿಇ ವಿರುದ್ಧ ತನಿಖೆ?

ವಿ.ಎಸ್.ಸುಬ್ರಹ್ಮಣ್ಯ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿರಿಯ ಅಧಿಕಾರಿಗಳ ವಿರುದ್ಧ ಬರುವ ಅನಾಮಧೇಯ ದೂರುಗಳನ್ನು ತಳ್ಳಿ ಹಾಕಲಾಗದು ಎಂಬ ನಗರಾಭಿವೃದ್ಧಿ ಇಲಾಖೆ ವಾದವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾನ್ಯ ಮಾಡಿದೆ. ಅದರಂತೆ, ಮುಖ್ಯ ಎಂಜಿನಿಯರ್ ಟಿ.ಎನ್. ಚಿಕ್ಕರಾಯಪ್ಪ ವಿರುದ್ಧ ಉನ್ನತಮಟ್ಟದ ತನಿಖೆಗೆ ಆದೇಶಿಸಲು ನಗರಾಭಿವೃದ್ಧಿ ಸಚಿವರ ಅನುಮತಿ ಕೋರಿದೆ.ಚಿಕ್ಕರಾಯಪ್ಪ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರಿಂಗ್ ಸದಸ್ಯರ ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಇ-ಸಂಗ್ರಹಣೆಯಲ್ಲಿ ನಡೆದ ಟೆಂಡರು ಪ್ರಕ್ರಿಯೆಗಳು, ನಕಲಿ ದಾಖಲೆಗಳನ್ನು ಮಾನ್ಯ ಮಾಡಿರುವುದು ಹಾಗೂ ಪ್ರಮುಖ ಕಾಮಗಾರಿಗಳ ಗುತ್ತಿಗೆ ನೀಡುವುದಕ್ಕಾಗಿ ನಡೆಸಿದ ಅರ್ಹತಾ ಟೆಂಡರ್ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.ಎಂಜಿನಿಯರಿಂಗ್ ಸದಸ್ಯರ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವಂತೆ ಬಿಡಿಎ ಡಿವೈಎಸ್‌ಪಿಗೆ ಪ್ರಾಧಿಕಾರದ ಆಯುಕ್ತರು ಆದೇಶಿಸಿದ್ದರು. ಜೊತೆ ಯಲ್ಲೇ ಆಪಾದಿತರಿಗೂ ನೋಟಿಸ್ ಜಾರಿ ಮಾಡಿದ್ದರು. ಆದರೆ, ತನಿಖೆಗೆ ನಿಯೋಜಿಸಿದ್ದ ಡಿವೈಎಸ್‌ಪಿ, ದೂರು ದಾರರು ಉಲ್ಲೇಖಿತ ವಿಳಾಸಗಳಲ್ಲಿ ವಾಸವಿಲ್ಲ ಎಂಬ ಕಾರಣ ನೀಡಿ ಪ್ರಕರಣ ಮುಕ್ತಾಯಗೊಳಿಸಿದ್ದರು. ಡಿವೈಎಸ್‌ಪಿ ವರದಿ ಆಧಾರದಲ್ಲೇ ಚಿಕ್ಕರಾಯಪ್ಪ ಸಮಜಾಯಿಷಿ ನೀಡಿದ್ದರು.ತನಿಖಾ ವರದಿ ಮತ್ತು ಆಪಾದಿತರ ಸಮಜಾಯಿಷಿಯಿಂದ ತೃಪ್ತರಾಗದ ಬಿಡಿಎ ಆಯುಕ್ತ ಟಿ.ಶ್ಯಾಂಭಟ್, ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಚಿಕ್ಕರಾಯಪ್ಪ ಅವರ ಸೇವೆಯನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದ್ದರು. ಅವರ ವಿರುದ್ಧ ಬಂದಿರುವ ದೂರುಗಳ ಕುರಿತು ಉನ್ನತಮಟ್ಟದ ತನಿಖೆ ನಡೆಸುವ ಬಗ್ಗೆಯೂ ಪರಿಶೀಲಿಸುವಂತೆ ಕೋರಿದ್ದರು.