ಗುರುವಾರ , ಜುಲೈ 29, 2021
22 °C

ಬೆಂಕಿಗೆ ಆಹುತಿಯಾದ ಟೊಮೆಟೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ವರ್ಷ ಅಕಾಲದಲ್ಲಿ ಬಂದ ಮಳೆ ಹಾಗೂ ಅದರ ಬೆನ್ನಲ್ಲೇ ಕಾಣಿಸಿಕೊಂಡ ಬೆಂಕಿ ರೋಗ  ಟೊಮೆಟೊ ಬೆಳೆಯನ್ನು ಹಾಳು ಮಾಡಿತು.ರೋಗ ನಿಯಂತ್ರಣ ಮಾಡಲು ಆಗದೆ ರೈತರು ಒದ್ದಾಡಿದರು. ಕೆಲ ರೈತರಿಗೆ ಹಾಕಿದ ಬಂಡವಾಳದಲ್ಲಿ ಒಂದು ರೂಪಾಯಿಯೂ ಕೈಗೆ ಬರಲಿಲ್ಲ.ರಾಮನಗರ ಜಿಲ್ಲೆಯ ಮುಡೇನಹಳ್ಳಿಯ ಮರಿಯಪ್ಪ ಅವರು ಮುಕ್ಕಾಲು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಚಂದಾಪುರದ ನರ್ಸರಿಯಿಂದ ಅವರು ರೆಡ್ ರೂಬಿ ತಳಿಯ ಆರು ಸಾವಿರ ಟೊಮೆಟೊ ಸಸಿ ತಂದು ನಾಟಿ ಮಾಡಿದ್ದರು.ಪ್ರತಿ ಗಿಡಕ್ಕೆ ಕೊಟ್ಟಿಗೆ ಗೊಬ್ಬರ ಹಾಕಿದ್ದರು. ಇಪ್ಪತ್ತು ದಿನಗಳ ನಂತರ ಎರಡು ಚೀಲ ಕಾಂಪ್ಲೆಕ್ಸ್ ಗೊಬ್ಬರ ಹಾಕಿದ್ದರು. ಒಂದೂವರೆ ತಿಂಗಳಿಗೆ ಮತ್ತೆ ಎರಡು ಚೀಲ  ಹದಿನೈದು  ದಿವಸಗಳಿಗೊಮ್ಮೆ ಎಂಟು ಸಲ ಔಷಧಿ ಸಿಂಪಡಿಸಿದ್ದರು. ಮರದ ಕೊಂಬೆಗಳನ್ನು ಹೂತು ಗಿಡಗಳಿಗೆ ಆಧಾರ  ಒದಗಿಸಿದ್ದರು. ಚೆನ್ನಾಗಿ ಬೆಳೆದ ಗಿಡಗಳು ಎಲ್ಲರ ಗಮನ ಸೆಳೆದಿದ್ದವು.ಗಿಡಗಳಲ್ಲಿ ಹತ್ತಾರು ಟೊಮೆಟೊ ಕಾಯಿಗಳು ಬಿಟ್ಟಿದ್ದವು. ಮಾರುಕಟ್ಟೆಯಲ್ಲಿ ಟೊಮೆಟೊಗೆ ಒಳ್ಳೆಯ  ಧಾರಣೆ ಇತ್ತು. ಅಕ್ಟೋಬರ್ ತಿಂಗಳ ಕೊನೆಯ ವಾರ ಮಳೆ ಹಿಡಿಯಿತು. ಗಿಡಗಳ ಕುಡಿ ಎಲೆಗಳು ಕಪ್ಪಾಗಲು ಆರಂಭವಾಯಿತು. ನೋಡುತ್ತಿದ್ದಂತೆ ಎಲ್ಲಾ ಎಲೆಗಳು ಒಣಗಿ ಕರ್ರಗಾದವು. ಕಾಯಿಗಳು ಕೊಳೆತು ವಾಸನೆ ಬರಲು ಆರಂಭವಾಯಿತು. ಒಂದೇ ಒಂದು ಕಾಯಿಯೂ ಕೀಳಲು ಸಿಗಲಿಲ್ಲ. ಫಸಲು ಕೈಗೆ ಬಂದಿದ್ದರೆ ಒಂದು ಲಕ್ಷ ರೂ ಲಾಭ ಬರುತ್ತಿತ್ತು. ಈಗ ನಷ್ಟ ಲೆಕ್ಕ ಹಾಕುವ ಸರದಿ ಅವರದು.