ಮಂಗಳವಾರ, ಮೇ 18, 2021
31 °C

ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಹುದ್ದೆ ಕಾಯಂ ಮಾಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗು ಸದಸ್ಯೆಯರು ಸಿಐಟಿಯು ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಮನವಿ ಸಲ್ಲಿಸಿದರು.ತಾಲ್ಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತೆಯರು, ಸರಕಾರಿ ಆಸ್ಪತ್ರೆಯ ಆವರಣದಿಂದ ಪಟ್ಟಣದ ಬಸವೇಶ್ವರ ಬಜಾರ್ ಮೂಲಕ ಪ್ರತಿಭಟನಾ ರ‌್ಯಾಲಿಯಲ್ಲಿ ತಾಲ್ಲೂಕು ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಿ ಮನವಿ ಸಲ್ಲಿಸುವ ಮುನ್ನ ಪ್ರತಿಭಟನಾ ಸಮಾವೇಶ ಏರ್ಪಡಿಸಿದ್ದರು.ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ಮಾತನಾಡಿ, ಆಶಾ ಕಾರ್ಯಕರ್ತೆಯರ ಸಮರ್ಪಕ ನಿರ್ವಹಣೆಯಿಂದಾಗಿ ರಾಜ್ಯದ ಗ್ರಾಮೀಣ ಪ್ರದೇಶದ ಶಿಶು ಮರಣ ಪ್ರಮಾಣ ಗಣನೀಯವಾಗಿ ತಗ್ಗಿದೆ. ಕಾರ್ಯಕರ್ತೆಯರಿಗೆ ನೀಡುವ ಸಹಾಯಧನ ಹೆಚ್ಚಿಸಿ ಪ್ರೋತ್ಸಾಹಿಸಬೇಕಾಗಿರುವ ಸರಕಾರ ಕಡಿಮೆ ಮಾಡುವ ಮೂಲಕ ಅವರ ಬದುಕಿನ ಮೇಲೆ ಬರೆ ಎಳೆದಿದೆ ಎಂದು ದೂರಿದರು.ಆಶಾ ಕಾರ್ಯಕರ್ತೆಯರು ಹಗಲಿರುಳು ಮಾಡುವ ಪ್ರಾಮಾಣಿಕ ಕೆಲಸವನ್ನು ಕಾಯಂ ಮಾಡುವ ಜೊತೆಗೆ ಪ್ರೋತ್ಸಾಹ ಧನದ ಬದಲಾಗಿ ವೇತನ ನಿಗದಿಪಡಿಸಿ ಉತ್ತೇಜನ ನೀಡಿ ಬದುಕಿನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.ಆಶಾ ಕಾರ್ಯಕರ್ತೆಯರಿಗೆ ಆಸ್ಪತ್ರೆಗಳಲ್ಲಿ ವಿಶ್ರಾಂತಿ ಕೊಠಡಿ ನೀಡುವ ಜೊತೆಗೆ ಔಷಧಿ ಕಿಟ್ ಮತ್ತಿತರೆ ಸಾಮಾಗ್ರಿಗಳನ್ನು ನೀಡಬೇಕು ಎಂದು ಆಗ್ರಹಿಸಿದರು.ಸಿಐಟಿಯು ಅಧ್ಯಕ್ಷ ಎಂ.ಲಿಂಗಪ್ಪ, ಕಾರ್ಯದರ್ಶಿ ಎಸ್.ಜಗನ್ನಾಥ್, ಡಿವೈಎಫ್‌ಐ ಮುಖಂಡರಾದ ಉಸ್ಮಾನ್ ಭಾಷಾ ಮತ್ತು ತಿಂದಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಂಘದ ಸಂಚಾಲಕರಾದ ಯು.ಜೆ.ಮಂಜುಳ, ಎನ್.ಗಂಗಮ್ಮ, ಎಂ.ಸರೋಜ, ವಿಜಯಲಕ್ಷ್ಮಿ, ಜಿ.ಸರೋಜ, ಚಾಂದ್‌ಬಿ ಹಾಗು ಸುಜಾತಾ ಸೇರಿದಂತೆ ಮತ್ತಿತರೆ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.