ಭಾನುವಾರ, ಜನವರಿ 26, 2020
29 °C

ಬೈಕ್ ಕೊಳ್ಳುವುದೆಂದರೆ ಸುಮ್ಮನೆ ಅಲ್ಲ

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

`ಎಸ್.ಎಸ್.ಎಲ್.ಸಿ ಯಲ್ಲಿ ಒಳ್ಳೆ ನಂಬರ್ ತಗೋ ಪಿಯುಸಿಗೆ ಬೈಕ್ ಕೊಡಿಸುತ್ತೇನೆ~ ಇದು ಅಪ್ಪನ ಪ್ರಾಮಿಸ್. `ಅಪ್ಪ, ಪಿಯುಸಿಗೆ ಬಂದಾಯ್ತು ಬೈಕ್ ಯಾವಾಗ ಕೊಡಿಸ್ತೀರ~ ಇದು ಮಗನ ರಿಕ್ವೆಸ್ಟ್. ಮಗಳಾದರೆ ಸ್ಕೂಟಿಯನ್ನೋ, ಸ್ಕೂಟರನ್ನೋ ಕೊಡಿಸಿ ಎಂಬ ಒತ್ತಾಯ.ಆದರೆ ಬೈಕನ್ನೋ, ಸ್ಕೂಟರನ್ನೋ ಕೊಡಿಸುವುದು ಪ್ರಾಮಿಸ್ ಮಾಡಿದಷ್ಟು ಸುಲಭದ ಮಾತೇ. ಹಣ ಹೇಗಾದರೂ ಹೊಂದಿಸಬಹುದು. ಆದರೆ ಮಕ್ಕಳ ಸುರಕ್ಷೆ ಮುಖ್ಯ ಅಲ್ಲವೇ.

ಆದರೆ ಮಕ್ಕಳ ಆಸೆಯೂ ಅಷ್ಟೇ, ಹದಿಹರೆಯದ ವಯಸ್ಸಿನಲ್ಲಿ, ಕಾಲೇಜಿನ ರಂಗಿನ ಜೀವನದಲ್ಲಿ ಬೈಕ್, ಸ್ಕೂಟರ್ ನೀಡುವ ಉಲ್ಲಾಸವನ್ನು ಮತ್ತಾವುದಕ್ಕೂ ಹೋಲಿಸಲಾಗದು.

 

ಎಲ್ಲ ಅಪ್ಪ, ಅಮ್ಮಂದಿರೂ ಈ ವಯಸ್ಸನ್ನು ದಾಟಿ ಬಂದವರೇ ಅಲ್ಲವೇ. ಆದರೂ ವಾಹನ ಪ್ರಪಂಚ ತುಂಬಾ ಸೂಕ್ಷ್ಮ. ಕಾಲ ಕಾಲಕ್ಕೂ ಅಜಗಜಾಂತರ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಹೀಗಿರುವಾಗ ಮಗನಿಗೆ ಯಾವ ಬೈಕ್ ಕೊಡಿಸುವುದು. ಮಗಳಿಗೆ ಯಾವ ಸ್ಕೂಟರ್ ಕೊಡಿಸುವುದು. ತಲೆ ಸುತ್ತುಬರುವಷ್ಟು ಆಯ್ಕೆಗಳಿರುವುದೇ ಕಷ್ಟವಾಗಿ ಹೋಯಿತಲ್ಲ ಎಂಬ ಚಿಂತೆ ಕಾಡಿದಲ್ಲಿ ಆಶ್ಚರ್ಯವೇನೂ ಇಲ್ಲ.ಆದರೂ ಚಿಂತೆ ಬೇಡ. ಕಾಮನಬಿಲ್ಲಿನಷ್ಟೇ ಸುಂದರವಾಗಿ ಮಕ್ಕಳಿಗೆ ಬೈಕ್ ಕೊಡಿಸಲು ಟಿಪ್ಸ್ ಕೊಡುತ್ತಿದ್ದೇವೆ. ಇದು ಪೋಷಕರಿಗೆ ಮಾತ್ರ ಮಾರ್ಗಸೂಚಿಯಲ್ಲ. ಯುವಕರ ಮನದಾಸೆಗೆ ಹಿಡಿದ ಕನ್ನಡಿಯೂ ಆಗಿದೆ. ಇಬ್ಬರೂ ಬೇಸರಗೊಳ್ಳದೇ ಉತ್ತಮ ಆಯ್ಕೆ ಪಡೆಯಲೆಂದೇ ಈ ಪ್ರಯತ್ನ.ಸಾವಿರ ಮಾರ್ಗ, ಒಂದೇ ಆಯ್ಕೆ

