ಭಾನುವಾರ, ಜೂನ್ 7, 2020
24 °C

ಬಿಸಿಲಿದು ಬರಿ ಬಿಸಿಲಲ್ಲವೊ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ದೇವಭಾಗ್

ಉಸುಕು ಮತ್ತು ಕಡಲಿನ ಸಲ್ಲಾಪವನ್ನು ನೋಡಬೇಕೆ? ಕಾರವಾರದ ದೇವಭಾಗ್ ಬೀಚ್‌ಗೆ ಬನ್ನಿ. ಇದು ಪ್ರಕೃತಿ ಬಿಡಿಸಿದ ಅದ್ಭುತ ಕಲಾಕೃತಿ. ಕವಿ ರವೀಂದ್ರನಾಥ ಟ್ಯಾಗೋರ್ ಹಾಡಿ ಹೊಗಳಿದ ತಾಣವಿದು. ಮರಳ ದಂಡೆಯನ್ನು ಅಪ್ಪಿಕೊಳ್ಳು ಓಡಿ ಬರುವ ಅಲೆಗಳನ್ನು ನೋಡುತ್ತಿದ್ದರೆ, ಬೇಸಿಗೆಯ ರಜೆಯನ್ನು ಸಾರ್ಥಕವಾಗಿ ಕಳೆದ ನೆಮ್ಮದಿ ನೀಡುವುದು ಖಂಡಿತಾ. ಅಲ್ಲಿನ ಮೀನುಗಾರರೊಟ್ಟಿಗೆ ಮೀನು ಹಿಡಿಯುವ ಸಾಹಸಕ್ಕೂ ಮುಂದಾಗಬಹುದು. ಡಾಲ್ಫಿನ್‌ಗಳ ಆಟ ಮುದ ನೀಡುತ್ತದೆ. ಕುಮಾರಗಡ, ಓಯ್‌ಸ್ಟರ್ ರಾಕ್, ಅಂಜುದೀಪ್ ಮತ್ತು ಸನ್ಯಾಸಿ ಇಲ್ಲಿಂದ ಕಣ್ಣಳತೆಯಲ್ಲಿ ಕಾಣುವ ನಾಲ್ಕು ದ್ವೀಪಗಳು. ಗೋವಾ ಇಲ್ಲಿಂದ ಎರಡೇ ಗಂಟೆಯ ಪಯಣದ ದೂರ.

ಎಷ್ಟು ದೂರ: ಮಂಗಳೂರಿನಿಂದ ದೇವಭಾಗ್‌ಗೆ 271 ಕಿ.ಮೀ., ಬೆಂಗಳೂರಿನಿಂದ 533 ಕಿ.ಮೀ. ಕಾರವಾರದಿಂದ 4 ಕಿ.ಮೀ.

******

ಮುರ್ಡೇಶ್ವರ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನಲ್ಲಿರುವ ಮುರ್ಡೇಶ್ವರ ಧಾರ್ಮಿಕ ಕಾರಣ ಹಾಗೂ ಕಡಲ ತೀರದ ಸೌಂದರ್ಯಕ್ಕೆ ಹೆಸರುವಾಸಿ. ಅರೇಬಿಯನ್ ಸಮುದ್ರದ ತೀರದಲ್ಲಿ ಮಲಗಿರುವ ಮುರ್ಡೇಶ್ವರ ವಿಶ್ವದ ಎರಡನೇ ಅತಿ ಎತ್ತರದ (123 ಅಡಿ) ಶಿವನ ವಿಗ್ರಹದ ಖ್ಯಾತಿ ಹೊಂದಿದೆ. ಭವ್ಯ ದೇವಸ್ಥಾನದ ಸೌಂದರ್ಯವನ್ನು ಸವಿಯುವುದೇ ಸೊಗಸು. ಆಸ್ತಿಕರಿಗೆ ದೇವಾಲಯವಾದರೆ, ಸುತ್ತಾಟ ಬಯಸುವವರಿಗೆ ಹಲವು ತಾಣಗಳುಂಟು. ಮುರ್ಡೇಶ್ವರ ಕೋಟೆ ಹೆಸರಾಂತ ಪ್ರವಾಸಿ ತಾಣ. ಯಾಣ, ಭೈರವೇಶ್ವರ ಶಿಖರ, ಮೋಹಿನಿ ಶಿಖರಗಳಂತ ಚಾರಣ ಪ್ರದೇಶಗಳು ಮುರ್ಡೇಶ್ವರಕ್ಕೆ ಸನಿಹ, ಎಷ್ಟು ದೂರ: ಮಂಗಳೂರಿನಿಂದ 165 ಕಿ.ಮೀ.

