ಸೋಮವಾರ, ಮೇ 16, 2022
28 °C

ಬಿಬಿಎಂ, ಬಿಸಿಎ ಕೋರ್ಸ್‌ಗೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಇಲ್ಲಿನ ಕಾವೇರಿ ಪದವಿ ಕಾಲೇಜು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪದವಿ ಶಿಕ್ಷಣಕ್ಕೆ ವರದಾನವಾಗಿದೆ. ಇಲ್ಲಿ ಬಿ,ಎ, ಬಿಬಿಎಂ, ಬಿ.ಕಾಂ, ಬಿಸಿಎ, ಬಿ.ಎಸ್ಸಿ, ಕೋರ್ಸ್‌ಗಳಿವೆ. ಬಿ.ಎ. ತರಗತಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ ವಿಷಯಗಳೊಂದಿಗೆ ಕನ್ನಡ ಐಚ್ಛಿಕ ಹಾಗೂ ಇಂಗ್ಲಿಷ್ ಐಚ್ಛಿಕ (ಮೇಜರ್) ವಿಷಯಗಳನ್ನು ಅಧ್ಯಯನ ಮಾಡಬಹುದಾಗಿದೆ.ಬಿಕಾಂನಲ್ಲಿ ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ, ತೆರಿಗೆಶಾಸ್ತ್ರ ಎಂಬ ಐಚ್ಛಿಕ ವಿಷಯವಿದೆ. ಇದು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಉದ್ಯೋಗಕ್ಕೆ ಹೆಚ್ಚಿನ ನೆರವಾಗಲಿದೆ. ಪ್ರಥಮ ಬಿಕಾಂ ಗೆ 95 ವಿದ್ಯಾರ್ಥಿಗಳಿಗೆ ಪ್ರವೇಶ ದೊರಕಲಿದೆ. ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡು ಅಧ್ಯಯನ ಮಾಡಿದವರು ಬಿಕಾಂ  ಪದವಿಗೆ ಪ್ರವೇಶ ಲಭ್ಯ.ಬಿಸಿಎ ಪದವಿ  ಕೂಡ ಇದ್ದು ಇದರಲ್ಲಿ ಪದವಿ ಪಡೆದವರಿಗೆ ಶೇ.100 ರಷ್ಟು ಉದ್ಯೋಗಾವಕಾಶವಿದೆ. ಈ ಕೋರ್ಸ್‌ಗೆ ಕೇವಲ 40 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ.  ಪ್ರಥಮ ಪಿಯುಸಿಯಲ್ಲಿ ಕಾಮರ್ಸ್ ಅಧ್ಯಯನ ಮಾಡಿದವರು ಪ್ರವೇಶಕ್ಕೆ ಅರ್ಹರು.ಬಿಬಿಎಂ ಪದವಿಗೆ 40 ವಿದ್ಯಾರ್ಥಿಗಳಿಗೆ ಪ್ರವೇಶದ ಮಿತಿ ಇದೆ. ಪಿಯುಸಿಯಲ್ಲಿ ಕಲಾ ಮತ್ತು    ಕಾಮರ್ಸ್ ಅಧ್ಯಯನ  ಮಾಡಿದವರು ಸೇರ್ಪಡೆಗೊಳ್ಳಬಹುದು. ಇದರಲ್ಲಿ ಪದವಿ ಪಡೆದವರಿಗೆ ಮುಂದೆ ಪ್ರತಿಷ್ಠಿತ ಖಾಸಗಿ ಕಂಪೆನಿ, ಬ್ಯಾಂಕ್, ಸಹಕಾರ ಸಂಘ ಮುಂತಾದವುಗಳಲ್ಲಿ ಉದ್ಯೋಗಾವಕಾಶ ವಿಪುಲವಾಗಿದೆ.ಬಿ.ಎಸ್ಸಿ ಪದವಿಯಲ್ಲಿ ಪಿಸಿಎಂ, ಸಿಬಿಜೆಡ್ ಸಂಯೋಜನೆ ಇದೆ. ಇದಕ್ಕೂ ಕೂಡ ಪ್ರಥಮ ಬಿಎಸ್ಸಿಗೆ 40 ಸೀಟ್‌ಗಳು ಲಭ್ಯವಿದೆ. ಇವುಗಳೆಲ್ಲದರ ಜತೆಗೆ ಬಿ.ಎ.ತರಗತಿಗೆ ಪತ್ರಿಕೋದ್ಯಮ, ಮನಃಶಾಸ್ತ್ರ ವಿಷಯಗಳನ್ನು (ಸಂಯೋಜನೆ) ತೆರೆಯುವ ಚಿಂತನೆ  ನಡೆಯುತ್ತಿದೆ.ಕಳೆದ ವರ್ಷದಿಂದ ಇದೇ ಕ್ಯಾಂಪಸ್‌ನಲ್ಲಿ ಎಂ.ಕಾಂ ಸ್ನಾತಕೋತ್ತರ ಪದವಿ ತರಗತಿಯನ್ನು ತೆರೆಯಲಾಗಿದೆ. ಫೈನಾನ್ಸ್ (ಹಣಕಾಸು) ಹಾಗೂ  ಹ್ಯೂಮನ್ ರಿಸೋರ್ಸ್‌ ಮ್ಯಾನೇಜ್‌ಮೆಂಟ್(ಮಾನವ ಸಂಪನ್ಮೂಲ ನಿರ್ವಹಣೆ)  ವಿಶೇಷ ಅಧ್ಯಯನ ಗಳಾಗಿವೆ.ನಮ್ಮದು ಮಾಸ್ ಎಜ್ಯುಕೇಷನ್

