ಶನಿವಾರ, ಮೇ 8, 2021
18 °C

ಬಿರುಸಿನ ಮಳೆ; ಉರುಳಿದ ಬಂಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ಶುಕ್ರವಾರ ಬಿರುಸಿನಿಂದ ಕೂಡಿದ ಮಳೆಯಾಗಿದೆ. ಘಟ್ಟಪ್ರದೇಶದಲ್ಲಿ ಶಿರಸಿ ಹಾಗೂ ಸಿದ್ದಾಪುರದಲ್ಲಿ ಮಾತ್ರ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಮಳೆಯಿಂದಾಗಿ ಇಲ್ಲಿಗೆ ಸಮೀಪದ ಕಾಳಿ ಸೇತುವೆ ಸಮೀಪ ಗುಡ್ಡದಿಂದ ಕಲ್ಲುಬಂಡೆಗಳು ರಾಷ್ಟ್ರೀಯ ಹೆದ್ದಾರಿ 17ರ ಮೇಲೆ ಬಿದ್ದಿದ್ದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.ಗುಡ್ಡದಿಂದ ಪ್ರತ್ಯೇಕಗೊಂಡ ಬಂಡೆಗಳು ಮಳೆ ನೀರಿನ ರಭಸಕ್ಕೆ ಸಡಿಲಗೊಂಡು ಕೆಳಗೆ ಬಿದ್ದಿವೆ. ವಿಷಯ ತಿಳಿದ ಅಗ್ನಿಶಾಮಕ ದಳ ಹಾಗೂ ಚಿತ್ತಾಕುಲ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಹೆದ್ದಾರಿಯಲ್ಲಿ ಬಿದ್ದಿದ್ದ ಕಲ್ಲುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.ಗುಡ್ಡ ಮೇಲ್ಭಾಗದಲ್ಲಿ ಸುಮಾರು ನೂರರಿಂದ ಇನ್ನೂರು ಸಣ್ಣಗಾತ್ರ ಬಂಡೆಗಳು ಬೀಳುವ ಹಂತದಲ್ಲಿದ್ದು, ಸಂಜೆ ಕಾರ್ಯಾಚರಣೆ ಕೈಗೊಂಡ ಅಗ್ನಿಶಾಮಕ ಸಿಬ್ಬಂದಿ ಸುಮಾರು ಅರ್ಧಗಂಟೆಗಳ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಆ ಬಂಡೆಗಳನ್ನು ತೆರವುಗೊಳಿಸಿದರು.ಮೀನುಗಾರಿಕೆ ಸ್ಥಗಿತ: ಮಳೆಯೊಂದಿಗೆ ಆಗಾಗ ಗಾಳಿಯೂ ಬೀಸುತ್ತಿದ್ದರಿಂದ ಜಿಲ್ಲೆಯಲ್ಲಿ ಮೀನುಗಾರಿಕೆ ವಹಿವಾಟು ಸ್ಥಗಿತಗೊಂಡಿತ್ತು. ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ ದೋಣಿಗಳು ಮೀನುಗಾರಿಕೆಗೆ ಸಾಧ್ಯವಾಗದೆ ದಡ ಸೇರಿದವು.

ಅವ್ಯವಸ್ಥೆ ಅನಾವರಣಜಿಲ್ಲೆಯ ಕರಾವಳಿ ಮತ್ತು ಘಟ್ಟದ ಮೇಲಿನ ಕೆಲವು ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯೊಂದಿಗೆ ಆಗಾಗ ಗಾಳಿಯೂ ಬೀಸುತ್ತಿದ್ದರಿಂದ ಅಲ್ಲಲ್ಲಿ ಮರದ ಟೊಂಗೆಗಳು ಮುರಿದು ಬಿದ್ದಿವೆ. ಆದರೆ, ಆಸ್ತಿಪಾಸ್ತಿ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ.

ಬೆಳಿಗ್ಗೆ ಒಂದೆರಡು ಗಂಟೆಗಳ ಕಾಲ ಬಿರುಸಿನಿಂದ ಮಳೆಯಾಗಿದ್ದರಿಂದ ನಗರದ ಅವ್ಯವಸ್ಥೆಗಳು ಅನಾವರಣಗೊಂಡಿತು. ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂತು.ಮಳೆಗಾಲ ಪ್ರಾರಂಭವಾಗಿದ್ದರೂ ನಗರದ ಗಟಾರುಗಳಲ್ಲಿ ಹೂಳು ತೆಗೆಯುವ ಕಾರ್ಯ ಪೂರ್ಣಗೊಳ್ಳದೆ ಇರುವುದರಿಂದ ನೀರು ಗಟಾರುಗಳಲ್ಲಿ ತುಂಬಿ ಹರಿಯದೆ ರಸ್ತೆಯ ಮೇಲೆ ನಿಂತಿತು. ನಗರದ ಕೋಡಿಬಾಗ, ತೇಲಂಗ ರಸ್ತೆ, ಮಹಾತ್ಮಗಾಂಧಿ ರಸ್ತೆ, ನೂನಾ ಮಾಸ್ತರ ಗಲ್ಲಿ ಹಾಗೂ ಕಾರವಾರ- ಕೋಡಿಬಾಗ ಮುಖ್ಯರಸ್ತೆಯಲ್ಲಿ ಸಾಯಿಕಟ್ಟಾ ಕ್ರಾಸ್ ಸಮೀಪ ಮಳೆ ನೀರು ರಸ್ತೆ ಮೇಲೆ ನಿಂತಿದ್ದರಿಂದ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸಿದರು.ನಗರದ ಕೋಡಿಬಾಗ ಮುಖ್ಯರಸ್ತೆಯಲ್ಲಿ ಕಾಜುಬಾಗ ಮತ್ತು ಸಾಯಿಕಟ್ಟಾ ಕ್ರಾಸ್ ಬಳಿ ಕಳೆದ ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಳ್ಳದೇ ಇರುವ ಬಗ್ಗೆ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.