*****

ಕೊಡಚಾದ್ರಿ

ಬಿಸಿಲ ಧಗೆಯೇ ಸುಳ್ಳು ಎನಿಸುವಂತೆ ಮಾಡುವ ಸ್ಥಳ ಕೊಡಚಾದ್ರಿ. ಕೇರಳದ ಮುನ್ನಾರ್ ಪ್ರದೇಶವನ್ನು ನೆನಪಿಸುವ ಕೊಡಚಾದ್ರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ. ಇದು ಪಶ್ಚಿಮಘಟ್ಟ ಸಾಲಿನ ಮತ್ತೊಂದು ಸುಂದರ ಮುಕುಟ. ಚಾರಣಪ್ರಿಯರು ರಜೆಯ ಮೋಜು ಅನುಭವಿಸಲು ಹೇಳಿ ಮಾಡಿಸಿದ ಜಾಗವಿದು. ರಮಣೀಯ ಪ್ರಾಕೃತಿಕ ಸೌಂದರ್ಯ ಮಾತ್ರವಲ್ಲ ಐತಿಹಾಸಿಕ, ಧಾರ್ಮಿಕ ಕಾರಣಗಳಿಂದಲೂ ಕೊಡಚಾದ್ರಿಗೆ ಮಹತ್ವದ ಸ್ಥಾನ. ಬೆಟ್ಟದ ತುದಿಯಲ್ಲಿರುವ ಸರ್ವಜ್ಞಪೀಠ, ಗಣೇಶ ಗುಹೆ, 40 ಅಡಿ ಎತ್ತರದ ಕಬ್ಬಿಣದ ಸ್ತಂಭ, ಹಿಡ್ಲುಮನೆ ಜಲಪಾತ, ಅರಸಿನಗುಂಡಿ ಜಲಪಾತ, ಬೆಲಕಲ್ಲು ಜಲಪಾತ, ಕೊಲ್ಲೂರು, ನಗರ ಕೋಟೆ... ಒಂದೇ ಎರಡೇ ಕೊಡಚಾದ್ರಿಯ ಸುತ್ತಲಿನ ಭವ್ಯ ತಾಣಗಳು.  ಎಷ್ಟು ದೂರ: ಬೆಂಗಳೂರಿನಿಂದ 388 ಕಿ.ಮೀ. ಶಿವಮೊಗ್ಗದಿಂದ ಸುಮಾರು 115 ಕಿ.ಮೀ, ಕೊಲ್ಲೂರಿನಿಂದ 21 ಕಿ.ಮೀ, ಮಂಗಳೂರಿನಿಂದ 165 ಕಿ.ಮೀ, ತೀರ್ಥಹಳ್ಳಿಯಿಂದ 68 ಕಿ.ಮೀ.

*******

ಕೆಮ್ಮಣ್ಣುಗುಂಡಿ

ದೀರ್ಘಾವಧಿ ರಜೆಯನ್ನು ಪ್ರಕೃತಿಯ ಮಡಿಲಲ್ಲೇ ಕಳೆಯಬೇಕೆಂದರೆ ಕೆಮ್ಮಣ್ಣುಗುಂಡಿ ಪ್ರಶಸ್ತ ಸ್ಥಳ. ಸಮುದ್ರಮಟ್ಟಕ್ಕಿಂತ 1434 ಅಡಿ ಎತ್ತರದಲ್ಲಿರುವ ಕೆಮ್ಮಣ್ಣುಗುಂಡಿಯ ಸೊಬಗು ವರ್ಣನಾತೀತ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿದೆ ಕೆಮ್ಮಣ್ಣುಗುಂಡಿ. ಇಲ್ಲಿನ `ಝೆಡ್ ಪಾಯಿಂಟ್'ನಲ್ಲಿ ನಿಂತರೆ ಪಶ್ಚಿಮಘಟ್ಟದ ಬೆಟ್ಟಸಾಲಿನ ವೈಭವ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ರೋಸ್ ಗಾರ್ಡನ್, ಹೆಬ್ಬೆ ಜಲಪಾತ, ಕಲ್ಹತ್ತಿ ಜಲಪಾತ, ಮುಳ್ಳಯ್ಯನ ಗಿರಿ ಜೊತೆ ಜೊತೆಗೆ ಇಲ್ಲಿ ಮುದ ನೀಡುವ ತಾಣಗಳು ಹಲವು. ಎಷ್ಟು ದೂರ: ಚಿಕ್ಕಮಗಳೂರಿನಿಂದ ಕೆಮ್ಮಣ್ಣುಗುಂಡಿಗೆ 53 ಕಿ.ಮೀ. ಬೆಂಗಳೂರಿನಿಂದ 251.9 ಕಿ.ಮೀ. ಮಂಗಳೂರಿನಿಂದ 150 ಕಿ.ಮೀ.

