ಸೋಮವಾರ, ಆಗಸ್ಟ್ 10, 2020
24 °C

ಬೀಚ್ ಬ್ಯಾಸ್ಕೆಟ್‌ಬಾಲ್‌ನಲ್ಲಿ ಚಿನ್ನದ ಹೊಳಪು

ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

ಬೀಚ್ ಬ್ಯಾಸ್ಕೆಟ್‌ಬಾಲ್‌ನಲ್ಲಿ ಚಿನ್ನದ ಹೊಳಪು

ಒಟ್ಟು 10 ನಿಮಿಷಗಳ ಆಟವಿದು. ಐದು ನಿಮಿಷಗಳ ಎರಡು ಅವಧಿಗಳು. ಇದರ ನಡುವೆ 30 ಸೆಕೆಂಡ್‌ಗಳ ವಿರಾಮ. ಒಂದು ತಂಡದಲ್ಲಿ ಮೂವರು ಮಾತ್ರ ಆಡುವರು. ಡ್ರಿಬ್ಲಿಂಗ್, ಪಾಸಿಂಗ್, ಬ್ಲಾಕ್ ಹಾಗೂ ಚೆಂಡನ್ನು   ಬ್ಯಾಸ್ಕೆಟ್‌ಗೆ ಹಾಕಿ ಪಾಯಿಂಟ್ ಗಿಟ್ಟಿಸುವ ಕೆಲಸವನ್ನು ಈ ಮೂವರು ಹೊಂದಾಣಿಕೆಯಿಂದ ನಿರ್ವಹಿಸಬೇಕು. ಆಟದ ವೇಳೆ ಒಂದು ಕ್ಷಣವೂ ವಿಶ್ರಾಂತಿ ಲಭಿಸದು.ಹೀಗೆ ಆಟಗಾರ ಅಥವಾ ಆಟಗಾರ್ತಿಯ ದೈಹಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಬೀಚ್ ಬ್ಯಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಭಾರತದ ಮಹಿಳಾ ತಂಡ ಸದ್ದಿಲ್ಲದೆ ಸುದ್ದಿ ಮಾಡಿದೆ. ಚೀನಾದ ಹೈಯಾಂಗ್‌ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಬೀಚ್ ಕ್ರೀಡಾಕೂಟದ ಬ್ಯಾಸ್ಕೆಟ್‌ಬಾಲ್‌ನಲ್ಲಿ ಮಹಿಳೆಯರು ಚಿನ್ನ ಗೆದ್ದರು.

 

