ಭಾನುವಾರ, ಸೆಪ್ಟೆಂಬರ್ 20, 2020
22 °C

ಬೊಂಬಾಟ್ ಬಾಲಿವುಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಳಿ ಮಣ್ಣಿಗೆ ರಾಣಿ

ಬಹು ನಿರೀಕ್ಷೆಯ ‘ದಿಲ್ ಬೋಲೆ ಹಡಿಪ್ಪಾ’ ಚಿತ್ರ ಸೋತ ನಂತರ ರಾಣಿ ಮುಖರ್ಜಿ ನಾಪತ್ತೆಯಾಗಿದ್ದಳು. ಹಾಗೆಂದು ಆಕೆ ಸುಮ್ಮನೆ ಕೂತಿಲ್ಲ. ತನ್ನ ಮಾತೃಭಾಷೆ ಬಂಗಾಳಿ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾಳೆ.

ಬಂಗಾಳಿ ಚಿತ್ರ ನಿರ್ದೇಶನಕ್ಕೆ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಅನಿರುದ್ಧ ರಾಯ್ ಚೌಧರಿ ಅವರ ಚಿತ್ರದಲ್ಲಿ ನಟಿಸಲು ರಾಣಿ ಒಪ್ಪಿಕೊಂಡಿದ್ದಾಳೆ. ಇತ್ತೀಚೆಗೆ ಈ ಕುರಿತು ಮಾತನಾಡಿರುವ ಚೌಧರಿ, ರಾಣಿಯನ್ನು ಭೇಟಿ ಮಾಡಿ ತಮ್ಮ ಚಿತ್ರಕ್ಕೆ ಒಪ್ಪಿಸಿರುವ ವಿಚಾರ ತಿಳಿಸಿದ್ದಾರೆ. ಚೌಧರಿ, ರಾಣಿಯ ನಟನೆಯನ್ನು ಬಹುವಾಗಿ ಮೆಚ್ಚುತ್ತಾರಂತೆ.

ಖ್ಯಾತ ಕಾದಂಬರಿಕಾರ ಸುನೀಲ್ ಗಂಗೋಪಾಧ್ಯಾಯ ಅವರ ಎರಡು ಕತೆಗಳನ್ನು ಆಧರಿಸಿ ಸ್ಕ್ರಿಪ್ಟ್ ರಚಿಸಿರುವ ಚೌಧರಿಗೆ ಬಾಲಿವುಡ್‌ಗೆ ಪ್ರವೇಶಿಸುವ ತವಕವೂ ಇದೆ.

ಯಾರಾಗುವರು ಇಂದಿರಾ?

ಇಂದಿರಾ ಗಾಂಧಿಯ ಜೀವನಚರಿತ್ರೆಯನ್ನು ಚಿತ್ರ ಮಾಡಲು ಹೊರಟಿದ್ದಾರೆ ಕೃಷ್ಣ ಷಾ. ಇಂದಿರಾ ಪಾತ್ರಕ್ಕೆ ಸಾಕಷ್ಟು ನಟಿಯರ ತಲಾಷು ನಡೆಸಿ ನಿಟ್ಟುಸಿರುವ ಬಿಟ್ಟಿರುವ ಕೃಷ್ಣಾ, ಇನ್ನೂ ನಾಯಕಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಸದ್ಯಕ್ಕೆ ಆ ಪಾತ್ರಕ್ಕೆ ಕೇಳಿಬಂದಿರುವ ಹೆಸರು ವಿದ್ಯಾ ಬಾಲನ್. ಆಕೆಯೇ ಅಂತಿಮ ಆಯ್ಕೆ ಎಂಬುದು ಬಾಲಿವುಡ್‌ನಲ್ಲಿ ಕೇಳಿಬರುತ್ತಿರುವ ಸುದ್ದಿ.

ಈ ಚಿತ್ರಕ್ಕಾಗಿ ಸಾಕಷ್ಟು ಮಾಹಿತಿ ಸಂಗ್ರಹಿಸಿರುವ ಷಾ, ಇಂದಿರಾ ಸಂದರ್ಶನಗಳನ್ನು ಕಲೆ ಹಾಕಿದ್ದಾರೆ. ಅವರೊಂದಿಗೆ ಇದ್ದ ರಾಜಕಾರಣಿಗಳು, ಅಧಿಕಾರಿಗಳು, ಸೇನಾಧಿಕಾರಿಗಳು, ಲೇಖಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅವರಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದಾರೆ. 2009ರಲ್ಲಿ ನಡೆದ ಈ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾಧುರಿ ದೀಕ್ಷಿತ್ ಚಿತ್ರದ ನಾಯಕಿ ಎಂದು ಹೇಳಿದ್ದರು. ಇದೀಗ ಆ ಪಟ್ಟಿಗೆ ಸಾಕಷ್ಟು ನಟಿಯರ ಹೆಸರುಗಳು ಸೇರಿಕೊಂಡಿವೆ. 

ಹಾಲಿವುಡ್ ಚಿತ್ರದಲ್ಲಿ ಅನಿಲ್

ಅನಿಲ್ ಕಪೂರ್ ಹಾಲಿವುಡ್ ‘ಮಿಷನ್ ಇಂಪಾಸಿಬಲ್ ಭಾಗ-4’ ಚಿತ್ರಕ್ಕೆ ಸಹಿಮಾಡಿದ್ದಾನೆ. ಆಸ್ಕರ್ ಪ್ರಶಸ್ತಿ ಪಡೆದ ‘ಸ್ಲಂಡಾಗ್ ಮಿಲಿಯನೇರ್’ ಚಿತ್ರದ ನಂತರ ಅನಿಲ್ ಹಾಲಿವುಡ್‌ನಲ್ಲೂ ಜನಪ್ರಿಯ. ಅಮೆರಿಕದಲ್ಲಿ ಜನಪ್ರಿಯವಾಗಿರುವ ‘24’ ಹೆಸರಿನ ಸರಣಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾನೆ. ‘ಮಿಷನ್ ಇಂಪಾಸಿಬಲ್-4’ ಚಿತ್ರದಲ್ಲಿ ಅವನೊಂದಿಗೆ ಟಾಮ್ ಕ್ರೂಸ್, ಜೆರೆಮಿ ರೆನ್ನೆರ್, ಪೌಲಾ ಪಟ್ಟೊನ್, ವಿಂಗ್ ರ್ಹಮಸ್ ಮತ್ತು ಸೈಮನ್‌ಪೆಗ್ ನಟಿಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.