ಬುಧವಾರ, ಮೇ 12, 2021
20 °C

ಬೀದರ್: ನಾಗರಿಕ ವಿಮಾನಯಾನ ಇಲ್ಲ

ಪ್ರಜಾವಾಣಿ ವಾರ್ತೆ/ ದೇವು ಪತ್ತಾರ Updated:

ಅಕ್ಷರ ಗಾತ್ರ : | |

ಬೀದರ್: ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ನಾಗರಿಕ ವಿಮಾನ ನಿಲ್ದಾಣವು ರಾಜಕೀಯ ಇಚ್ಛಾಶಕ್ತಿ ಮತ್ತು ದೂರದೃಷ್ಟಿ ಕೊರತೆಯಿಂದಾಗಿ   ನಿರುಪಯುಕ್ತ ಆಗಿರುವ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುವಂತಾಗಿದೆ. ಖಾಸಗಿ ಜಮೀನಿನಲ್ಲಿ ಮೂರು ವರ್ಷಗಳ ಅವಧಿಗೆ ಗುತ್ತಿಗೆ ಪಡೆದು ನಿರ್ಮಿಸಲಾದ ತಾತ್ಕಾಲಿಕ ನಿಲ್ದಾಣವು ಕಾಲಾವಧಿ ಮುಗಿದರೂ ವಿಮಾನ ಯಾನ ಆರಂಭವಾಗದ್ದರಿಂದ ಕಟ್ಟಡವು ಪಾಳುಬಿದ್ದ ಬಂಗಲೆಯಂತಾಗಿದೆ.

 

ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಗುತ್ತಿಗೆ ಅವಧಿ ಮುಗಿದಿದ್ದರಿಂದ ಅದನ್ನು ನವೀಕರಿಸುವುದಕ್ಕಾಗಿ ಜಿಲ್ಲಾಡಳಿತ ಪ್ರಯತ್ನಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.ಭಾರತೀಯ ವಾಯುಪಡೆಗೆ ಸೇರಿದ ರನ್‌ವೇಯನ್ನು ನಾಗರಿಕ ವಿಮಾನಯಾನಕ್ಕೆ ಬಳಸುವುದಕ್ಕೆ ಅನುಮತಿ ನೀಡಬೇಕು ಎಂಬ ಬಹು ದಿನಗಳ ಬೇಡಿಕೆಗೆ ಸರಿಸುಮಾರು ಮೂರುವರೆ ವರ್ಷಗಳ ಹಿಂದೆ ಮರುಜೀವ ಬಂತು. ಅದಕ್ಕೆ ನಾಂದೇಡ್‌ನಲ್ಲಿ ನಡೆಯಲಿದ್ದ ಸಿಖ್ ಧರ್ಮೀಯರ `ಗುರುತಾ ಗದ್ದಿ-300~ ಉತ್ಸವ ಪ್ರಮುಖ ಕಾರಣ ಆಗಿತ್ತು. ನಾಂದೇಡ್‌ಗೆ ಬರುವ ಯಾತ್ರಿಗಳಿಗೆ ವಿಮಾನಯಾನದ ಸೌಲಭ್ಯ ಒದಗಿಸಿದರೆ ಬೀದರ್‌ಗೂ ಬರಲು ಅನುಕೂಲ ಆಗುತ್ತದೆ ಎಂಬ ಒತ್ತಾಸೆ ಅದಕ್ಕೆ ಕಾರಣವಾಗಿತ್ತು.ಅದೇ ತಾನೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದ ಯಡಿಯೂರಪ್ಪನವರು ಬೀದರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಆಸಕ್ತಿ ವಹಿಸಿ ತಕ್ಷಣದಿಂದಲೇ ಜಾರಿಯಾಗುವಂತೆ ಮೂರು ಕೋಟಿ ರೂಪಾಯಿ ಬಿಡುಗಡೆ ಮಾಡಿದರು. ಬಿಡುಗಡೆಯಾದ ಹಣದಲ್ಲಿ ತಕ್ಷಣವೇ ವಿಮಾನಯಾನ ಆರಂಭಿಸುವುದಕ್ಕೆ ಅನುಕೂಲ ಆಗುವಂತೆ ತಾತ್ಕಾಲಿಕ ನಾಗರಿಕ ಶೆಡ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಯಿತು. ಪೂರ್ಣಗೊಂಡು ಮೂರು ವರ್ಷವಾದರೂ ನಾಗರಿಕ ವಿಮಾನಯಾನ ಆರಂಭವಾಗದ್ದರಿಂದ ಇಡೀ ಕಟ್ಟಡ ವಾರಸುದಾರರಿಲ್ಲದ ಮನೆಯಂತಾಗಿದೆ.ಹಿನ್ನೆಲೆ: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಿರ್ಮಾಣವಾದ ರನ್‌ವೇ ಬೀದರ್‌ನಲ್ಲಿದೆ. ಅಮೆರಿಕ ಮತ್ತು ಮಿತ್ರ ಪಡೆಗೆ ಇಂಧನ ತುಂಬಿಸುವ ಉದ್ದೇಶದಿಂದ ಈ ರನ್‌ವೇಯನ್ನು ನಿರ್ಮಿಸಲಾಗಿತ್ತು.ಗಟ್ಟಿಯಾದ ಲ್ಯಾಟ್ರೈಟ್ ನೆಲದ ಮೇಲೆ ನಿರ್ಮಾಣವಾದ ರನ್‌ವೇ ದೇಶದ ಅತ್ಯುತ್ತಮ ರನ್‌ವೇಗಳಲ್ಲಿ ಒಂದು ಎಂದು ಗುರುತಿಸಲಾಗುತ್ತದೆ. ಅದಕ್ಕಾಗಿಯೇ ವಾಯುಪಡೆಯ ಸೂರ್ಯಕಿರಣ ವಿಮಾನಗಳ ಏರೋಬ್ಯಾಟಿಕ್ ತಂಡ ಮತ್ತು ಅತ್ಯಾಧುನಿಕ ಹಾಕ್ ಯುದ್ಧ ವಿಮಾನಗಳ ತರಬೇತಿಗೆ ಈ ನೆಲೆಯನ್ನು ಬಳಸಲಾಗುತ್ತಿದೆ.ಇಂತಹ ರನ್‌ವೇ ಅನ್ನು ನಾಗರಿಕ ವಿಮಾನಯಾನಕ್ಕೆ ಬಳಸಿದರೆ ಸಾರ್ವಜನಿಕರಿಗೂ ಉಪಯೋಗ ಆಗುತ್ತದೆ ಎಂಬ ಯೋಚನೆಯೂ ಹುಟ್ಟಿಕೊಂಡಿತು. ರಕ್ಷಣಾ ಇಲಾಖೆಯು ತಕ್ಷಣ ಒಪ್ಪದಿದ್ದರೂ ನಂತರ ಆವರಣದ ಹೊರಗಡೆಯೇ ನಿಲ್ದಾಣ ನಿರ್ಮಿಸಿ ವಾಯುಪಡೆಯ ರನ್‌ವೇ ಬಳಸುವುದಕ್ಕೆ ತಾತ್ವಿಕ ಒಪ್ಪಿಗೆ ನೀಡಿತು. ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕರಾರುಗಳನ್ನು ಹಾಕಿತು. ಭದ್ರತಾ ಪರೀಕ್ಷೆಯ ನಂತರ ವಾಹನದಲ್ಲಿ ವಾಯುಪಡೆಯ ಆವರಣ ಪ್ರವೇಶಿಸುವಂತಿರಬೇಕು ಎಂದು ಸೂಚಿಸಿತ್ತು. ಆಮೇಲೆ ನಾಗರಿಕ ವಿಮಾನಯಾನ ಸಚಿವಾಲಯವೂ ಹಸಿರು ನಿಶಾನೆ ತೋರಿಸಿತು. ಕಿಂಗ್‌ಫಿಷರ್ ಸೇರಿದಂತೆ ಒಂದೆರಡು ಸಂಸ್ಥೆಗಳು ಯಾನ ಆರಂಭಿಸಲು ಆಸಕ್ತಿ ತೋರಿಸಿದ್ದವು.ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವುದು ತಡ ಆಗುವುದರಿಂದ ತಾತ್ಕಾಲಿಕ ಶೆಡ್ ನಿರ್ಮಿಸಿ ಅದರಲ್ಲಿಯೇ ಟಿಕೆಟ್ ವಿತರಣೆ ಮತ್ತು ಭದ್ರತಾ ಪರೀಕ್ಷೆಯ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಯಿತು. ಅದಕ್ಕೆ ರಾಜ್ಯ ಸರ್ಕಾರ ಮೂರು ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿತು. ಚಿದ್ರಿಗೆ ಸಮೀಪದಲ್ಲಿ ಖಾಸಗಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಪಡೆದು ನಿರ್ಮಾಣ ಮಾಡಲಾಯಿತು.ಸಮಸ್ಯೆ ಏನು?: ಎಲ್ಲ ಸರಿಯಾಗಿದೆ ಎನ್ನುವಾಗಲೇ ಸಣ್ಣ ಸಮಸ್ಯೆಯೊಂದು ಕಾಣಿಸಿಕೊಂಡಿತು. ಹೈದರಾಬಾದ್ ವಿಮಾನ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಿಎಂಆರ್ ಸಂಸ್ಥೆಯು ತಕರಾರು ಎತ್ತಿತು. 150 ಕಿ.ಮೀ. ಅಂತರದಲ್ಲಿ ವಿಮಾನ ನಿಲ್ದಾಣ ಆರಂಭಿಸದೇ ಇರುವ ಒಪ್ಪಂದದ ಕುರಿತು ನಾಗರಿಕ ವಿಮಾನಯಾನ ಸಚಿವಾಲಯದ ಗಮನ ಸೆಳೆಯಿತು. ನೆನೆಗುದಿಗೆ ಬಿದ್ದಿತು. ಕೇಂದ್ರ ಸಚಿವ ಸಂಪುಟದ ಅನುಮತಿ ದೊರೆತರೆ ಯಾನ ಆರಂಭಿಸುವುದು ಸುಲಭ ಆಗಬಹುದೆಂಬ ಅಭಿಪ್ರಾಯವಿದೆ. ಆದರೆ, ಈ ಭಾಗದ ಜನಪ್ರತಿನಿಧಿಗಳ ನಿರಾಸಕ್ತಿಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಸಾರ್ವಜನಿಕರದ್ದು.

ತಾತ್ಕಾಲಿಕವಾಗಿ ನಿರ್ಮಿಸಲಾದ ವಿಮಾನ ನಿಲ್ದಾಣದ ಖಾಸಗಿ ಜಮೀನಿನ ಗುತ್ತಿಗೆ ಅವಧಿ ಪೂರ್ಣಗೊಂಡಿದೆ. `ಬೀದರ್‌ಅನ್ನು ಸ್ಮಾರಕಗಳ ನಗರ~ ಎಂದು ಗುರುತಿಸಲಾಗುತ್ತದೆ. ನಗರದಲ್ಲಿ ನೂರಾರು ಐತಿಹಾಸಿಕ ಸ್ಮಾರಕಗಳ ಸಾಲಿಗೆ ವಿಮಾನನಿಲ್ದಾಣವೊಂದು ಹೊಸ ಸೇರ್ಪಡೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.