ಸೋಮವಾರ, ಮೇ 17, 2021
30 °C

ಬುಷ್ ಬಾಣಸಿಗನ ಕೇಕ್ ಪ್ರೀತಿ

ಇ.ಎಸ್.ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್‌ಗೆ ಇಷ್ಟವಾದ ಕೇಕ್ ಮಾಡಿದ ಅನುಭವಿ, ಫ್ರಾನ್ಸ್‌ನ ರೆಮಿ ಲೆ ಗೊಫ್ ನಗರಕ್ಕೂ ಬಂದು ಇಲ್ಲಿನವರಿಗೆ ಇಷ್ಟವಾಗುವಂಥ ಕೇಕ್‌ಗಳನ್ನು ಮಾಡಿ, ನಗುವಿನ ರುಜು ಹಾಕಿದರು.ಕೇಕ್ ಪ್ರಿಯರಿಗೊಂದು ರಸದೌತಣವನ್ನು ಕೋರಮಂಗಲದ `ದ ಫ್ರೆಂಚ್ ಲೂಫ್~ ಆಯೋಜಿಸಿದೆ. ಈ ರಸಗವಳವನ್ನು ಸಿದ್ಧಪಡಿಸಲು ಬಂದವರು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಹಾಗೂ ಲೌರಾ ಬುಷ್ ಅವರಿಗೆ ಉಣಬಡಿಸಿದ ಬಾಣಸಿಗ ಫ್ರಾನ್ಸ್‌ನ ರೆಮಿ ಲೆ ಗೊಫ್.ಸದ್ಯ ಭಾರತ ಪ್ರವಾಸದಲ್ಲಿರುವ ರೆಮಿ ಲು ಗೊಫ್, ಚೆನ್ನೈ ಪ್ರವಾಸ ಮುಗಿಸಿ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿಗರಿಗಾಗಿ ದ ಫ್ರೆಂಚ್‌ಲೂಫ್‌ನ ಅಡುಗೆ ಕೋಣೆಯಲ್ಲಿ 30-40 ಬಗೆ ಬಗೆಯ ಕೇಕ್‌ಗಳು, ಕುಕೀಸ್‌ಗಳು, ಪೇಸ್ಟ್ರೀ ಮತ್ತಿತರ ತಿನಿಸುಗಳನ್ನು ಅವರೇ ನಿಂತು ಸಿದ್ಧಪಡಿಸಿದ್ದರು.ದೊಡ್ಡ ಕೇಕ್‌ನಿಂದ ಹಿಡಿದು ಪುಟ್ಟ ಪುಟ್ಟ ಲೋಟದಲ್ಲಿಟ್ಟಿದ್ದ ಪೇಸ್ಟ್ರೀವರೆಗೂ ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿದ್ದ ತಿನಿಸುಗಳು ಬಾಯಲ್ಲಿ ನೀರೂರಿಸುತ್ತಿದ್ದವು. ತರಹೇವಾರಿ ಹಣ್ಣುಗಳನ್ನು ಕತ್ತರಿಸಿಟ್ಟ ರೀತಿ ಅವುಗಳನ್ನು ಕಣ್ಣಲ್ಲಿ ತುಂಬಿಕೊಂಡರೂ ಪ್ರತಿಯೊಂದನ್ನೂ ಸವಿಯುವ ಆಸೆ ಮನದಾಳದಲ್ಲಿ ಮೂಡುತ್ತಿತ್ತು. ಹೀಗೆ ಬಗೆಬಗೆಯ ತಿನಿಸುಗಳನ್ನು ಎಷ್ಟು ಬೇಕಾದರೂ ಸವಿಯಬಹುದಾದ ಅವಕಾಶವನ್ನು ದ ಫ್ರೆಂಚ್ ಲೂಫ್ ಆಯೋಜಿಸಿದೆ.