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಬೈಕ್ ಕೊಳ್ಳುವವರಿಗೆ ಇಂದು ಸಾವಿರ ಮಾರ್ಗಗಳಿವೆ. ಸಾವಿರಾರು ಬೈಕ್‌ಗಳಿವೆ. ಸ್ಕೂಟರ್‌ಗಿಂತಲೂ ಭಾರತದಲ್ಲಿ ಬೈಕ್ ಮಾರುಕಟ್ಟೆ ತನ್ನ ಎಲ್ಲ ಎಲ್ಲೆಗಳನ್ನೂ ಮೀರಿ ಮುಂದಕ್ಕೆ ಸಾಗಿದೆ. ಅತಿ ಪ್ರಮುಖ ಬೈಕ್ ಬ್ರ್ಯಾಂಡ್‌ಗಳಾದ ಹೀರೋ, ಬಜಾಜ್, ಹೋಂಡಾ, ಯಮಹಾ, ರಾಯಲ್ ಎನ್‌ಫೀಲ್ಟ್, ಟಿವಿಎಸ್, ಸುಜುಕಿ ಎಂದು ಆರೇಳು ಹೆಸರು ಹೇಳಬಹುದಾದರೂ, ಒಂದೇ ಉಸಿರಲ್ಲಿ ಎಲ್ಲ ಬೈಕ್‌ಗಳ ಹೆಸರನ್ನು ಹೇಳುವುದು ಅಷ್ಟು ಸುಲಭವಲ್ಲ. ಹಾಗಾಗಿ ತಮ್ಮ ಮಕ್ಕಳಿಗೆ ಬೈಕ್ ಕೊಡಿಸಲು ಪೋಷಕರಿಗೆ ಸುಲಭವೇ ಆಗಿದೆ. ಹಿಂದೊಂದು ಕಾಲವಿತ್ತು.

 

ಈಗ ಉತ್ಪಾದನೆಯೇ ನಿಂತಿರುವ ಜಾವಾ, ಯಜ್ಡಿ ಬೈಕ್‌ಗಳನ್ನು ಕೊಳ್ಳಬೇಕಾದರೆ 2 ವರ್ಷ ಮುಂಚೆಯೇ ಬುಕ್ ಮಾಡಬೇಕಿತ್ತು. ಡಾಲರ್ ಲೆಕ್ಕದಲ್ಲಿ ಹಣ ನೀಡಿ ಕೊಳ್ಳಬೇಕಿತ್ತು. ಇದೇ ರೀತಿಯ ಬೇಡಿಕೆ ಇದ್ದದ್ದು ಇಟಲಿ ಮೂಲದ ವೆಸ್ಪಾ ಸ್ಕೂಟರ್‌ಗಳಿಗೆ. ಎನ್‌ಫೀಲ್ಡ್‌ನ ಬುಲೆಟ್ ಬೈಕ್‌ಗಳನ್ನು ಕೊಳ್ಳುವವರ ಸಂಖ್ಯೆ ಅಂದೂ ಕಡಿಮೆಯೇ, ಇಂದೂ ಕಡಿಮೆಯೇ. ಆದರೆ ಈಗ ಕಾಲ ಬದಲಾಗಿದೆ. ಸರಿಸುಮಾರು 50 ಕ್ಕೂ ಮೀರಿದ ವಿವಿಧ ಬೈಕ್‌ಗಳಲ್ಲಿ ತಮಗಿಷ್ಟವಾದ ಬೈಕ್‌ಗಳನ್ನು ಕೊಳ್ಳುವ ಅವಕಾಶ ಗ್ರಾಹಕರಿಗೆ ಸಿಕ್ಕಿದೆ.ಪೋಷಕರ ವಿವೇಚನೆ ಮಕ್ಕಳಿಗೆ ಆಸರೆ

