ಗುರುವಾರ , ಜೂನ್ 17, 2021
22 °C

ಬೆಳಕಿನ ಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಕಿನ ಛಾಯೆಯನ್ನು ಅರಸುತ್ತಿದ್ದವು ಆ ಕಣ್ಣುಗಳು. ಹೊರಗಿನ ಕತ್ತಲೆಯನ್ನು ವಿದ್ಯುದ್ದೀಪದ ಬೆಳಕು ಮರೆಮಾಚಿದ್ದರೂ ಅಲ್ಲಿ ಕುಳಿತಿದ್ದ ಪುಟ್ಟ ಕಣ್ಣುಗಳಿಗೆ ಬೆಳಕಿನ ದರ್ಶನದ ಭಾಗ್ಯವಿರಲಿಲ್ಲ. ಆದರೆ ಕಿವಿಗಳನ್ನೇ ಕಣ್ಣಾಗಿಸಿಕೊಂಡಿದ್ದ ಅವರ ಮುಖದಲ್ಲಿ ನೂರಾರು ಸೂರ್ಯರನ್ನು ಕಂಡಂತೆ ಸಂಭ್ರಮದ ಬೆಳಕಿತ್ತು. ತಾವು ಕೇವಲ ಕೇಳಿ ತಿಳಿದುಕೊಂಡಿದ್ದ ತಾರೆಯರ ಸಾಮೀಪ್ಯ ಅವರಲ್ಲಿದ್ದ ಆ ಖುಷಿಗೆ ಕಾರಣ.ಅದು `ರಣ~ ಚಿತ್ರದ ಧ್ವನಿಮುದ್ರಿಕೆಗಳ ಬಿಡುಗಡೆ ಸಮಾರಂಭ. ಅದನ್ನು ಆಯೋಜಿಸಿದ್ದು ಬೆಂಗಳೂರಿನ ರಮಣ ಮಹರ್ಷಿ ಅಂಧ ಮಕ್ಕಳ ಅಕಾಡೆಮಿಯಲ್ಲಿ. ಗಣಪತಿ ಸ್ತೋತ್ರದೊಂದಿಗೆ ಚಾಲನೆ ನೀಡಿದ್ದು ಅಲ್ಲಿದ್ದ ಅಂಧ ಮಕ್ಕಳು. ತಾವು ಕಾಣಲಾಗದ ಚಿತ್ರತಾರೆಯರ ಮಾತುಗಳಿಗೆ ಚಪ್ಪಾಳೆ ತಟ್ಟುತ್ತಿದ್ದ ಅವರ ಮುಖದಲ್ಲಿದ್ದದ್ದು ಬೆಳಕನ್ನು ನೋಡಿದ ಹರ್ಷ.ಒಮ್ಮೆ ಮಳೆ ಬಂದರೆ ಉದ್ದೇಶಿತ ಚಿತ್ರೀಕರಣವನ್ನೇ ಸ್ಥಗಿತಗೊಳಿಸಬೇಕಾಗುತ್ತದೆ. ಲಕ್ಷಾಂತರ ಹಣ ವ್ಯರ್ಥವಾಗುತ್ತದೆ. ಇಂದು ಚಿತ್ರೀಕರಣದ ವೇಳೆ ಮಳೆ ಬಂತೆಂದು ಅಂದುಕೊಳ್ಳುತ್ತೇನೆ. ಅದರ ಪಾಲು ಈ ಅಂಧ ಮಕ್ಕಳಿಗೆ ವಿನಿಯೋಗಿಸುತ್ತೇನೆ ಎಂದು ಪ್ರಕಟಿಸಿದರು ನಿರ್ದೇಶಕ ಎಸ್.