ಶನಿವಾರ, ಮೇ 15, 2021
24 °C

ಬೆಂಡೆಬೆಂಬಳಿ: ಪಡಿತರ ಚೀಟಿಗಾಗಿ ಜನತೆ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಡೆಬೆಂಬಳಿ: ಪಡಿತರ ಚೀಟಿಗಾಗಿ ಜನತೆ ಪರದಾಟ

ಯಾದಗಿರಿ: ಒಂದು ರೂಪಾಯಿ ದರದಲ್ಲಿ ಅಕ್ಕಿ ವಿತರಣೆಗೆ ಕಾಂಗ್ರೆಸ್ ಸರ್ಕಾರ ಸಿದ್ಧತೆಗಳನ್ನು ಆರಂಭಿಸಿದ್ದರೆ, ಇತ್ತ ಪಡಿತರ ಚೀಟಿಗಾಗಿ ಜನರು ಪಡಬಾರದ ಕಷ್ಟಗಳನ್ನು ಅನುಭವಿಸುವಂತಾಗಿದೆ. ಅಕ್ಕಿ ಪಡೆಯುವುದಕ್ಕಾಗಿ ಪಡಿತರ ಚೀಟಿಗಳನ್ನು ಪಡೆಯಲು ಸಾರ್ವಜನಿಕರು ನಿತ್ಯ 50 ಕಿ.ಮೀ. ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.ಶಹಾಪುರ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರದ್ದು ಇದೇ ಪಾಡು. ಇದು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಗೋಳಾಗಿದ್ದರೂ, ಬೆಂಡೆಬೆಂಬಳಿ ಗ್ರಾಮ ಪಂಚಾಯಿತಿ ಜನರು ಮಾತ್ರ ನಿತ್ಯದ ಕೆಲಸಗಳನ್ನು ಬದಿಗೊತ್ತಿ ಶಹಾಪುರಕ್ಕೆ ಹೋಗಬೇಕಾಗಿದೆ.ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತುಮಕೂರ, ಕೋಡಾಲ, ಇಟಗಿ, ಕದರಾಪೂರ, ಅಬಿಶಾಳ, ರೋಟ್ನಡಗಿ ಹಾಗೂ ಬೆಂಡೆಬೆಂಬಳಿ ಸೇರಿದಂತೆ ಒಟ್ಟು ಏಳು ಹಳ್ಳಿಗಳು ಬರುತ್ತವೆ.ಪಡಿತರ ಚೀಟಿ ಭಾವಚಿತ್ರ ತೆಗೆಸಲು ಜನರು ಗ್ರಾಮ ಪಂಚಾಯಿತಿಗೆ ಬಂದರೆ, ಅಲ್ಲಿನ ಕಂಪ್ಯೂಟರ್ ಆಪರೇಟರ್ ಮಾತ್ರ `ನೀವೆಲ್ಲರೂ ಪಡಿತರ ಚೀಟಿಗಾಗಿ ಪೋಟೋ ತೆಗೆಯಲು ಹಾಗೂ ಅದಕ್ಕೆ ಸಂಬಂಧಪಟ್ಟ ಇನ್ನಿತರ ಕೆಲಸಕ್ಕೆ ಶಹಾಪುರದ ಖಾಸಗಿ ಕಂಪ್ಯೂಟರ್ ಸೆಂಟರ್ ಹೋಗಬೇಕು' ಎಂದು ಸೂಚಿಸಿದ್ದಾರೆ.ಈ ಪಂಚಾಯಿತಿಯ ವ್ಯಾಪ್ತಿಯ ಅನೇಕ ಗ್ರಾಮಸ್ಥರು ಸುಮಾರು 55 ಕಿ.ಮೀ. ದೂರದ ಶಹಾಪುರಕ್ಕೆ ಹೋಗಿ ಪಡಿತರ ಚೀಟಿಗಾಗಿ ಭಾವಚಿತ್ರ ತೆಗೆಸಿಕೊಳ್ಳುತ್ತಿದ್ದಾರೆ.ಯಾವುದೇ ರೀತಿಯ ಪಡಿತರ ಚೀಟಿ ಪಡೆಯಬೇಕಾದರೆ ಆ ಕುಟುಂಬದ 12 ವರ್ಷ ಮೇಲಿನ ಎಲ್ಲ ಸದಸ್ಯರು ಹಾಗೂ ಅದಕ್ಕೆ ಒಬ್ಬ ಸಾಕ್ಷಿದಾರರೆಲ್ಲರೂ ಸೇರಿ ಶಹಾಪುರದ ಕಂಪ್ಯೂಟರ್ ಸೆಂಟರ್‌ಗೆ ಹೋಗಬೇಕು. ಅಲ್ಲಿ ಅವರೆಲ್ಲರ ಭಾವಚಿತ್ರ ತೆಗೆಯುವುದರ ಜೊತೆಗೆ ಹೆಬ್ಬೆಟ್ಟಿನ ಗುರುತನ್ನು ಪಡೆಯಲಾಗುತ್ತದೆ.