ಮಂಗಳವಾರ, ಮೇ 11, 2021
21 °C
ರಸಾಸ್ವಾದ

ಬೋಟ್‌ನಲ್ಲಿ ಊಟ

-ಸುಮಲತಾ ಎನ್. ಚಿತ್ರಗಳು: ಎಸ್.ಕೆ. ದಿನೇಶ್ Updated:

ಅಕ್ಷರ ಗಾತ್ರ : | |

ಧ್ಯಾಹ್ನದ ಜಡಿ ಮಳೆಗೆ ಮೈ ನೆನೆಸಿಕೊಂಡಿದ್ದ ಕೆಲವರು ಸೀದಾ ಬಂದಿದ್ದು ತಾಜ್ ಹೋಟೆಲ್‌ಗೆ. ಬಿಸಿ ಬಿಸಿ ತಿಂಡಿ ತಿನಿಸಿನ ನಿರೀಕ್ಷೆಯಲ್ಲಿದ್ದ ಅತಿಥಿಗಳನ್ನು ಬರಮಾಡಿಕೊಳ್ಳಲು ವಿಶೇಷವಾಗಿ ಸಜ್ಜಾಗಿದ್ದ ಹೋಟೆಲ್‌ನಲ್ಲಿ ಸ್ವಾಗತಕ್ಕೆ ದ್ವಾರಪಾಲಕ ಗೊಂಬೆಗಳಿದ್ದವು.ಒಳಗೆ ಹೋದೊಡನೆ ಎದುರಾದ `ವಿಂಡ್ ಗಾಂಗ್', ಒಪ್ಪವಾಗಿ ಜೋಡಿಸಿದ್ದ ವಿವಿಧ ಪಿಂಗಾಣಿ ಬಟ್ಟಲುಗಳನ್ನು ನೋಡುತ್ತಿದ್ದರೆ ಅದು ಚೀನೀಯರ ವಿಶೇಷವೆಂದು ತಿಳಿಯುತ್ತಿತ್ತು.ಮಹಾತ್ಮ ಗಾಂಧಿ ರಸ್ತೆಯ ತಾಜ್ ವಿವಂತಾ ಹೋಟೆಲ್‌ನಲ್ಲೆಗ ಚೀನಾ ಹಬ್ಬದ ಸಡಗರ. ಚೀನಾದ ಅತಿ ಪ್ರಸಿದ್ಧ ಹಬ್ಬ `ಡ್ರ್ಯಾಗನ್ ಬೋಟ್ ಫೆಸ್ಟಿವಲ್'ನ ಮಹತ್ವ ಸಾರಲು ಈ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.ಚುರುಕಾಗಿ ಓಡಾಡುತ್ತಿದ್ದ ಬಾಣಸಿಗ ವಿಲಿಯಂ ಟಾಂಗ್ ಈ ಹಬ್ಬದ ಹಿನ್ನೆಲೆಯನ್ನು ಬಿಡಿಸಿಟ್ಟರು: `ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಬ್ಬವಿದು.

ಚೀನಾದಲ್ಲಿ ಮೂರನೇ ಶತಮಾನದಲ್ಲಿ ಭ್ರಷ್ಟ ಸರ್ಕಾರದ ವಿರುದ್ಧ ಸೆಣಸಾಡಿ ನಿರಾಸೆಗೊಂಡು ನೀರಿನಲ್ಲಿ ಪ್ರಾಣಬಿಟ್ಟ ವಿದ್ವಾಂಸ ಕ್ಯೂ ಯಾನ್ ಅವರ ಸ್ಮರಣಾರ್ಥ ನಡೆಯುತ್ತದೆ.

ಚೀನೀಯರ ವಾಸ್ತು ಸಂಕೇತ ದೈತ್ಯ ಪ್ರಾಣಿ ಡ್ರ್ಯಾಗನ್ ಆಕಾರದ ಹಡಗಿನ ಸ್ಪರ್ಧೆಯೊಂದಿಗೆ ವಿಶಿಷ್ಟ ಆಹಾರವಾದ ಝಾಂಗ್ ಝಿಯನ್ನು ಅರ್ಪಿಸುತ್ತೇವೆ' ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು ಟಾಂಗ್. ಮತ್ತೆ ಅಡುಗೆಮನೆ ಕಡೆ ಓಡಿದ ಟಾಂಗ್,  ಹಬ್ಬದ ಪ್ರಮುಖ ಆಕರ್ಷಣೆ ಡ್ರ್ಯಾಗನ್ ಹಡಗನ್ನು ಸೊಪ್ಪು, ವಿವಿಧ ಬಗೆಯ ಅಣಬೆಗಳಿಂದ ಸಿಂಗರಿಸುವಲ್ಲಿ ನಿರತರಾದರು. ಅದೇ ಸಮಯದಲ್ಲಿ ಝಾಂಗ್ ಝಿ ರೆಸಿಪಿಯನ್ನೂ ಮುಂದಿಟ್ಟರು. `ಅಂಟಾದ ಅಕ್ಕಿಯನ್ನು ರಾತ್ರಿ ನೆನೆ ಹಾಕಿ, ಚಿಕನ್, ಮೊಟ್ಟೆ ಹಳದಿ ಬಣ್ಣ, ಶಿಟೇಕ್ ಅಣಬೆ, ಪೀನಟ್ ಮತ್ತು ಉಪ್ಪನ್ನು ಬೆರೆಸಬೇಕು.ಬಿದಿರಿನ ಎಲೆ ಹಾಸಿ, ಬೇಯಿಸಿದ ಅನ್ನವನ್ನು ಅದರ ಮೇಲೆ ಹರಡಿ, ಮಧ್ಯೆ ತಯಾರಿಸಿಟ್ಟುಕೊಂಡ ಮಿಶ್ರಣವನ್ನು ಹಾಕಬೇಕು. ಮತ್ತೆ ಒಂದು ಪದರ ಅನ್ನ ಹಾಕಿ ಎಲೆಯನ್ನು ಮುಚ್ಚಿ ದಾರದಿಂದ ಕಟ್ಟಬೇಕು. ಎರಡು ಗಂಟೆ ಹಬೆಯಲ್ಲಿಟ್ಟು ತೆಗೆದರೆ ಝಾಂಗ್ ಝಿ ರೆಡಿ' ಎಂದು ಟಾಂಗ್ ನಗುತ್ತಾ ಪಾಕವಿಧಾನ ತಿಳಿಸುತ್ತಿದ್ದರೆ, ಅಲ್ಲಿ ನೆರೆದಿದ್ದವರು ಏನೂ ಅರ್ಥವಾಗದೆ, ರುಚಿ ನೋಡಿದರಾಯಿತು ಎಂದು ಸುಮ್ಮನಾದರು. ಅಷ್ಟರಲ್ಲಾಗಲೇ ಅತಿಥಿಗಳಿಗೆಂದು ಟೇಬಲ್ಲನ್ನು ಅಣಿಗೊಳಿಸಲಾಗಿತ್ತು. ಚೀನೀಯರು ಎಂದರೆ ನೂಡಲ್ಸ್, ಫ್ರೈಡ್‌ರೈಸ್ ಎಂದು ನಿರೀಕ್ಷಿಸಿದ್ದವರಿಗೆ ಅಚ್ಚರಿಯಾಗಿತ್ತು. ಕಂಡೂ ಕೇಳರಿಯದ ಅದೆಷ್ಟೋ ಹೆಸರುಗಳನ್ನು ಮೆನುವಿನಲ್ಲಿ ಕಂಡು ಏನೂ ತಿಳಿಯದೆ ಬದಿಗಿಟ್ಟು, ಕೈಕಟ್ಟಿಕೊಂಡು ಸುಮ್ಮನಾದರು.ಸ್ಟಾರ್ಟರ್‌ಗಳಾದ ಪುದೀನಾ ನಿಂಬೆ ಶರಬತ್ತಿನಿಂದ ಊಟ ಆರಂಭವಾಗಿತ್ತು. ಸರ್ವರ್‌ಗಳು ತಂದ ವಿಚಿತ್ರವಾದ ಭಕ್ಷ್ಯಗಳನ್ನು ಮಾಂಸಾಹಾರವೇ, ಸಸ್ಯಾಹಾರವೇ ಎಂಬುದನ್ನು ಖಾತರಿಪಡಿಸಿಕೊಂಡೇ ಬಡಿಸಿಕೊಳ್ಳುತ್ತಿದ್ದರು. ಅಷ್ಟೂ ಹೊತ್ತು ಮಾಂಸಾಹಾರಿಗಳಿಗಷ್ಟೇ ಬಡಿಸಿದ್ದ ಬಾಣಸಿಗ, `ಇದು ಸ್ಟೀಮ್ಡ ಮಿಕ್ಸ್‌ಡ್ ವೆಜಿಟೆಬಲ್ ರೋಲ್' ಎಂದು ನಗುತ್ತಾ ಬಡಿಸಲು ಮುಂದಾದ. ಮತ್ತೊಬ್ಬ ಬಾಣಸಿಗ ರಾಮಸ್ವಾಮಿ ಸೆಲ್ವರಾಜು, ಮಾಂಸಾಹಾರ, ಸಸ್ಯಾಹಾರ ಮೆನುಗಳ ಬಗ್ಗೆ ತಿಳಿಸುತ್ತಿದ್ದರು.ಮಾಂಸಾಹಾರಿಗಳು ಚಿಕನ್ ಸೂಪ್, ಫಿಶ್ ಫ್ರೈ, ಪ್ರಾನ್ ಫ್ರೈ ಹೀಗೆ ಒಂದಾದ ಮೇಲೊಂದು ಖಾದ್ಯಗಳನ್ನು ಸವಿಯುತ್ತಿದ್ದರೆ, ಸಸ್ಯಾಹಾರಿಗಳು ಹಬೆಯಾಡುತ್ತಿದ್ದ ವೆಜ್ ಸೂಪ್‌ಗೆ ಮಾತ್ರ ಬಾಯಾಡಿಸುತ್ತಿದ್ದರು. ಬಾಯಲ್ಲಿಟ್ಟಾಕ್ಷಣ ಕರಗುತ್ತಿದ್ದ ವೆಜ್ ಸೂಪ್ ಸಪ್ಪೆ ಎನಿಸಿದರೂ ನಂತರ ಬಂದ ನೂಡಲ್ಸ್ ಆ ಕೊರತೆ ನೀಗಿತ್ತು. ತಿನ್ನುವ ಧಾಟಿ ಬೇರೆಯೆನಿಸಿದರೂ, ಚೀನೀ ಕೈರುಚಿ ಎಲ್ಲರಿಗೂ ಇಷ್ಟವಾಗಿತ್ತು. ತೀರಾ ಸಪ್ಪೆಯೂ ಅಲ್ಲದ, ತೀರಾ ಖಾರವೂ ಅಲ್ಲದೆ ಬಹುತೇಕ ಖಾದ್ಯಗಳು ಹದವಾಗಿದ್ದವು. ನಂತರದ ಸರದಿ ಡೆಸರ್ಟ್‌ಗಳದ್ದು.

