ಸೋಮವಾರ, ಮಾರ್ಚ್ 1, 2021
31 °C

ಬೆಳಕಿನ ಬೆಂಬತ್ತಿದ ಮಂಜುಳಾ

-ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಬೆಳಕಿನ ಬೆಂಬತ್ತಿದ ಮಂಜುಳಾ

ಗಿಡ್ಡ ದೇಹ, ಗಟ್ಟಿ ದನಿ, ಸನ್ನಿವೇಶಕ್ಕೊಪ್ಪುವ ಸ್ಪಷ್ಟ ಅಭಿನಯ, ಕಲಾವಿದರನ್ನು ಹಿಡಿದಿಡುವ ನಟನಾ ಪ್ರತಿಭೆ ಇರುವ ಕಲಾವಿದೆ ಮಂಜುಳಾ ಎಸ್‌. ಅಲಿಯಾಸ್‌ ತೇಜಸ್ವಿನಿ.ಎರಡು ಜುಟ್ಟು, ಅದನ್ನಲಂಕರಿಸಿದ ಮುಖದಷ್ಟೇ ಹಿರಿದಾಗಿ ಕಾಣುವ ರಿಬ್ಬನ್ ಹೂವು, ಅರಳು ಹುರಿದಂಥ ಮಾತು, ಐಡಿಯಾಗಳ ಸರಮಾಲೆ ನೀಡುತ್ತಾ ಜನರಿಗೆ ಅಚ್ಚುಮೆಚ್ಚಾದವರು ‘ಕಾದಂಬರಿ ಕಣಜ’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ‘ಮಲ್ಲಿ’ ಪಾತ್ರಧಾರಿ ತೇಜಸ್ವಿನಿ. ನಟನಾ ಬದುಕಿನ ಆಗುಹೋಗುಗಳ ಕುರಿತು ಅವರು ‘ಮೆಟ್ರೊ’ದೊಂದಿಗೆ ಮಾತು ಹಂಚಿಕೊಂಡರು...ಶಾಲಾ ದಿನಗಳಿಂದಲೂ ನಾನು ನಾಟಕ, ಹಾಡು ಎನ್ನುತ್ತಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವಳು. ಅಕ್ಷರ ಆಂದೋಲನ ಎನ್ನುವ ಸರ್ಕಾರದ ಕಾರ್ಯಕ್ರಮದಡಿ ಬೀದಿ ನಾಟಕಗಳನ್ನು ಪ್ರದರ್ಶಿಸಲು ಆಯ್ಕೆಯಾದೆ. ಮಹಾರಾಣಿ ಕಾಲೇಜಿನಲ್ಲಿ ನಾನು ಬಿ.ಎ. ಇನ್‌ ಮ್ಯೂಸಿಕ್‌ ಪದವೀಧರೆ. ಅಂದು ಪ್ರಾಂಶುಪಾಲರಾಗಿದ್ದ ಅ.ರಾ.ಮಿತ್ರ ‘ಹುಡುಗಿಯರನ್ನು ನೋಡಿ ನೀನು ಹೆದರಿಕೊಳ್ಳಬಾರದು, ನಿನ್ನನ್ನು ನೋಡಿ ಅವರು ಹೆದರಿಕೊಳ್ಳಬೇಕು. ಅಂದರಷ್ಟೇ ಕಾಲೇಜಿಗೆ ಸೇರಿಸಿಕೊಳ್ಳುತ್ತೇನೆ’ ಎಂದರು.ಕಾರಣ ನನ್ನ ಎತ್ತರ ಕೇವಲ 3 ಅಡಿ 11 ಇಂಚು. ಎಲ್ಲರಿಗಿಂತ ಚಿಕ್ಕವಳಂತೆ ಕಾಣುತ್ತಿದ್ದ ನನಗೆ ಮೊದಲು ಧೈರ್ಯ ತುಂಬಿದವರು ಅವರೇ.