ನಾರಾಯಣ್. ಬಳಿಕ ಅವರ ಮಾತು ಚಿತ್ರದತ್ತ ಹೊರಳಿತು. ತಮ್ಮದೇ ಬ್ಯಾನರ್‌ನಲ್ಲಿ ಮಗನಿಗಾಗಿ ಮಾಡಿದ ಚಿತ್ರಗಳಲ್ಲಿ ಸೋಲುಗಳ ಸರಪಣಿಯನ್ನು ಕಂಡ ನಾರಾಯಣ್ ಮೊದಲ ಬಾರಿಗೆ ಬೇರೆ ನಿರ್ಮಾಪಕರಿಂದ ಅದೃಷ್ಟ ಪರೀಕ್ಷೆಗೆ ಒಡ್ಡಲು ನಿರ್ಧರಿಸಿದ್ದರು, ಅದರ ಫಲವೇ `ರಣ~. ಪಂಕಜ್‌ಗಾಗಿ ಹತ್ತಾರು ಕಥೆಗಳು ಬಂದಿದ್ದರೂ ಯಾವುದೂ ಒಪ್ಪಿಗೆಯಾಗಿರಲಿಲ್ಲ. ಕೊನೆಗೆ ಲಕ್ಷ್ಮಣ್ ಹೇಳಿದ ಕಥೆ, ಶೈಲಿ ಇಷ್ಟವಾಯಿತು. ಕೂಡಲೇ ಒಪ್ಪಿಗೆ ಸೂಚಿಸಿದೆ ಎಂದರು.ಆತ್ಮವಿಶ್ವಾಸ ಬೆಳೆಯುವವರೆಗೂ ಬೇರೆ ನಿರ್ಮಾಣದ ಚಿತ್ರಗಳಲ್ಲಿ ನಟಿಸಬಾರದು ಎಂದುಕೊಂಡಿದ್ದೆ. ತಂದೆಯ ಒತ್ತಾಸೆ ಮತ್ತು ಕಥೆಯಲ್ಲಿನ ಗುಣಮಟ್ಟದಿಂದಾಗಿ ಈ ಚಿತ್ರದಲ್ಲಿ ನಟಿಸಲು ಮುಂದಾದೆ ಎಂದರು ಪಂಕಜ್. ಚಿತ್ರದಲ್ಲಿ ಅವರಿಗೆ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಲು ಸಾಕಷ್ಟು ಅವಕಾಶಗಳಿವೆಯಂತೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎಂಬುದು ಅವರ ಅಭಿಪ್ರಾಯ. ಎಸ್.ನಾರಾಯಣ್‌ರಂತಹ ನಿರ್ದೇಶಕರ ಮುಂದೆ ಕುಳಿತು ಕಥೆ ಹೇಳುವಾಗ ಭಯವಾಗಿತ್ತು. ಕಥೆ ಹೇಳುತ್ತಾ ಹೋದಂತೆ ಅದು ಕಡಿಮೆಯಾಯಿತು. ಇದು ಸಾಮಾನ್ಯ ಕಥೆಯಲ್ಲ. ಊಹಿಸಲಾಗದ ತಿರುವು ನೀಡುವಂತೆ ಚಿತ್ರಕಥೆಯನ್ನು ವಿಶಿಷ್ಟವಾಗಿ ಹೆಣೆಯಲಾಗಿದೆ ಎಂದು ಹೇಳಿಕೊಂಡರು ಕಥೆ, ಚಿತ್ರಕಥೆಯ ರೂವಾರಿ ಲಕ್ಷ್ಮಣ್.ಚಿತ್ರದಲ್ಲಿ ಅಂಬರೀಷ್ ಪಾತ್ರವೂ ಪ್ರಮುಖವಾಗಿದೆ. ಚಿತ್ರ ಗೆಲ್ಲುತ್ತದೆ ಎನ್ನುವುದು ನಿರ್ದೇಶಕ ಶ್ರೀನಿವಾಸಮೂರ್ತಿ ಭರವಸೆ. ಐವರು ನಾಯಕಿಯರಲ್ಲಿ ಹಾಜರಿದ್ದ ಸ್ಫೂರ್ತಿ ಮತ್ತು ಸೋನಿಯಾ ಮಾತುಗಳು ಚಿತ್ರದ ಹೊಗಳಿಕೆಗೆ ಮೀಸಲಾಗಿದ್ದವು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.