ಶುಕ್ರವಾರ, ಮೇ 7, 2021
23 °C

ಬೀದರ್ ಉತ್ಸವದಲ್ಲಿ ಬೀದರ್ ಮಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: `ಬೀದರ್ ಉತ್ಸವ~ದ ಪ್ರಚಾರದ ಫಲಕಗಳಲ್ಲಿ ಪ್ರಮುಖ ಸ್ಥಾನ ಪಡೆಯಬೇಕಾಗಿದ್ದ `ಬೀದರ್‌ನ ಮುಖ~ (ಫೇಸ್ ಆಫ್ ಬೀದರ್) ಎಂದೇ ಗುರುತಿಸಲಾಗುವ ಸ್ಮಾರಕಗಳಿಗೆ ಸ್ಥಾನ ಸಿಕ್ಕಿಲ್ಲ. `ಬೀದರ್ ಉತ್ಸವ-2012~ ಎನ್ನುವ ಚಿಹ್ನೆ (ಲೋಗೋ) ಹೊರತು ಪಡಿಸಿದರೆ ಬೀದರ್‌ನ ಅನನ್ಯತೆಯನ್ನು ಬಿಂಬಿಸುವ ಯಾವುದೇ ರೀತಿಯ ಚಿತ್ರಗಳಿಗೂ ಅವಕಾಶ ನೀಡಲಾಗಿಲ್ಲ. `ಬೀದರ್ ಉತ್ಸವ~ದ ಜೀವ-ಜೀವಾಳ ಆಗಬೇಕಿದ್ದ `ಬೀದರ್~ ಸಂಪೂರ್ಣವಾಗಿ `ಮಾಯ~ ಆಗಿರುವುದು ಜಿಲ್ಲೆಯ ಪರಂಪರೆ, ಇತಿಹಾಸದ ಬಗ್ಗೆ ಆಸಕ್ತಿ ಇಟ್ಟುಕೊಂಡವರ ಬೇಸರಕ್ಕೆ ಕಾರಣವಾಗಿದೆ.`ಬೀದರ್ ಉತ್ಸವ~ ಆರಂಭಿಸಿದ್ದು ಜಿಲ್ಲೆಯ ಐತಿಹಾಸಿಕ ಸ್ಮಾರಕಗಳನ್ನು ಪರಿಚಯಿಸುವ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಉದ್ದೇಶದಿಂದ. ಆದರೆ, ಈ ಬಾರಿಯ `ಬೀದರ್ ಉತ್ಸವ~ಕ್ಕಾಗಿ ನಗರದ ವಿವಿಧೆಡೆಗಳಲ್ಲಿ ಹಾಕಲಾಗಿರುವ ಪ್ರಚಾರ ಫಲಕ (ಹೋರ್ಡಿಂಗ್ಸ್ ಮತ್ತು ಕಟೌಟ್)ಗಳಲ್ಲಿ ಜಿಲ್ಲೆಯ ಸ್ಮಾರಕಗಳಿಗೆ ಯಾವುದೇ ರೀತಿಯ ಪ್ರಾಮುಖ್ಯತೆ ಸಿಕ್ಕಿಲ್ಲ. ಅದರ ಬದಲಾಗಿ ಕೇವಲ ಕಾರ್ಯಕ್ರಮ ನೀಡಲಿರುವ ಕಲಾವಿದರ ಚಿತ್ರಗಳೇ ರಾರಾಜಿಸುತ್ತಿವೆ~ ಎಂದು ಸುಭಾಷ ಪಿ. ಆರೋಪಿಸುತ್ತಾರೆ.`ಉತ್ಸವದ ಕಟೌಟ್‌ಗಳಲ್ಲಿ ಜಿಲ್ಲೆಯ ಐತಿಹಾಸಿಕ ಸ್ಮಾರಕ ಮತ್ತು ಸ್ಥಳಗಳ ಚಿತ್ರಗಳನ್ನು ಅಳವಡಿಸಿದರೆ ನಮ್ಮಲ್ಲಿಯು ಇಂಥ ಸ್ಮಾರಕಗಳಿವೆ ಎಂಬ ಅಭಿಮಾನ ಜಿಲ್ಲೆಯ ಜನರಲ್ಲಿ ಮೂಡುತ್ತಿತ್ತು. ಹೊರ ಹೊರಗಿನಿಂದ ಬರುವವರಿಗೆ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಬಗ್ಗೆ ಆಸಕ್ತಿ ಹುಟ್ಟುತ್ತಿತ್ತು. ಆದರೆ, ಈ ಕಾರ್ಯ ನಡೆಯದಿರುವುದು ಅಸಮಾಧಾನ ಉಂಟು ಮಾಡಿದೆ~ ಎಂದು ತಿಳಿಸುತ್ತಾರೆ ನಗರದ ನಿವಾಸಿ ವಿನೋದ್.ಇದರ ಜೊತೆಗೆ `ಬೀದರ್ ಉತ್ಸವ~ಕ್ಕೆ ಸಾರ್ವಜನಿಕರಿಗೆ ಆಹ್ವಾನ ನೀಡಲಿರುವ ಜ್ಯೋತಿಯಾತ್ರೆಯ ವಾಹನದಲ್ಲಿಯು ಐತಿಹಾಸಿಕ ಸ್ಮಾರಕಗಳ ಚಿತ್ರಗಳನ್ನು ಅತ್ಯಂತ ಸಣ್ಣದಾಗಿ ಹಾಕಲಾಗಿದೆ. ಇವುಗಳಲ್ಲಿಯೂ ಉತ್ಸವಕ್ಕೆ ಆಗಮಿಸುತ್ತಿರುವ ಕಲಾವಿದರು, ವಿವಿಧ ಕ್ರೀಡೆಗಳ ಚಿತ್ರಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹೀಗಾಗಿ `ಬೀದರ್ ಉತ್ಸವ~ವನ್ನು ಯಾವ ಉದ್ದೇಶಕ್ಕಾಗಿ ಆರಂಭಿಸಲಾಗಿದೆಯೋ ಆ ಉದ್ದೇಶದಿಂದ ಅದು ದೂರ ಸರಿಯುತ್ತಿದೆಯೇನೋ ಅನ್ನಿಸುತ್ತಿದೆ~ ಎಂಬ ಆರೋಪ ಅವರದು.`ಬೀದರ್ ಉತ್ಸವ~ದಲ್ಲಿ ಪ್ರಚಾರ ಫಲಕದಲ್ಲಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸೇರಿದಂತೆ ಅಂತರರಾಷ್ಟ್ರೀಯ ಖ್ಯಾತಿಯ ಫುಟ್‌ಬಾಲ್, ಹಾಕಿ, ಟೆನಿಸ್, ಸೈಕ್ಲಿಂಗ್ ಪಟುಗಳ ಚಿತ್ರ ಹಾಕಿರುವುದು ಮಹಾನ್ ಕ್ರೀಡಾಪಟುಗಳು ಬೀದರ್ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ ಎಂಬಂತೆ ಭಾಸವಾಗುತ್ತದೆ. ಸ್ವಲ್ಪ ಎಚ್ಚರ ವಹಿಸಿದ್ದರೆ ಇಂತಹ ಆಭಾಸಗಳನ್ನು ತಪ್ಪಿಸಬಹುದಿತ್ತು~ ಮನೋಜ್‌ಕುಮಾರ ಅಭಿಪ್ರಾಯಪಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.