ಮಂಗಳವಾರ, ಜೂಲೈ 7, 2020
22 °C

ಬೇಕು ಬೀದರಿಗೊಂದು ಪ್ರೀಪೇಯ್ಡ ಆಟೋಸ್ಟ್ಯಾಂಡ್

ದೇವು ಪತ್ತಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಕು ಬೀದರಿಗೊಂದು ಪ್ರೀಪೇಯ್ಡ ಆಟೋಸ್ಟ್ಯಾಂಡ್

ಬೀದರ್: ನಗರದಲ್ಲಿ ಆಟೋ ರಿಕ್ಷಾಗಳಿಗೆ ಕನಿಷ್ಠ ಹಣ ನಿಗದಿ ಮಾಡದೇ ಇರುವುದರಿಂದ ಚಾಲಕರು ಹೇಳಿದಷ್ಟು ಹಣ ನೀಡಬೇಕಾದ ಸ್ಥಿತಿ ಇರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ತಪ್ಪಿಸುವುದಕ್ಕಾಗಿ ನಗರದ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಲ್ಲಿ ಮುಂಗಡ ಹಣ ಪಾವತಿಸಿ ಪ್ರಯಾಣಿಸುವ (ಪ್ರೀಪೇಯ್ಡಾ ಆಟೋ ಸ್ಟ್ಯಾಂಡ್) ತೆರೆಯುವ ಅಗತ್ಯವಿದೆ.ನಗರದಲ್ಲಿ ಸಂಚರಿಸುವುದಕ್ಕಾಗಿ ಸಾರಿಗೆ ಸಂಸ್ಥೆಯ ಬಸ್‌ಗಳು ಓಡಾಡುತ್ತಿವೆ. ಆದರೂ ಬಹುತೇಕ ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸುವುದಕ್ಕಾಗಿ ಆಟೋರಿಕ್ಷಾಗಳಿಗೇ ಮೊರೆ ಹೋಗಬೇಕಾದ ಸ್ಥಿತಿಯಿದೆ. ಸೈಕಲ್‌ನಲ್ಲಿ ಓಡಾಡುವವರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಬಹುತೇಕ ಜನ ನಗರದಲ್ಲಿ ಓಡಾಡುವುದಕ್ಕೆ ಆಟೋರಿಕ್ಷಾಗಳನ್ನು ಅವಲಂಬಿಸಿದ್ದಾರೆ.ಆಟೋಗಳಿಗೆ ಮೀಟರ್ ವ್ಯವಸ್ಥೆ ಇಲ್ಲ. ಹಾಗೆ ಮೀಟರ್ ಅಳವಡಿಸುವುದು ಕೂಡ ಕಷ್ಟದ ಕೆಲಸವೇ ಸರಿ. ಕನಿಷ್ಠ ದರ ನಿಗದಿ ಕೂಡ ಮಾಡಿಲ್ಲ. ಇದರಿಂದಾಗಿ ಆಟೋ ಚಾಲಕರು ಹೇಳಿದ್ದೇ ದರ ಎನ್ನುವಂತಾಗಿದೆ. ‘ಬೇಕಿದ್ದರೆ ಕೊಟ್ಟು ಹೋಗಿ, ಇಲ್ಲದಿದ್ದರೆ ನಿಮ್ಮ ಹಾದಿ ನಿಮಗೆ’ ಎಂಬಂತಹ ಕಟುವಾದ ಮಾತುಗಳನ್ನು ಕೇಳಬೇಕಾದ ಸ್ಥಿತಿಯಿದೆ. ಬಸ್ ನಿಲ್ದಾಣದಿಂದ ಅತೀ ದೂರದಲ್ಲಿ ಇರುವ ಪ್ರದೇಶಗಳಿಗೆ ತೆಗೆದುಕೊಳ್ಳುವಷ್ಟೇ ಹಣವನ್ನು ಸಮೀಪದ ಕಾಲೋನಿಗಳಿಗೆ ಹೋಗುವುದಕ್ಕಾಗಿ ಕೇಳಲಾಗುತ್ತದೆ. ಇದು ಪ್ರಯಾಣಿಕರು ಮತ್ತು ಚಾಲಕರ ನಡುವಿನ ವಾಗ್ವಾದಕ್ಕೂ ಕಾರಣವಾಗುತ್ತಿದೆ.