ನರ್ಸರಿಯಿಂದ ತಂದ ಸಸಿ ಖರೀದಿಸಿದ್ದಕ್ಕೆ  ಮೂರು ಸಾವಿರ ರೂ, ಔಷಧಿಗೆ ಏಳು ಸಾವಿರ, ಗೊಬ್ಬರ, ಕೂಲಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸುಮಾರು ಇಪ್ಪತ್ತು ಸಾವಿರ ರೂಪಾಯಿಗಳು ಅವರ ಕೈ ಬಿಟ್ಟಿವೆ. ಹಾಕಿದ್ದ ಬಂಡವಾಳ ಸರಿದೂಗಿಸುವುದು ಹೇಗೆಂಬ ಚಿಂತೆ ಅವರಿಗೆ. ಇದು ನನ್ನೊಬ್ಬನ ಪರಿಸ್ಥಿತಿ ಅಲ್ಲ. ನಮ್ಮೂರಲ್ಲಿ ಟೊಮೆಟೊ ಬೆಳೆದವರೆಲ್ಲರ ಕಥೆಯೂ ಇದೇನೇ ಅನ್ನುತ್ತಾರೆ ಮರಿಯಪ್ಪನವರು.ಅವರು ಟೊಮೆಟೊ ಬೆಳೆದದ್ದು ಇದೇ ಮೊದಲ ಸಲವೇನೂ ಅಲ್ಲ. ನಲವತ್ತು ವರ್ಷಗಳಿಂದ  ವರ್ಷಗಳಿಂದ ಬೆಳೆಯುತ್ತಿದ್ದಾರೆ. ಆದರೆ ಇಂತಹ ಅನುಭವ ಹಿಂದೆ ಆಗಿಲ್ಲವಂತೆ. ಹಾಕಿದ ಬಂಡವಾಳವೂ  ಬರದಂತಹ ಪರಿಸ್ಥಿತಿ ಬಂದದ್ದು ಇದೇ ಮೊದಲ ಸಲ. ರಾಜ್ಯಾದ್ಯಂತ ಅನೇಕ ಟೊಮೆಟೊ ಬೆಳೆಗಾರರು ಈ ಪರಿಸ್ಥಿತಿ ಎದುರಿಸಿದ್ದಾರೆ.‘ಬೆಂಕಿ ರೋಗ ಬಂದ್ರೆ ಹಾಗೇನೇ. ಯಾವ ಮದ್ದು ಹೊಡೆದರೂ ರೋಗ ಕಡಿಮೆಯಾಗುವುದಿಲ್ಲ’ ಎನ್ನುವುದು ಅನೇಕ ರೈತರ ಅನುಭವ.

 ‘ದಿಢೀರನೆ ಬದಲಾಗುವ ಹವಾಮಾನಕ್ಕೆ ಈ ರೀತಿ ಆಗುವುದು ಸಹಜ. ಇದು ಬೆಂಕಿ ರೋಗದ ಜೊತೆ ಇತರೆ ಶಿಲೀಂಧ್ರಗಳು ಸೇರಿ ಮಾಡಿದ ಹಾನಿ. ಇದುವರೆಗೆ ಈ ರೋಗಕ್ಕೆ ನಿರೋಧಕ  ಶಕ್ತಿ ಇರುವ ತಳಿಗಳು ಬಂದಿಲ್ಲ. ಆದರೆ ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಗಾಳಿಯ  ಮೂಲಕ ಹರಡುವಂತದ್ದು. ಟೊಮೆಟೊ ಬೆಳೆಯ ಸುತ್ತ ಗಾಳಿ ತಡೆ ನಿರ್ಮಿಸಿದರೆ ರೋಗ ನಿಯಂತ್ರಿಸಬಹುದು. ಗಾಳಿ ತಡೆಯಾಗಿ  ಸುತ್ತಲೂ ತೆಂಗಿನ ಗರಿಗಳನ್ನು ಕಟ್ಟಬಹುದು. ದಟ್ಟವಾಗಿ ಜೋಳ ಇಲ್ಲವೇ ಸೀಮೆಹುಲ್ಲನ್ನು ಎತ್ತರಕ್ಕೆ ಬೆಳೆಸಬಹುದು. ಈ ರೀತಿ ಮಾಡಿದರೆ  ರೋಗ ಪೀಡಿತ ತೋಟಗಳಿಂದ ಶಿಲೀಂಧ್ರಗಳು ಹೊರಗೆ ಹೋಗುವುದನ್ನು ತಡೆಯಬಹುದು ಎನ್ನುತ್ತಾರೆ ಖಾಸಗಿ ಬೀಜ ಕಂಪೆನಿಯೊಂದರಲ್ಲಿ ಟೊಮೆಟೊ ತಳಿ ತಜ್ಞರಾಗಿರುವ ಸುಂದರರಾಜ್.ಟೊಮಾಟೋ ಬೆಳೆಗಾರರು ಕೇವಲ ಔಷಧಿಯಿಂದಲೇ ರೋಗ ನಿರ್ವಹಣೆ ಮಾಡಲು ಸಾಧ್ಯಎನ್ನುವ ಭಾವನೆ ಬಿಡಬೇಕು. ಬೆಳೆ ಹಾನಿಗೆ ಕಾರಣವೇನೆಂದು ಅರಿತು ಸೋಂಕು ಹರಡದಂತೆ ಎಚ್ಚರವಹಿಸಬೇಕು ಎನ್ನುವುದು ಅವರ ಸಲಹೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.