ಕೊಪ್ಪಳ: ತಾಲ್ಲೂಕಿಗೆ ಬಂದ ಬೃಹತ್ ನೀರಾವರಿ ಯೋಜನೆಗಳಿಂದ ತುಂಗಭದ್ರಾ ಹಿನ್ನೀರಿಗೆ ಅತಿ ಸಮೀಪದಲ್ಲಿರುವ ಬೆಟಗೇರಿ ಗ್ರಾಮದ 8 ಸಾವಿರ ಎಕರೆ ಪ್ರದೇಶ ವಂಚಿತವಾಗಿದೆ. ನೀರಾವರಿ ಯೋಜನೆಗಳ ನಕ್ಷೆ ಪ್ರಕಾರ ಪೈಪ್ಲೈನ್ ಗ್ರಾಮದಲ್ಲೇ ಹಾದುಹೋಗುವಂತಿದ್ದರೂ ಬೆಟಗೇರಿಗೆ ಮಾತ್ರ ಹನಿ ನೀರು ಸಿಗುತ್ತಿಲ್ಲ. ಹೀಗಾಗಿ ಈ ಗ್ರಾಮದ ರೈತರು ಹೋರಾಟದ ಮೊರೆ ಹೋಗಿದ್ದಾರೆ.

ಮೂರು ಸಮೀಕ್ಷೆ; ಹನಿನೀರೂ ಇಲ್ಲ: ಇಲ್ಲಿಗೆ ಬಂದದ್ದು ಒಟ್ಟು ಮೂರು ಯೋಜನೆಗಳು. ಕೆಲವು ವರ್ಷಗಳ ಹಿಂದೆ 100 ಕೋಟಿ ವೆಚ್ಚದ ಅಳವಂಡಿ –ಬೆಟಗೇರಿ ಏತ ನೀರಾವರಿ ಯೋಜನೆ ರೂಪಿಸಿ 8,348 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಬಗ್ಗೆ ಸಮೀಕ್ಷೆ ನಡೆಸಿ ನಕ್ಷೆ ಸಿದ್ಧಪಡಿಸಲಾಯಿತು. ಇಲ್ಲಿ ನೇರ್ಲಿಗಿ ಬಳಿ ಜಾಕ್ವೆಲ್ ನಿರ್ಮಿಸಿ ನೀರು ಪಂಪ್ ಮಾಡುವ ವ್ಯವಸ್ಥೆ ಯೋಜಿಸಲಾಗಿತ್ತು. ಕೊನೆಗೆ ಅದಕ್ಕೆ ಹಣಕಾಸು ಅನುಮೋದನೆ ಸಿಗದೇ ಮೂಲೆಗುಂಪಾಯಿತು. ಅದರ ಬಳಿಕ ಸಣ್ಣ ನೀರಾವರಿ ಇಲಾಖೆಯಿಂದ 2012ರಲ್ಲಿ ರೂ 11.50 ಕೋಟಿ ವೆಚ್ಚದಲ್ಲಿ ಪ್ರತ್ಯೇಕವಾಗಿ ಬೆಟಗೇರಿಗೆ ಏತ ನೀರಾವರಿ ಯೋಜನೆ ಸಿದ್ಧಪಡಿಸಿ ಸಮೀಕ್ಷೆ ನಡೆಯಿತು. ಇದರದ್ದೂ ಮೊದಲ ಯೋಜನೆಯದ್ದೇ ಕಥೆ.

ಇದೀಗ ಮತ್ತೆ ಜಲಸಂಪನ್ಮೂಲ ಇಲಾಖೆಯಿಂದ ರೂ 62 ಕೋಟಿ ವೆಚ್ಚದಲ್ಲಿ ಅಳವಂಡಿ–ಬೆಟಗೇರಿ ಏತ ನೀರಾವರಿ ಯೋಜನೆಗೆ ಸಮೀಕ್ಷೆ ನಡೆದಿದೆ. ಕಾತರಕಿಯ ತುಂಗಭದ್ರಾ ಹಿನ್ನೀರು ಪ್ರದೇಶದಿಂದ ನೇರವಾಗಿ ಬೆಟಗೇರಿ–ಅಳವಂಡಿಗೆ ನೀರು ಪೂರೈಸುವ ಯೋಜನೆಯಿದು. ಇದರಲ್ಲಿ ಯಲಬುರ್ಗಾ ತಾಲ್ಲೂಕಿನ ಗಡಿ ಭಾಗದ ಕೋಮಲಾಪುರ, ತಳಕಲ್ ಸೇರಿದಂತೆ ಹಲವು ಗ್ರಾಮಗಳಿಗೆ ನೀರು ಪೂರೈಸಲಾಗುತ್ತದೆ. ಅದಕ್ಕೇನೂ ಆಕ್ಷೇಪವಿಲ್ಲ. ಆದರೆ ಬೆಟಗೇರಿಗೆ ನೀರೇ ಇಲ್ಲ. ಈ ವಿಷಯ ತಿಳಿದ ಬೆಟಗೇರಿಯ ರೈತರು ಯೋಜನೆಯ ನಕ್ಷೆ ಬದಲಾಯಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಲ್ಲಿ ಪಟ್ಟು ಹಿಡಿದಿದ್ದಾರೆ.