ಆಯುಕ್ತರ ಕೋರಿಕೆಯಂತೆ ಚಿಕ್ಕರಾಯಪ್ಪ ಅವರ ಸೇವೆಯನ್ನು ಬಿಡಿಎಯಿಂದ ಹಿಂದಕ್ಕೆ ಪಡೆದ ಆಡಳಿತ ಮತ್ತು ಸುಧಾರಣಾ ಇಲಾಖೆ (ಡಿಪಿಎಆರ್), ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಿತ್ತು. ಅಲ್ಲಿ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ ಮುಖ್ಯ ಎಂಜಿನಿಯರ್ ಹುದ್ದೆಗೆ ನಿಯೋಜಿಸಲಾಗಿತ್ತು. ಬಿಡಿಎ ಎಂಜಿನಿಯರಿಂಗ್ ಸದಸ್ಯರ ಹುದ್ದೆಗೆ ಮುಖ್ಯ ಎಂಜಿನಿಯರ್ ಪಿ.ಎನ್. ನಾಯಕ್ ಅವರನ್ನು ನೇಮಿಸಲಾಗಿತ್ತು.ವರ್ಗಾವಣೆ ಪ್ರಶ್ನಿಸಿ ಚಿಕ್ಕರಾಯಪ್ಪ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ ಕೆಎಟಿ, ಅರ್ಜಿದಾರರ ಸೇವೆ ನಗರಾಭಿವೃದ್ಧಿ ಇಲಾಖೆಯ ವಶದಲ್ಲಿತ್ತು. ಅವರನ್ನು ಬಿಡಿಎಯಿಂದ ವರ್ಗಾವಣೆ ಮಾಡುವ ಆದೇಶವನ್ನು ಡಿಪಿಎಆರ್ ಹೊರಡಿಸಿರುವುದು ಸಮಂಜಸವಲ್ಲ. ನಗರಾಭಿವೃದ್ಧಿ ಇಲಾಖೆ ಮಾತ್ರ ಇಂತಹ ಆದೇಶ ಹೊರಡಿಸಬಹುದು ಎಂದು ಆದೇಶಿಸಿತ್ತು. ಡಿಪಿಎಆರ್ ಮಾರ್ಚ್ 8ರಂದು ಹೊರಡಿಸಿದ್ದ ಆದೇಶವನ್ನು ಕೆಎಟಿ ರದ್ದು ಮಾಡಿತ್ತು. ಚಿಕ್ಕರಾಯಪ್ಪ ಅವರ ವರ್ಗಾವಣೆ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೊಸದಾಗಿ ಆದೇಶ ಹೊರಡಿಸುವುದಕ್ಕೂ ಮುಕ್ತ ಅವಕಾಶ ನೀಡಿತ್ತು.ತನಿಖೆಗೆ ಮನವಿ: ಮೇ 7ರಂದು ಚಿಕ್ಕರಾಯಪ್ಪ ಅವರನ್ನು ಬಿಡಿಎ ಎಂಜಿನಿಯರಿಂಗ್ ಸದಸ್ಯರ ಹುದ್ದೆಯಿಂದ ತೆರವುಗೊಳಿಸಿ ನಗರಾಭಿವೃದ್ಧಿ ಇಲಾಖೆ ಹೊಸ ಆದೇಶ ಹೊರಡಿಸಿತ್ತು. ಜೊತೆಯಲ್ಲೇ, ಈ ಅಧಿಕಾರಿಯ ವಿರುದ್ಧ ಬಂದಿರುವ ಎಲ್ಲ ದೂರುಗಳ ಕುರಿತು ಸ್ವತಂತ್ರ ತನಿಖಾ ಸಂಸ್ಥೆಯಿಂದ ಉನ್ನತಮಟ್ಟದ ತನಿಖೆ ನಡೆಸುವಂತೆ ಕೋರಿ ಡಿಪಿಎಆರ್‌ಗೆ ಪ್ರಸ್ತಾವ ಸಲ್ಲಿಸಿತ್ತು.