ಇಂದು ಮಾರುಕಟ್ಟೆಯಲ್ಲಿ ಕನಿಷ್ಠ ರೂ. 43 ಸಾವಿರದಿಂದ ಗರಿಷ್ಟ ರೂ. 1.70 ಲಕ್ಷದ ವರೆಗೆ ಬೈಕ್‌ಗಳು ಲಭ್ಯವಿವೆ. ವಿದೇಶಿ ಬೈಕ್‌ಗಳಾದರೆ ಬೈಕೊಂದಕ್ಕೆ ರೂ. 20 ಲಕ್ಷದವರೆಗೂ ಆಯ್ಕೆಗಳಿವೆ. ಆದರೆ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಪೋಷಕರು ತಮ್ಮ ಮಕ್ಕಳಿಗೆ ಈ ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಖರೀದಿಸಿದರೆ ಒಳ್ಳೆಯದು.ಕಿಸೆಯ ಆಳ-ಅಗಲದ ಅರಿವಿರಲಿ

 ಮಗ ಒಂದೂವರೆ ಲಕ್ಷ ರೂಪಾಯಿಯ ಬೈಕ್ ಕೊಡಿಸಿ ಎಂದು ಕೇಳಿದಾಕ್ಷಣ ಕೊಡಿಸಲೂ ಆಗದು, ಕೊಡಿಸಲೂ ಬಾರದು. ಮಗನ ವಯಸ್ಸಿನ ಬಗ್ಗೆ ಎಚ್ಚರ ಇರಲಿ. ಸಾಮಾನ್ಯವಾಗಿ ಹೆಚ್ಚು ಹಣದ ಬೈಕ್ ಭಾರತದಲ್ಲಿ ಹೆಚ್ಚು ಸಾಮರ್ಥ್ಯದ್ದು ಎನ್ನುವ ಪೂರ್ವಾಗ್ರಹ ನಂಬಿಕೆ ಇದೆ. ಅದು ಸತ್ಯವೂ ಹೌದು.

 

ಬೈಕಿಂಗ್‌ನಲ್ಲಿ ಹಂತ ಹಂತವಾಗಿ ಕಲಿತು ಬೈಕ್ ಕೊಳ್ಳುವುದು ಎಂದಿಗೂ ಉತ್ತಮ. ಮಗನ ವಯಸ್ಸು ಕಡಿಮೆಯಿದ್ದು ಪಿಯುಸಿ ಓದುತ್ತಿದ್ದರೆ ಅವನಿಗೆ ಎಂಟ್ರಿ ಲೆವೆಲ್ ಬೈಕ್ (100 ಕ್ಯೂಬಿಕ್ ಕೆಪಾಸಿಟಿ (ಸಿಸಿ)) ಕೊಡಿಸುವುದು ಒಳ್ಳೆಯದು. ಈ ಎಂಟ್ರಿ ಲೆವೆಲ್ ಬೈಕ್‌ಗಳು ಯಾವುದಕ್ಕೆ ಏನೂ ಕಳಪೆಯಲ್ಲ. ಉತ್ತಮ ನೊಟಗಳು, ಮೈಲೇಜ್, ಕಾರ್ಯಕ್ಷಮತೆ ಎಲ್ಲವೂ ಇದೆ. ಆಗತಾನೇ ಬೈಕಿಂಗ್ ಕಲಿಯುವ ವಯಸ್ಸಾದ್ದರಿಂದ ವೇಗ ನಿಯಂತ್ರಣವೂ ಆಗಿ ಜೀವ ಸುರಕ್ಷೆಯೂ ಇರುತ್ತದೆ.ಅಲ್ಲದೆ, ಪೋಷಕರಿಗೆ ಇವು ಕಿಸೆಗೂ ಭಾರ ತಾರವು. ಬಜಾಜ್‌ನ ಪ್ಲಾಟಿನಾ (ಆನ್ ರೋಡ್, ಬೆಂಗಳೂರು ಬೆಲೆ ರೂ. 44000), ಹೀರೋನ ಸಿಡಿ ಡಾನ್ (ರೂ. 41,058 ಸಾವಿರ), ಸ್ಪ್ಲೆಂಡರ್ (ರೂ. 49,013 ಸಾವಿರ), ಟಿವಿಎಸ್‌ನ ವಿಕ್ಟರ್ ಜಿಎಕ್ಸ್ (ರೂ. 46000), ಮಹಿಂದ್ರಾದ ಸ್ಟಾಲಿಯೋ (ರೂ. 51,000), ಯಮಹಾದ ಕ್ರಕ್ಸ್ (ರೂ. 40,600). ಇವೆಲ್ಲವೂ ಉತ್ತಮ ಬೈಕ್‌ಗಳೇ. ಆದರೆ ಮೈಲೇಜ್‌ನಲ್ಲಿ ಮಾತ್ರ ಹೀರೋ, ಬಜಾಜ್ ಹಾಗೂ ಟಿವಿಎಸ್ ಕೊಂಚ ಮುಂದು. ಆಯ್ಕೆ ನಿಮ್ಮದು. ಓದುವ ವಯಸ್ಸಲ್ಲಿ ಆದಾಯ ಇಲ್ಲದ ಕಾರಣ ಪೆಟ್ರೋಲ್ ಹಾಕಿಸುವದೂ ಕಷ್ಟವಾಗುವುದಿಲ್ಲ. ನಂತರ ಅನುಭವವಾದಂತೆ ದುಬಾರಿ ಬೈಕ್ ಕೊಳ್ಳಬಹುದು.ಕೊಳ್ಳುವ ಮುನ್ನ ತಿಳಿದುಕೊಳ್ಳಿ