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಅರ್ಥಶಾಸ್ತ್ರ ಎಂ.ಎ ತರಗತಿಯು ಕೂಡ ಆರಂಭಗೊಳ್ಳಲಿದೆ. ಸುಸಜ್ಜಿತ ಕಟ್ಟಡ, ವಿಶಾಲವಾದ ಮೈದಾನ, ಉತ್ತಮ ಗ್ರಂಥಾಲಯ, ಗುಣಮಟ್ಟದ ಬೋಧಕ ವೃಂದ ಇರುವುದು ಕಾಲೇಜಿನ  ಹಿರಿಮೆಯನ್ನು ಹೆಚ್ಚಿಸಿದೆ ಎಂದು ಪ್ರಾಂಶುಪಾಲ ಡಾ.ಕೇಶವ ತಿಳಿಸಿದರು.ಪಠ್ಯೇತರ ಚಟುವಟಿಕೆಯಲ್ಲಿಯೂ ಉತ್ತಮ ಹೆಸರು ಗಳಿಸಿದ್ದು, ಎನ್‌ಎಸ್‌ಎಎಸ್, ಎನ್‌ಸಿಸಿ ಕೂಡ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಕ್ರೀಡೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಸ್ಥಾನಗಳಿಸಿರುವ ಈ ಕಾಲೇಜು ಹಾಕಿ ಆಟಗಾರರ ಉತ್ಪಾದನಾ ಕೇಂದ್ರವು ಕೂಡ. ಉತ್ತಮವಾದ ಬಾಸ್ಕೆಟ್ ಬಾಲ್, ಹಾಕಿ ಆಟಗಳ ಕ್ರೀಡಾಂಗಣವಿದೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ  ಸಹಕಾರಿಯಾಗುವ 50 ಸಾವಿರ ಪುಸ್ತಕಗಳನ್ನು ಒಳಗೊಂಡ ಸುಸಜ್ಜಿತ ಗ್ರಂಥಾಲಯವಿದೆ.ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಬಿಸಿಎಂ ವಸತಿ ನಿಲಯವಿದ್ದು, ಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕವಾಗಿದೆ. ಕಾಲೇಜಿಗೆ ಪ್ರತಿವರ್ಷ ಶೇ.75ರಿಂದ ಶೇ.90ರಷ್ಟು ಫಲಿತಾಂಶ ಲಭಿಸುತ್ತಿದೆ. ಬಿ.ಎಸ್ಸಿ ಮತ್ತಿತರ ಕೋರ್ಸ್‌ಗಳಲ್ಲಿ  ಬಹಳಷ್ಟು ವಿದ್ಯಾರ್ಥಿಗಳು ಶೇ.100ರಷ್ಟು ಅಂಕ ಗಳಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಜಿಲ್ಲೆಯಲ್ಲಿ ನ್ಯಾಕ್‌ನಿಂದ ಎ ಗ್ರೇಡ್ ಪಡೆದ ಏಕೈಕ ಕಾಲೇಜು ಇದು ಎಂದು ತಿಳಿಸಿದರು. 7 ವರ್ಷದಿಂದ ಪ್ರತಿವರ್ಷವೂ ಕ್ಯಾಂಪಸ್ ಆಯ್ಕೆ ನಡೆಯುತ್ತಿದ್ದು, ಬಹಳಷ್ಟು ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪೆನಿಗಳ ಉದ್ಯೋಗಕ್ಕೆ ಆಯ್ಕೆ ಯಾಗುತ್ತಿದ್ದಾರೆ. ಕಾಲೇಜಿನಲ್ಲಿ ಇದೀಗ 780 ವಿದ್ಯಾರ್ಥಿಗಳಿದ್ದು, 86ಮಂದಿ ಬೊಧಕ ಮತ್ತು ಬೋಧಕೇತರರಿದ್ದಾರೆ. ನಮ್ಮದು ಮಾಸ್ ಎಜ್ಯುಕೇಷನ್ ಕಾಲೇಜೇ  ಹೊರತು ಕ್ಲಾಸ್ ಎಜ್ಯುಕೇಷನ್ ಕಾಲೇಜಲ್ಲ. ಏಕೆಂದರೆ ನಾವು ಬಂದವರಿಗೆಲ್ಲ ಪ್ರವೇಶ ನೀಡುತ್ತಿದ್ದೇವೆ. `ಎಲ್ಲರಿಗೂ ಶಿಕ್ಷಣ~ ಎಂಬುದೇ ನಮ್ಮ ಗುರಿ. ಇಲ್ಲಿ  ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್ ಕೋರ್ಸ್ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.