ಭಾರತದ ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಇತಿಹಾಸವನ್ನು ನೋಡಿದಾಗ, ಇದೊಂದು ಅಮೋಘ ಸಾಧನೆಯೇ ಸರಿ. ಸಾಮಾನ್ಯ ಬ್ಯಾಸ್ಕೆಟ್‌ಬಾಲ್ ಆಟಕ್ಕಿಂತ ಕೆಲವೊಂದು ರೀತಿಯಲ್ಲಿ ಭಿನ್ನ ಎನಿಸಿರುವ ಈ ಕ್ರೀಡೆಯಲ್ಲಿ ದೊರೆತ ಯಶ ಭಾರತದ ಬ್ಯಾಸ್ಕೆಟ್‌ಬಾಲ್‌ಗೆ ಶುಭ ಸೂಚನೆಯಾಗಿದೆ.ಗೀತು ಅನ್ನಾ ಜೋಸ್ ನೇತೃತ್ವದ ತಂಡದಲ್ಲಿ ಅನಿತಾ ಪಾಲ್ ದುರೈ, ಕಿರಣ್‌ಜೀತ್ ಕೌರ್ ಮತ್ತು ಶಿರೀನ್ ವಿಜಯ್ ಲಿಮಯೆ ಇದ್ದರು.ಫೈನಲ್‌ನಲ್ಲಿ ಬಲಿಷ್ಠ ಚೀನಾ ತಂಡವನ್ನು ಮಣಿಸಿದ್ದ ಭಾರತ ಚಾಂಪಿಯನ್‌ಷಿಪ್‌ನಲ್ಲಿ ಸೋಲಿನ ಕಹಿ ಅನುಭವಿಸಿಯೇ ಇಲ್ಲ. ಒಟ್ಟು 45 ಪಾಯಿಂಟ್ ಕಲೆಹಾಕಿ `ಟಾಪ್ ಸ್ಕೋರರ್~ ಎನಿಸಿದ ಗೀತು ಅವರಿಗೆ ಈ ಟೂರ್ನಿಯನ್ನು ಮರೆಯಲು ಸಾಧ್ಯವಿಲ್ಲ. ಆರು ಅಡಿ ಎರಡಿಂಚು ಎತ್ತರದ ಈ ಆಟಗಾರ್ತಿ ಫೈನಲ್‌ನಲ್ಲಿ ಭಾರತ ಗಳಿಸಿದ್ದ 17 ಪಾಯಿಂಟ್‌ಗಳಲ್ಲಿ 11ನ್ನೂ ಕಲೆಹಾಕಿದ್ದರು!ಬ್ಯಾಸ್ಕೆಟ್‌ಬಾಲ್‌ನಲ್ಲಿ ಒಂದು ತಂಡದಲ್ಲಿ ಐವರು ಇರುವರು. ಆದರೆ ಬೀಚ್ ಬ್ಯಾಸ್ಕೆಟ್‌ಬಾಲ್‌ನಲ್ಲಿ ಮೂವರು ಮಾತ್ರ ಆಡಬೇಕು. ಬದಲಿ ಆಟಗಾರರಾಗಿ ಇಬ್ಬರಿಗೆ ಕಣಕ್ಕಿಳಿಯಬಹುದು. ಕೋರ್ಟ್ ಅಲ್ಪ ಸಣ್ಣದಾಗಿದ್ದರೂ, ಈ ಆಟ ಒಡ್ಡುವ ಸವಾಲು ಮಾತ್ರ ದೊಡ್ಡದು. ಅದ್ಭುತ ವೇಗ ಮತ್ತು ಚಾಕಚಕ್ಯತೆಯ ಜೊತೆಗೆ ತಾಂತ್ರಿಕವಾಗಿ ಸಾಕಷ್ಟು ಪಳಗಿದರೆ ಮಾತ್ರ ಇಲ್ಲಿ ಯಶಸ್ಸು ಗಳಿಸಬಹುದು.`ದೈಹಿಕವಾಗಿ ತುಂಬಾ ಸವಾಲು ಎದುರಾಗಿತ್ತು. ಅಲ್ಪವೂ ವಿಶ್ರಾಂತಿ ಇಲ್ಲದೆ ಆಡಬೇಕಿತ್ತು. ಪಂದ್ಯದ ನಡುವೆ ಸ್ಕೋರ್ ಬೋರ್ಡ್ ನೋಡಲೂ ಸಮಯ ಸಿಗುತ್ತಿರಲಿಲ್ಲ. ಆಟದ ವೇಳೆ ಎದುರಾಗುವ ಪರಿಸ್ಥಿತಿಯನ್ನು ವಿವರಿಸಲು ಅಸಾಧ್ಯ. ಚೀನಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿದ್ದೇವೆ ಎಂಬುದನ್ನು ನಂಬಲಾಗುತ್ತಿಲ್ಲ~ ಎಂದು ಗೀತು ತಮ್ಮ ಅನುಭವ ಬಿಚ್ಚಿಟ್ಟರು.ತಂಡದ ಯಶಸ್ಸಿನ ಶ್ರೇಯ ಕೋಚ್ ಪ್ರೇಮ್‌ಕುಮಾರ್ ಅವರಿಗೂ ಸೇರಬೇಕು. ಭಾರತದ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡ ಏಷ್ಯನ್ ಬೀಚ್ ಕ್ರೀಡಾಕೂಟದಲ್ಲಿ ಪಾಲ್ಗೊಂಡದ್ದು ಇದೇ ಮೊದಲು. ಚೊಚ್ಚಲ ಪ್ರಯತ್ನದಲ್ಲೇ ಚಿನ್ನದ ನಗು ಬೀರಿದೆ. ಪುರುಷರ ತಂಡದವರು ಐದನೇ ಸ್ಥಾನ ಗಳಿಸಿದ್ದರು.ಫೈನಲ್ ಪಂದ್ಯದಲ್ಲಿ ಎದುರಾದ ಸವಾಲಿನ ಬಗ್ಗೆ ತಿಳಿಸಿದ ಗೀತು, `ಚೀನಾದ ಆಟಗಾರ್ತಿಯರು ನಮಗಿಂತ ಎತ್ತರ ಹಾಗೂ ದೈಹಿಕವಾಗಿ ಬಲಿಷ್ಠರಾಗಿದ್ದರು. ಈ ಕಾರಣ ನಾವು ತಾಂತ್ರಿಕತೆಗೆ ಹೆಚ್ಚು ಒತ್ತು ನೀಡಿದೆವು~ ಎಂದರು.ಲೀಗ್ ಹಂತದಲ್ಲಿ ಬಲಿಷ್ಠ ಥಾಯ್ಲೆಂಡ್ ತಂಡವನ್ನು ಮಣಿಸಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಲು ಕಾರಣ ಎಂಬುದು ಗೀತು ಅವರ ಹೇಳಿಕೆ. ಥಾಯ್ಲೆಂಡ್ ಎದುರು ಗೆಲುವು ಸುಲಭವಾಗಿ ದಕ್ಕಲಿಲ್ಲ. `ಈ ಸಾಧನೆ ಭಾರತದ ಬ್ಯಾಸ್ಕೆಟ್‌ಬಾಲ್ ಕ್ರೀಡೆಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ~ ಎಂಬುದು 26ರ ಹರೆಯದ ಗೀತು ಅವರ ವಿಶ್ವಾಸದ ನುಡಿಗಳು.ಇದು ಸಾಮಾನ್ಯ ಬ್ಯಾಸ್ಕೆಟ್‌ಬಾಲ್ ಪಂದ್ಯ ಆಗಿದ್ದಲ್ಲಿ ಚೀನಾ ತಂಡವನ್ನು ಸೋಲಿಸಲು ಸಾಧ್ಯವಾಗುತ್ತಿತ್ತೇ ಎಂದು ಕೇಳಿದಾಗ ಅಲ್ಪ ಹಿಂಜರಿಕೆ ತೋರಿದ ಗೀತು `ಇಲ್ಲ~ ಎಂದರು.