 ಯಾವುದೇ ಬೈಕ್ ಅಥವಾ ಸ್ಕೂಟರ್ ಕೊಳ್ಳುವ ಮುನ್ನ ಅದರ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಒಳ್ಳೆಯದು. ಪ್ರತಿಯೊಂದು ಬೈಕ್‌ನ ಬಗ್ಗೆಯೂ ಅದರ ಕಂಪನಿ ವೆಬ್‌ಸೈಟ್‌ನಲ್ಲಿ ಮಾಹಿತಿ ಇದ್ದೇ ಇರುತ್ತದೆ. ಅದರ ತಾಂತ್ರಿಕ ಗುಣಲಕ್ಷಣಗಳನ್ನು ಅಲ್ಲಿ ತಿಳಿದುಕೊಳ್ಳಬಹುದು. ಆದರೆ ಅದಕ್ಕೂ ಮುಖ್ಯವಾಗಿ ವಾಹನ ವಿಮರ್ಶೆಗಳನ್ನು ಓದಲೇಬೇಕು. ಬೇಕಾದಷ್ಟು ವಾಹನ ಮ್ಯೋಗಜೈನ್‌ಗಳು ಮಾರುಕಟ್ಟೆಯಲ್ಲಿವೆ. ಸಾಕಷ್ಟು ವಾಹನ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಬೇಕಾದ ಬೈಕ್‌ನ್ನು ಸರ್ಚ್ ಮಾಡಿ, ತಿಳಿದುಕೊಂಡರೆ ಆಯಿತು. ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವುದು ತಪ್ಪೇನಲ್ಲ