ಕೊನೆಗೆ ರೈತರನ್ನು ಸಮಾಧಾನಪಡಿಸುವ ದೃಷ್ಟಿಯಿಂದ ಹನಕುಂಟೆಯಲ್ಲಿ ಈಗಾಗಲೇ ಇರುವ 16 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಜಾಕ್ವೆಲ್ನ್ನು ಕೇಂದ್ರವಾಗಿ ಗುರುತಿಸಿ ನಕ್ಷೆ ಬದಲಿಸಿದ್ದಾರೆ. ಆದರೆ, ಸಂಗ್ರಹಾಗಾರ ಅಥವಾ ರೈಸಿಂಗ್ ಪಾಯಿಂಟ್ ಬಗ್ಗೆ ಏನೂ ಹೇಳಿಲ್ಲ. ಆದರೆ, ರೈತರು ಹೇಳುವ ಪ್ರಕಾರ ಬೆಟಗೇರಿಯಲ್ಲಿ ಸಂಗ್ರಹ ಕೇಂದ್ರ (ಸ್ಟೋರೇಜ್ ಪಾಯಿಂಟ್) ನಿರ್ಮಿಸಿ ಈ ಭಾಗದ 8 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಬೇಕು. ಉಳಿದ ನೀರನ್ನು ಮುಂದಕ್ಕೆ ಒಯ್ಯಲಿ. ಕೃಷ್ಣಾ ‘ಬಿ’ ಸ್ಕೀಂನಲ್ಲಿ ಮಂಜೂರಾದ 0.50 ಟಿಎಂಸಿ ನೀರನ್ನು ನಮ್ಮ ಭಾಗಕ್ಕೆ ಕೊಡಬೇಕು. ನಮ್ಮ ನೀರು ನಮ್ಮ ಹಕ್ಕು ಎಂದು ಧ್ವನಿಯೆತ್ತಿದ್ದಾರೆ.

ಅತ್ತ ಅಳವಂಡಿ ಹೋಬಳಿ ವ್ಯಾಪ್ತಿಯ ಕವಲೂರು, ಮೈನಳ್ಳಿ, ಬಿಕನಹಳ್ಳಿಗಳಲ್ಲಿ ಸಿಂಗಟಾಲೂರು ಏತನೀರಾವರಿ ಯೋಜನೆಯ ಕಾಲುವೆ ಕಾಮಗಾರಿಗೆ ಭೂಸ್ವಾಧೀನ ನಡೆದಿದೆ. ಆ ಯೋಜನೆಯ ಪ್ರಯೋಜನ ಅಳವಂಡಿ ಭಾಗಕ್ಕೆ ಆಗುತ್ತದೆ. ಆದರೆ, ಬೆಟಗೇರಿಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಂಬಂಧಿಸಿ ಸಮೀಕ್ಷೆಯಾಗಲೀ ಭೂಸ್ವಾಧೀನವಾಗಲೀ ಆಗಿಲ್ಲ. ನಮ್ಮನ್ನು ಕತ್ತಲಲ್ಲಿಟ್ಟು ಯೋಜನೆ ರೂಪಿಸಿದ್ದಾರೆ ಎಂದು ಬೆಟಗೇರಿಯ ರೈತ ಏಳುಕೋಟೇಶ ಕೋಮಲಾಪುರ ಆರೋಪಿಸಿದರು.