******

ಕುದುರೆಮುಖ

ಬೆಟ್ಟಗುಡ್ಡಗಳಿಂದ ಸುತ್ತುವರಿದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ನಿಸರ್ಗದ ಚೆಲುವನ್ನು ಹೊದ್ದುಕೊಂಡು ಮಲಗಿದೆ. ಕಣ್ಣುಹಾಯಿಸಿದಲ್ಲೆಲ್ಲಾ ಹಸಿರ ರಾಶಿ ಪ್ರಕೃತಿಯ ವೈಭವವನ್ನು ಸಾರುವಂತಿವೆ. ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳ ಉಗಮತಾಣವಿದು. ಕುದುರೆಮುಖ ರಾಷ್ಟ್ರೀಯ ಉದ್ಯಾನ ಪಶ್ಚಿಮಘಟ್ಟದ ಎರಡನೇ ಅತಿದೊಡ್ಡ ವನ್ಯಜೀವಿ ರಕ್ಷಿತ ಪ್ರದೇಶ. ಗಿರಿ ಕಂದರ, ಜಲಪಾತಗಳ ಕುದುರೆಮುಖ ಭೇಟಿ ನೀಡಲೇಕಾದ ಪ್ರವಾಸಿ ತಾಣಗಳಲ್ಲೊಂದು. ಎಷ್ಟು ದೂರ: ಮಂಗಳೂರಿನಿಂದ 100 ಕಿ.ಮೀ., ಶಿವಮೊಗ್ಗದಿಂದ 130 ಕಿ.ಮೀ.

******

ಕಬಿನಿ ಹಿನ್ನೀರು

ಹೆಗ್ಗಡದೇವನ ಕೋಟೆ ತಾಲ್ಲೂಕಿನ ಸರ್ಗೂರಿನ ಸಮೀಪವಿದೆ ಕಬಿನಿ ಜಲಾಶಯ. ಇದು ರಾಜ್ಯದ ಅತ್ಯಂತ ಜನಪ್ರಿಯ ವನ್ಯಜೀವಿ ತಾಣಗಳಲ್ಲೊಂದು. ಇದನ್ನು ತಲುಪುವ ಮಾರ್ಗ ಸುಲಭವಾಗಿರುವುದರಿಂದಲೂ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚು. ನೀರಿನಿಂದ ಸುತ್ತುವರೆದ ಹಸಿರು ಹುಲ್ಲುಗಾವಲು, ನೀರಿನಲ್ಲಿ ಚೆಲ್ಲಾಟವಾಡುವ ಆನೆಗಳ ಹಿಂಡು ಮುದ ನೀಡುತ್ತವೆ. ಸುಮಾರು 55 ಎಕರೆ ಹರಡಿರುವ ಅರಣ್ಯ, ಕಡಿದಾದ ಕಣಿವೆಗಳು ಮತ್ತು ನೀರ ಹರಿವಿನ ನಡುವೆ ಹುದುಗಿದೆ ನಾಗರಹೊಳೆ ಅಭಯಾರಣ್ಯದ ಸಂಪತ್ತು. ಬನಾಸುರ ಸಾಗರ ಅಣೆಕಟ್ಟು, ಇರ್ಪು ಜಲಪಾತ, ರಾಮೇಶ್ವರ ದೇವಸ್ಥಾನ, ಬ್ರಹ್ಮಗಿರಿ ವನ್ಯಧಾಮ ಸುತ್ತಮುತ್ತಲಿನ ಭೇಟಿ ನೀಡಲೇಬೇಕಾದ ತಾಣಗಳು. ಎಷ್ಟು ದೂರ: ಮೈಸೂರಿನಿಂದ 80 ಕಿ.ಮೀ, ಬೆಂಗಳೂರಿನಿಂದ 205 ಕಿ.ಮೀ.