ಬೇರೆ ಊರುಗಳಿಂದ ಲಗೇಜುಗಳೊಂದಿಗೆ ಬಂದವರು ಬಸ್ ನಿಲ್ದಾಣದಲ್ಲಿ ಪಡುವ ಪಾಡು ಹೇಳತೀರದ್ದು. ಪ್ರಯಾಣಿಕರ ಅನಿವಾರ್ಯ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವ ಘಟನೆಗಳು ನಿತ್ಯ ಮಾಮೂಲಿ ಸಂಗತಿ. ‘ಮಹಿಳೆಯರು ಮತ್ತು ಮಕ್ಕಳು ಜೊತೆಗಿದ್ದರಂತೂ ಹೇಳಿದಷ್ಟು ಹಣ ಕೊಡುತ್ತಾರೆ ಎಂದು ಆಟೋ ಚಾಲಕರು ಭಾವಿಸಿದಂತಿದೆ’ ಎಂದು ಹೇಳುತ್ತಾರೆ ಶಶಿಕಾಂತ. ಆಟೋ ಚಾಲಕರು ಪ್ರಯಾಣಿಕರ ಮೇಲೆ ಒತ್ತಡ ಹೇರಿ ಶೋಷಿಸುವ ತಂತ್ರ ತಪ್ಪಿಸುವುದಕ್ಕಾಗಿ ಇರುವ ಉತ್ತಮ ಮಾರ್ಗ ಎಂದರೆ ಮೊದಲೇ ಹಣ ಪಾವತಿಸಿ (ಪ್ರೀಪೇಯ್ಡಾ) ಪ್ರಯಾಣಿಸುವ ವ್ಯವಸ್ಥೆ.ಬೆಂಗಳೂರು ಮುಂತಾದ ಕಡೆಗಳಲ್ಲಿ ಈಗಾಗಲೇ ಇಂತಹ ವ್ಯವಸ್ಥೆ ಇದೆ. ಇದರಿಂದಾಗಿ ಆಟೋ ಚಾಲಕರಿಗೂ ನ್ಯಾಯಯುತವಾದ ಹಣ ಸಿಗುತ್ತದೆ. ಹಾಗೆಯೇ ಪ್ರಯಾಣಿಕರು ಕೂಡ ಯಾವುದೇ ರೀತಿಯಲ್ಲಿ ಗೊಣಗಾಡದೇ ನೆಮ್ಮದಿಯಿಂದ ಆಟೋಗಳಲ್ಲಿ ಪ್ರಯಾಣ ಬೆಳೆಸಬಹುದು. ‘ಉಭಯರಿಗೂ ಅನುಕೂಲ ಉಂಟು ಮಾಡುವ ಪ್ರೀಪೇಯ್ಡಾ ಆಟೋ ಸ್ಟ್ಯಾಂಡ್ ಆರಂಭಿಸುವ ಅಗತ್ಯವಿದೆ’ ಎನ್ನುತ್ತಾರೆ ಬಸವರಾಜ.‘ಪ್ರೀಪೇಯ್ಡಾ ಆಟೋ ಸ್ಟ್ಯಾಂಡ್’ ಬಂದ ನಂತರ ಪ್ರಯಾಣಿಕರು ಮೊದಲೇ ಹಣ ಪಾವತಿಸಿ ಪ್ರಯಾಣ ಬೆಳೆಸಬಹುದು. ಪ್ರಯಾಣಿಕರು ತಲುಪಬಹುದಾದ ಸ್ಥಳಕ್ಕೆ ದರ ನಿಗದಿ ಪಡಿಸಿ ಕಂಪ್ಯೂಟರ್‌ನಲ್ಲಿ ದತ್ತಾಂಶ ದಾಖಲಿಸಲಾಗಿರುತ್ತದೆ. ಕನಿಷ್ಠ ಒಂದು ಅಥವಾ ಎರಡು ರೂಪಾಯಿ ನೀಡಿದರೆ ಪ್ರಯಾಣಿಸುವ ಆಟೋದ ಸಂಖ್ಯೆಯ ಜೊತೆಗೆ ನೀಡಬಹುದಾದ ಮೊತ್ತವನ್ನೂ ದಾಖಲಿಸಿದ ಚೀಟಿ ನೀಡಲಾಗುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ಆಗುವ ಅನಗತ್ಯ ಕಿರಿಕಿರಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಇದರಿಂದ ಆಟೋ ಚಾಲಕರಿಗೆ ಕೂಡ ಅವರ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತದೆ.ಈ ವ್ಯವಸ್ಥೆಯಿಂದ ಸಂಚಾರ ಪೊಲೀಸ್‌ರಿಗೆ ಸ್ವಲ್ಪ ಕೆಲಸ ಹೆಚ್ಚಬಹುದು. ಆದರೆ, ಸಾರ್ವಜನಿಕರ ಹಿತದ ದೃಷ್ಟಿಯಿಂದ ಪ್ರೀಪೇಯ್ಡಿ ಆಟೋ ಸ್ಟ್ಯಾಂಡ್ ಆರಂಭಿಸುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಇದಕ್ಕೆ ‘ವ್ಯವಸ್ಥೆ’ಯಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆಯೋ ಕಾದು ನೋಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.