ನಮಗೆ ದೂರದಿಂದ ನೀರು ತರುವ ಕೋಟಿಗಟ್ಟಲೆ ರೂಪಾಯಿ ವೆಚ್ಚದ ಯೋಜನೆಗಳು ಬೇಡ. ಇಲ್ಲಿಯೇ ಸಮೀಪದ ಜಲಮೂಲದಿಂದ (ತುಂಗಭದ್ರಾ ಹಿನ್ನೀರಿನಿಂದ ಹನಕುಂಟೆ–ಅಳವಂಡಿ ಪೈಪ್ಲೈನ್ನಲ್ಲಿ) ನಮ್ಮ ಪ್ರದೇಶಕ್ಕೆ ನೀರುಕೊಟ್ಟರೆ ಸಾಕು. ಅತ್ತ ಅಳವಂಡಿ ಬೆಟಗೇರಿ ಯೋಜನೆಯ ನೀರೂ ಇಲ್ಲ. ಇತ್ತ ಸಿಂಗಟಾಲೂರು ಯೋಜನೆಯ ನೀರೂ ಇಲ್ಲ. ಮಾಡಿದ ಸಮೀಕ್ಷೆಗಳು ಅನುಷ್ಠಾನಕ್ಕೆ ಬರುತ್ತಿಲ್ಲ. ಹೀಗಿರುವಾಗ ನಾವೇನು ಮಾಡಬೇಕು ಎಂಬುದು ಗ್ರಾಮದ ಪಂಚಾಯಿತಿ ಸದಸ್ಯರೂ ಸೇರಿದಂತೆ ರೈತರ ಆಕ್ರೋಶದ ಪ್ರಶ್ನೆ.

ಜಲಸಂಪನ್ಮೂಲ ಇಲಾಖೆಯ ಮೂಲಗಳು, ‘ಬೆಟಗೇರಿ ಗ್ರಾಮವನ್ನು ಸಿಂಗಟಾಲೂರು ಏತನೀರಾವರಿ ಯೋಜನೆ ವ್ಯಾಪ್ತಿಗೆ
ಸೇರಿಸಲಾಗಿದೆ. ಈ ಯೋಜನೆಗೆ ಭೂಸ್ವಾಧೀನ ನಡೆದು ಕಾಮಗಾರಿ ಚಾಲನೆಯಲ್ಲಿದೆ. ಒಂದೇ ಗ್ರಾಮಕ್ಕೆ ಎರಡು ಯೋಜನೆಗಳಲ್ಲಿ ನೀರು ಕೊಡಲಾಗದು. ಅವರಿಗೆ ಸಿಗಬೇಕಾದ ಅರ್ಧ ಟಿಎಂಸಿ ನೀರು ಈ ಯೋಜನೆ ಮೂಲಕ ಸಿಗುತ್ತದೆ. ಅದು ಬೇಡವಾದರೆ ಇಲಾಖೆಯ ಉನ್ನತಮಟ್ಟದಲ್ಲಿ ಚರ್ಚಿಸಿ ಭೂಸ್ವಾಧೀನ ಕೈಬಿಡಲು ಹೇಳಲಿ’ ಎನ್ನುತ್ತವೆ.

ಈ ಬಗ್ಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ನ್ನು ಸಂಪರ್ಕಿಸಿದಾಗ ಸ್ಪಷ್ಟ ಮಾಹಿತಿ ಸಿಗಲಿಲ್ಲ.
ಹೋರಾಟಕ್ಕೆ ಸಿದ್ಧತೆ: ಹಲವು ವರ್ಷಗಳಿಂದ ಪ್ರಸ್ತಾವ, ಸಮೀಕ್ಷೆ ಇತ್ಯಾದಿ ನಾಟಕೀಯ ವಿದ್ಯಮಾನಗಳಿಂದ ಬೇಸತ್ತ ರೈತರು ರೋಸಿಹೋಗಿ ಹೋರಾಟದ ಹಾದಿ ಹಿಡಿದಿದ್ದಾರೆ. ಫೆ. 10ರಂದು ಬೆಟಗೇರಿ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಬಹಿಷ್ಕರಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ರೈತರು ತಿಳಿಸಿದರು.

