ಗುರುವಾರ , ಮೇ 28, 2020
27 °C

ಬಿಸಿಲುಮಾರಮ್ಮನ ವನಭೋಜನ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ದೇಸಿ ಸೊಗಡು, ಸಾಂಪ್ರದಾಯಿಕ ಆಚರಣೆಗಳು, ಸಂಸ್ಕೃತಿ ಹಾಗೂ ಐತಿಹಾಸಿಕ ಹಿನ್ನಲೆಯಿರು ಮಾಡಿಯಲ್ಲಿ ಒಂದಲ್ಲ ಒಂದು ಉತ್ಸವಗಳು ನಡೆಯುತ್ತಲೇ ಇರುತ್ತವೆ.

ಅಂಥ ಉತ್ಸವಗಳಲ್ಲಿ ತಿರುಮಲೆಯ ಬಿಸಿಲುಮಾರಮ್ಮನ ಉತ್ಸವವೂ ಒಂದು. ಈ ಉತ್ಸವದ ವಿಶೇಷ ‘ವನಭೋಜನ’. ಗ್ರಾಮದೇವತೆ ಬಿಸಿಲುಮಾರಮ್ಮ ಉತ್ಸವದ ಜೊತೆ ಶುಕ್ರವಾರ ವನಭೋಜನ ಉತ್ಸವವೂ ನಡೆಯಿತು. ಬಿಸಿಲುಮಾರಮ್ಮದೇವಿ ವನಭೋಜನ ಮಹೋತ್ಸವದಲ್ಲಿ ಗಟೆಪೂಜೆ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ, ಶ್ರೀಪಾದ ಕಾವಲುಗಾರ ನಾಗರಾಜು ಬಿಸಿಲುಮಾರಮ್ಮ ಗ್ರಾಮದ ಸರ್ವಾಂಗೀಣ ಚಲನಶೀಲತೆಯ ಸಂಕೇತ ಎಂದು ಹೇಳಿದರು.ನಮ್ಮಪೂರ್ವಿಕರು ಪಶು, ಪ್ರಾಣಿ, ಸಸ್ಯ ಸಂಕುಲಗಳಿಗೆ ಮತ್ತು ಮಾನವ ಸಂಕುಲಕ್ಕೆ ಒಳಿತಾಗಲೆಂದು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಸಿರು ಚಪ್ಪರ ಹಾಕಿ ಗ್ರಾಮ ದೇವತೆಯನ್ನು ಅಲಂಕರಿಸಿ ಗಟೆಪೂಜೆಯೊಂದಿಗೆ ಸರ್ವರ ಒಳಿತಿಗೆ ವನಭೋಜನ ಮಹೋತ್ಸವಗಳನ್ನು ನಡೆಸಿಕೊಂಡು ಬಂದರು ಎಂದು ಅವರು ವಿವರಿಸಿದರು. ಪುರಸಭೆಯ ಮಾಜಿ ಅಧ್ಯಕ್ಷ ರಂಗಹನುಮಯ್ಯ ಮಾತನಾಡಿ,  ಮುಂದಿನ ಪೀಳಿಗೆಗೆ ನಮ್ಮ ಪೂರ್ವಿಕರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದೇ ವನಭೋಜನ ಮಹೋತ್ಸವದ ಮೂಲ ಉದ್ದೇಶ ಎಂದು ತಿಳಿಸಿದರು. ಬಿಸಿಲು ಮಾರಮ್ಮದೇವಿ ಭಕ್ತರ ಬೇಡಿಕೆಗಳನ್ನು ಈಡೇರಿಸಿ ಸಕಲರಿಗೂ ಸನ್ಮಂಗಳವನ್ನುಂಟು ಮಾಡುವಳು ಎಂದು ಪ್ರಧಾನ ಅರ್ಚಕ ನಿಂಗಪ್ಪ ತಿಳಿಸಿದರು.ಪುರಸಭಾ ಸದಸ್ಯ ಟಿ.ಎಸ್.ಗಂಗಯ್ಯ, ಚಂದ್ರಶೇಖರ್, ಮಾಜಿ ಸದಸ್ಯರಾದ ಜಯಶ್ರೀದೇವಿನಾರಾಯಣ್, ಉಪನ್ಯಾಸಕರಾದ ಮಾಗಡಿರಂಗಯ್ಯ, ಹಿರಿಯರಾದ ಗಂಗಸಿದ್ದಯ್ಯ, ಹುಲ್ಲೂರಯ್ಯ, ಟಿ.ಎಸ್.ಪ್ರಭು, ಮಹದೇವ್, ಎನ್.ನಾರಾಯಣ, ಕೃಷ್ಣಪ್ಪ, ಗೋಪಾಲ ಇತರರು ಗ್ರಾಮ ದೇವತೆಯ ಉತ್ಸವದ ಬಗ್ಗೆ ಮಾತನಾಡಿದರು. ಅರ್ಚಕರಾದ ರೇವಣ್ಣ, ಗುರುಸ್ವಾಮಿ ಹಾಗೂ ತಿರುಮಲೆ ಮತ್ತು ಪಣಕನಕಲ್ ಗ್ರಾಮಸ್ತರು ಉತ್ಸವದಲ್ಲಿ ಭಾಗವಹಿಸಿದ್ದರು.ಮೆರವಣಿಗೆ: ಹಳೇ ಊರಿನ ಅರಣ್ಯದಂಚಿನಲ್ಲಿ ಹಸಿರು ಚಪ್ಪರವನ್ನಾಕಿ ಇಡೀ ಗ್ರಾಮಸ್ಥರೆಲ್ಲರೂ ಪೂಜೆ ಸಲ್ಲಿಸಿದರು. ದೇವರಿಗೆ ಬಲಿ ಕೊಟ್ಟ ನಂತರ ತಮಟೆ ವಾದ್ಯದೊಂದಿಗೆ ಪಂಜಿನ ಮೆರವಣಿಗೆ ಮಾಡುತ್ತಾ, ದಲಿತರ ಕಾಲೋನಿ, ಕುರುಬಗೇರಿ, ಪಣಕನಕಲ್ ರಸ್ತೆ ರಥಬೀದಿಯ ಮಾರ್ಗವಾಗಿ ಭವ್ಯ ಮೆರವಣಿಗೆ ನಡೆಸಲಾಯಿತು.ಮಹಿಳೆಯರು ಹೂವು ಹೊಂಬಾಳೆಯೊಂದಿಗೆ ತಂಬಿಟ್ಟಿನ ಆರತಿಯನ್ನು ಬೆಳಗಿ ದೇವಿಗೆ ಪೂಜೆ ಸಲ್ಲಿಸಿದರು. ಹರಕೆ ಹೊತ್ತಿದ್ದ ಭಕ್ತರು ದೇವಿಯ ಮೆರವಣಿಗೆ ಮುಂದೆ ನಡೆ, ಮುಡಿಯ ಮೇಲೆ ಮಲಗಿ ಹರಕೆ ಸಲ್ಲಿಸಿದರು. ನಡೆ, ಮುಡಿಯ ಮೇಲೆ ಮಲಗಿದ್ದ ಭಕ್ತರ ಮೇಲೆ ಉತ್ಸವಮೂರ್ತಿ ಹೊತ್ತ ಅರ್ಚಕರು ನಡೆದು ಬಂದು ಹರಕೆ ಪೂರೈಸಿದರು. ತಿರುಮಲೆಯ ಕೊಳಚೆ ನಿರ್ಮೂಲನ ಬಡಾವಣೆ ಮತ್ತು ಪಟ್ಟಣದ ಜನತೆ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.