ಸೋಮವಾರ, ಮಾರ್ಚ್ 1, 2021
30 °C

ಬೆಂಗಳೂರು ಕೇಂದ್ರ: 1.37 ಲಕ್ಷದಲ್ಲಿ ಮೋಹನ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಕೇಂದ್ರ: 1.37 ಲಕ್ಷದಲ್ಲಿ ಮೋಹನ್‌ಗೆ ಜಯ

ಬೆಂಗಳೂರು: ‘ಮೋದಿ’ ಅಲೆ ಸತತ ಎರಡನೇ ಬಾರಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್‌ ಅವರನ್ನು ಭಾರಿ ಅಂತರದಲ್ಲಿ ಗೆಲುವಿನ ದಡ ಮುಟ್ಟಿಸಿದೆ.1,37,500 ಮತಗಳ ಅಂತರದಿಂದ ಪಿ.ಸಿ. ಮೋಹನ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.2009ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಟಿ. ಸಾಂಗ್ಲಿ­ಯಾನ ಅವರ ವಿರುದ್ಧ 35,218 ಮತಗಳ ಅಂತರದಿಂದ ಮೋಹನ್‌ ಜಯಸಾಧಿಸಿದ್ದರು. ಆದರೆ, ಈ ಬಾರಿ ದೊರೆತ ಅಪಾರ ಅಂತರದ ಗೆಲುವು ಪಕ್ಷದ ಕಾರ್ಯಕರ್ತರಲ್ಲೂ ಅಚ್ಚರಿ ಮೂಡಿಸಿದೆ.ಮತ ಎಣಿಕೆ ಆರಂಭದಿಂದ ಕೊನೆಯ 27ನೇ ಸುತ್ತಿನವರೆಗೂ ಮೋಹನ್‌ ಮುನ್ನಡೆ ಸಾಧಿಸಿದ್ದು ವಿಶೇಷವಾಗಿತ್ತು. ಆರಂಭದಲ್ಲಿ 3319 ಮತಗಳ ಅಂತರ ಸಾಧಿಸಿದ ಮೋಹನ್‌, 6ನೇ ಸುತ್ತಿನಲ್ಲಿ ಕೇವಲ 271 ಮತಗಳ ಮುನ್ನಡೆ ಸಾಧಿಸಿದಾಗ ಫಲಿತಾಂಶ ಏರು­ಪೇರಾಗುವ ಸಾಧ್ಯತೆಗಳ ಬಗ್ಗೆ ಕುತೂಹಲ ಮೂಡಿಸಿತು. 7ನೇ ಸುತ್ತು ಮುಗಿದಾಗ 6329 ಮತಗಳ ಅಂತರ ಕಾಯ್ದುಕೊಂಡ ಮೋಹನ್‌ ಕೊನೆವರೆಗೂ ಅಂತರ ಹೆಚ್ಚಿಸಿಕೊಳ್ಳುತ್ತಲೇ ಇದ್ದರು.ಮೋಹನ್‌ 5,57,130 ಮತಗಳು,  ರಿಜ್ವಾನ್‌ ಅರ್ಷದ್‌ 4,19,630 ಮತಗಳನ್ನು ಪಡೆದರು. ಫಲಿತಾಂಶದ ಸುಳಿವು ದೊರೆತ ರಿಜ್ವಾನ್‌ ಮಧ್ಯಾಹ್ನ 12ಗಂಟೆ ವೇಳೆಗೆ ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು.ವಾಣಿಜ್ಯೋದ್ಯಮಿಯೂ ಆಗಿರುವ ಮೋಹನ್‌ ಅವರು ವ್ಯಾಪಾರಿ ವಲಯದ ಜತೆಗೆ ಎಲ್ಲ ವರ್ಗಗಳ ಜತೆ ಇಟ್ಟುಕೊಂಡಿದ್ದ ಸಂಪರ್ಕ ಮತಗಳಾಗಿ ಪರಿವರ್ತನೆಯಾಗಿರುವುದು ಸಹ ಪ್ರಮುಖ ಅಂಶವಾಗಿದೆ. ಬಹುಭಾಷಿಕರು ಇರುವ ಈ ಕ್ಷೇತ್ರದಲ್ಲಿ ಅಭ್ಯರ್ಥಿಯ ವರ್ಚಸ್ಸಿಗಿಂತ ಹೆಚ್ಚಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಹಾಗೂ ಪಕ್ಷದ ಮೂವರು ಶಾಸಕರು ರೂಪಿಸಿದ ಕಾರ್ಯತಂತ್ರಗಳು ಮೋಹನ್‌ ಅವರಿಗೆ ವರವಾಗಿ ಪರಿಣಮಿಸಿರುವುದು ಸ್ಪಷ್ಟವಾಗಿದೆ.ಬೆಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೂವರು ಸಚಿವರು ಹಾಗೂ ಒಬ್ಬರು ಕಾಂಗ್ರೆಸ್‌ ಶಾಸಕರಿದ್ದರೂ ಬಿಜೆಪಿಯ ಗೆಲುವಿನ ನಾಗಾಲೋಟ ತಡೆಯುವಲ್ಲಿ ವಿಫಲರಾಗಿದ್ದಾರೆ. ಗಾಂಧಿನಗರವನ್ನು ಪ್ರತಿನಿಧಿಸುವ ಆಹಾರ ಸಚಿವ ದಿನೇಶ್ ಗುಂಡೂರಾವ್‌, ಸರ್ವಜ್ಞ ನಗರ ಪ್ರತಿನಿಧಿ­ಸುವ ಗೃಹ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಶಿವಾಜಿನಗರ ಪ್ರತಿನಿಧಿ­ಸುವ ಆರ್.­ರೋಷನ್‌ ಬೇಗ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ರೂಪಿಸಿದ ಕಾರ್ಯತಂತ್ರಗಳು ಯಶಸ್ಸು ತಂದುಕೊಟ್ಟಿಲ್ಲ.‘ಯುವ’ ಕೋಟಾದಲ್ಲಿ ಟಿಕೆಟ್‌ ಪಡೆದು ಸ್ಪರ್ಧಿಸಿದ್ದ ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ರಿಜ್ವಾನ್‌ ಅರ್ಷದ್ ಅವರು ಸರ್ವಜ್ಞನಗರ, ಶಿವಾಜಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವಲ್ಲಿ ವಿಫಲರಾಗಿದ್ದಾರೆ.  ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್‌ ಪ್ರತಿನಿಧಿಸುವ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲೂ ಮೋಹನ್‌ ಅವರಿಗಿಂತ ರಿಜ್ವಾನ್‌ ಅರ್ಷದ್‌ 510ರಷ್ಟು ಕಡಿಮೆ ಮತಗಳನ್ನು ಪಡೆದಿದ್ದಾರೆ.ಕೊನೆ ಕ್ಷಣದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದ ನಂದಿನಿ ಅಳ್ವ ಅವರು ಕೇವಲ 20,387 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ನಿಧಾನ ಗತಿಯಲ್ಲಿ ಮತ ಎಣಿಕೆ: ಮತ ಎಣಿಕೆ ಆರಂಭದಿಂದಲೂ ನಿಧಾನಗತಿಯಲ್ಲಿ ನಡೆಯಿತು. ಸಿಬ್ಬಂದಿಗಳ ನಡುವೆ ಸಮನ್ವಯ ಕೊರತೆಯಿಂದ ಬೆಳಿಗ್ಗೆ ಕೆಲಕಾಲ ವಿಳಂಬವಾಯಿತು. ಮಧ್ಯಾಹ್ನ 12ರ ವೇಳೆಗೆ ರಾಜಾಜಿನಗರ, ಸರ್ವಜ್ಞನಗರ, ಗಾಂಧಿನಗರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಮುಗಿದರೂ ಉಳಿದ ಕ್ಷೇತ್ರಗಳ ಮತ ಎಣಿಕೆ ನಿಧಾನಗತಿಯಲ್ಲಿ ನಡೆಯಿತು. ಮಹದೇವಪುರ ಕ್ಷೇತ್ರದ ಮತ ಎಣಿಕೆ ಮುಗಿದಾಗ 3 ಗಂಟೆ ದಾಟಿತ್ತು. ಅಧಿಕೃತವಾಗಿ ಕ್ಷೇತ್ರದ ಫಲಿತಾಂಶವನ್ನು 5.30ರ ನಂತರ ಪ್ರಕಟಿಸಲಾಯಿತು.ಬಾಲಕೃಷ್ಣನ್‌ಗೆ ನಿರಾಶೆ