ಒಬ್ಬರಿಗೆ ಕೇವಲ 225 ರೂಪಾಯಿ ಪಾವತಿಸಿದರೆ, ಕೇಕ್, ಕುಕೀ, ಪೇಸ್ಟ್ರೀಗಳಲ್ಲಿ ತಯಾರಿಸಿದ ಗೆಟೌಕ್ಸ್ ಬ್ರೆಟನ್, ಕೊಕೊನಟ್ ರೋಚರ್, ಕುಗಿನ್ ಅಮನ್, ಎರ್ಲ ಗ್ರೆ, ಕಾರ‌್ಮಲೈಸ್ಡ್ ಆಲ್ಮಂಡ್ ಕೇಕ್ ಜತೆಗೆ ಸ್ಟ್ರಾಬೆರಿ ಪನಕೋಟ, ಮ್ಯಾಂಗೊ ಬಸಿಲ್ ಮತ್ತು ಮ್ಯಾಂಗೊ ಕ್ರೀಂ, ಬುಚೆ ಪ್ರಲೈನೆ, ಆಪಲ್ ಕ್ರಂಬಲ್ ಮುಂತಾದ ರುಚಿಕರ ತಿನಿಸುಗಳನ್ನು ಸವಿಯಬಹುದು. ಹೀಗೆ ಇವುಗಳನ್ನು ಸಿದ್ಧಪಡಿಸಿದ ರೆಮಿ ಲೆ ಗೋಫ್ ತಮ್ಮ ಚೊಚ್ಚಲ ಭಾರತ ಭೇಟಿಯ ಕುರಿತು ಕೆಲ ಕಾಲ ಮೆಟ್ರೊದೊಂದಿಗೆ ಮಾತನಾಡಿದರು.ಕೇಕ್ ತಯಾರಿಕೆಯನ್ನು ಏಕೆ ಆಯ್ದುಕೊಂಡಿರಿ ಹಾಗೂ ದ ಫ್ರೆಂಚ್ ಲೂಫ್ ಜತೆಗಿನ ನಂಟು ಹೇಗೆ?ಇದು ನನ್ನ ಗುರು ಮಿಷೆಲ್ ಗ್ರೊಬನ್ ಬೆಸೆದ ನಂಟು. ಮೆಷೆಲ್ 20 ವರ್ಷ ವೈಟ್ ಹೌಸ್‌ನ ಬಾಣಸಿಗರಾಗದ್ದಿರು. ಜಾರ್ಜ್ ಡಬ್ಲ್ಯೂ. ಬುಷ್‌ವರೆಗೂ ಬಂದುಹೋದ, ಅಮೆರಿಕದ ಎಲ್ಲಾ ರಾಷ್ಟ್ರಾಧ್ಯಕ್ಷರಿಗೂ ಅವರೇ ಬಾಣಸಿಗರು. ನಾನು ಅವರನ್ನು ಭೇಟಿಯಾಗಿ ನನಗೂ ಕೇಕ್ ಹಾಗೂ ಅಡುಗೆ ಮಾಡುವುದನ್ನು ಕಲಿಸಿಕೊಡಿ ಎಂದು ಕೇಳಿದೆ. ನನ್ನಲ್ಲಿ ಅವರು ಅದೇನು ಕಂಡರೋ ತಿಳಿಯದು.ಕೇಕ್ ತಯಾರಿಯನ್ನು ಕಲಿಸುವುದು ಮಾತ್ರವಲ್ಲ, ಜಾರ್ಜ್ ಡಬ್ಲ್ಯೂ ಬುಷ್ ಹಾಗೂ 600 ಅತಿಥಿಗಳಿಗೆ ಆಹಾರ ಸಿದ್ಧಪಡಿಸುವ ಅಪರೂಪದ ಅವಕಾಶವನ್ನು ಕಲ್ಪಿಸಿದರು. ಹೀಗೆ ಕೆಲ ಕಾಲ ವೈಟ್ ಹೌಸ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡಿದೆ.ನಂತರ ಅವರ ಸಂಪರ್ಕದಲ್ಲಿರುವ ಜಗತ್ತಿನ ಕೆಲವು ಕೇಕ್ ಶಾಪ್‌ಗಳಿಗೆ ವಿಶಿಷ್ಟವಾದ ಕೇಕ್‌ಗಳನ್ನು ಸಿದ್ಧಪಡಿಸುವ ಜವಾಬ್ದಾರಿ ವಹಿಸಿದರು. ದ ಫ್ರೆಂಚ್ ಲೂಫ್ ಕೂಡ ಅದರಲ್ಲಿ ಒಂದು. ಅವರ ಆಜ್ಞೆಯಂತೆ ನಾನು ಈಗ ಭಾರತ ಪ್ರವಾಸದಲ್ಲಿದ್ದೇನೆ.