******

ಬಿಳಿಗಿರಿರಂಗನ ಬೆಟ್ಟ

ತಮಿಳುನಾಡು - ಕರ್ನಾಟಕ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಬಿಳಿಗಿರಿರಂಗನ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ಧ ವಿಹಾರ ತಾಣಗಳಲ್ಲೊಂದು. ಪಶ್ಚಿಮಘಟ್ಟದ ಅಂಚಿನಲ್ಲಿ ತಲೆ ಎತ್ತಿರುವ ಬೆಟ್ಟಗಳು ದಟ್ಟಾರಣ್ಯದಿಂದ ಆವೃತ. 539.52 ಚದರ ಕಿ.ಮೀ. ಹರಡಿರುವ ವನ್ಯಜೀವಿ ಅಭಯಾರಣ್ಯದ ನಡುವಿನ ರಂಗಸ್ವಾಮಿ ದೇವಸ್ಥಾನ ಮತ್ತೊಂದು ಆಕರ್ಷಣೆ. ದೊಡ್ಡಸಂಪಿಗೆಯ ಚಾರಣ ರೋಮಾಂಚನಕಾರಿ ಅನುಭವ ನೀಡುತ್ತದೆ. ಸಂಜೀವಿನಿ ಪರ್ವತವೇ ಮೈದಾಳಿದೆ ಎನ್ನುವಂಥ ಅಪರೂಪದ ಸಸ್ಯವೈವಿಧ್ಯ ಇಲ್ಲಿದೆ. ಹುಲಿ, ಸೀಳು ನಾಯಿ, ಆನೆ, ಚಿರತೆ, ಕರಡಿ ಮುಂತಾದ ಪ್ರಾಣಿಗಳ ವಾಸಸ್ಥಾನ ಈ ಅರಣ್ಯ. ಎಷ್ಟು ದೂರ: ಚಾಮರಾಜನಗರ ರೈಲ್ವೆ ನಿಲ್ದಾಣದಿಂದ 40 ಕಿ.ಮೀ. ಬೆಂಗಳೂರಿನಿಂದ ಸುಮಾರು 247 ಕಿ.ಮೀ. ಮೈಸೂರಿನಿಂದ 120 ಕಿ.ಮೀ.

******

ದಾಂಡೇಲಿ

ಪ್ರಕೃತಿ ಪ್ರಿಯರಿಗೆ, ಸಾಹಸ ಮನೋವೃತ್ತಿಯವರಿಗೆ ಮತ್ತು ಮಕ್ಕಳಿಗೆ, ಎಲ್ಲರಿಗೂ ಇಷ್ಟವಾಗುವ ಸ್ಥಳ ದಾಂಡೇಲಿ. ಕರ್ನಾಟಕದ ಎರಡನೇ ದೊಡ್ಡ ವನ್ಯಜೀವಿ ಅಭಯಾರಣ್ಯವಾದ ದಾಂಡೇಲಿ, ವೈವಿಧ್ಯಮಯ ಪ್ರಾಣಿ ಸಂಪತ್ತಿನಿಂದಾಗಿ ಹೆಚ್ಚು ಜನಪ್ರಿಯ. ಪಕ್ಷಿ ವೀಕ್ಷಣೆ, ದೋಣಿ ವಿಹಾರಗಳು, ಗುಹೆಗಳು, ದೇವಸ್ಥಾನಗಳು ಇಲ್ಲಿನ ಪ್ರಮುಖ ಆಕರ್ಷಣೆ. ಚಾರಣ, ಸೈಕ್ಲಿಂಗ್, ಮೌಂಟೆನ್ ಬೈಕಿಂಗ್ ರೋಚಕ ಅನುಭವ ನೀಡುತ್ತವೆ. ಉಳವಿ, ಸಿಂಥೇರಿ ರಾಕ್ಸ್, ಸೂಪಾ ಅಣೆಕಟ್ಟು, ಅನಶಿ ರಾಷ್ಟ್ರೀಯ ಉದ್ಯಾನ, ಮೌಲಂಗಿ ದಾಂಡೇಲಿ ಸುತ್ತಲಿನ ಪ್ರೇಕ್ಷಣೀಯ ತಾಣಗಳು. ರಾತ್ರಿ ಕ್ಯಾಂಪ್‌ಗಳ ಮಜವನ್ನಂತೂ ಅನುಭವಿಸಿದವರೇ ಬಲ್ಲರು. ಎಷ್ಟು ದೂರ: ಧಾರವಾಡದಿಂದ 57 ಕಿ.ಮೀ, ಹುಬ್ಬಳ್ಳಿಯಿಂದ 75 ಕಿ.ಮೀ, ಬೆಳಗಾವಿಯಿಂದ 110 ಕಿ.ಮೀ, ಕಾರವಾರದಿಂದ 117 ಕಿ.ಮೀ. ಬೆಂಗಳೂರಿನಿಂದ 481 ಕಿ.ಮೀ.