ಒಳ್ಳೆಯ ಬೈಕಾದರೆ ಯಾಕಾಗಬಾರದು. ಆದರೆ ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವ ಮುನ್ನ ಕೆಲವು ಎಚ್ಚರಿಕೆ ವಹಿಸಬೇಕು. ಉತ್ತಮ ಮೆಕಾನಿಕ್‌ನ ಬಳಿ ಕರೆದೊಯ್ದು ಬೈಕ್, ಸ್ಕೂಟರ್‌ನ ಎಂಜಿನ್ ಪರೀಕ್ಷಿಸಬೇಕು. ಎಂಜಿನ್ ಈ ಹಿಂದೆ ಓಪನ್ ಆಗಿದೆಯೇ. ರೀ ಬೋರ್ ಆಗಿದೆಯೆ? ಅಪಘಾತವಾಗಿ ಬೈಕ್‌ನ ಫ್ರೇಂಗೆ ಘಾಸಿಯಾಗಿದೆಯೆ? ಅಪಘಾತವಾಗಿದ್ದರೆ ಪೊಲೀಸ್ ದೂರು ದಾಖಲಾಗಿತ್ತೆ? ಎಷ್ಟು ಮೈಲೇಜ್ ನೀಡುತ್ತಿದೆ? ಯಾವ ವರ್ಷದ ಮಾಡೆಲ್, ಅದರ ಆಧಾರದ ಮೇಲೆ ಎಷ್ಟು ಹಣ ವಿನಿಯೋಗಿಸಬಹುದು?ಇವುಗಳ ಕಡ್ಡಾಯ ಪರೀಕ್ಷೆ ಆಗಲೇಬೇಕು. ಇದನ್ನು ಪರಿಶೀಲಿಸದೆ, ಬೈಕ್‌ನ ಮಾಲಿಕ ಕೇಳಿದಷ್ಟು ಹಣ ನೀಡಿ ಕೊಂಡರೆ ತಪ್ಪು. ಚೌಕಾಸಿ ಮಾಡಿ ಗೆದ್ದೆ ಎಂದುಕೊಂಡರೂ ಮೋಸ ಹೋಗಿರುತ್ತೇವೆ. ಬೈಕ್ ಕೊಳ್ಳುವ ಸಮಯದಲ್ಲೇ ಎಲ್ಲ ಪೇಪರ್ ವರ್ಕ್ ಆಗಲಿ. ಮಾಲಿಕತ್ವ ಬದಲಾವಣೆ ಆ ಕ್ಷಣವೇ ಆಗಬೇಕು. ವಾಹನದ ರಿಜಿಸ್ಟ್ರೇಷನ್ ಬುಕ್, ಇನ್ಸೂರೆನ್ಸ್, ಎಮಿಷನ್ ದಾಖಲೆಗಳು ಪಕ್ಕಾ ಇರಲಿ. ಹಣ ನೀಡಿದ್ದಕ್ಕೆ ರಸೀದಿ ಪಡೆಯಿರಿ. 

 

ದೊಡ್ಡ ಗಿಫ್ಟ್

ಬೈಕ್, ಸ್ಕೂಟರ್ ಮಕ್ಕಳಿಗೆ ನೀಡುವ ದೊಡ್ಡ ಗಿಫ್ಟ್. ಕೊಡಿಸುವಾಗ ಒಳ್ಳೆಯದನ್ನೇ ಕೊಳ್ಳಬೇಕಲ್ಲವೇ. ಮಕ್ಕಳ ವಯಸ್ಸು ಹೆಚ್ಚಿದ್ದು, ಅವರ ಪ್ರೌಢಿಮೆಗೂ ಬೆಲೆ ಕೊಟ್ಟು, ಚೈತನ್ಯವಿದ್ದರೆ ದೊಡ್ಡ ಪ್ರೀಮಿಯಂ ಬೈಕ್‌ಗಳನ್ನು ಕೊಂಡರೆ ತಪ್ಪೇನೂ ಇಲ್ಲ. ರಾಯಲ್ ಎನ್‌ಫೀಲ್ಡ್ ರೀತಿಯ ಬೈಕ್‌ಗಳು ಒನ್ ಟೈಮ್ ಇನ್ವೆಸ್ಟ್‌ಮೆಂಟ್. ಬೆಲೆ ಲಕ್ಷ ಮೀರಿದರೂ ಜೀವನ ಪರ್ಯಂತ ಬಾಳಿಕೆ ಬರುವಂಥವು. ಆದರೆ ಮೈಲೇಜ್ ಕಡಿಮೆ. ಮಿಕ್ಕಂತೆ ಟಿವಿಎಸ್ ಅಪಾಚೆ, ಬಜಾಜ್ ಪಲ್ಸರ್, ಹೀರೋ ಇಂಪಲ್ಸ್ ಬೆಲೆ ಕಡಿಮೆ, ಮೈಲೇಜ್ ಹೆಚ್ಚು, ಬಾಳಿಕೆಯೂ ಕಡಿಮೆ. ಹಾಗಾಗಿ ಕೊಳ್ಳುವ ಮುನ್ನ ನಿಮ್ಮ ಆಯ್ಕೆಯ ಬಗ್ಗೆ ನಿಖರತೆ ಇರಲಿ.ಶೋರೂಂಗೆ ಹೋಗಿ ಟೆಸ್ಟ್ ಡ್ರೈವ್ ಬೇಕೆಂದು ಹಕ್ಕಿನಿಂದ ಕೇಳಿ, ಮುಜುಗರ ಬೇಡ. ಬೆಲೆ ಪಟ್ಟಿ ಹೀಗಿದೆ: ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ (ಬೆಂಗಳೂರು ಆನ್ ರೋಡ್ ಬೆಲೆ ರೂ. 1.23 ಲಕ್ಷ), 350 ಸ್ಟಾಂಡರ್ಡ್ (ರೂ. 1.01 ಲಕ್ಷ), ಕ್ಲಾಸಿಕ್ (ರೂ. 1.26 ಲಕ್ಷ), ಟಿವಿಎಸ್ ಅಪಾಚೆ ( ಎಕ್ಸ್ ಶೋರೂಂ ರೂ. 66,000), ಬಜಾಜ್ ಪಲ್ಸರ್ 150 ಡಿಟಿಎಸ್‌ಐ (ರೂ. 77,048)ಬೈಕ್ ಮಾದರಿ ತಿಳಿದಿರಲಿ

