ಸೋಮವಾರ, ಮೇ 10, 2021
21 °C

ಬಿರು ಬೇಸಿಗೆ: ಹಣ್ಣಿನ ಬೆಲೆ ಆಕಾಶಕ್ಕೆ

ಪ್ರಜಾವಾಣಿ ವಾರ್ತೆ/ ಕೆ.ಎನ್.ನಾಗಸುಂದ್ರಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ಬಿರು ಬೇಸಿಗೆ ಬಿಸಿಲು ಅಪ್ಪಳಿಸುತ್ತಿದೆ. ಧರೆಯೇ ಹೊತ್ತಿ ಉರಿಯುವಂತೆ ಭಾಸವಾಗುತ್ತಿದೆ. ಬೇಸಿಗೆಯ ಪ್ರತಾಪಕ್ಕೆ ನಗರದಲ್ಲಿ ಹಣ್ಣುಗಳ ಬೆಲೆ ಸಹ ಗಗನ ಮುಖಿಯಾಗಿದೆ. ಅದರಲ್ಲಿಯೂ ಪಾನೀಯಗಳಿಗೆ ಬಳಸುವ ಹಣ್ಣುಗಳ ಬೆಲೆ ದಿನ ನಿತ್ಯ ಹೆಚ್ಚುತ್ತಿದೆ.ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ ಗರಿಷ್ಠ ಉಷ್ಣಾಂಶ 40 ಡಿ.ಸಿ. ತಲುಪಿತ್ತು. ಬಿಸಿಲ ಬೇಗೆ ತಾಳಲಾರದೆ ಜನತೆ ಹಣ್ಣು, ಮಜ್ಜಿಗೆ, ಎಳೆನೀರು ಮತ್ತು ಮಣ್ಣಿನ ಮಡಿಕೆ ಮೊರೆ ಹೋಗಿದ್ದಾರೆ. ಈಗಲಾದರೂ ಜೋರು ಮಳೆ ಬರಬಹುದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಜನತೆ.ಆದರೆ ಈ ಬೇಸಿಗೆ ಹಣ್ಣಿನ ವ್ಯಾಪಾರಿಗಳು, ಜ್ಯೂಸ್ ಅಂಗಡಿಗಳು, ಹಾಲು, ಮೊಸರು ಮತ್ತು ಎಳೆನೀರು ವ್ಯಾಪಾರಿಗಳಿಗೆ ಲಾಭದಾಯಕವಾಗಿದೆ. ಮಾರಾಟದ ಪ್ರಮಾಣ ಮತ್ತು ಬೆಲೆ ಎರಡೂ ದುಪ್ಪಟ್ಟಾಗಿದೆ. ಅಲ್ಲದೆ ರಾಮನವಮಿ ಪ್ರಯುಕ್ತ ಹಣ್ಣಿನ ಬೆಲೆ ಮತ್ತಷ್ಟು ಹೆಚ್ಚಿತ್ತು. ರಾಮನವಮಿ ಯಂದು ಎಲ್ಲೆಡೆ ಪಾನಕ ಹಂಚುವುದರಿಂದ ಕಲ್ಲಂಗಡಿ ಮತ್ತು ಕರಿಬುಜ ಹಣ್ಣಿಗೆ ತುಂಬಾ ಬೇಡಿಕೆ ಇತ್ತು.ಫೆಬ್ರುವರಿಯಲ್ಲಿ ಕಲ್ಲಂಗಡಿ ಕೆ.ಜಿ.ಗೆ ರೂ. 7ರಿಂದ 8 ಇತ್ತು. ಈಗ ರೂ. 15ಕ್ಕೆ ಹೆಚ್ಚಿದೆ. ಕರಬುಜ ರೂ. 15ರಿಂದ 25ಕ್ಕೆ ಹೆಚ್ಚಳವಾಗಿದೆ. ಅಲ್ಲದೆ ಇತರೆ ಹಣ್ಣುಗಳ ಬೆಲೆಯೂ ಹೆಚ್ಚಳ ವಾಗಿದೆ. ಜ್ಯೂಸ್ ಅಂಗಡಿಗಳಲ್ಲಿ ರೂ. 15ರಿಂದ 25ಕ್ಕೆ ಗ್ಲಾಸ್ ಜ್ಯೂಸ್ ಮಾರಾಟ ಮಾಡಲಾಗುತ್ತಿದೆ. ಕಬ್ಬಿನ ಹಾಲನ್ನು ರೂ. 10ಕ್ಕೆ ಮಾರಲಾಗುತ್ತಿದೆ. ಎಳೆನೀರು ರೂ. 15ಕ್ಕೆ ಮಾರಾಟವಾಗುತ್ತಿದೆ.ಜಿಲ್ಲೆಯಲ್ಲಿ ಎಲ್ಲಿಯೂ ಕಲ್ಲಂಗಡಿ, ಕರಬುಜ ಸೇರಿದಂತೆ ಹಣ್ಣುಗಳನ್ನು ಬೆಳೆಯುವುದಿಲ್ಲ. ಈ ಹಣ್ಣುಗಳೆಲ್ಲ ಆಂಧ್ರಪ್ರದೇಶದಿಂದ ಬರುತ್ತವೆ. ಆಂಧ್ರದಿಂದ ತರುವುದಕ್ಕೆ ಸಾಗಾಣಿಕೆ ವೆಚ್ಚ ಸೇರು ವುದರಿಂದ ಬೆಲೆಯೂ ಹೆಚ್ಚು.ಅಲ್ಲದೆ ಸಗಟು ವ್ಯಾಪಾರಿಗಳಿಂದ ಚಿಲ್ಲರೆ ವ್ಯಾಪಾರಕ್ಕೆ ತಲುಪುವ ವೇಳೆಗೆ ಬೆಲೆ ನಾಲ್ಕು ಪಟ್ಟು ಹೆಚ್ಚಳವಾಗುತ್ತದೆ. ಹೀಗಾಗಿ ಈ ಹಣ್ಣುಗಳನ್ನು ಪ್ರತಿನಿತ್ಯ ಬಳಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ.ತುಮಕೂರು ಸುತ್ತಮುತ್ತ ಇನ್ನೂ ಹಲಸಿನ ಹಣ್ಣು ಬಂದಿಲ್ಲ. ಆದರೆ ಆಂಧ್ರಪ್ರದೇಶದ ಹಣ್ಣು ಈಗಾಗಲೇ ಮಾರುಕಟ್ಟೆಗೆ ಬಂದಿದೆ. ಉತ್ತಮವಾದ ಹಣ್ಣಿಗೆ ರೂ. 100ಕ್ಕೂ ಹೆಚ್ಚು ಬೆಲೆ. ಹೀಗಾಗಿ ತೊಳೆ ಲೆಕ್ಕದ ಬೆಲೆಯಲ್ಲಿ ಸಹ ಹೆಚ್ಚಳವಾಗಿದೆ.