ಆಮ್‌ ಆದ್ಮಿ ಪಕ್ಷದ (ಆಪ್‌) ಅಭ್ಯರ್ಥಿಯಾಗಿ ಗಮನಸೆಳೆದಿದ್ದ ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ.ಬಾಲಕೃಷ್ಣನ್‌ ಅವರು ನಗರದ ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ. 39,869 ಮತಗಳನ್ನು ಪಡೆದ ಬಾಲಕೃಷ್ಣನ್‌ ಅವರು ಮೂರನೇ ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕಾರ್ಪೋರೇಟ್‌ ಕ್ಷೇತ್ರ ತೊರೆದು ಸಂಸತ್‌ ಪ್ರವೇಶಿಸುವ ಅವರ ಬಯಕೆ ಭಗ್ನಗೊಂಡಿದೆ.‘ಜನಸಂಪರ್ಕ ಗೆಲುವು ತಂದಿತು’

‘ಕಳೆದ 5 ವರ್ಷಗಳಿಂದ ಜನರ ಜತೆಗಿನ ಸಂಪರ್ಕ ಹಾಗೂ ಶಾಸಕರಾದ ಅರವಿಂದ ಲಿಂಬಾವಳಿ, ಸುರೇಶ್‌ಕುಮಾರ್‌, ಎಸ್‌. ರಘು ಅವರ ಶ್ರಮದಿಂದ ಗೆಲುವು ಸಾಧ್ಯವಾಗಿದೆ. ಜತೆಗೆ ಯುಪಿಎ ಸರ್ಕಾರದ 10 ವರ್ಷದ ದುರಾಡಳಿತ ಬೇಸತ್ತ ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕ್ಷೇತ್ರದ ಜನರ ಆಶಯದಂತೆ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ಕೈಗೊಂಡು ಜನರ ವಿಶ್ವಾಸ ಉಳಿಸಿಕೊಳ್ಳುತ್ತೇನೆ’

–  ಪಿ.ಸಿ. ಮೋಹನ್‌, ಬಿಜೆಪಿ ಸಂಸದ‘ಬದಲಾವಣೆ ಅಲೆ ತಂದ ಸೋಲು’


‘ಬದಲಾವಣೆ ಗಾಳಿ ಈ ಕ್ಷೇತ್ರಕ್ಕೂ ತಟ್ಟಿದೆ. ಸಚಿವರು, ಶಾಸ­ಕರು ಸೇರಿದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರೂ ಗೆಲುವು ಸಾಧಿ­ಸಲು ವಿಫಲರಾಗಿದ್ದೇವೆ. ವೈಯಕ್ತಿಕ ವೈಫಲ್ಯವೂ ಸೋಲಿಗೆ ಕಾರಣವಾ­ಗಿದೆ. ಜನರಲ್ಲಿ ವಿಶ್ವಾಸ ಮೂಡಿಸು­ವಲ್ಲಿ ನಾನು ವಿಫಲನಾಗಿದ್ದೇನೆ. ಒಟ್ಟಾರೆ ಇದು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ’

– ರಿಜ್ವಾನ್‌ ಅರ್ಷದ್‌,ಕಾಂಗ್ರೆಸ್‌ ಅಭ್ಯರ್ಥಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.