ಮುಖ್ಯವಾಗಿ ಬೈಕ್‌ಗಳನ್ನು ಎರಡು ಮುಖ್ಯ ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳ ಬೆಲೆ, ಕಾರ್ಯಕ್ಷಮತೆಯ ಮೇಲೆ ಮತ್ತು ಅವುಗಳ ವಿನ್ಯಾಸದ ಮೇಲೆ. ಬೆಲೆಯ ಆಧಾರದಲ್ಲಿ, ಕಡಿಮೆ ಬೆಲೆಯ, ಶ್ರೇಷ್ಠ ಮೈಲೇಜ್ ನೀಡುವ ಬೈಕ್‌ಗಳನ್ನು `ಎಕಾನಮಿ~ ಬೈಕ್ ಎನ್ನಲಾಗಿದೆ. ಇವು ಹಗುರ, ಗಡಸು ಕಡಿಮೆ. ಉತ್ತಮ ಮೈಲೇಜ್, ಉತ್ತಮ ಗಡಸುತನದ, ಮಧ್ಯಮ ಬೆಲೆಯ ಬೈಕ್‌ಗಳನ್ನು `ಎಕ್ಸೆಕ್ಯುಟಿವ್~ ಬೈಕ್ ಎನ್ನಲಾಗಿದೆ. ಕಡಿಮೆ ಮೈಲೇಜ್, ಆದರೆ ಹೆಚ್ಚು ಶಕ್ತಿ, ಅತಿ ಗಡುಸಾದ ಬೈಕ್‌ಗಳನ್ನು `ಪ್ರೀಮಿಯಂ~ ಬೈಕ್ ಎನ್ನುತ್ತಾರೆ.ವಿನ್ಯಾಸದ ಆಧಾರದ ಮೇಲೆ `ವಿ-ಟ್ವಿನ್~ ಎಂಬ ಎರಡು ಎಂಜಿನ್ ಬೈಕ್, ಸಿಂಗಲ್ ಎಂಜಿನ್ ಸಿಲಿಂಡರ್ ಬೈಕ್, ಸಾಂಪ್ರದಾಯಿಕ ನೋಟದ ಸಾಧಾರಣ ಬೈಕ್, ಹೆಚ್ಚು ಆರಾಮ ಹಾಗೂ ಉದ್ದವಾಗಿರುವ `ಕ್ರೂಸರ್~ ಬೈಕ್, ಟೂರಿಂಗ್ ಬೈಕ್, ಸ್ಪೋರ್ಟ್ಸ್ ಬೈಕ್ ಎಂಬ ವಿಭಜನೆಗಳು ಪ್ರಸಿದ್ಧ. ವಿ- ಟ್ವಿನ್ ಎಂಜಿನ್ ಬೈಕ್ ಹೊರತುಪಡಿಸಿ ಮಿಕ್ಕೆಲ್ಲ ಈ ಎಲ್ಲ ಮಾದರಿಯ ಬೈಕ್‌ಗಳು ದೇಶೀಯವಾಗೇ ನಿರ್ಮಾಣವಾಗುತ್ತಿವೆ. ಈ ವಿಭಜನೆಗಳನ್ನು ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಹುಡುಕಿದರೆ, ಬೇಕಾದ ಕಂಪನಿಯ ವಿವಿಧ ಬೈಕ್‌ಗಳು ಲಭ್ಯ.ಸ್ಕೂಟರ್ ಏನು ಕಮ್ಮಿ ಅಲ್ಲ