******

ಭೀಮೇಶ್ವರಿ

ಗಗನಚುಕ್ಕಿ, ಭರಚುಕ್ಕಿ, ಮೇಕೆದಾಟುಗಳಂಥ ಸುಂದರಿಯರ ನಡುವೆ ಕಂಗೊಳಿಸುತ್ತಿರುವಾಕೆ ಭೀಮೇಶ್ವರಿ. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ತೀರದಲ್ಲಿ ಹಬ್ಬಿಕೊಂಡಿರುವ ಭೀಮೇಶ್ವರಿ ವನ್ಯಜೀವಿ ಅಭಯಾರಣ್ಯ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಪ್ರವಾಸ ಕೈಗೊಳ್ಳಲು ಪ್ರಶಸ್ತ ಜಾಗ. ನಿಸರ್ಗದ ಸೊಬಗಿನ ಜೊತೆಗೆ ಇಲ್ಲಿ ನೆಲೆಸಿರುವ ವೈವಿಧ್ಯಮಯ ಪ್ರಾಣಿ ಪಕ್ಷಿಗಳ ದಂಡು ಇಲ್ಲಿನ ಭೇಟಿಯ ನೆನಪನ್ನು ನೋಡುಗರ ಮನದಲ್ಲಿ ಹಸಿರಾಗಿ ಉಳಿಸುತ್ತವೆ. ಮೈನವಿರೇಳಿಸುವ ಸಾಹಸ ಚಟುವಟಿಕೆಗಳಿಗೂ ಇಲ್ಲಿದೆ ಅವಕಾಶ. ಎಷ್ಟು ದೂರ: ಬೆಂಗಳೂರು ನಗರದಿಂದ ಕೇವಲ 100 ಕಿ.ಮೀ. ದೂರದಲ್ಲಿದೆ ಭೀಮೇಶ್ವರಿ. ಮಂಗಳೂರಿನಿಂದ 344 ಕಿ.ಮೀ. ಪಯಣ.

******

ಹೊನ್ನೆಮರಡು

ಹೊನ್ನೆಮರಡು ಶರಾವತಿ ನದಿಯ ಹಿನ್ನೀರಿನಲ್ಲಿ ಮೂಡಿರುವ ಪ್ರವಾಸಿತಾಣ. ಶಿವಮೊಗ್ಗ ಜಿಲ್ಲೆಯಲ್ಲಿರುವ ಹೊನ್ನೆಮರಡು ಪುಟ್ಟ ಹಳ್ಳಿ. ಹಿನ್ನೀರ ನಡುವಿನಲ್ಲಿರುವ ಸಣ್ಣ ದ್ವೀಪ ಪ್ರಮುಖ ಆಕರ್ಷಣೆ. ಕ್ಯಾಂಪ್ ಹಾಕುವ ಖಯಾಲಿ ಉಳ್ಳವರಿಗಂತೂ ಹೊನ್ನೆಮರಡು ಸ್ಮರಣೀಯ ಅನುಭವ ನೀಡುತ್ತದೆ. ಹಿನ್ನೀರ ಮೇಲೆ ತೆಪ್ಪದ ಪಯಣ ಮತ್ತೊಂದು ಸೊಬಗು. ಸಾಹಸ ಕ್ರೀಡೆಗಳಿಗೂ ಇದು ಹೆಸರುವಾಸಿ. ಪಕ್ಷಿ ವೀಕ್ಷಕರ ಪಾಲಿನ ಸ್ವರ್ಗವೂ ಹೌದು. ಸೂರ್ಯಾಸ್ತ ಮತ್ತು ಸೂರ್ಯೋದಯದ ರಮಣೀಯ ದೃಶ್ಯ ಸವಿಯಬಹುದು. ನಗರಪ್ರದೇಶದಿಂದ ದೂರವಿರುವ ಈ ಊರಿನಲ್ಲಿನ ಕಾಡಿನ ಒಳಹೊಕ್ಕರೆ ಹೊರಜಗತ್ತನ್ನು ಮರೆಸುವ ಶಕ್ತಿ ಇದೆ. ಜೋಗ ಜಲಪಾತ, ದಬ್ಬೆ ಜಲಪಾತಗಳು ಸಮೀಪದಲ್ಲೇ ಇವೆ. ಎಷ್ಟು ದೂರ: ಸಾಗರದಿಂದ 15 ಕಿ.ಮೀ. ತಾಳಗುಪ್ಪದಿಂದ 12 ಕಿ.ಮೀ, ಬೆಂಗಳೂರಿನಿಂದ 392 ಕಿ.ಮೀ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.