ಶುಕ್ರವಾರ, ಮೇ 20, 2022
27 °C

ಬೆಣ್ಣೆ ಹಳ್ಳದಲ್ಲಿ ಮತ್ತೆ ಪ್ರವಾಹ

ಪ್ರವೀಣ ಕುಲಕರ್ಣಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಲಗುಂದ: `ಕರ್ನಾಟಕದ ಕೋಸಿ~ ಎಂಬ ಕುಖ್ಯಾತಿಗೆ ಒಳಗಾದ ಬೆಣ್ಣೆಹಳ್ಳ ನವಲಗುಂದ ತಾಲ್ಲೂಕಿನಲ್ಲಿ ಮತ್ತೆ ಉಪಟಳ ಉಂಟು ಮಾಡಿದೆ. ಉಕ್ಕಿಬಂದ ಪ್ರವಾಹದಿಂದ ದ್ವೀಪದಂತಾಗಿರುವ ಹೊಲದಲ್ಲಿ ವೃದ್ಧ ದಂಪತಿ ಸಿಕ್ಕಿಬಿದ್ದಿದ್ದಾರೆ. ಇದುವರೆಗೆ ಬರ ಅನುಭವಿಸಿದ್ದ ನವಲಗುಂದ ಇದೀಗ ಏಕಾಏಕಿ ಪ್ರವಾಹದ ಹೊಡೆತಕ್ಕೆ ಸಿಕ್ಕಿ ವಿಚಿತ್ರ ಸನ್ನಿವೇಶ ಎದುರಿಸುತ್ತಿದೆ.ನವಲಗುಂದದ ಮಾಬುಸಾಬ್ ನದಾಫ್ (65) ಹಾಗೂ ಅವರ ಪತ್ನಿ ಹಸನ್‌ಬಿ ನದಾಫ್ (62) ನೀರಿನ ಮಧ್ಯೆ ಸಿಕ್ಕಿಕೊಂಡಿದ್ದಾರೆ. ಇದೇ ಪ್ರವಾಹದಲ್ಲಿ ಸಿಲುಕಿದ್ದ ಮತ್ತೊಬ್ಬ ಯುವಕನನ್ನು ತಾಲ್ಲೂಕು ಆಡಳಿತ ಸಂಜೆ ನುರಿತ ಈಜುಗಾರರನ್ನು ಕರೆಸಿ ರಕ್ಷಿಸಿತು.

 

ಎರಡು ವರ್ಷಗಳ ಹಿಂದೆ ತಮ್ಮ ಬದುಕನ್ನೇ ಬಳಿದುಕೊಂಡು ಹೋಗಿದ್ದ ಪ್ರವಾಹ ಮತ್ತೆ ಎರಗಿದ ಸುದ್ದಿ ಕೇಳಿ ಸಂತ್ರಸ್ತ ಹಳ್ಳಿಗಳ ಜನ ಭಯಭೀತರಾಗಿದ್ದಾರೆ. `ಆಸರೆ~ ಮನೆಗಳು ಸಿಕ್ಕರೂ ಹಳೆಯ ಮನೆಗಳನ್ನು ಬಿಟ್ಟು ಹೋಗದ ಸಂತ್ರಸ್ತರಿಗೆ ಈ ಪ್ರವಾಹ `ಅಪಾಯ~ದ ಸಂದೇಶ ರವಾನಿಸಿದೆ.ಎಂದಿನಂತೆ ಗುರುವಾರ ಬೆಳಿಗ್ಗೆ ಹೊಲಕ್ಕೆ ಹೋಗುವಾಗ ಪ್ರವಾಹದ ಯಾವ ಮುನ್ಸೂಚನೆಯೂ ನದಾಫ್ ದಂಪತಿಗೆ ಇರಲಿಲ್ಲ. ಮೆಣಸಿನ ಮಡಿಯಲ್ಲಿ ತಲೆ ಬಗ್ಗಿಸಿಕೊಂಡು ಕಳೆ ತೆಗೆಯುವಲ್ಲಿ ನಿರತವಾಗಿದ್ದ ಈ ದಂಪತಿಗೆ ತಾವು ತುಪ್ಪರಿ ಮತ್ತು ಬೆಣ್ಣೆ ಹಳ್ಳಗಳ ಪ್ರವಾಹದಲ್ಲಿ ಸಿಕ್ಕಿಬಿದ್ದ ಅರಿವಾಗಿದ್ದು, ಬುತ್ತಿತಂದ ಮಗ ಆಚೆ ದಂಡೆಯಿಂದ ಕೂಗಿಕೊಂಡಾಗಲೇ. ಆ ವೇಳೆಗೆ ಹುಚ್ಚಯ್ಯನ ಸರವು ಭರ್ತಿಯಾಗಿ ಹೊಲ ಪೂರ್ತಿ ಜಲಾವೃತ ಆಗಿತ್ತು.

ರಾತ್ರಿವರೆಗೂ ಕೈಯಲ್ಲಿ ಬುತ್ತಿಗಂಟು ಹಿಡಿದುಕೊಂಡು ನಿಂತಿದ್ದ ಈ ದಂಪತಿ ಪುತ್ರ ಅಬ್ದುಲ್ ನದಾಫ್ ಪ್ರವಾಹ ಉಕ್ಕಿ ಹರಿಯುವುದನ್ನು ಕಂಡು ಭೀತರಾಗಿದ್ದರು.ಧಾರವಾಡದಿಂದ ದೋಣಿ, ಹುಬ್ಬಳ್ಳಿಯಿಂದ ತೆಪ್ಪ ಹಾಗೂ ರೋಣದಿಂದ ನುರಿತ ಈಜುಗಾರರನ್ನು ಕಾರ್ಯಾಚರಣೆಗೆ ಕರೆತರಲಾಯಿತು. ಊರಿನಿಂದ ಸುಮಾರು ಮೂರು ಕಿ.ಮೀ. ಅಂತರದಲ್ಲಿ ಘಟನೆ ನಡೆದಿದ್ದರಿಂದ ಕತ್ತಲಿನ ವಿರುದ್ಧವೂ ಕಾರ್ಯಾಚರಣೆ ತಂಡ ಹೋರಾಡಬೇಕಾಯಿತು. ನವಲಗುಂದದಿಂದ ಟ್ರ್ಯಾಕ್ಟರ್‌ನಲ್ಲಿ ಜನರೇಟರ್ ತಂದು ದೀಪ ಬೆಳಗಿಸಲಾಯಿತು.

 

ಮಳೆ ಸುರಿದು ಕೆಸರಾಗಿರುವ ಹೊಲದ ಮೂಲಕ ವಾಹನಗಳು ಚಲಿಸಲು ಸಾಧ್ಯವಾಗದ ಕಾರಣ ತೊಂದರೆ ಇನ್ನೂ ಹೆಚ್ಚಾಯಿತು. ಧಾರವಾಡದ ಸುತ್ತಮುತ್ತ ಬುಧವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯೇ ಪ್ರವಾಹಕ್ಕೆ ಕಾರಣವಾಗಿದ್ದು, ಬೆಣ್ಣೆಹಳ್ಳಕ್ಕೆ ಬಂದು ಸೇರುವ ತುಪ್ಪರಿ ಹಳ್ಳ ಮೈದುಂಬಿ ಹರಿಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.