ಭಾರತ ತಂಡದವರು ಬೀಚ್ ಕ್ರೀಡಾಕೂಟಕ್ಕೆ ತೆರಳುವ ಮುನ್ನ ಬೆಂಗಳೂರಿನ ಎಸ್‌ಎಐನಲ್ಲಿ ಕೆಲವು ದಿನಗಳ ಕಾಲ ಕಠಿಣ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಮಾತ್ರವಲ್ಲ, ಚಿನ್ನದ ಪದಕ ಕೊರಳಿಗೇರಿಸಿಕೊಂಡು ಗೆಲುವಿನ ನಗು ಬೀರುತ್ತಾ ಉದ್ಯಾನನಗರಿಗೆ ಬಂದಿಳಿದಿದ್ದರು.ವಿದೇಶಿ ಕ್ಲಬ್‌ಗಳಿಂದ ಆಹ್ವಾನ: ಕೇರಳದ ಗೀತುಗೆ ಕೆಲವೊಂದು ಕ್ಲಬ್‌ಗಳಿಂದ `ಆಫರ್~ಗಳು ಬಂದಿವೆ. ಆಸ್ಟ್ರೇಲಿಯದ ಬಿಗ್ ಫೈವ್ ಕ್ಲಬ್ ರಿಂಗ್‌ವುಡ್ ಹಾಕ್ಸ್ ಮತ್ತೆ ತಂಡಕ್ಕೆ ಮರಳುವಂತೆ ಗೀತು ಅವರಲ್ಲಿ ಕೇಳಿಕೊಂಡಿದೆ.ಭಾರತದ ಆಟಗಾರ್ತಿ 2006 ರಿಂದ 2008ರ ವರೆಗೆ ಈ ಕ್ಲಬ್‌ಗೆ ಆಡಿದ್ದರು. ಅದೇ ರೀತಿ ಆಸಿಯಾನ್ ಬ್ಯಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಆಡುತ್ತಿರುವ ಥಾಯ್ಲೆಂಡ್‌ನ ಕ್ಲಬ್ ಬ್ಯಾಂಕಾಕ್ ಕೋಬ್ರಾಸ್‌ನಿಂದಲೂ ಆಹ್ವಾನ ಬಂದಿದೆ.ಎನ್‌ಬಿಎ ತಂಡ ಲಾಸ್ ಏಂಜಲೀಸ್ ಲೇಕರ್ಸ್‌ನ `ಸೂಪರ್ ಸ್ಟಾರ್~ ಕೋಬ್ ಬ್ರಯಾಂಟ್ ಅವರ ತಂದೆ ಜೋ ಬ್ರಯಾಂಟ್ ಈ ತಂಡದ ಕೋಚ್ ಆಗಿದ್ದಾರೆ. ಯಾವ ಕ್ಲಬ್ ಸೇರಬೇಕು ಎಂಬುದರ ಬಗ್ಗೆ ಗೀತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಕಳೆದ ವರ್ಷ ಅಮೆರಿಕದ ಡಬ್ಲ್ಯುಎನ್‌ಬಿಎ ತಂಡಗಳಾದ ಚಿಕಾಗೊ ಸ್ಕೈ, ಲಾಸ್ ಏಂಜಲೀಸ್‌ಸ್ಪಾರ್ಕ್ಸ್ ಮತ್ತು ಸ್ಯಾನ್ ಆ್ಯಂಟೋನಿಯೊ ಸಿಲ್ವರ್ ಗೀತು ಅವರನ್ನು `ಟ್ರೈ ಔಟ್~ಗೆ ಆಹ್ವಾನಿಸಿತ್ತು.

 

ಆದರೆ ಈ ತಂಡಗಳಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. `ಗೀತು ಪ್ರತಿಭಾನ್ವಿತ ಆಟಗಾರ್ತಿ. ಅದ್ಭುತ ವೇಗ ಹೊಂದಿದ್ದಾರೆ. ಆದರೆ ಅಂಗಳದಲ್ಲಿ ಇನ್ನಷ್ಟು ಆಕ್ರಮಣಕಾರಿ ಎನಿಸಬೇಕು~ ಎಂಬ ಅಭಿಪ್ರಾಯವನ್ನು ಡಬ್ಲ್ಯುಎನ್‌ಬಿಎ ಕೋಚ್ ವ್ಯಕ್ತಪಡಿಸಿದ್ದರು.

ಆದ್ದರಿಂದ ಕೋರ್ಟ್‌ನಲ್ಲಿ  ಇನ್ನಷ್ಟು ಆಕ್ರಮಣಕಾರಿಯಾಗಿ ಕಾಣಬೇಕೆಂಬ ಪ್ರಯತ್ನದಲ್ಲಿದ್ದಾರೆ ಗೀತು.

                                           

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.