ಭಾರತೀಯರಿಗಾಗಿ ಯಾವ ಹೊಸ ತಿನಿಸನ್ನು ಪರಿಚಯಿಸಿದ್ದೀರಿ?ನಾನು ಅಮೆರಿಕ, ಯುರೋಪ್, ಮಧ್ಯಪ್ರಾಚ್ಯ ಹೀಗೆ ನಾನಾ ರಾಷ್ಟ್ರಗಳಿಗೆ ಹೋಗಿ ಅಲ್ಲಿಂದ ಹೊಸ ಹೊಸ ಬಗೆಯ ತಿನಿಸುಗಳನ್ನು ಕಲಿತಿದ್ದೇನೆ. ಅವುಗಳ ಮಿಶ್ರಣ ಹಾಗೂ ಭಾರತೀಯರ ರುಚಿಗೆ ತಕ್ಕಂತೆ ಸಿದ್ಧಪಡಿಸಿದ್ದೇನೆ. ಭಾರತೀಯರಿಗೆ ಇಷ್ಟವಾಗಬಹುದಾದ ತೆಂಗಿನ ಕಾಯಿಯಿಂದ ತಯಾರಿಸಿದ ಕುಕೀಸ್ ಹಾಗೂ ಮತ್ತಿತರ ತಿನಿಸುಗಳನ್ನು ಇಲ್ಲಿ ಸಿದ್ಧಪಡಿಸಿದ್ದೇನೆ.ಕೇಕ್ ತಯಾರಿಕೆಯಲ್ಲಿ ಭಾರತೀಯರಿಗೂ ಪಾಶ್ಚಾತ್ಯರಿಗೂ ವ್ಯತ್ಯಾಸವನ್ನೇನಾದರೂ ಕಂಡಿದ್ದೀರಾ?(ನಗು) ನನ್ನೊಂದಿಗೆ ಕೇಕ್‌ಗಳ ತಯಾರಿಯಲ್ಲಿ ಕೆಲಸ ಮಾಡುವವರೊಂದಿಗೆ ಮಾತನಾಡುತ್ತಾ ಭಾರತೀಯರಿಗೆ ಏನು ಇಷ್ಟ, ಅವರಿಗೆ ಇಷ್ಟವಾಗುವಂತೆ ಹೇಗೆ ಕೇಕ್ ತಯಾರಿಸಬೇಕೆಂದು ಕೇಳಿದೆ. ಅದಕ್ಕೆ ಅವರು ಕೇಕ್ ಹೇಗಾದರೂ ಇರಲಿ, ಅದನ್ನು ಹೂವು, ಚಿತ್ರಗಳಿಂದ ಸುಂದರವಾಗಿ ಅಲಂಕರಿಸುವುದು ಬಹಳ ಮುಖ್ಯ ಎಂದರು. ಬಹುಶಃ ಇಲ್ಲಿ ಸ್ವಾದಕ್ಕಿಂಥ ಹೆಚ್ಚಾಗಿ ಅಲಂಕಾರಕ್ಕೆ ಬೆಲೆ ಕೊಡುತ್ತಾರೆ ಎಂದೆನಿಸುತ್ತದೆ.ಆದರೆ ಯುರೋಪ್‌ನಲ್ಲಿ ಹಾಗಲ್ಲ. ಒಂದು ಪುಟ್ಟ ಕೇಕ್ ಆದರೂ ಅದರಲ್ಲಿ ಬೇರೆ ಬೇರೆ ಸ್ವಾದದ 7- 10 ಪದರಗಳಿರುತ್ತವೆ. ಪ್ರತಿಯೊಂದನ್ನೂ ಅವರು ಸವಿಯುವ ರೀತಿಯೇ ಸೊಗಸೆನಿಸುತ್ತದೆ. ಅಂಥದ್ದೊಂದು ಪ್ರಯತ್ನವನ್ನು ನಾನು ಇಲ್ಲಿ ಮಾಡಿದ್ದೇನೆ.ಜಾರ್ಜ್ ಬುಷ್ ಅವರಿಗೆ ಏನು ಇಷ್ಟ?ಯಾವುದೇ ಆಹಾರವಾದರೂ ಅದಕ್ಕೆ ರುಚಿ ಹೊರತುಪಡಿಸಿ ಯಾವುದೇ ರೀತಿಯ ಅಲಂಕಾರ, ಬಣ್ಣ, ಆಕಾರಗಳನ್ನು ಅವರು ಅಪೇಕ್ಷೆಪಡುತ್ತಿರಲಿಲ್ಲ. ಪ್ರತಿಯೊಂದು ಸೀದಾಸಾದಾ ಇರಬೇಕು. ಸಹಜವಾಗಿರುವ ಆಹಾರದ ರುಚಿ ನೋಡಲು ಇಷ್ಟಪಡುತ್ತಿದ್ದರು.