ಭಾರತದಲ್ಲಿ ತಯಾರಾಗುತ್ತಿರುವ ಎಲ್ಲ ಸ್ಕೂಟರ್‌ಗಳೂ ಈಗ ಉತ್ತಮವಾಗೇ ಇವೆ. ಬಜಾಜ್ ಚೇತಕ್, ಸೂಪರ್, ವೆಸ್ಪಾ ಮಾದರಿಯ ಗಿಯರ್ ಇರುವ ಬೈಕ್ ಉತ್ಪಾದನೆ ನಿಂತಿದೆಯಾದರೂ, ಗಿಯರ್ ಇಲ್ಲದ ಆಟೋಮ್ಯೋಟಿಕ್ ಟ್ರಾನ್ಸ್‌ಮಿಷನ್ ಬೈಕ್‌ಗಳಿವೆ.ಹೋಂಡಾದ ಆಕ್ಟಿವಾ (ಬೆಂಗಳೂರು ಆನ್ ರೋಡ್ ಬೆಲೆ ರೂ. 53,783), ಏವಿಯೇಟರ್ (ರೂ. 54941), ಡಿಯೋ (ರೂ. 49,152), ಸುಜುಕಿ ಆಕ್ಸೆಸ್ 125 (ರೂ. 54, 035), ಹೋಂಡಾ ಪ್ಲೆಷರ್ (ರೂ. 45,500), ಟಿವಿಎಸ್ ಸ್ಕೂಟಿ ಸ್ಟ್ರೀಕ್ (ಸ್ಕೂಟರೆಟ್) (ರೂ. 42,500), ಸ್ಕೂಟಿ ಟೀನ್ಸ್ (ರೂ. 30,000), ವಿಗೋ (ರೂ. 51,500) ಮುಖ್ಯವಾದವು. ಬೆಲೆ ಬೈಕ್‌ಗೆ ಹೋಲಿಸಿದರೆ ಹೆಚ್ಚೇನು ಇಲ್ಲ. ಹಾಗಾಗಿ ಸ್ಕೂಟರ್ ವಿಮರ್ಶೆ ಓದಿ, ಟೆಸ್ಟ್ ಡ್ರೈವ್ ಮಾಡಿ ಕೊಂಡರೆ ಆಯಿತು. ಆಕ್ಟಿವಾ ಹಾಗೂ ವಿಗೋ ಹೊರತುಪಡಿಸಿ, ಮಿಕ್ಕೆಲ್ಲಾ ಸ್ಕೂಟರ್‌ಗಳ ಕವಚ ಪ್ಲಾಸ್ಟಿಕ್‌ನದು. ಫ್ರೇಂ ಕಬ್ಬಿಣದ್ದೇ ಆದರೂ ಬಾಳಿಕೆ ಹೆಚ್ಚಿಲ್ಲ. ಹಾಗಾಗಿ ಸೆಕೆಂಡ್ ಹ್ಯಾಂಡ್ ಸ್ಕೂಟರ್ ಕೊಳ್ಳುವುದು ಅಂತಹಾ ಒಳ್ಳೆಯ ಆಲೋಚನೆಯಲ್ಲ.

ಪ್ರತಿಕ್ರಿಯಿಸಿ (+)