 

ಒಂದು ಹಲಸಿನ ತೊಳೆಗೆ 3ರಿಂದ 4 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಪ್ರತಿ ವರ್ಷ ರಾಜಸ್ಥಾನದ ವ್ಯಾಪಾರಿಗಳು ಆಧುನಿಕ ಶೈಲಿಯ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಇದರಲ್ಲಿ ನಳ ಸಹ ಅಳವಡಿಸಿ ಕೊಡುತ್ತಿದ್ದರು. ಇದನ್ನು ಗಾತ್ರದ ಆಧಾರದಲ್ಲಿ ರೂ. 100ರಿಂದ 200ಕ್ಕೆ ಮಾರಾಟ ಮಾಡುತ್ತಿದ್ದರು.

 

ಆದರೆ ಈ ವರ್ಷ ಹೊರ ರಾಜ್ಯದ ಮಡಿಕೆಗಳು ನಗರಕ್ಕೆ ಬಂದಿಲ್ಲ. ಹೀಗಾಗಿ ಸ್ಥಳೀಯ ಹಳೆಯ ಶೈಲಿ ಮಡಿಕೆಗಳ ಮಾರಾಟದಲ್ಲಿ ಹೆಚ್ಚಳ ಕಂಡಿದೆ ಎನ್ನುತ್ತಾರೆ ವ್ಯಾಪಾರಿಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.