ಪಂಚಾಯಿತಿ ವ್ಯಾಪ್ತಿಯ ಅನೇಕ ಹಳ್ಳಿಗಳ ಜನರಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮನೆಯ ಎಲ್ಲ ಸದಸ್ಯರು ದೂರದ ಶಹಾಪುರಕ್ಕೆ ಹೋಗಬೇಕಾದರೆ ಕನಿಷ್ಠವೆಂದರೂ ರೂ. 500 ಖರ್ಚಾಗುತ್ತದೆ. ಅದೂ ಒಂದೇ ದಿನದಲ್ಲಿ ಕೆಲಸ ಮುಗಿದರೆ ಪುಣ್ಯ. ಮತ್ತೊಂದು ದಿನ ಬರುವಂತೆ ಹೇಳಿದರೆ, ಮತ್ತೆ ರೂ.500 ಖರ್ಚು ಮಾಡಬೇಕಾಗಿದೆ ಎನ್ನುತ್ತಾರೆ ಶಿವಪ್ಪ ರೋಟ್ನಡಗಿ.ಸದ್ಯಕ್ಕೆ ಮುಂಗಾರು ಹಂಗಾಮಿನ ಬಿತ್ತನೆಯ ಸಮಯವಾಗಿದ್ದು, ಹೊಲದಲ್ಲಿ ಸಾಕಷ್ಟು ಕೆಲಸಗಳಿವೆ. ಆದರೆ ಅವೆಲ್ಲವನ್ನೂ ಬದಿಗೊತ್ತಿ ಪಡಿತರ ಚೀಟಿಗಾಗಿ ಶಹಾಪುರಕ್ಕೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ ಎನ್ನುತ್ತಾರೆ ರೈತರಾದ ಮಲ್ಲಿಕಾರ್ಜುನ ತುಮಕೂರ,  ಚಾಂದ ಅಬಿಶಾಳ.ಈ ಬಗ್ಗೆ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳನ್ನು ಕೇಳಿದರೆ, `ಈ ಕುರಿತು ನಮಗೇನು ಗೊತ್ತಿಲ್ಲ. ಏನ್ ಕೇಳಬೇಡಿ' ಎಂದು ಸಿಟ್ಟಿನಿಂದಲೇ ಹೇಳುತ್ತಾರೆ ಎಂದು ರೈತರು ಆರೋಪಿಸಿದ್ದಾರೆ.ಸರ್ಕಾರದ ನಿಯಮಾವಳಿಗಳ ಪ್ರಕಾರ ಆಯಾ ಪಂಚಾಯಿತಿ ವ್ಯಾಪ್ತಿಯ ಪಡಿತರ ಚೀಟಿಗಳ ಭಾವಚಿತ್ರವನ್ನು ಪಂಚಾಯಿತಿಯಲ್ಲಿಯೇ ತೆಗೆಯಬೇಕು.ಪಡಿತರ ಚೀಟಿಗೆ ಸಂಬಂಧಿಸಿದ ಪೋಟೋ, ಬಯೋಮೆಟ್ರಿಕ್ ದಾಖಲೆಗಳನ್ನು ದಾಖಲಿಸುವುದು ಸೇರಿದಂತೆ ಎಲ್ಲವನ್ನೂ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಮಾಡಬೇಕು. ಆದರೆ ಬೆಂಡೆಬೆಂಬಳಿ ಪಂಚಾಯಿತಿಯಲ್ಲಿ ಮಾತ್ರ ಅಧಿಕಾರಿಗಳು ಹೇಳಿದ್ದೇ ಕಾನೂನಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಕರವೇ ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ರಂಗಯ್ಯ ಮುಸ್ತಾಜೀರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.