ಶುಕ್ರವಾರ, ಮೇ 7, 2021
27 °C
ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಷಿಪ್: ಜಿಂಕಾವಾಗೆ ಪ್ರಶಸ್ತಿ

ಬೆಂಗಳೂರಿನ ಸುದರ್ಶನ್‌ಗೆ ಎರಡನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೃತ್ತಿಯಿಂದ ಪೈಲಟ್ ಆಗಿರುವ ಸುದರ್ಶನ್ ರಾವ್ ಅವರು ಕೊಯಮತ್ತೂರಿನಲ್ಲಿ ಭಾನುವಾರ ನಡೆದ ಎಂಆರ್‌ಎಫ್ 1600 ರೇಸ್ ರೌಂಡ್-2 ಎಂಎಂಎಸ್‌ಸಿ-ಎಫ್‌ಎಂಎಸ್‌ಸಿಐ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.ಅಂತರರಾಷ್ಟ್ರೀಯ ಚಾಲಕರು ಪಾಲ್ಗೊಂಡಿದ್ದ ಈ ರೇಸ್‌ನಲ್ಲಿ ಸುದರ್ಶನ್ ಒಟ್ಟು 16 ನಿಮಿಷ 21 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಜಪಾನ್‌ನ ಯುದೆಯ್ ಜಿಂಕೊವಾ (ಕಾಲ: 16 ನಿಮಿಷ 17ಸೆಕೆಂಡ್) ಗುರಿ ತಲುಪಿ ಮೊದಲ ಸ್ಥಾನ ಪಡೆದುಕೊಂಡರು. 16 ನಿಮಿಷ 34 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಭಾರತದ ಅಶ್ವಿನ್ ಸುಂದರ್ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.ಪಿಯುಸಿ ಓದುವಾಗಲೇ ಜೆ.ಕೆ. ಟೈಯರ್ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸುದರ್ಶನ್ ಪ್ರಶಸ್ತಿ ಗೆದ್ದಿದ್ದರು. ಎಂಆರ್‌ಎಫ್ ಭಾರತ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲೂ ಎರಡನೇ ಸ್ಥಾನ ಪಡೆದಿದ್ದರು. 2005 ರಲ್ಲಿ ರಾಷ್ಟ್ರೀಯ ಫಾರ್ಮುಲಾ ರೇಸಿಂಗ್‌ಗೆ ಅರ್ಹತೆ ಪಡೆದರು.2007ರಲ್ಲಿ ಚೆನ್ನೈನ ಟೀಮ್  ರಾಮ್ಸ ರೇಸಿಂಗ್ ತಂಡದ ಚಾಲಕರಾಗಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ರನ್ನರ್ ಅಪ್ ಆಗಿದ್ದು ಇವರ ಗಮನಾರ್ಹ ಸಾಧನೆ ಎನಿಸಿದೆ. ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ತರಬೇತಿ ಪಡೆದಿರುವ ಸುದರ್ಶನ್ 2009ರಲ್ಲಿ ರಾಷ್ಟ್ರೀಯ ಫಾರ್ಮುಲಾ ಎಲ್‌ಜಿಬಿ ಸ್ಪಿಫ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.ಸವಾಲಿನ  ಸ್ಪರ್ಧೆ: `ಅಂತರರಾಷ್ಟ್ರೀಯ ಚಾಲಕರ ಜೊತೆ ಪೈಪೋಟಿ ನಡೆಸಿದ ಕಾರಣ ಕಠಿಣ ಸವಾಲು ಎದುರಾಯಿತು. ಆದರೂ, ಅವರಿಗೆ ಪ್ರಬಲ ಸವಾಲು ಒಡ್ಡಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸವಾಲುಗಳನ್ನು ಒಪ್ಪಿಕೊಳ್ಳಲು ಈ ಸಾಧನೆ ಸ್ಫೂರ್ತಿಯಾಗಿದೆ' ಎಂದು ಸುದರ್ಶನ್  `ಪ್ರಜಾವಾಣಿ' ಜೊತೆ ಸಂತಸ ಹಂಚಿಕೊಂಡರು.`ಅಂತರರಾಷ್ಟ್ರೀಯ ಚಾಲಕರಿಗೆ ಇರುವ ಅನುಭವ ಹಾಗೂ ಫಿಟ್‌ನೆಸ್ ಜೊತೆ ನಮ್ಮ ಫಿಟ್‌ನೆಸ್ ಹೋಲಿಕೆ ಮಾಡಲು ಆಗುವುದಿಲ್ಲ. ಆದರೂ, ನಾವು ಇನ್ನಷ್ಟು ಪ್ರಯತ್ನ ಪಟ್ಟರೆ ಅವರಿಗೆ ಸವಾಲು ಒಡ್ಡಬಲ್ಲೆವು ಆದರೆ, ನಾವು (ಭಾರತದ ಚಾಲಕರು) ಫಿಟ್‌ನೆಸ್‌ಗೆ ಹೆಚ್ಚು ಒತ್ತು ಕೊಡಬೇಕು' ಎಂದೂ ಅವರು ನುಡಿದರು.ರೇಸಿಂಗ್‌ನಲ್ಲಿ ಮೊದಲ ಐದು ಸ್ಥಾನ ಪಡೆದವರು: ಯದುಯೆ ಜಿಂಕೊವಾ (ಜಪಾನ್, ಕಾಲ: 16:17ಸೆಕೆಂಡ್)-1, ಸುದರ್ಶನ್ ರಾವ್  (ಭಾರತ, ಕಾಲ: 16.21ಸೆ.)-2, ಅಶ್ವಿನ್ ಸುಂದರ್ (ಭಾರತ, 16.34ಸೆ.)-3, ವಿಕಾಸ್ ಆನಂದ್ (ಭಾರತ, ಕಾಲ: 16.35ಸೆ.)-4 ಮತ್ತು ಮಸಕಿ ಫುಜಿಮುರ (ಜಪಾನ್; 16.38ಸೆ)-5.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.