ಗುರುವಾರ , ಮೇ 13, 2021
40 °C

ಬೇಡಿಕೆ ಈಡೇರಿಸಲು ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವೇತನ ಹೆಚ್ಚಳ, ಸಾಮೂಹಿಕ ವಿಮೆ ಸೇರಿದಂತೆ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗೃಹ ರಕ್ಷಕ ದಳ, ಪೌರರಕ್ಷಣೆ ಹಾಗೂ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗೆ ಮುಖ್ಯಮಂತ್ರಿಯವರ ಪದಕ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜತೆಗೆ ಪ್ರಕೃತಿ ವಿಕೋಪ, ಅಗ್ನಿ ಅನಾಹುತದ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ಕಾರ್ಯಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಅವರ ಕರ್ತವ್ಯ ನಿಷ್ಠೆ, ಅವರ ಶ್ರದ್ಧೆ ಇತರ ಇಲಾಖೆಗಳಿಗೆ ಮಾರ್ಗದರ್ಶನವಾಗಬೇಕು. ಅಂತಹ ಇಲಾಖೆಯ ಬೇಡಿಕೆಗಳನ್ನು ಪೂರೈಸುವುದು ಸರ್ಕಾರದ ಕರ್ತವ್ಯವಾಗಿದೆ~ ಎಂದರು.`ಅಗ್ನಿಶಾಮಕ ಸಿಬ್ಬಂದಿಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ 40 ಕೋಟಿ ವೆಚ್ಚ ಮಾಡಿ 239 ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಅಲ್ಲದೇ 10.6 ಕೋಟಿ ವೆಚ್ಚದಲ್ಲಿ 33 ಹೊಸ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ~ ಎಂದು ಅವರು ಹೇಳಿದರು.ಗೃಹ ಸಚಿವ ಆರ್.ಅಶೋಕ ಮಾತನಾಡಿ `ಅಗ್ನಿಶಾಮಕ ಇಲಾಖೆ ಹಾಗೂ ಗೃಹರಕ್ಷಕ ದಳ ಇಲಾಖೆಗಳಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇನೆ. ಅಗ್ನಿಶಾಮಕ ಇಲಾಖೆಗೆ ಅಗತ್ಯವಾದ ಪರಿಕರಗಳನ್ನು ಈಗಾಗಲೇ ಪೂರೈಸಲಾಗುತ್ತಿದೆ. ನಗರದಲ್ಲಿ ಬಹು ಮಹಡಿಯ ಕಟ್ಟಡಗಳು ಹೆಚ್ಚುತ್ತಿದ್ದು, ಅಂತಹ ಕಟ್ಟಡಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದರೆ ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಗುತ್ತದೆ. ಆ ದೃಷ್ಟಿಯಿಂದ ಈಗಾಗಲೇ 54 ಮೀಟರ್ ಎತ್ತರದ ಏಣಿ ಇರುವ ವಾಹನಗಳನ್ನು ನೀಡಲಾಗಿದೆ. ಕಾರ್ಯಾಚರಣೆಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ~ ಎಂದು ಭರವಸೆ ನೀಡಿದರು.`ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಅಗ್ನಿಶಾಮಕ ಇಲಾಖೆಗೆ ವಿಶೇಷ ಅನುದಾನ ನೀಡಿದೆ. ನಗರದಲ್ಲಿ ಆರು ಹಾಗೂ ಇತರೆಡೆ ನಾಲ್ಕು ಹೊಸ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಈ ವರ್ಷ ಅಗ್ನಿಶಾಮಕ ಠಾಣೆಗ ಮೂರು ಸಾವಿರಕ್ಕೂ ಹೆಚ್ಚು ಕರೆಗಳು ಬಂದಿವೆ. ಸಿಬ್ಬಂದಿಯು ತಮ್ಮ ಸಮಯ ಪ್ರಜ್ಞೆಯಿಂದ 2226 ಜನರ ಪ್ರಾಣ ರಕ್ಷಣೆ ಮಾಡಿ, 1377 ಕೋಟಿ ರೂಪಾಯಿ ಆಸ್ತಿ ರಕ್ಷಿಸಿರುವುದು ಶ್ಲಾಘನೀಯ~ ಎಂದರು.ಈ ವರ್ಷ ಅಗ್ನಿಶಾಮಕ ಇಲಾಖೆಗೆ 1444 ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿರುವುದಾಗಿ ಅವರು ಹೇಳಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎ.ಆರ್.ಇನ್ಫಂಟ್ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.