ತಟ್ಟೆ ಹಿಡಿದು ಬೇಕೆಂದ ಖಾದ್ಯಗಳನ್ನು ಹುಡುಕುತ್ತಿದ್ದವರಿಗೆ ಕಂಡಿದ್ದು ಲ್ಯಾನ್ಸ್ ಸಲಾಡ್, ಚಿಕನ್ ಸಲಾಡ್, ಬ್ಯಾಕನ್ ಸಲಾಡ್, ಫಿಶ್ ಸಲಾಡ್, ಕೊತ್ತಂಬರಿ ಸೂಪ್, ವೆಜ್ ಬ್ರೌನ್ ಆನಿಯನ್ ಸೂಪ್, ಬೀನ್ ಸ್ಪ್ರೌಂಟ್ ಸಲಾಡ್, ಡೈಸ್ಡ್ ಚಿಕನ್ ಇನ್ ಟಾಂಗ್ ಸಲಾಡ್, ಅಣಬೆ ಸಲಾಡ್, ಬ್ರೊಕೊಲಿ ಬೇಬಿ ಕಾರ್ನ್ ಸಲಾಡ್, ಚಾಕೊಲೇಟ್ ಮೌಸ್, ಫ್ರೂಟ್ ಟಾರ್ಟ್, ವೆಜ್ ನೂಡಲ್ಸ್, ಗೋಲ್ಡನ್ ಗಾರ್ಲಿಕ್ ಫ್ರೈಯ್ಡ, ಡೈಸ್ಡ್ ಪೊಟಾಟೊ ಫ್ರೈಯ್ಡ ತರಹೇವಾರಿ ಆಯ್ಕೆಗಳು.ಎಲ್ಲವನ್ನೂ ಇಷ್ಟಿಷ್ಟೇ ಬಡಿಸಿಕೊಂಡು ರುಚಿ ಮಾತ್ರ ನೋಡಿ, `ಅದು ಖಾರ', `ಇದು ಒಗರು', `ಇದು ತುಂಬಾ ಸಿಹಿ ಇದೆ', `ಇದು ತುಂಬಾ ಟೇಸ್ಟಿ' ಎನ್ನುತ್ತಲೇ ಎಲ್ಲದರ ರುಚಿಯನ್ನೂ ಸವಿಯುತ್ತಿದ್ದರು. ಆಲೂ ಫ್ರೈ ರುಚಿ ನೋಡಿದ್ದೇ, ತೀರಾ ಇಷ್ಟವೆನಿಸಿ ಮತ್ತೆ ಮತ್ತೆ ಬಡಿಸಿಕೊಂಡಿದ್ದಾಯಿತು.ಅಣಬೆ ಫ್ರೈ ತಿಂದು ಬಾಯಿ ಒಗರು ಮಾಡಿಕೊಂಡು ಕೆಲವರು ಹಿಂದಿರುಗಿದರು. ಜೂನ್ 23ರವರೆಗೂ ಈ ಹಬ್ಬ ನಡೆಯಲಿದೆ.

ಆಸನ ಕಾಯ್ದಿರಿಸಲು ಕರೆಮಾಡಿ: 080 6660 4444.

--ಸುಮಲತಾ ಎನ್.

ಚಿತ್ರಗಳು: ಎಸ್.ಕೆ. ದಿನೇಶ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.