ಗುರುವಾರ , ಜೂನ್ 24, 2021
29 °C

ಬೆಟ್ಟಗುಡ್ಡಗಳ ಮಧ್ಯೆ ರಂಗಿನಾಟ!

ಅನಂತ ಜೋಶಿ Updated:

ಅಕ್ಷರ ಗಾತ್ರ : | |

ಹೋಳಿ ಹುಣ್ಣಿಮೆಯ ರಂಗುರಂಗಿನೊಂದಿಗೆ ಚಿತ್ತಾಕರ್ಷಕ ವಾಗಿ ನಡೆಯುವ ಬಣ್ಣದಾಟದ ಮೂಲ ಕೇಂದ್ರ ಸ್ಥಾನ ದಕ್ಷಿಣ ಭಾರತದ ಕಾಶಿ ಎಂದೇ ಕರೆಯಲ್ಪಡುವ ಹಂಪಿ ! ಇದಕ್ಕೆ ಪೌರಾಣಿಕ ಆಧಾರಗಳು ಮಹತ್ತರ ದಾಖಲೆಗಳನ್ನು ಒದಗಿಸಿವೆ.ಹೌದು, ಕಾಮದಹನ ಹಾಗೂ ಮಾರನೇಯ ದಿನ ದೇಶದಾದ್ಯಂತ ನಡೆಯುವ ಬಣ್ಣದ ಹಬ್ಬದ ಸಂಭ್ರಮಕ್ಕೆ ವಿಜಯನಗರ ಅರಸರ ರಾಜಧಾನಿ ಹಂಪಿಯೆ ಮೂಲ ಎಂಬುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ.ಸ್ಕಂದ ಪುರಾಣದಲ್ಲಿ ಈ ಕುರಿತು ದಾಖಲೆ ಲಭ್ಯವಾಗಿದ್ದು, ಬಾಲ್ಯದಿಂದಲೇ ಶಿವನ ಮಹಿಮೆಯನ್ನು ತಿಳಿದ ಪಾರ್ವತಿದೇವಿ ಶಿವಭಕ್ತಿ ಪಾರಾಯಣಳಾಗಿ ಪಂಪಾ ಸರೋವರದ ಬಳಿ ಶಿವನನ್ನು ಒಲಿಸಿ ವಿವಾಹವಾಗಲು ತಪೋನಿರತಳಾಗಿರುತ್ತಾಳೆ. ಬಹಳ ದಿವಸ ತಪಸ್ಸು ಮಾಡಿದರೂ ಶಿವನು ಜಾಗೃತನಾಗುವುದಿಲ್ಲ. ಆಗ ಉಪಾಯ ಕಾಣದ ದೇವತೆಗಳು ಶಿವನನ್ನು ಜಾಗೃತಗೊಳಿಸಲು ಮುಂದಾಗುತ್ತಾರೆ.

ಋತುಗಳರಾಜ ವಸಂತನೊಂದಿಗೆ ಬರುವ ಕಾಮನ ಮನ್ಮಥಬಾಣ ಶಿವನಿಗೆ ತಗುಲುತ್ತವೆ. ಆಗ ತಪೋಭಂಗನಾದ ಶಿವನು ಕೋಪದಿಂದ ಕಾಮನನ್ನು ಸುಡಲು ತನ್ನ ಅಕ್ಷಿ (ಕಣ್ಣು) (ವಿರೂಪ+ಅಕ್ಷ= ವಿರೂಪಾಕ್ಷ) ತೆಗೆದಾಗ ಕಾಮ ಸುಟ್ಟು ಬೂದಿಯಾಗುತ್ತಾನೆ.ದೇವತೆಗಳ ಪ್ರಾರ್ಥನೆಯಿಂದ ಶಾಂತನಾದ ಶಿವನು ಗಿರಿಜೆಯನ್ನು ವಿವಾಹವಾಗಲು ಒಪ್ಪುತ್ತಾನೆ ಎಂಬು ಪ್ರತೀತಿ ಇದೆ. ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳ ಸಮ್ಮುಖದಲ್ಲಿ ಹಂಪಿಯ ಚಕ್ರತೀರ್ಥದ ಬಳಿ ಇರುವ ಕೋದಂಡರಾಮ ಸ್ವಾಮಿ ದೇವಾಲಯದ ಆವರಣದಲ್ಲಿ ಪ್ರಾಣಿ ಗ್ರಹಣಕ್ಕೆ ನಿಶ್ಚಯ ಮಾಡುತ್ತಾರೆ. ಇದಕ್ಕೆ ಪೂರಕವಾಗಿ ವಿರೂಪಾಕ್ಷೇಶ್ವರ ದೇವಾಲಯದ ಪ್ರಾಂಗಣದಲ್ಲಿ ವಿರೂಪಾಕ್ಷೇಶ್ವರ ಮಹಿಮೆಯ ಕುರಿತ ಚಿತ್ರಗಳನ್ನು ದಾಖಲಿಸಲಾಗಿದೆ. ಇಂದಿಗೂ ಚಿತ್ರಗಳು ಈ ವೃತ್ತಾಂತವನ್ನು ಸಾರುತ್ತವೆ.ಈ ಮಹಿಮೆ ಪರಿಣಾಮವಾಗಿ ಹಂಪಿಯಲ್ಲಿ ಬಣ್ಣಗಳ ಹಬ್ಬ ಹೋಳಿ ಅತ್ಯಂತ ವೈಭವದಿಂದ ನಡೆಯುತ್ತಿದ್ದು, ದೇಶ–ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸ್ಥಳೀಯರೊಂದಿಗೆ ಬೆರೆತು ಕುಣಿದು ಕುಪ್ಪಳಿಸುವ ಮೂಲಕ ರಂಗಿನಾಟಕ್ಕೆ ವಿದೇಶಿಗರು ವಿಶಿಷ್ಟ ರಂಗು ನೀಡುತ್ತಾರೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಹಂಪಿ ಅರ್ಚಕ ಮೋಹನಚಿಕ್ಕಭಟ್ಟ ಜೋಶಿ ಅವರು, ‘ಸನಾತನ ಹಿಂದೂ–ಧರ್ಮದ ಪರಂಪರೆಯಂತೆ ಕಾಮದಹನ ಹಾಗೂ ವೈವಿಧ್ಯಮಯ ರಂಗಿನಾಟ ವಿರೂಪಾಕ್ಷೇಶ್ವರ ದೇವಾಲಯದ ಎದುರು ನಡೆಯಲಿದೆ.

ರಥಬೀದಿಯಲ್ಲಿ ಪ್ರತಿಷ್ಠಾಪನೆ ಯಾಗಿರುವ ಕಾಮನ ದಹನ ಭಾನುವಾರ ಮಧ್ಯರಾತ್ರಿ ನಡೆಯಲಿದ್ದು, ಸೋಮವಾರ ಸ್ಥಳೀಯರೊಂದಿಗೆ ವಿದೇಶಿ ಪ್ರವಾಸಿಗರೂ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ವಿವರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.