ಭಾರತ ಭೇಟಿ ಹೇಗೆನಿಸಿತು?ಭಾರತಕ್ಕೆ ಬಂದವನೇ ಚೆನ್ನೈನ ಅಡುಗೆ ಕೋಣೆಯನ್ನು ಸೇರಿಕೊಂಡೆ. ಅಲ್ಲಿ ಕೇಕ್‌ಗಳನ್ನು ಸಿದ್ಧಪಡಿಸಿದ ನಂತರ ಬೆಂಗಳೂರಿಗೆ ಬಂದೆ. ಇಲ್ಲೂ ಅಡುಗೆಮನೆಯೇ ಗತಿ ನನಗೆ. ಎಲ್ಲಿಯೂ ಹೊರಹೋಗಲು ಸಮಯ ಸಿಗಲಿಲ್ಲ. ವಾಜಿಬಾ ಎಂಬ ಐಸ್ ಕ್ರೀಂ ರುಚಿ ನೋಡಿದೆ. ಅಬ್ಬಾ, ಬಹಳ ಸಿಹಿ. ಇಲ್ಲಿಂದ ಚೆನ್ನೈಗೆ ಮರಳಿ ಅಲ್ಲಿಂದ ದುಬೈಗೆ ಹೋಗುತ್ತಿದ್ದೇನೆ.ಕೇಕ್ ತಯಾರಿಗೆ ಬೆಂಗಳೂರು ಹವೆ ಉತ್ತಮವೇ?ಚೆನ್ನೈಗೆ ಹೋಲಿಸಿದಲ್ಲಿ ಬೆಂಗಳೂರು ತಂಪೆನಿಸಬಹುದು. ಆದರೆ ಎರಡೂ ನಗರಗಳದ್ದು ಒಂದೇ ರೀತಿಯ ಹ್ಯುಮಿಡಿಟಿ. ಚಾಕೊಲೇಟ್, ಕ್ಯಾರಮಲ್‌ಗಳು ಚೆನ್ನೈನಂತೆ ಇಲ್ಲೂ ಕರಗುತ್ತವೆ. ಹೀಗಾಗಿ ಸದಾ ಅತಿ ಕಡಿಮೆ ತಾಪಮಾನದ ಹವಾನಿಯಂತ್ರಿತ ಕೋಣೆಯಲ್ಲೇ ಕೆಲಸ ಮಾಡಬೇಕು. ಆದರೆ ಏನು ಮಾಡುವುದು, ಅತಿ ಉಷ್ಣವುಳ್ಳ ಕೇಕ್ ಮೇಕರ್ ಪಕ್ಕದಲ್ಲೇ ಇರುವಾಗ ತಂಪಾಗಿಡುವುದಾದರೂ ಹೇಗೆ?ರೆಮಿ ಲೆ ಗೊಫ್ ತಮ್ಮ ಇಷ್ಟೆಲ್ಲಾ ಮಾತುಗಳನ್ನು ಮುಗಿಸಿದ್ದು ಒಂದು ಸುಂದರ ನಗುವಿನೊಡನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.