‘ಅನುಕೂಲವಿಲ್ಲದ ಯೋಜನೆ ಏಕೆ?’
ಸಿಂಗಟಾಲೂರು ಯೋಜನೆ ನಮಗೆ ಬೇಡ. ಏಕೆಂದರೆ ಆ ಯೋಜನೆ ವ್ಯಾಪ್ತಿಯ ಕೊನೆ ಭಾಗದ ರೈತರು ನಾವು. ಹಾಗಾಗಿ, ಅದು ಜಾರಿಯಾದರೂ ನಮಗೆ ನೀರು ಪೂರ್ಣ ಪ್ರಮಾಣದಲ್ಲಿ ಸಿಗುವ ಖಾತ್ರಿ ಇಲ್ಲ. ಮಾತ್ರವಲ್ಲ ಅದರಲ್ಲಿ ಬೆಟಗೇರಿಯ 8 ಸಾವಿರ ಎಕರೆ ಪ್ರದೇಶದ ಪೈಕಿ ಕೇವಲ 6 ಸಾವಿರ ಎಕರೆ ಪ್ರದೇಶವನ್ನು ಒಳಪಡಿಸಲಾಗಿದೆ. ಉಳಿದ ರೈತರು ಏನು ಮಾಡಬೇಕು? ನಮಗೆ ಹತ್ತಿರವಿರುವ ಹನಕುಂಟೆ, ಕಾತರಕಿ, ನೇರ್ಲಿಗಿ ಈ ಗ್ರಾಮಗಳಲ್ಲಿ ಎಲ್ಲೇ ಜಾಕ್ವೆಲ್ ನಿರ್ಮಿಸಿ ನೀರು ಪೂರೈಸಿದರೆ ನಮ್ಮ ಭಾಗಕ್ಕೆ ಸಮೃದ್ಧ ನೀರು ದೊರೆಯುತ್ತದೆ. ನೀರು ಇಷ್ಟು ಸಮೀಪ ಲಭ್ಯವಿರುವಾಗ ಸುತ್ತಿ ಬಳಸಿ ಏಕೆ ನೀರು ತರಬೇಕು? ರೈತರಿಗೆ ಅನುಕೂಲವಾಗದ ಯೋಜನೆ ತರುವುದಾದರೆ ನಮಗೆ ಅದು ಬೇಡ. ಎಲ್ಲರ ಜತೆ ನಾನೂ ವಿರೋಧ ವ್ಯಕ್ತಪಡಿಸುತ್ತೇನೆ. ಇದು ಪಕ್ಷಾತೀತ ಹೋರಾಟ. 2002ರಿಂದಲೂ ಈ ಭಾಗದಲ್ಲಿ ನೀರಾವರಿ ಸಂಬಂಧಿಸಿದಂತೆ ಹೋರಾಟ ನಡೆಸಿದ್ದೇವೆ. ಕೊನೆಗೂ ಈ ಭಾಗವನ್ನು ನೀರಾವರಿಯಿಂದ ವಂಚಿಸಲಾಗುತ್ತಿದೆ. ಇಷ್ಟಾಗಿಯೂ ಯೋಜನೆ ತರುತ್ತಾರಾದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತೇವೆ.
–ವೀರೇಶ್ ಸಜ್ಜನ್, ತಾ.ಪಂ. ಸದಸ್ಯ ಬೆಟಗೇರಿ

‘ಮೋಸಗಾರರ ವಿರುದ್ಧ ಹೋರಾಟ’
ನಮಗೆ ಎರಡೂ ಪ್ರಮುಖ ರಾಜಕೀಯ ಪಕ್ಷಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮೋಸ ಮಾಡಿದ್ದಾರೆ. ಮೂಗಿಗೆ ತುಪ್ಪ ಸವರಿದ್ದಾರೆ. ಬರೀ ಸಮೀಕ್ಷೆಯ ನಾಟಕಗಳು ನಡೆದಿವೆ. ಹಾಗಾಗಿ ಹೋರಾಟ ಅನಿವಾರ್ಯ
– ಭೀಮಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಬೆಟಗೇರಿ

‘ನಮ್ಮ ನೀರು ನಮಗೆ ಕೊಡಿ’
ಈಗ ಅರ್ಧ ಟಿಎಂಸಿ ನೀರು ನಮಗೆ ಮಂಜೂರಾಗಿದೆ. ಅದನ್ನು ನಮಗೆ ಕೊಡಿ. ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ನಮ್ಮನ್ನು ಕೈಬಿಡಿ. ಈಗಾಗಲೇ ಅಳವಂಡಿ ಬೆಟಗೇರಿ (ಕಾತರಕಿ– ಹನಕುಂಟೆ ಕೇಂದ್ರವಾಗಿ) ಸಮೀಕ್ಷೆಯಾಗಿರುವ ಏತ ನೀರಾವರಿ ಯೋಜನೆಯ ನೀರು ನಮಗೆ ಕೊಡಿ. ಈ ವಿಷಯದಲ್ಲಿ ನಮಗೆ ಹೋರಾಟ ಅನಿವಾರ್ಯ.
– ನಾರಾಯಣಪ್ಪ ಕೊರಣ್ಣನವರ್, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.