ಭಾನುವಾರ, ಮೇ 9, 2021
28 °C

ಬೋರ್‌ವೆಲ್ ಹಾಕಿಸಿದ್ದು ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಶಾಸಕರು ಮತ್ತು ನಗರಸಭೆ ವತಿಯಿಂದ ನಗರದಲ್ಲಿ ಕೊರೆಸಲಾಗಿರುವ ಬೋರ್‌ವೆಲ್‌ಗಳ ಕುರಿತು ನಗರದ ನಗರಸಭೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು.ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸುವುದಕ್ಕಾಗಿ ಕರೆಯಲಾಗಿದ್ದ ಸಭೆಯಲ್ಲಿ ಯಾವುದೇ ರೀತಿಯ ಮಹತ್ವದ ನಿರ್ಣಯ ಕೈಗೊಳ್ಳಲಿಲ್ಲ. ಆದರೆ, ಬೋರ್‌ವೆಲ್ ಮತ್ತು ಅನುದಾನದ ಚರ್ಚೆಯಷ್ಟೆ ಪ್ರಮುಖ ವಿಷಯವಾಯಿತು.ಕಳೆದ ಮೂರು ವರ್ಷಗಳಲ್ಲಿ ತಾವು ಕ್ಷೇತ್ರದಲ್ಲಿ 300 ಬೋರ್‌ವೆಲ್‌ಗಳನ್ನು ಕೊರೆಸಿದ್ದಾಗಿ ಶಾಸಕ ರಹೀಮ್‌ಖಾನ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಸದಸ್ಯ ನಾಗಶೆಟ್ಟಿ ವಗದಾಳೆ ಅವರು, ನೀವು ಬೋರ್‌ವೆಲ್ ಕೊರೆಸಿದ್ದಾಗಿ ಹೇಳುತ್ತಿದ್ದೀರಿ. ಆದರೆ, ಅದಕ್ಕಾಗಿ ನಗರಸಭೆಯಿಂದಲೂ ಅನುದಾನ ಪಡೆಯಲಾಗಿದೆ ಎಂದು ಆಪಾದಿಸಿದರು.ಕಳೆದ ವರ್ಷ 21 ಬೋರ್‌ವೆಲ್‌ಗಳನ್ನು ತೋಡಿಸಲಾಗಿದೆ ಎನ್ನುತ್ತಿದ್ದೀರಿ. ಇವುಗಳಿಗೆ ನಗರಸಭೆಯಿಂದಲೂ ಅನುದಾನ ಪಡೆಯಲಾಗಿದೆ. ಹಾಗಾದರೆ ಒಂದೇ ಬೋರ್‌ವೆಲ್‌ಗೆ ಎರಡೆರಡು ಅನುದಾನ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಈ ಕುರಿತು ನಗರಸಭೆ ಅಧಿಕಾರಿಗೆ ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ನೀಡಲಿಲ್ಲ. ಆಗ ಶಾಸಕರು ತಮ್ಮ ಅವಧಿಯಲ್ಲಿ ತೋಡಿಸಲಾದ ಬೋರ್‌ವೆಲ್‌ಗಳ ಕುರಿತು ದಾಖಲೆಗಳನ್ನು ಪ್ರದರ್ಶಿಸಿದರು.ವಾರ್ಡ್ ಸಂಖ್ಯೆ 28 ರ ವ್ಯಾಪ್ತಿಯ ಭವಾನಿ ಮಂದಿರದ ಬಳಿ ಬೋರ್‌ವೆಲ್ ತೋಡಿಸಿದ್ದಾಗಿ ಶಾಸಕರು ಹೇಳಿದರು. ಅದಕ್ಕೂ ಆ ವಾರ್ಡ್‌ನ ಸದಸ್ಯ ಶಿವಕುಮಾರ ಭಾವಿಕಟ್ಟಿ ತಕರಾರು ಎತ್ತಿದರು. ಇಲ್ಲಿ ನಗರಸಭೆಯ ಅನುದಾನದಿಂದ ಬೋರ್‌ವೆಲ್ ಕೊರೆಸಲಾಗಿದೆ ಎಂದರು. ಸದಸ್ಯರ ಸಂಬಂಧಿಕರು ಸಭೆಗೆ ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ಸದಸ್ಯ ಫರ್ನಾಂಡಿಸ್ ಹಿಪ್ಪಳಗಾಂವ್ ಮತ್ತಿತರರು `ಜಿರಾಕ್ಸ್ ಹಟಾವೋ ಸಿ.ಎಂ.ಸಿ. ಬಚಾವೋ~ ಎಂಬ ಘೋಷಣೆಗಳನ್ನು ಹಾಕಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.