ಭಾನುವಾರ, ಮೇ 16, 2021
26 °C

ಬೇರಾ ಕೊಲೆ ಪ್ರಕರಣ: ವಕೀಲ ಸೇರಿ ಐವರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರವನ್ನು ತಲ್ಲಣಗೊಳಿಸಿದ್ದ ಚಿನ್ನಾಭರಣ ವ್ಯಾಪಾರಿ ನಿತೇಶ್ ಬೇರಾ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ವಕೀಲ ಸೇರಿದಂತೆ ಐದು ಆರೋಪಿಗಳನ್ನು ಬಂಧಿಸಿದ್ದಾರೆ.

`ಬಂಧಿತರು ಕಬ್ಬನ್‌ಪೇಟೆ ಮತ್ತು ಅವೆನ್ಯೂ ರಸ್ತೆ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು.

 

ಆರೋಪಿಗಳಿಂದ 100 ಗ್ರಾಂ ಚಿನ್ನಾಭರಣ, ಹಣ, ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್‌ಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ~ ಎಂದು ಉನ್ನತ ಪೊಲೀಸ್ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಪ್ರಕರಣದ ಸಂಚು ರೂಪಿಸಿದ್ದ ವಕೀಲ, ನಿತೇಶ್ ಅವರಿಗೆ ಪರಿಚಿತನಾಗಿದ್ದ. ಇದರಿಂದಾಗಿ ಆತನಿಗೆ ಅವರ ಕುಟುಂಬ ಮತ್ತು ವಹಿವಾಟಿನ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ವಕೀಲಿ ವೃತ್ತಿಯಿಂದ ಹೆಚ್ಚು ಆದಾಯ ಬಾರದ ಹಿನ್ನೆಲೆಯಲ್ಲಿ ಆತ ಹಣ ಸಂಪಾದನೆ ಉದ್ದೇಶಕ್ಕಾಗಿ ಇತರೆ ಆರೋಪಿಗಳ ಜತೆ ಸೇರಿ ಈ ಕೃತ್ಯ ಎಸಗಿದ್ದ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ನಿತೇಶ್ ಮಾ.27ರಂದು ರಾತ್ರಿ ಅಂಗಡಿಯಿಂದ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಆರೋಪಿಗಳು ಅವರನ್ನು ಕಾರಿನಲ್ಲಿ ಹಿಂಬಾಲಿಸಿ ಬಂದು ಹಲಸೂರುಗೇಟ್ ಪೊಲೀಸ್ ಠಾಣೆ ಸಮೀಪ ಅಡ್ಡಗಟ್ಟಿ ಅಪಹರಿಸಿದ್ದರು. ನಂತರ ಅವರಿಂದಲೇ ಪತ್ನಿಗೆ ಕರೆ ಮಾಡಿಸಿ ಹಣ ಮತ್ತು ಚಿನ್ನಾಭರಣ ಪಡೆದುಕೊಂಡಿದ್ದರು.

 

ಕರೆ ಮಾಡಿದ್ದ ನಿತೇಶ್, ಅಪಹರಣದ ಸಂಗತಿಯನ್ನು ಬೆಂಗಾಳಿ ಭಾಷೆಯಲ್ಲಿ ಪತ್ನಿಗೆ ತಿಳಿಸಿದ್ದರು. ಇದರಿಂದ ಆತಂಕಗೊಂಡ ಆರೋಪಿಗಳು ಅವರನ್ನು ನೆಲಮಂಗಲದ ಕಡೆಗೆ ಕಾರಿನಲ್ಲೇ ಕರೆದೊಯ್ದು ಮಾರ್ಗ ಮಧ್ಯೆ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು ಕೃತ್ಯಕ್ಕೆ 2 ತಿಂಗಳಿಂದ ಸಂಚು ನಡೆಸುತ್ತಿದ್ದರು. ಅಲ್ಲದೇ ಅವರು ಅಪಹರಣಗೊಂಡಿದ್ದ ನಿತೇಶ್ ಅವರಿಗೆ 4 ಕೋಟಿ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಆದರೆ, ಅವರು ಅಷ್ಟು ಹಣ ಇಲ್ಲ ಎಂದು ಹೇಳಿದ ಕಾರಣಕ್ಕೆ ಪತ್ನಿಗೆ ಕರೆ ಮಾಡಿಸಿ ಆಭರಣ ಪಡೆದುಕೊಂಡಿದ್ದರು. ಆರೋಪಿ ವಕೀಲ ಈ ಹಿಂದೆ ಅಪಹರಣ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.