ಮಂಗಳವಾರ, ಮೇ 24, 2022
31 °C

ಬಿಬಿಎಂಪಿಯಿಂದ ಅನಧಿಕೃತ ಒಎಫ್‌ಸಿ ಕೇಬಲ್‌ಗಳ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಅಳವಡಿಸಲಾದ ಆಪ್ಟಿಕಲ್ ಫೈಬರ್ ಕೇಬಲ್‌ಗಳ (ಒಎಫ್‌ಸಿ) ತೆರವು ಕಾರ್ಯಕ್ಕೆ ಬಿಬಿಎಂಪಿ ಚಾಲನೆ ನೀಡಿದ್ದು, ಅಬ್ಬಿಗೆರೆಯಲ್ಲಿ 15 ಕಿ.ಮೀ. ಉದ್ದದ ಮಾರ್ಗದಲ್ಲಿ ಅನಧಿಕೃತವಾಗಿ ಅಳವಡಿಸಿದ್ದ  ಕೇಬಲ್‌ನ್ನು ಬುಧವಾರ ಪತ್ತೆ ಹಚ್ಚಿ ತೆರವುಗೊಳಿಸಿದೆ.

ಮೇಯರ್ ಪಿ.ಶಾರದಮ್ಮ ಅವರು ಅಬ್ಬಿಗೆರೆಯಲ್ಲಿ ಅನಧಿಕೃತ ಕೇಬಲ್ ಅನ್ನು ಕತ್ತರಿಸುವ ಮೂಲಕ ಕಾರ್ಯಾಚರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ ಸಿಬ್ಬಂದಿ ತೆರವು ಕಾರ್ಯವನ್ನು ಮುಂದುವರಿಸಿದರು.

`ನಗರದ ರಸ್ತೆಗಳಲ್ಲಿ 18 ಸೇವಾ ಸಂಸ್ಥೆಗಳು ಒಎಫ್‌ಸಿ ಕೇಬಲ್‌ಗಳನ್ನು ಅಳವಡಿಸಿವೆ. ಈ ಸಂಸ್ಥೆಗಳು ನಗರದಲ್ಲಿ ಅಳವಡಿ ಸಿರುವ ಕೇಬಲ್‌ನ ವಿವರ ನೀಡುವಂತೆ ಕೋರಲಾಗಿತ್ತು. ಆ ಬಳಿಕ 12 ಕಂಪೆನಿಗಳು ಮಾಹಿತಿ ನೀಡಿದ್ದು, ಒಟ್ಟು 4,717 ಕಿ.ಮೀ. ಉದ್ದದ ಮಾರ್ಗದಲ್ಲಿ ಒಎಫ್‌ಸಿ ಅಳವಡಿಸಿರುವುದಾಗಿ ಘೋಷಿಸಿವೆ~ಎಂದು ಪಾಲಿಕೆ ಆಯುಕ್ತರ ತಾಂತ್ರಿಕ ಸಲಹೆಗಾರ ರಾಜಸಿಂಹ `ಪ್ರಜಾವಾಣಿ~ಗೆ ತಿಳಿಸಿದರು.

`ಆದರೆ ನಗರದಲ್ಲಿ ಸುಮಾರು 15,000 ಕಿ.ಮೀ. ಉದ್ದದ ಒಎಫ್‌ಸಿ ಕೇಬಲ್‌ಗಳನ್ನು ಅಳವಡಿಸಲಾಗಿದೆ ಎಂಬ ಅಂದಾಜು ಇದೆ. ಸಾಕಷ್ಟು ಸಮಯಾವಕಾಶ ನೀಡಿದರೂ ಸೇವಾ ಸಂಸ್ಥೆಗಳು ಸರಿಯಾಗಿ ಸ್ಪಂದಿಸಿಲ್ಲ. ಹಾಗಾಗಿ ಅನಧಿಕೃತ ಕೇಬಲ್‌ಗಳನ್ನು ಪತ್ತೆ ಹಚ್ಚಿ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ~ ಎಂದರು.

`ಅನಧಿಕೃತವಾಗಿ ಅಳವಡಿಸಿರುವ ಕೇಬಲ್‌ಗೆ ಪ್ರತಿ ಮೀಟರ್‌ಗೆ 900 ರೂಪಾಯಿ ದಂಡ ಶುಲ್ಕ ನಿಗದಿಪಡಿಸಲಾಗಿದೆ. ಹಾಗೆಯೇ ಪ್ರತಿ ಮೀಟರ್ ಒಎಫ್‌ಸಿ ಕೇಬಲ್‌ಗೆ 120 ರೂಪಾಯಿ ಮಾಸಿಕ ಶುಲ್ಕ ವಿಧಿಸಲಾಗಿದೆ. ಹಾಗಾಗಿ ಒಎಫ್‌ಸಿ ಕೇಬಲ್ ಶುಲ್ಕದಿಂದ ಪ್ರತಿ ವರ್ಷ ಸುಮಾರು 3,000 ಕೋಟಿ ರೂಪಾಯಿ ಆದಾಯ ಬರಲಿದೆ ಎಂಬ ಅಂದಾಜು ಇದೆ~ ಎಂದು ಹೇಳಿದರು.

`ಅಕ್ರಮ ಕೇಬಲ್‌ಗಳ ಪತ್ತೆಗೆ ಆಪ್ಟಿಕಲ್ ಟೈಮರ್ ಡೊಮೇನ್ ರಿಫ್ಲೆಕ್ಟರ್ (ಒಟಿಡಿಆರ್) ಯಂತ್ರ ಬಳಸಲಾಗುತ್ತಿದೆ. ಸದ್ಯ ಎರಡು ಯಂತ್ರಗಳಿದ್ದು, ಅಗತ್ಯಬಿದ್ದರೆ ಇನ್ನಷ್ಟು ಯಂತ್ರಗಳನ್ನು ಖರೀದಿಸಲಾಗುವುದು. ಅಕ್ರಮ ಕೇಬಲ್ ತೆರವು ಕಾರ್ಯವನ್ನು ಮುಂದುವರಿಸಲಾಗುವುದು~ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.