ಬೃಂದಾವನಸ್ಥರಾದ ಸುಯತೀಂದ್ರರು

ರಾಯಚೂರು: ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮೀಜಿಯವರ ಅಂತ್ಯಸಂಸ್ಕಾರ ಶುಕ್ರವಾರ ಸಂಜೆ ನಡೆಯಿತು. 80 ವರ್ಷದ ಶ್ರೀಗಳು ವೃದ್ಧಾಪ್ಯ, ವಯೋಸಹಜ ನಿಶಕ್ತಿಯಿಂದ ಗುರುವಾರ ಮಧ್ಯರಾತ್ರಿ 12.10ರ ಸುಮಾರಿಗೆ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯುತ್ತಿದ್ದಂತೆ ಭಕ್ತಾದಿಗಳು ಮಂತ್ರಾಲಯಕ್ಕೆ ಧಾವಿಸಿ ಬಂದರು.
ಪೀಠಾಧಿಪತಿಗಳ ಪೂರ್ವಾಶ್ರಮದ ಪುತ್ರ ಹಾಗೂ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್, ವೆಂಕಟೇಶ, ಪುತ್ರಿ ಡಾ.ಸಿಂಧು ಜೋಶಿ ಮತ್ತಿತರರು ಅಂತಿಮ ದರ್ಶನ ಪಡೆದರು. ಹಿಂದಿನ ಪೀಠಾಧಿಪತಿ ಸುಶಮೀಂದ್ರತೀರ್ಥರ ಬೃಂದಾವನ ಪಕ್ಕವೇ ಶ್ರೀ ಮಠದ ಪರಂಪರೆಯಂತೆ ಧಾರ್ಮಿಕ ಕಾರ್ಯ ನೆರವೇರಿಸಿ ಸುಯತೀಂದ್ರರ ಪಾರ್ಥಿವ ಶರೀರವನ್ನು ಇಟ್ಟು ಅದರ ಸುತ್ತ ಬೃಂದಾವನ ನಿರ್ಮಿಸಲಾಯಿತು. ಸಂಜೆ ನೂತನ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿಯವರು ಈ ಬೃಂದಾವನಕ್ಕೆ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿದರು.
ಪೂರ್ವಾಶ್ರಮದಲ್ಲಿ: ಶ್ರೀ ಸುಯತೀಂದ್ರತೀರ್ಥರ ಪೂರ್ವಾಶ್ರಮದ ಹೆಸರು ಸುಶೀಲೇಂದ್ರಾಚಾರ್ಯ. ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಪೇಟಾಲೂರು ಗ್ರಾಮದ ಅನಂತಾಚಾರ್ಯ ಹಾಗೂ ಯಮುನಾಬಾಯಿ ಅವರ ಪುತ್ರ. ಬಿಎಸ್ಸಿ, ಬಿಇಡಿ ಪದವಿ ಬಳಿಕ ಎಂಜಿನಿಯರಿಂಗ್ ಪದವಿಗೆ ಸರಿಸಮಾನವಾದ ಎಎಂಐಇ ತೇರ್ಗಡೆಯಾದರು. ಮಂತ್ರಾಲಯದ 38ನೇ ಪೀಠಾಧಿಪತಿ ಶ್ರೀ ಸುಶಮೀಂದ್ರತೀರ್ಥರ ಉತ್ತರಾಧಿಕಾರಿಯಾಗಿ 2006 ಜುಲೈ 4ರಂದು ನೇಮಕಗೊಂಡಾಗ ಅವರಿಗೆ 72 ವರ್ಷ. 10ಮಾರ್ಚ್ 2014ರಂದು ತಮ್ಮ ಉತ್ತರಾಧಿಕಾರಿ ಶ್ರೀ ಸುಬುಧೇಂದ್ರತೀರ್ಥರಿಗೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠಕ್ಕೆ ಸಂಬಂಧಪಟ್ಟ ಎಲ್ಲ ಆಡಳಿತ ವ್ಯವಸ್ಥೆ ಅಧಿಕಾರ, ಜವಾಬ್ದಾರಿ ವಹಿಸಿಕೊಟ್ಟಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.