ಸೋಮವಾರ, ಮೇ 17, 2021
22 °C

ಬಿಸಿನೀರಿನ ಬುಗ್ಗೆಯ ತಪ್ತಪಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಟ್ಟ ಕಾಡು. ಸಾಗುತ್ತಾ ಹೋದಂತೆ ಎದುರಾಗುವ ಬುಡಕಟ್ಟು ಜನರು. ಅವರ ವಿಶಿಷ್ಟವಾದ ಉಡುಗೆ- ತೊಡುಗೆ. ಇಂಥ ದೃಶ್ಯ ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತದೆ ಒಡಿಶಾದ ತಪ್ತಪಾನಿ ಗಿರಿಧಾಮದಲ್ಲಿ.

ತಪ್ತಪಾನಿ ಎಂದರೆ ಬಿಸಿನೀರು ಎಂದರ್ಥ.

ಕಾಡಿನ ನಡುವೆ ಇರುವ ಕಂಡಿಮಾತಾ ಮಂದಿರದ ಬಳಿ ಬಿಸಿನೀರಿನ ಬುಗ್ಗೆ (ಗಂಧಕದ ನೀರು) ಇರುವುದರಿಂದ ಈ ಪ್ರದೇಶಕ್ಕೆ ಆ ಹೆಸರು. ಈ ನೀರಿನಲ್ಲಿ ಸ್ನಾನ ಮಾಡಿದರೆ ಆರೋಗ್ಯಕ್ಕೆ ಹಿತಕರ ಎಂದು ಹೇಳಿಕೊಂಡು ಸಾಕಷ್ಟು ಸ್ಪಾಗಳು ಇಲ್ಲಿ ತಲೆ ಎತ್ತಿವೆ.

ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಗೆ ಸೇರಿದ ತಪ್ತಪಾನಿ ಗಿರಿಧಾಮ ಹಸಿರು ಬೆಟ್ಟಗಳಿಂದ ಆವೃತವಾಗಿದೆ. ವರ್ಷದ ಎಲ್ಲ ಕಾಲದಲ್ಲಿಯೂ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಸಮುದ್ರ ಮಟ್ಟದಿಂದ 550 ಮೀಟರ್ ಎತ್ತರದಲ್ಲಿ ಇರುವ ಈ ಜಾಗದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಅದರಲ್ಲೂ ಪೂರ್ಣಚಂದ್ರ ಇರುವ ಪೌರ್ಣಿಮೆ ರಾತ್ರಿಗಳಲ್ಲಂತೂ ಈ ಗಿರಿಧಾಮದ ಅಂದ ಇಮ್ಮಡಿಸಿರುತ್ತದೆ. ಸಾಮಾನ್ಯವಾಗಿ ಪ್ರವಾಸಿಗರು ಹುಣ್ಣಿಮೆ ದಿನಗಳನ್ನು ಗೊತ್ತುಮಾಡಿಕೊಂಡು ಇಲ್ಲಿನ ವಸತಿಗೃಹಗಳಲ್ಲಿ ಬೀಡುಬಿಡುತ್ತಾರೆ.

ಗಿರಿಧಾಮವನ್ನು ಸುತ್ತುವಾಗ ಬುಡಕಟ್ಟು ಜನರು ಕಣ್ಣಿಗೆ ಬೀಳದೇ ಇರರು. ಅವರ ವಿಶಿಷ್ಟ ಉಡುಗೆಗಳು ಮನಸೂರೆಗೊಳ್ಳುತ್ತವೆ. ಭಾರವಾದ ಉಡುಪುಗಳನ್ನು ತೊಟ್ಟು ನಗೆ ಅರಳಿಸುವ ಮಕ್ಕಳು, ರವಿಕೆ ತೊಡದೇ ವಿಶಿಷ್ಟ ವಿನ್ಯಾಸದಲ್ಲಿ ಸೀರೆಯುಡುವ ಲಲನೆಯರು, ಕಣ್ಣಿನ ಸುತ್ತ ಸುಕ್ಕು ಬರಿಸಿಕೊಂಡು ಕುಳಿತ ಅಜ್ಜಂದಿರು- ಹೀಗೆ, ಭಿನ್ನ ಬದುಕಿನ ಬುಡಕಟ್ಟು ಮಂದಿ ಅಲ್ಲಿದ್ದಾರೆ. ಅವರ ಬಗ್ಗೆ ಅಧ್ಯಯನ ಮಾಡಲು ಬರುವ ಒಡಿಶಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಅಲ್ಲಿ ಕಾಣಸಿಗುತ್ತಾರೆ. ಗಿರಿಧಾಮದ ಸಮೀಪವೇ ಒಡಿಶಾದ ಖ್ಯಾತ ಗೋಪಾಲಪುರ ಸಮುದ್ರ ತೀರ ಇದೆ.

ಬ್ರಹ್ಮಪುತ್ರ ರೈಲ್ವೆ ನಿಲ್ದಾಣದಿಂದ 56 ಕಿಮೀ ಮತ್ತು ಗೋಪಾಲಪುರದಿಂದ 60 ಕಿಮೀ ದೂರದಲ್ಲಿ ಇರುವ ಈ ಸುಂದರ ಗಿರಿಧಾಮಕ್ಕೆ ಬರುವ ಜನ ಅದಕ್ಕೆ 35 ಕಿಮೀ ದೂರದಲ್ಲಿ ಇರುವ ಟಿಬೆಟಿಯನ್ ಗ್ರಾಮ ಚಂದ್ರಗಿರಿಯನ್ನು ನೋಡಿ ಹೋಗಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.