ರವೀಂದ್ರ ಕಲಾಕ್ಷೇತ್ರದಲ್ಲಿ ಮೊದಲು ರಂಗ ತರಬೇತಿ ಪಡೆದು ‘ಪ್ರಯೋಗ’ ರಂಗತಂಡದಲ್ಲಿ ಒಬ್ಬಳಾದೆ. ಮೊದಲ ಬಾರಿಗೆ ಏಕವ್ಯಕ್ತಿ ನಾಟಕ ‘ಮಂಥರೆಯ ಅಂತರಾಳ’ದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಒಂದು ಗಂಟೆಗಳ ಕಾಲ ನನ್ನೊಬ್ಬಳ ನಟನೆಯಿಂದಲೇ ಪ್ರೇಕ್ಷಕರನ್ನು ಹಿಡಿದಿಡಬೇಕಾದ ಬಹುದೊಡ್ಡ ಸವಾಲದು.ನಿರಂತರವಾಗಿ 35 ಷೋ ನೀಡಿ ಗೆದ್ದಿದ್ದೆ. ನಂತರ ‘ಚಿಟ್ಟೆಗಳು’, ‘ಉರಿಯ ಉಯ್ಯಾಲೆ’, ಎಸ್‌ಎಲ್‌ಎನ್‌ ಸ್ವಾಮಿ ಸಾರಥ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ 51 ಗಂಟೆಗಳ ‘ಸಂಪೂರ್ಣ ಮಹಾಭಾರತ’ದಲ್ಲೂ ಅಭಿನಯಿಸಿದ್ದೆ. ಪದವಿ ನಂತರ ಎನ್‌ಜಿಒಗಳೊಂದಿಗೆ ಕೈಜೋಡಿಸಿ ಸಾಹಿತ್ಯ, ನಿರ್ದೇಶನ ಹೆಣೆದು ಇದುವರೆಗೆ ಹತ್ತು ಸಾವಿರ ಬೀದಿ ನಾಟಕ ಪ್ರದರ್ಶನ ನೀಡಿದ್ದೇನೆ.ಬೀದಿ ನಾಟಕ ರಂಗತಂಡ ಕಟ್ಟಲು ಕಷ್ಟವಾದಾಗ, ಒಬ್ಬಳೇ ಅಭಿನಯಿಸಿ ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಆಸೆಯಿಂದ ವೀರಗಾಸೆ ಕಲಿತೆ. ಆದರೆ ಆ ಪ್ರಯತ್ನ ಹಣದ ಕೊರತೆಯಿಂದ ನಿಂತುಹೋಯಿತು.ಅಲ್ಲಿಂದ ಧಾರಾವಾಹಿ, ಸಿನಿಮಾಗಳ ಕಡೆ ಮುಖ ಮಾಡಿದೆ. ‘ಸೈಲೆನ್ಸ್‌ ಪ್ಲೀಸ್‌’, ‘ಅಯ್ಯೋ ನನ್ನ ಮದುವೆಯಂತೆ’, ‘ಮನಸೆಂಬ ಮಾಯೆ’, ‘ಕಾರ್ತಿಕ ದೀಪ’ (ಮಂಗಳಮ್ಮ), ‘ರಾಘವೇಂದ್ರ ವೈಭವ’ (ಪಟೇಲಮ್ಮ), ‘ಪಡುವಾರಳ್ಳಿ ಪಡ್ಡೆಗಳು’ (ಟೀಸಿ ಪಿಂಟು), ‘ಸಿಲ್ಲಿ ಲಲ್ಲಿ’, ‘ಪಾಪ ಪಾಂಡು’ ಧಾರಾವಾಹಿಗಳಲ್ಲಿ ಅಭಿನಯಿಸಿದೆ. ಹಾಸ್ಯ ಪಾತ್ರಗಳೇ ಹೆಚ್ಚಾಗಿ ನನ್ನದಾದವು. ಪ್ರಧಾನ ಪಾತ್ರ ಸಿಕ್ಕಿದ್ದು ಕಡಿಮೆ. ‘ಕುಳ್ಳರ ಲೋಕ’ ಸಿನಿಮಾದಲ್ಲಿ ನನ್ನದೇ ಮುಖ್ಯಪಾತ್ರ. ಆದರೆ ಅದು ಅಂಥ ಯಶಸ್ಸು ಗಳಿಸಲಿಲ್ಲ. ನಾನು ಸದಾ ಬಸ್‌ನಲ್ಲೇ ಓಡಾಡುವುದರಿಂದ ಅನೇಕರು ನನ್ನನ್ನು ಗುರುತಿಸುತ್ತಾರೆ. ಮೆಚ್ಚುಗೆಯ ಮಾತನಾಡುತ್ತಾರೆ. ಮನೆಹಾಳಿ ಮಂಗಳಮ್ಮ ಎಂದು ಛೇಡಿಸುತ್ತಾರೆ. ಆದರೆ ನಟನಾ ರಂಗದಿಂದ ಸಿಗುತ್ತಿರುವ ಅವಕಾಶಗಳ ಬಗ್ಗೆ ನನಗೆ ಅಸಮಾಧಾನವಿದೆ. ಎಂಥದ್ದೇ ಪಾತ್ರವನ್ನು ನೀಡಿದರೂ ಅದನ್ನು ಅತ್ಯುತ್ತಮವಾಗಿ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ನನಗಿದೆ. ಆದರೆ ಎತ್ತರವಿಲ್ಲ. ಜೊತೆಗೆ ಸೌಂದರ್ಯವಿಲ್ಲ ಎಂಬ ಕಾರಣಕ್ಕೆ ಪ್ರೋತ್ಸಾಹ ಸಿಗಲೇ ಇಲ್ಲ. ಅವಕಾಶ ಕೇಳಿಕೊಂಡು ಹೋದಲ್ಲೆಲ್ಲಾ ನಿರ್ದೇಶಕರಿಂದ ಸಿಗುತ್ತಿದ್ದುದು ನಿರಾಸೆಯ ಮಾತುಗಳೇ. ‘ಈ ಸೈಜ್ ಇಟ್ಟುಕೊಂಡು ಏನು ಕಥೆ ಹೆಣೆಯಬೇಕು, ಯಾವ ಪಾತ್ರಕ್ಕೆ ಆಯ್ದುಕೊಳ್ಳಬೇಕು; ಸಾಧ್ಯವಿಲ್ಲ’ ಎಂದುಬಿಡುತ್ತಿದ್ದರು. ಸಮಾಜದಲ್ಲಿ ನಾನೂ ಒಂದು ಪಾತ್ರ. ಧಾರಾವಾಹಿ ಸಿನಿಮಾದಲ್ಲೇಕೆ ನನಗಾಗಿ ಕಥೆ ಹೆಣೆಯಲು ಸಾಧ್ಯವಿಲ್ಲ ಎಂದು ಗೋಗರೆದೆ. ಸಮಾಧಾನಕ್ಕಾಗಿ ಮಾತ್ರ ಅಲ್ಲೊಂದು ಇಲ್ಲೊಂದು ಪಾತ್ರಗಳು ಸಿಕ್ಕವು.ಅವಕಾಶ ಅರಸಿ ಕೈಯಿಂದ 70–80 ಸಾವಿರ ರೂಪಾಯಿ ಖರ್ಚು ಮಾಡಿಕೊಂಡು ಮುಂಬೈ, ಚೆನ್ನೈ, ಹೈದರಾಬಾದ್‌, ದೆಹಲಿ ಮುಂತಾದ ಕಡೆ ಸುತ್ತಿದೆ. ಆದರೆ ನೀಡುವ ಅವಕಾಶಕ್ಕೆ ಬದಲಾಗಿ ಅವರ ಬೇಡಿಕೆ ಸಾಕಷ್ಟಿರುತ್ತದೆ.ಬದುಕಿಗೆ ಹಾಗೂ ಪರಿಶ್ರಮಕ್ಕೆ ತಕ್ಕ ಸಂಬಳ ಬೇಡುವುದೂ ತಪ್ಪೇ. ವರ್ಷ ನಲವತ್ತಾಯಿತು. ಇಂದಿಗೂ ಐದುನೂರು, ಆರುನೂರು ರೂಪಾಯಿಗೆ ನಾನು ಅಭಿನಯಿಸುತ್ತಿದ್ದೇನೆ. ರಾಘವೇಂದ್ರ ವೈಭವದಲ್ಲಿ ಮಾತ್ರ ನನಗೆ ದಿನಕ್ಕೆ ರೂ.1500 ಕೊಟ್ಟು ಪ್ರೋತ್ಸಾಹಿಸಿದರು. ಅದೇ ನನ್ನ ಹೆಚ್ಚಿನ ಸಂಬಳ. ಅನೇಕ ಕಾರ್ಟೂನ್‌ಗಳಿಗೂ ಕಂಠದಾನ ಮಾಡಿದ್ದೇನೆ. ಸಂಗೀತ ಪಾಠ ನನ್ನ ಕೈಹಿಡಿದಿದೆ.ಬಿಡುವಿದ್ದಾಗ ಮನೆಯಲ್ಲಿ ಸುಮ್ಮನೆ ಕುಳಿತಿರುವುದು ಸಾಧ್ಯವಾಗದೇ ಸ್ನೇಹಿತೆಯರಾದ ಹೇಮಾ ಹಾಗೂ ಲಕ್ಷ್ಮೀ ಅವರಿಂದ ಸೆಣಬಿನ ಬ್ಯಾಗ್‌ (ಜೂಟ್‌ ಬ್ಯಾಗ್‌) ತಯಾರಿಸುವುದನ್ನು ಕಲಿತುಕೊಂಡಿದ್ದೇನೆ. ನನ್ನ ಆದಾಯದ ಮೂಲ ಆಧಾರ ಈಗ ಇದೇ. ಅದೂ ಅಲ್ಲದೆ ಜೂಟ್‌ ಬ್ಯಾಗ್‌ ತಯಾರಿಸಲು ಆಸಕ್ತ ಮಹಿಳಾ ಗುಂಪುಗಳಿದ್ದರೆ ಅವರಿಗೆ ಅಲ್ಲಿಗೆ ತೆರಳಿ ತರಬೇತಿ ನೀಡುತ್ತೇನೆ. ಅದಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ನೀಡಿ ಒಂದು ಸಾವಿರ ರೂಪಾಯಿ ಶುಲ್ಕ ಪಡೆಯುತ್ತೇನೆ. ಪ್ರೀತಿಸಿದ ಕಲೆ ಕೈಹಿಡಿದರೆ ಮಾತ್ರ ಕಲಾವಿದನ ಬದುಕು ಹಸನಾಗುತ್ತದೆ ಅಲ್ಲವೇ?

ಜೂಟ್‌ಬ್ಯಾಗ್‌ಗೆ ಸಂಬಂಧಿಸಿದಂತೆ ಮಾಹಿತಿಗೆ: 94485 35158/ 84530 02652.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.