ಸೋಮವಾರ, ಮಾರ್ಚ್ 8, 2021
24 °C

ಬೇಳೆ ವಿಳಂಬ, ಬೇಯದ ಶಾಲೆ ಬಿಸಿಯೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಳೆ ವಿಳಂಬ, ಬೇಯದ ಶಾಲೆ ಬಿಸಿಯೂಟ

ದಾವಣಗೆರೆ: ಅಕ್ಷರ ದಾಸೋಹಕ್ಕೆ ಬೇಳೆ ಕೊರತೆ ಉಂಟಾಗಿ ಕೆಲವು ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಕೆಲವು ದಿನ ವ್ಯತ್ಯಯವಾಗಿದೆ. ಮಾತಿಗೆ ತಪ್ಪಿದ ಟೆಂಡರುದಾರರು. ನಿಗದಿತ ಗುಣಮಟ್ಟದ ಬೇಳೆ ಸರಬರಾಜಿಗೆ ವಿಫಲರಾದ್ದರಿಂದ ಈ ವ್ಯತ್ಯಯ ಉಂಟಾಗಿದೆ. ಕೇವಲ ದಾವಣಗೆರೆ ಮಾತ್ರವಲ್ಲದೇ ರಾಜ್ಯದ 18 ಜಿಲ್ಲೆಗಳಲ್ಲಿ ಇದೇ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.ಆದರೆ, ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸಿದ್ದರಿಂದ ಬಿಸಿಯೂಟ ತಯಾರಿಕೆ ನಿಲ್ಲಲಿಲ್ಲ. ಗುರುವಾರ ಬೇಳೆ ಸರಬರಾಜಾಗಿದ್ದು, ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಅಕ್ಷರ ದಾಸೋಹದ ಜಿಲ್ಲಾ ಕಾರ್ಯ ನಿರ್ವಹಣಾ ಅಧಿಕಾರಿ ಜಗದೀಶ್ ತಿಳಿಸಿದರು.ಸಮಸ್ಯೆ ಏಕಾಯಿತು?

ಕಳೆದ ವರ್ಷ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೆಲವು ಏಜೆನ್ಸಿಗಳಿಂದ ಈ ಸಂಬಂಧಿತ ಅಕ್ಕಿ, ಬೇಳೆ, ಎಣ್ಣೆ ಖರೀದಿಸಿ ನೀಡುತ್ತಿತ್ತು. ಆಹಾರ ಧಾನ್ಯ ಗುಣಮಟ್ಟದ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಇ-ಟೆಂಡರು ಮೂಲಕ ಬೇಳೆ ಸರಬರಾಜುದಾರರನ್ನು ಆಹ್ವಾನಿಸಿತು. ಜಿಲ್ಲೆಗೆ ಬೇಳೆ ಸರಬರಾಜು ಮಾಡಲು ಒಪ್ಪಿಕೊಂಡ ಗುಲ್ಬರ್ಗದ ಏಜೆನ್ಸಿಯೊಂದು ಕಳಪೆ ಗುಣಮಟ್ಟದ ಸಾಮಗ್ರಿ ಪೂರೈಸಿತು ಎಂದು ಶಿಕ್ಷಣ ಇಲಾಖೆ ಮೂಲಗಳು ಹೇಳಿವೆ.ಆ ಸಾಮಗ್ರಿಗಳನ್ನು ತಿರಸ್ಕರಿಸಿದಾಗ ಮತ್ತೆ ನಿಗದಿತ ಗುಣಮಟ್ಟದ ಸಾಮಗ್ರಿ ಪೂರೈಸಲು ಒಪ್ಪಿದ ಏಜೆನ್ಸಿ ಗುರುವಾರ ಜಿಲ್ಲಾ ಕೇಂದ್ರಗಳಿಗೆ ಧಾನ್ಯ ಸರಬರಾಜು ಮಾಡಿದೆ. ವಿವಿಧ ಹಂತಗಳ ಗುಣಮಟ್ಟ ಪರಿಶೀಲನೆಯಲ್ಲಿ ವಿಳಂಬ, ಏಜೆನ್ಸಿಗಳ ನಿರ್ಲಕ್ಷ್ಯದಿಂದ ಬೇಳೆ ಸರಬರಾಜಿನಲ್ಲಿ ಗೊಂದಲ ಸೃಷ್ಟಿಯಾಗಿದೆ. 10 ದಿನಗಳ ಕಾಲ ಸ್ಥಳೀಯವಾಗಿ ಖರೀದಿಸಿ ಅಥವಾ ಕಳೆದ ವರ್ಷದ ಸಾಮಗ್ರಿ ಬಳಸಿ ಬಿಸಿಯೂಟ ಪೂರೈಸಲಾಗಿದೆ ಎಂದು ಜಗದೀಶ್ ತಿಳಿಸಿದರು.ಆದರೆ,  ವಾಸ್ತವವೇ ಬೇರೆ. ದಾವಣಗೆರೆ ತಾಲ್ಲೂಕಿಗೆ ಸುಮಾರು 200 ಕ್ವಿಂಟಲ್ ಬೇಳೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಕೇವಲ 60 ಕ್ವಿಂಟಲ್ ಪೂರೈಕೆಯಾಗಿದೆ. ಅದೂ ಗುರುವಾರ ಸಂಜೆ ವೇಳೆಗೆ ಗುಣಮಟ್ಟ ಪರೀಕ್ಷೆ ನಡೆದಿದ್ದು, ಫಲಿತಾಂಶದ ಬಳಿಕವಷ್ಟೇ ಶಾಲೆಗಳಿಗೆ ಪೂರೈಕೆಯಾಗಬೇಕಿದೆ ಎನ್ನುತ್ತವೆ ಉಗ್ರಾಣ ನಿರ್ವಹಣೆಯ ಮೂಲಗಳು.ಜಿಲ್ಲೆಯ 1,832 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಬಿಸಿಯೂಟ ಪೂರೈಸಲಾಗುತ್ತಿದೆ. ಅಕ್ಕಿ, ಎಣ್ಣೆ ಇದ್ದರೂ ಬೇಳೆಯ ಕಾರಣಕ್ಕಾಗಿ ಸಾಮಗ್ರಿ ಎಲ್ಲ ಶಾಲೆಗಳನ್ನು ಸಕಾಲದಲ್ಲಿ ತಲುಪಲಿಲ್ಲ. ಪ್ರತಿ ತಿಂಗಳಿಗೆ ಸುಮಾರು 1 ಸಾವಿರ ಕ್ವಿಂಟಲ್‌ನಷ್ಟು ಬೇಳೆ ಪೂರೈಸಲಾಗುತ್ತಿದೆ. ಪೂರೈಕೆ ಸಮರ್ಪಕವಾಗಿದ್ದರೆ ಯೋಜನೆ ನಿರಾತಂಕವಾಗಿ ನಡೆಯಬಹುದು ಎಂದು ಇಲಾಖೆಯ ಮೂಲಗಳು ಆಶಯ ವ್ಯಕ್ತಪಡಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.