`ಬಿಡಿಎ ಕಾಮಗಾರಿಗಳ ಟೆಂಡರು ಪ್ರಕ್ರಿಯೆ ಹಾಗೂ ಅರ್ಹತಾ ಟೆಂಡರು ಪ್ರಕ್ರಿಯೆಗಳಲ್ಲಿ ಅವ್ಯವಹಾರ ನಡೆಸಿರುವ ಗಂಭೀರ ಸ್ವರೂಪದ ಆರೋಪಗಳು ಚಿಕ್ಕರಾಯಪ್ಪ ಅವರ ಮೇಲಿವೆ. ದೂರುದಾರರು ವಿಳಾಸಗಳಲ್ಲಿ ಇಲ್ಲ ಎಂಬ ಕಾರಣ ನೀಡಿ ಬಿಡಿಎ ಡಿವೈಎಸ್‌ಪಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ. ಆದರೆ, ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳ ವಿರುದ್ಧ ಬಹಿರಂಗವಾಗಿ ಆರೋಪ ಮಾಡಲು ಮತ್ತು ಸಾಕ್ಷ್ಯಾಧಾರ ಒದಗಿಸಲು ಸಾರ್ವಜನಿಕರು, ಗುತ್ತಿಗೆದಾರರು ಭಯಪಡುತ್ತಾರೆ.ದೂರುಗಳಲ್ಲಿ ಉಲ್ಲೇಖಿಸಿರುವ ಕಡತಗಳು ಬಿಡಿಎ ಬಳಿಯೇ ಇದ್ದರೂ ಡಿವೈಎಸ್‌ಪಿ ಪರಿಶೀಲನೆ ನಡೆಸಿಲ್ಲ' ಎಂದು ಪ್ರಸ್ತಾವದಲ್ಲಿ ತಿಳಿಸಿತ್ತು.ಇಂತಹ ಪ್ರಕರಣಗಳಲ್ಲಿ ದೂರುದಾರರೇ ಸಾಕ್ಷ್ಯ ಒದಗಿಸಬೇಕೆಂಬ ನಿಲುವು ಒಪ್ಪುವಂತಹದ್ದಲ್ಲ. ಈ ಕಾರಣದಿಂದ ಡಿವೈಎಸ್‌ಪಿ ಸಲ್ಲಿಸಿರುವ ವರದಿಯನ್ನು ಮಾನ್ಯ ಮಾಡಲಾಗದು. ಚಿಕ್ಕರಾಯಪ್ಪ ವಿರುದ್ಧ ಬಂದಿರುವ ಎಲ್ಲ ಲಿಖಿತ ದೂರುಗಳ ಬಗ್ಗೆಯೂ ಸ್ವತಂತ್ರ ತನಿಖಾ ಸಂಸ್ಥೆಯಿಂದ ಉನ್ನತಮಟ್ಟದ ತನಿಖೆ ನಡೆಸಿ, ವರದಿ ಪಡೆದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಪ್ರಸ್ತಾವವನ್ನು ಡಿಪಿಎಆರ್‌ಗೆ ಕಳುಹಿಸಲಾಗಿತ್ತು.ಅನುಮತಿ ಕೋರಿ ಪತ್ರ: ನಗರಾಭಿವೃದ್ಧಿ ಇಲಾಖೆಯ ಪ್ರಸ್ತಾವವನ್ನು ಮಾನ್ಯ ಮಾಡಿರುವ ಡಿಪಿಎಆರ್, ಚಿಕ್ಕರಾಯಪ್ಪ ವಿರುದ್ಧ ತನಿಖೆಗೆ ಆದೇಶಿಸುವ ಕುರಿತು ಸಂಬಂಧಿಸಿದ ಸಚಿವರ ಅನುಮತಿ ಪತ್ರ ಪಡೆದು ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದೆ. ಸಚಿವರ ಒಪ್ಪಿಗೆ ಪತ್ರ ತಲುಪಿದ ತಕ್ಷಣವೇ ತನಿಖೆಗೆ ಆದೇಶಿಸಲು ಸಿದ್ಧತೆ ನಡೆಸಿದೆ.`ಚಿಕ್ಕರಾಯಪ್ಪ ಹಿರಿಯ ಅಧಿಕಾರಿ. ಅವರ ವಿರುದ್ಧದ ಆರೋಪಗಳ ಕುರಿತು ತನಿಖೆಗೆ ಆದೇಶಿಸಲು ಸಂಬಂಧಿಸಿದ ಸಚಿವರ ಅನುಮತಿ ಅಗತ್ಯ. ತಕ್ಷಣವೇ ಸಚಿವರಿಂದ ಅನುಮತಿ ಪತ್ರ ಪಡೆದು ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ. ಅನುಮತಿ ದೊರೆತ ತಕ್ಷಣ ಮುಂದಿನ ಕ್ರಮ ಜರುಗಿಸಲಾಗುವುದು' ಎಂದು ಡಿಪಿಎಆರ್ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.